ಕರ್ನಾಟಕದ ಶಿಕ್ಷಕರ ನೇಮಕಾತಿಯಲ್ಲಿ ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕೆಎಂಡಿಸಿ ಭವನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಶಿಕ್ಷಕ ಅಭ್ಯರ್ಥಿಗಳು ಆಗಮಿಸಿ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಹಾಗೂ ಆರೋಗ್ಯ ಇಲಾಖೆಯ ಸಚಿವ ಯು ಟಿ ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯೆ ಬಿಲ್ಕಿಸ್ ಬಾನು ಅವರು ಭಾಗವಹಿಸಿ, ಉರ್ದು ಹಾಗೂ ಮರಾಠಿ ಶಿಕ್ಷಕ ಅಭ್ಯರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕ ಅಭ್ಯರ್ಥಿಗಳ ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪನವರ ಗಮನಕ್ಕೆ ತಂದು, ಅಗತ್ಯ ಚರ್ಚೆ ನಡೆಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಿಲ್ಕಿಸ್ ಬಾನು ಹಾಗೂ ಅಬ್ದುಲ್ ಜಬ್ಬಾರ್ ಅವರು ಶಿಕ್ಷಕ ಅಭ್ಯರ್ಥಿಗಳ ಸಮಸ್ಯೆಯನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದರು.
ನಂತರ ಶಿಕ್ಷಕ ಅಭ್ಯರ್ಥಿಗಳ ನಿಯೋಗವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಅಜಯ್ ಸಿಂಗ್, ಶಿವರಾಜ್ ತಂಗಡಗಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಇದನ್ನೂ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ಅಲೆಮಾರಿಗಳ ಮೂಲಸೌಕರ್ಯ ಪರಿಶೀಲನೆಗೆ ತಹಶೀಲ್ದಾರ್ ಸೂಚನೆ: ಅಧಿಕಾರಿಗಳ ಭೇಟಿ
ಹೋರಾಟವನ್ನು ಮತ್ತಷ್ಟು ಸಂಘಟಿತಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಂತೆ ಮಹಿಳೆ ಮತ್ತು ಪುರುಷ ಶಿಕ್ಷಕ ಅಭ್ಯರ್ಥಿಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ ರಚಿಸಲಾಯಿತು. ಒಂದು ವೇಳೆ ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸರ್ಕಾರ ನ್ಯಾಯ ಒದಗಿಸದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಮಿತಿ ನಿರ್ಧರಿಸಿದೆ.
ಈ ಹೋರಾಟದಲ್ಲಿ ಹಲವು ಸಂಘಟನೆಗಳೊಂದಿಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್(SYM) ಕರ್ನಾಟಕದ ರಾಜ್ಯ ತಂಡ ಸಕ್ರಿಯವಾಗಿ ಭಾಗವಹಿಸಿ, ಶಿಕ್ಷಕ ಅಭ್ಯರ್ಥಿಗಳ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಿತು. ನಮ್ಮ ಹಕ್ಕುಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಿದ್ದೇವೆ ಎಂದು ಭಾಷಾ ಅಲ್ಪಸಂಖ್ಯಾತ ಶಿಕ್ಷಕ ಅಭ್ಯರ್ಥಿಗಳು ತಿಳಿಸಿದ್ದಾರೆ.




