ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಆದೇಶ ನೀಡಿದ ಹಿನ್ನಲೆಯಲ್ಲಿ, ಮೂರು ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಚರಣೆ ಮುಂದುವರಿದಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಎರಡನೇ ದಿನವೂ ಎಲಿಫಂಟ್ ಟ್ರ್ಯಾಪಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
ದುಬಾರೆ ತರಬೇತು ಪಡೆದ ಐದು ಆನೆಗಳಾದ ಪ್ರಶಾಂತ, ಸುಗ್ರೀವ, ಲಕ್ಷ್ಮಣ, ಧನಂಜಯ ಮತ್ತು ಈಶ್ವರ ಅವುಗಳ ಸಹಾಯದಿಂದ ಹುಡುಕಾಟ ನಡೆಯುತ್ತಿದೆ. ಅರಣ್ಯ ಅಧಿಕಾರಿಗಳು, ಆರ್‌ಆರ್‌ಟಿ ಸಿಬ್ಬಂದಿ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕಾವಡಿ, ಹಚ್ಚಿನಾಡು, ಕಣ್ಣಗಾಲ, ಹಾಲುಗುಂದ, ಬೈರಂಬಾಡ, ಯಡೂರು, ಕರಡಿಗೋಡು, ಅಮ್ಮತ್ತಿ ಮತ್ತು ಗುಹ್ಯ ಗ್ರಾಮಗಳಲ್ಲಿ ಹುಡುಕಾಟ ನಡೆಯುತ್ತಿದೆ. ಕಾರ್ಯಾಚರಣೆಯ ವೇಳೆ ಪಟಾಕಿ ಸಿಡಿಸದಂತೆ ಸೂಚನೆ ನೀಡಲಾಗಿದೆ.
ಎಂಟು ತಿಂಗಳಲ್ಲಿ ಎಂಟು ಸಾವು
ಜನವರಿಯಿಂದ ಇಲ್ಲಿಯವರೆಗಿನ ಎಂಟು ತಿಂಗಳಲ್ಲಿ ಕಾಡಾನೆ ದಾಳಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಮೂರು ದಾಳಿಗಳು ನಡೆದಿದ್ದು, ಎರಡು ಸಾವುಗಳು ಸಂಭವಿಸಿವೆ. ಇದರಿಂದ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ಮೂಡಿದೆ.
ಸಿದ್ದಾಪುರದಲ್ಲಿ ರೈತರು, ಕಾರ್ಮಿಕರು ಮತ್ತು ವಿವಿಧ ಸಂಘ-ಸಂಸ್ಥೆಗಳು ತುರ್ತು ಸಭೆ ನಡೆಸಿ, ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಿ ಸಮಸ್ಯೆಯನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 31ರಂದು ಬಂದ್
ಸಭೆಯಲ್ಲಿ ಆಗಸ್ಟ್ 31ರಂದು ಬಂದ್ ನಡೆಸಲು ತೀರ್ಮಾನವಾಗಿದೆ. ಸಿದ್ದಾಪುರ, ನೆಲ್ಯಾಹುದಿಕೇರಿ, ಪಾಲಿಬೆಟ್ಟ, ಮಾಲ್ದಾರೆ ಮತ್ತು ಅಮ್ಮತ್ತಿ ಭಾಗಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 3 ರವರೆಗೆ ಬಂದ್ ಆಚರಿಸಲಾಗುವುದು.
ಸ್ಥಳೀಯರು ಸಿದ್ದಾಪುರ ಭಾಗದಲ್ಲಿ ಉಪ ವಲಯ ಅರಣ್ಯ ಠಾಣೆ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ. ತೋಟಗಳಲ್ಲಿ ಬೀಡುಬಿಟ್ಟಿರುವ ಎಲ್ಲಾ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಮತ್ತು ಆನೆಗಳು ಮತ್ತೆ ನಾಡಿಗೆ ಬರದಂತೆ ವೈಜ್ಞಾನಿಕ ರೀತಿಯ ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಪಂದನೆ ಇಲ್ಲದ ಉನ್ನತ ಅರಣ್ಯ ಅಧಿಕಾರಿಗಳನ್ನು ಬದಲಾಯಿಸುವಂತೆಯೂ ಬೇಡಿಕೆ ಇಡಲಾಗಿದೆ.
ಕೊಡಗಿನಲ್ಲಿ ಕಾಡಾನೆ-ಮನುಷ್ಯ ಸಂಘರ್ಷ ನಿರಂತರವಾಗಿ ಮುಂದುವರಿಯುತ್ತಿರುವುದು ರೈತರ ಜೀವನ ಮತ್ತು ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸರ್ಕಾರ ಮತ್ತು ಅರಣ್ಯ ಇಲಾಖೆಯು ತಕ್ಷಣದ ಕ್ರಮಗಳೊಂದಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.




