ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಬಾರಿಯ ಥೀಮ್ ಡಾ ಬಿ ಆರ್ ಅಂಬೇಡ್ಕರ್. ಪ್ರದರ್ಶನ ಆಗಸ್ಟ್ 19ರವರೆಗೆ ನಡೆಯಲಿದೆ.
ಸ್ವಾತಂತ್ರ್ಯೋತ್ಸವ ಅಂಗವಾಗಿ ಸಸ್ಯಕಾಶಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಕಳೆದ ವರ್ಷ ವಿಶ್ವಗುರು ಬಸವಣ್ಣ ಇದ್ರೆ, ಈ ಬಾರಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಇದ್ದಾರೆ. ಪ್ರತಿ ವರ್ಷವೂ ಒಂದೊಂದು ಥೀಮ್ ನಡಿ ಪ್ರದರ್ಶನ ವಿನ್ಯಾಸ ಮಾಡುವುದು ರೂಢಿ. ಅಂತೆಯೇ ಈ ಸಲ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ, ಸಾಧನೆ, ದೇಶಕ್ಕೆ ನೀಡಿದ ಕೊಡುಗೆ, ಸಾಮಾಜಿಕ ನ್ಯಾಯದ ಹೋರಾಟ, ಬೌದ್ಧ ಮತ ಸ್ವೀಕಾರ, ಸಂವಿಧಾನ ರಚನಾ ಸಮಿತಿಯಲ್ಲಿ ಪಾತ್ರ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಪ್ರತಿರೂಪ ಹೂವುಗಳ ಮೂಲಕ ಅರಳಿದೆ.
ಫ್ಲವರ್ ಶೋಗಾಗಿಯೇ ತಮಿಳುನಾಡು, ಕೇರಳ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಕೊಲಂಬಿಯಾ, ನೆದರ್‌ಲ್ಯಾಂಡ್, ಬೆಲ್ಜಿಯಂ, ಕೀನ್ಯಾ, ಆಸ್ಪ್ರೇಲಿಯಾದಿಂದ ಹೂಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ. ಈ ಬಾರಿಯ ಫ್ಲವರ್ ಶೋಗೆ ಒಟ್ಟಾರೆ 60ಕ್ಕೂ ಹೆಚ್ಚು ಬಗೆಯ ಹೂಗಳನ್ನು ಬಳಕೆ ಮಾಡಲಾಗಿದ್ದು, ಇವುಗಳಲ್ಲಿ ಆಂಥೋರಿಯಂ, ಗುಲಾಬಿ, ಜರ್ಬೆರಾ, ಆರ್ಕಿಡ್, ರೆಡ್‌ಹಾಟ್ ಪೋಕರ್, ಆಲ್‌ಸ್ಟೋ ಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಲಿಲ್ಲಿ, ಸುಗಂಧರಾಜ ಸೇರಿದಂತೆ ವಿವಿಧ ಬಗೆಯ ಹೂಗಳು ಇದ್ದು, ಲಾಲ್‌ಬಾಗ್ ಮದುವಣಗಿತ್ತಿಯಂತೆ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿದೆ. ಗಾಜಿನ ಮನೆಯ ಮುಂಭಾಗ 3.6 ಲಕ್ಷ ಗುಲಾಬಿ ಹೂವು ಹಾಗೂ 2.4 ಲಕ್ಷ ಸೇವಂತಿಗೆ ಹೂಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಅದರ ಮುಂಭಾಗದಲ್ಲಿ 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ರಾರಾಜಿಸುತ್ತಿದೆ. ಬಿ.ಆರ್ ಅಂಬೇಡ್ಕರ್ ಅವರ ಜನ್ಮಸ್ಥಳದ ಸ್ಮಾರಕ 3.4 ಲಕ್ಷ ಪುಷ್ಪಗಳಲ್ಲಿ ಕಂಗೊಳಿಸಿದೆ.
ಲಾಲ್ ಬಾಗ್ ಒಳಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಪ್ರವಾಸಿಗರು ಕ್ಯಾಮೆರಾಗಳನ್ನು ಕೊಂಡೊಯ್ಯ ಬಹುದಾಗಿದೆ. ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ ವಾರದ ದಿನಗಳಲ್ಲಿ 80 ರೂ. ಹಾಗೂ ಶನಿವಾರ, ಭಾನುವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ 100 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸಮವಸ್ತ್ರ ಮತ್ತು ಶಾಲೆಯ ಐಡಿ ಕಾರ್ಡ್ ತೋರಿಸುವ ವಿದ್ಯಾರ್ಥಿಗಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ಇದೆ. ಲಾಲ್ ಬಾಗ್ ನ ಎಲ್ಲಾ 4 ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಸಲಾಗಿದ್ದು, ಲಾಲ್ ಬಾಗ್ ಮತ್ತು ಗಾಜಿನಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಆಗಸ್ಟ್ 8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದ್ದರು. ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಡಾ. ಭೀಮರಾವ್ ಯಶವಂತ ಅಂಬೇಡ್ಕರ್ ಕೂಡಾ ಪ್ರದರ್ಶನವನ್ನು ವೀಕ್ಷಿಸಿ, ಮೆಚ್ಚುಗೆಯ ಮಾತುಗಳನ್ನಾಡಿದ್ದರು.