ದಲಿತ ಚಳವಳಿ ಮಕಾಡೆ ಮಲಗಿರುವಾಗ, ದಲಿತ ಮುಖ್ಯಮಂತ್ರಿ ಹಾಸ್ಯಾಸ್ಪದ ಎನ್ನಿಸುತ್ತದೆ. ಪಂಚಮ ಪತ್ರಿಕೆ ಪರಸ್ಪರ ಪ್ರೀತಿ, ವಿಶ್ವಾಸ ಇಲ್ಲದೇ ನಿಂತು ಹೋಗಿದೆಯೇ ಹೊರತು ಆರ್ಥಿಕ ಮುಗ್ಗಟ್ಟಿನಿಂದಲ್ಲ ಎಂದು ಪಂಚಮ ಪತ್ರಿಕೆಯ ಪ್ರಕಾಶಕರಾಗಿದ್ದ ಎಚ್ ಗೋವಿಂದಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬೆಂಗಳೂರು ನಗರದ ಕನ್ನಡ ಭವನದಲ್ಲಿ ಜರುಗಿದ ಪಂಚಮ ಪತ್ರಿಕೆಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪಂಚಮ ಪತ್ರಿಕೆ 1985ರಲ್ಲಿ ಬಂದ್ ಆಯ್ತು. ಇಂದು ಸ್ವತಂತ್ರವಾಗಿ ಬರೆಯಲು ಯೋಗ್ಯತೆ ಇಲ್ಲದ, ಸಾಧ್ಯವಾಗದ ಪತ್ರಿಕೆಗಳು ಇವೆ. ಆದರೆ ಆಗ ಸತ್ಯ ಬರೆಯುವ ನೈತಿಕ ಅಂತಸ್ಥೈರ್ಯ ಪಂಚಮಕ್ಕೆ ಇತ್ತು” ಎಂದರು.
“ಭ್ರಷ್ಟ ರಾಜಕಾರಣಿಗಳ ಬಾಲಂಗೋಚಿಗಳಾಗಿ ದಲಿತ ಬಣಗಳು ಇಂದು ತಿರುಗುತ್ತಿವೆ. ಪ್ರಜ್ಞಾವಂತರನ್ನೇ ತಲೆತಗ್ಗಿಸುವ ಕಾಲವಿದು. ಈಗಲಾದರೂ ದಲಿತ ಚಳವಳಿಕಾರರು ತಮ್ಮ ತಪ್ಪುಗಳನ್ನು ತಾವೇ ಕ್ಷಮಿಸುಕೊಂಡು, ಒಂದಾಗಿ ಮುನ್ನಡೆಯಬೇಕೆಂಬುದು ಡಿಎಸ್ಎಸ್ನ ಪಾಕ್ಷಿಕ ಪತ್ರಿಕೆಯಾಗಿದ್ದ ʼಪಂಚಮʼ ಬಯಸುತ್ತದೆ” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಜು.15ರಂದು ರಾಷ್ಟ್ರೀಯ ಪ್ಲ್ಯಾಸ್ಟಿಕ್ ಸರ್ಜರಿ ದಿನ: ಟಿಪ್ಪು ಕಾಲದಲ್ಲೇ ನಡೆದಿತ್ತು ‘ಇಂಡಿಯನ್ ರೈನೋಪ್ಲ್ಯಾಸ್ಟಿ’
ವೇದಿಕೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ ಎನ್ ಮುಕುಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ ಎಸ್ ಮಂಜುನಾಥ ಸ್ವಾಮಿ, ಇಂಧೂದರ ಹೊನ್ನಾಪುರ, ಶಿವಾಜಿ ಗಣೇಶನ್, ರಾಮದೇವ ರಾಕೆ, ಇಂದಿರಾ ಕೃಷ್ಣಪ್ಪ, ಡಾ. ರವಿಕುಮಾರ ಭಾಗಿ ಸೇರಿದಂತೆ ಇತರರು ಇದ್ದರು.
ವರದಿ- ಶಿವರಾಜ್ ಮೋತಿ




