ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಎ) ಮತ್ತು 4(1)(ಬಿ) ಅಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಕೇಂದ್ರ ಕಚೇರಿಯು ಸಾರ್ವಜನಿಕವಾಗಿ ಪ್ರಕಟಿಸಬೇಕಾದ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಮೂರು ವರ್ಷಗಳ ಹೋರಾಟಕ್ಕೆ ಅಂತಿಮವಾಗಿ ಫಲ ಸಿಕ್ಕಿದೆ. ನಿಗಮವು ಸುಮಾರು 30,000 ಪುಟಗಳ ದೃಢೀಕೃತ ದಾಖಲೆಗಳನ್ನು ಭಾರತೀಯ ಅಂಚೆ ಇಲಾಖೆಯ ಮೂಲಕ, ಅರ್ಜಿದಾರ ಜಯದೇವ ಎಂ ಅವರ ವಿಳಾಸಕ್ಕೆ ರವಾನಿಸಿದೆ.
ಆರಂಭದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡಲು ನಿರಾಕರಿಸಿದ್ದರಿಂದ ಪ್ರಥಮ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಪ್ರಥಮ ಮೇಲ್ಮನವಿ ಪ್ರಾಧಿಕಾರಸ್ಥರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ನಾಟಕ ಮಾಹಿತಿ ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಬೇಕಾಯಿತು.
ಮಾಹಿತಿ ಆಯೋಗವು ಮಾಹಿತಿ ನೀಡುವಂತೆ ಆದೇಶಿಸಿದ ನಂತರವೂ ಅಧಿಕಾರಿಗಳು “ಸುಮಾರು 30 ಸಾವಿರ ಪುಟಗಳ ದಾಖಲೆಗಳಿವೆ; ಖುದ್ದಾಗಿ ಬಂದು ವೀಕ್ಷಿಸಿ ಅಗತ್ಯವಿರುವುದನ್ನು ಪಡೆಯಿರಿ” ಎಂದು ತಿಳಿಸಿದ್ದರು. ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ವೀಕ್ಷಿಸಿದ ದಾಖಲೆಗಳ ದೃಢೀಕೃತ ಪ್ರತಿಗಳನ್ನು ನೀಡುವುದು ಸಾರ್ವಜನಿಕ ಪ್ರಾಧಿಕಾರದ ಕಾನೂನುಬದ್ಧ ಕರ್ತವ್ಯ ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಅಂತಿಮವಾಗಿ ಎಲ್ಲಾ ದಾಖಲೆಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ.
ಈಗ ಈ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ನಿಗಮವು ಎಲ್ಲಾ ಮಾಹಿತಿಯನ್ನು ಪೂರ್ಣವಾಗಿ ನೀಡಿದೆಯೇ ಅಥವಾ ಯಾವುದನ್ನಾದರೂ ಮರೆಮಾಚಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು.
ಮುಂದಿನ ಹೋರಾಟ
ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಸ್ಥರು ಸುಮಾರು ಮೂರು ವರ್ಷಗಳ ಕಾಲ ಮಾಹಿತಿ ನೀಡುವುದನ್ನು ವಿಳಂಬಗೊಳಿಸಿದ್ದರಿಂದ, ಅರ್ಜಿದಾರರು ಈಗ ಹೊಸ ಹೋರಾಟಕ್ಕೆ ಸಜ್ಜಾಗಿದ್ದಾರೆ.
- ಕೆಎಸ್‌ಆರ್‌ಟಿಸಿ ಬೊಕ್ಕಸಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಲೆಕ್ಕಹಾಕುವುದು, ನಿಗಮಕ್ಕೆ ಆದ ವೆಚ್ಚ ಮತ್ತು ಸಾರ್ವಜನಿಕ ಹಣದ ದುರುಪಯೋಗದ ಕುರಿತು ಮಾಹಿತಿ ಸಂಗ್ರಹಿಸುವುದು, ಸಂಬಂಧಪಟ್ಟ ಅಧಿಕಾರಿಗಳ ವೈಯಕ್ತಿಕ ಹೊಣೆಗಾರಿಕೆಯನ್ನು ನಿಗದಿಪಡಿಸಲು ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಗೆ ಹೊಣೆಗಾರರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಸಂಬಂಧಿತ ಪ್ರಾಧಿಕಾರಗಳ ಮುಂದೆ ಹೋರಾಟ ಮುಂದುವರಿಸುವ ನಿರ್ಧಾರವು ಒಳಗೊಂಡಿದೆ.
ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶವಾದ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸಾರ್ವಜನಿಕರ ಮಾಹಿತಿ ಪಡೆಯುವ ಹಕ್ಕಿನ ರಕ್ಷಣೆಗಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.




