ಪ್ರವಾಸಿ ಭಾರತ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಆತಿಥೇಯ ಐರ್ಲೆಂಡ್ ತಂಡವು 34 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ, ದಾಖಲೆ ಸೃಷ್ಟಿಸಿದ ಐರ್ಲೆಂಡ್ ಭಾರತದ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ.ಐರ್ಲೆಂಡ್ ಟೀಂ ಇಂಡಿಯಾ ವಿರುದ್ಧ ಯಾವುದೇ ಮಾದರಿಯ ಇದೇ ಮೊದಲ ಜಯವಾಗಿದೆ.
ಇಂದು ಬೆಲ್‌ಫಾಸ್ಟ್‌ನ ಸ್ಟಾರ್ಮೆಂಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ನಾಯಕ ಲೋರ್ಕನ್ ಟಕರ್ (36 ಎಸೆತಗಳಲ್ಲಿ 50 ರನ್) ಹಾಗೂ ಗರೆತ್ ಡೆಲಾನಿ (32 ಎಸೆತಗಳಲ್ಲಿ 49 ರನ್) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ಭಾರತದ ಪರ ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ 24 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅಕ್ಷರ್ ಪಟೇಲ್ (33 ಕ್ಕೆ 2) ಮತ್ತು ಅರ್ಶ್‌ದೀಪ್ ಸಿಂಗ್ (28 ಕ್ಕೆ 2) ತಲಾ 2 ವಿಕೆಟ್ ಪಡೆದರು. ಆದರೆ ವೇಗಿ ಪ್ರಸಿದ್ಧ್ ಕೃಷ್ಣ 4 ಓವರ್‌ಗಳಲ್ಲಿ 57 ರನ್ ನೀಡಿ ತೀವ್ರ ದುಬಾರಿಯಾದರು.
ಇದನ್ನು ಓದಿದ್ದೀರಾ? ಜಗತ್ತೇ ಸಂಭ್ರಮಿಸುವ ಫಿಫಾ ವಿಶ್ವಕಪ್: ಭಾರತದ ತಂಡ ಯಾಕೆ ಆಡುತ್ತಿಲ್ಲ?
183 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ, ಆರಂಭಿಕ ಆಘಾತಗಳ ನಡುವೆಯೂ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ (ಕೇವಲ 20 ಎಸೆತಗಳಲ್ಲಿ 50 ರನ್, 7 ಬೌಂಡರಿ, 2 ಸಿಕ್ಸರ್) ನೆರವಿನಿಂದ ಭರವಸೆ ಮೂಡಿಸಿತ್ತು. ಆದರೆ, ಅಭಿಷೇಕ್ ಔಟಾಗುತ್ತಿದ್ದಂತೆ ಭಾರತದ ಪತನ ಆರಂಭವಾಯಿತು. ನಾಯಕ ಶ್ರೇಯಸ್ ಅಯ್ಯರ್ (3), ಸಂಜು ಸ್ಯಾಮ್ಸನ್ (5) ಮತ್ತು ಇಶಾನ್ ಕಿಶನ್ (1) ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ (25 ರನ್) ಮತ್ತು ತಿಲಕ್ ವರ್ಮಾ (19 ರನ್) ಕೊಂಚ ಹೋರಾಟ ನಡೆಸಿದರೂ, ತಂಡವನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ.\
ಅಂತಿಮವಾಗಿ ಟೀಮ್ ಇಂಡಿಯಾ 18.5 ಓವರ್‌ಗಳಲ್ಲಿ ಕೇವಲ 148 ರನ್‌ಗಳಿಗೆ ಆಲೌಟ್ ಆಗಿ ಶರಣಾಯಿತು. ಐರ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ಮ್ಯಾಥ್ಯೂ ಹಂಫ್ರೀಸ್ (38 ಕ್ಕೆ 3) ಮತ್ತು ಮ್ಯಾಥ್ಯೂ ಹೊಲ್ಲಾರ್ಡ್ (28 ಕ್ಕೆ 3) ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಈ ಭರ್ಜರಿ ಗೆಲುವಿನೊಂದಿಗೆ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಐರ್ಲೆಂಡ್ 1-0 ಮುನ್ನಡೆ ಸಾಧಿಸಿದೆ.




