ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಭೂತ ಅದ್ಭುತ
ಭೂತ ಭೂತವ ಕೂಡಿ
ಅದ್ಭುತವಾಯಿತ್ತು,
ಕಿಚ್ಚು ಕೋಡಿತ್ತು
ನೀರು ನೀರಡಿಸಿತ್ತು
ಉರಿ ಪವನದೋಷದೊಳಗಿದ್ದು
ವಾಯು ಇಮ್ಮಡಿಸಿತ್ತ ಕಂಡೆ,
ಗುಹೇಶ್ವರಾ.
ಪದಾರ್ಥ:
ಕಿಚ್ಚು = ಬೆಂಕಿ
ಕೋಡಿತ್ತು = ಕಡಿಮೆಯಾಗಿತ್ತು
ನೀರಡಿಸಿತ್ತು = ಬಾಯಾರಿಕೆ
ಪವನದೋಷ = ವಾಯುಗುಣ
ವಚನಾರ್ಥ:
ಬೆಂಕಿ, ನೀರು, ಗಾಳಿ, ನೆಲ ಮತ್ತು ಗಗನ ಈ ಐದು ಮಹಾ ಪಂಚಭೂತಗಳು. ಇವುಗಳನ್ನು ಆಧರಿಸಿ ಹೊಮ್ಮವ ರೂಪ, ರಸ, ಗಂಧ, ಸ್ಪರ್ಶ, ಶಬ್ದ ಎಂಬ ಐದು ಪಂಚೇಂದ್ರಿಯಗಳೆಂಬ ಸೂಕ್ಷ್ಮಭೂತಗಳು. ಪಂಚಭೂತಗಳೊಂದಿಗೆ ಸೂಕ್ಷ್ಮಭೂತಗಳ ಸಂಯೋಜನೆಯಿಂದಾಗಿ ಸಕಲ ಜೀವ ರಾಶಿಗಳ ಉದಯವಾಗಿದೆ. ಅದರಲ್ಲಿ ಅದ್ಭುತವಾದದ್ದು ಮಾನವ ದೇಹ. ಅದು ಅಲ್ಲಮನ ಅನನ್ಯ ದೃಷ್ಟಿಯಲ್ಲಿ “ಭೂತ ಭೂತವ ಕೂಡಿ ಅದ್ಭುತವಾಯಿತ್ತು” ಎಂಬ ಉದ್ಘಾರಕ್ಕೆ ಕಾರಣವಾಗಿದೆ. ಇಂತದೊಂದು ಅದ್ಭುತ ಸಂಭವಿಸಿದ ನಂತರ ಏನಾಯಿತು? ಕಿಚ್ಚು ಕೋಡಿತ್ತು, ನೀರು ನೀರಡಿಸಿತ್ತು. ಕಿಚ್ಚು ಕೋಡಿತ್ತು, ಅಂದರೆ ಸಕಲ ಜೀವರಾಶಿಗಳಲ್ಲಿ ನಾನೇ ಶ್ರೇಷ್ಠ ಎಂಬ ವ್ಯಸನ ಮನುಷ್ಯನಲ್ಲಿ ಒಳಬೆಂಕಿಯಂತೆ ಹೊತ್ತಿ ಉರಿಯಲಾರಂಭಿಸಿ ನಂತರ ಜ್ಞಾನಾರ್ಜನೆಯಿಂದ ಕೊಂಚ ಶಮನವಾಗಿತ್ತು. ಆದರೆ ನೀರು ನೀರಡಿಸಿತ್ತು. ಅಂದರೆ ಮನಸ್ಸಿನಲ್ಲಿ ಮಡುಗಟ್ಟಿದ್ದ ಮನೋಚಾಂಚಲ್ಯ ನೀರಿನಂತೆ ಹೊರಕ್ಕೆ ಹರಿದು ವಿಷಯ ಲಾಲಸೆಗಳ ಬೆನ್ನಟ್ಟಿ ಬಾಯಾರಿಕೆಯ ದಾಹವನ್ನು ತಣಿಸಿಕೊಳ್ಳಲು ಉತ್ಸುಕನಾದವನಂತೆ ವರ್ತಿಸುತ್ತಿತ್ತು. ವಿಷಯ ಲಾಲಸೆಗಳನ್ನು ತಣಿಸಿಕೊಳ್ಳಬೇಕೆನ್ನುವ ಉರಿ ಎಷ್ಟಿದೆ ಅಂದರೆ ಅದು ಬೀಸುವ ಗಾಳಿಗೆ ಸಿಕ್ಕು ಜ್ವಾಲೆಗಳು ದ್ವಿಗುಣವಾಗಿ ಪ್ರಜ್ವಲಿಸುತ್ತಾ ಇರುವ ಸ್ಥಿತಿ. ಇದು ಅಲ್ಲಮನ ಕಾಣ್ಕೆ.
ಪದ ಪ್ರಯೋಗಾರ್ಥ:
ಭೂತ ಭೂತವ ಕೂಡಿ ಅದ್ಭುತವಾಯಿತ್ತು. ಪಂಚಭೂತಗಳಿಂದ ಕೂಡಿ ರಚನೆಯಾದ ಮನುಷ್ಯ ದೇಹವೇ ಸೃಷ್ಟಿಯ ಒಂದು ಅದ್ಭುತ. ದೇಹವು ಮೈಮನಸ್ಸುಗಳ ಸಂಗಮ ಸ್ಥಲ. ಮನುಷ್ಯನ ದೇಹದ ರಚನೆಯನ್ನು ಕಂಡು ವೈದ್ಯಲೋಕವೇ ಇದು ಒಂದು ಅದ್ಭುತ ಎಂದು ಬೆರಗಾಗಿದೆ. ಈ ಅದ್ಭುತವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗಬೇಕಾದುದೇ ಮಾನವ ಧರ್ಮ. “ಮಾನವ ಜನ್ಮ ದೊಡ್ಡದ್ದು ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರ, ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ ದಾಳಿ ಬಾರದ ಮುನ್ನ ಧರ್ಮವ ಕೈಕೊಳ್ಳಿ ಸುಳ್ಳಿನ ಸಂಸಾರ ಸುಳಿಗೆ ಸಿಲುಕುವರೆ” ಎಂದು ಅಲ್ಲಮ ಕಂಡ ಅದ್ಭುತವನ್ನು ಪುರಂದರ ದಾಸವಾಣಿ ಅನುಮೋದಿಸುತ್ತದೆ. ಭೂತ ಅದ್ಭುತ ಅಲ್ಲಮನ ವಚನದಲ್ಲಿ ಕಂಡು ಬರುವ ಪ್ರಾಸಬದ್ದವಾದ ಅನನ್ಯ ಪದಪ್ರಯೋಗಗಳು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



