ವರ್ತಮಾನ | ‘ಸೆಂಟ್ರಲ್ ವಿಸ್ತಾ’ ಎಂಬ ಭವ್ಯ ಕಟ್ಟಡದ ಉದ್ಘಾಟನೆ ಜನಸಾಮಾನ್ಯರಿಗೆ ರವಾನಿಸಿದ ಸಂದೇಶವೇನು?

Date:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದಿರಲು ಕಾರಣವೇನು ಎಂಬುದು ಅತ್ಯಂತ ಸರಳ ಪ್ರಶ್ನೆ. ಇಂಥ ಸರಳ ಪ್ರಶ್ನೆಗೆ ಉತ್ತರಿಸಲೂ ಒಕ್ಕೂಟ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ?

ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ತಾ’ ಉದ್ಘಾಟನೆಯಾಗಿದೆ. ಇದಕ್ಕಾಗಿ ನಡೆಸಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದುಕೊಂಡ ರೀತಿಯ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಇನ್ನೂ ನಡೆಯುತ್ತಲೂ ಇದೆ. ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುವ, ದೇಶದಲ್ಲಿ ನಡೆಯುವ ಸಕಾರಾತ್ಮಕ ಬೆಳವಣಿಗೆಗಳಿಗೆಲ್ಲ ತಾನೇ ಕಾರಣವೆಂದು ಬಿಂಬಿಸಿಕೊಳ್ಳುವ, ‘ತನ್ನಿಂದಲೇ ಎಲ್ಲ, ತಾನಿಲ್ಲದಿದ್ದರೆ ಈ ದೇಶಕ್ಕೆ ಭವಿಷ್ಯವೇ ಇಲ್ಲ’ ಎನ್ನುವ ನಂಬಿಕೆಯನ್ನು ಜನಸಾಮಾನ್ಯರಲ್ಲಿ ನೆಲೆಯೂರಿಸಲು ಹಗಲಿರುಳೂ ಶ್ರಮಿಸುವ ವ್ಯಕ್ತಿ ದೇಶದ ಪ್ರಧಾನಿಯಾದರೆ ಹೇಗೆ ವರ್ತಿಸಬಹುದೋ ಅದೇ ರೀತಿಯಲ್ಲಿ ನರೇಂದ್ರ ಮೋದಿ ಅವರೂ ನಡೆದುಕೊಳ್ಳುತ್ತಿದ್ದಾರೆ. ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಮೋದಿ ಅವರ ಹೊಣೆಗೇಡಿ ವರ್ತನೆಯ ಪ್ರದರ್ಶನಕ್ಕೆ ದೊಡ್ಡ ಮಟ್ಟದ ವೇದಿಕೆ ಒದಗಿಸಲು ನೆಪವಾಯಿತು.

ಒಕ್ಕೂಟ ಸರ್ಕಾರದ ಕಾರ್ಯಕ್ರಮಗಳನ್ನು ಏಕವ್ಯಕ್ತಿಯ ಪ್ರದರ್ಶನವಾಗಿಸಲು ಉತ್ಸಾಹ ತೋರಿಸುವವರಿಗೆ, ನೀತಿ-ನಿಯಮಗಳನ್ನು ಪಾಲಿಸುವ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆನ್ನುವ ಕುರಿತು ಅಂತಹ ಕಾಳಜಿ ಏನೂ ಇಲ್ಲ. ಹೀಗಾಗಿಯೇ, ಸಂಸತ್ ಭವನದ ನೂತನ ಕಟ್ಟಡದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಡೆಸಿ ಎಂಬ ಆಗ್ರಹಕ್ಕೆ ಕವಡೆಕಾಸಿನ ಕಿಮ್ಮತ್ತೂ ದೊರೆಯಲಿಲ್ಲ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರಲು ಕಾರಣವೇನು ಎನ್ನುವ ಸರಳ ಪ್ರಶ್ನೆಗೆ ಉತ್ತರಿಸಬೇಕಿರುವುದು ತನ್ನ ಹೊಣೆಗಾರಿಕೆ ಎಂದು ಕೂಡ ಮೋದಿ ಮತ್ತವರ ನೇತೃತ್ವದ ಸರ್ಕಾರಕ್ಕೆ ಅನ್ನಿಸಲಿಲ್ಲ.

ಈ ಆಡಿಯೊ ಕೇಳಿದ್ದೀರಾ?: ಅರ್ಥ ಪಥ | ಭ್ರಮೆಯನ್ನು ಮಾರುವವರ ನಡುವೆ ಪ್ರಜಾಸತ್ತೆ ಉಳಿಸಿಕೊಳ್ಳುವ ದಾರಿ ಯಾವುದು?

ಇಚ್ಛಿಸುವ ರೀತಿಯಲ್ಲಿ ಜನಾಭಿಪ್ರಾಯ ರೂಪಿಸಲು ಅಗತ್ಯವಿರುವ ಶಕ್ತಿ ಮತ್ತು ಸಂಪನ್ಮೂಲಗಳು ತಮ್ಮ ಬಳಿ ಇವೆ ಎನ್ನುವ ವಿಶ್ವಾಸ ಮೋದಿ ಮತ್ತು ಅವರ ಬಳಗದಲ್ಲಿ ಬೇರೂರಿದ್ದರೆ ಅದಕ್ಕೆ ಸಕಾರಣಗಳಿವೆ. ಹೆಚ್ಚು ಜನರನ್ನು ತಲುಪುವ ಬಹುತೇಕ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿ ಆಗಿರುವುದರಿಂದ ಸುಳ್ಳನ್ನು ಸತ್ಯವಾಗಿಸುವುದು, ಸತ್ಯಕ್ಕೆ ಸುಳ್ಳಿನ ಬಣ್ಣ ಬಳಿಯುವುದು ಈ ಪಡೆಗೆ ಪ್ರಯಾಸದ ಕೆಲಸವೇನಲ್ಲ. ಹೀಗಾಗಿ, ರಾಜದಂಡ (ಸೆಂಗೋಲ್) ಹಿಡಿದುಕೊಂಡು ಪ್ರಧಾನಿ ಹುದ್ದೆಯ ಗೌರವಕ್ಕೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಳ್ಳುವುದೂ ಮಹಾ ಸಂಭ್ರಮದ ವಿದ್ಯಮಾನವಾಗಿ ಬಿತ್ತರಗೊಳ್ಳುತ್ತದೆ.

ಹೊಸ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮವು, ನಾವು ಅಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಗುಣಮಟ್ಟ ಕಾಯ್ದುಕೊಳ್ಳುವುದು ಹೇಗೆ ಮತ್ತು ಸಂಸದರ ಕಾರ್ಯಕ್ಷಮತೆ ಹೆಚ್ಚಿಸಲು ಏನೆಲ್ಲ ಮಾಡಬೇಕಿದೆ ಎಂಬ ನೆಲೆಯಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕಿತ್ತು. ಸಂಸದೀಯ ಪ್ರಜಾಪ್ರಭುತ್ವದ ಆಶಯಗಳು ಕುಸಿಯುವಾಗ ಎದ್ದು ನಿಲ್ಲುವ ಭವ್ಯ ಕಟ್ಟಡದ ಉದ್ಘಾಟನೆ ಅಸಲಿಗೂ ಹೊತ್ತುತರುವುದು ಸಂಭ್ರಮವನ್ನೋ ಅಥವಾ ಸೂತಕವನ್ನೋ?

ಸೆಂಟ್ರಲ್ ವಿಸ್ತಾ
ಸೆಂಟ್ರಲ್ ವಿಸ್ತಾ

ಪ್ರಧಾನಿಯಾಗಿ ಒಂಬತ್ತು ವರ್ಷಗಳ ಕಾಲ ಒಕ್ಕೂಟ ಸರ್ಕಾರ ಮುನ್ನಡೆಸಿರುವ ನರೇಂದ್ರ ಮೋದಿ ಅವರು, ಸಂಸತ್ ಕುರಿತು ಯಾವ ಧೋರಣೆ ಹೊಂದಿದ್ದಾರೆ ಎಂದು ಪರಿಶೀಲಿಸಲು ಸೆಂಟ್ರಲ್ ವಿಸ್ತಾ ಉದ್ಘಾಟನಾ ಕಾರ್ಯಕ್ರಮ ನೆಪವಾಗಬೇಕಿತ್ತು. ಏಕಮುಖಿ ಸಂವಹನವನ್ನು ಅದಮ್ಯ ಉತ್ಸಾಹದೊಂದಿಗೆ ನಡೆಸುವ ನರೇಂದ್ರ ಮೋದಿಯವರಿಗೆ ಪ್ರಶ್ನೆಗಳೆಂದರೆ ಅಪಥ್ಯವೆಂಬುದು ಈಗಾಗಲೇ ಸಾಬೀತಾಗಿದೆ. ಸಂಸತ್ ಕಲಾಪಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಮತ್ತು ಅವರು ನಡೆದುಕೊಳ್ಳುತ್ತ ಬಂದಿರುವ ರೀತಿ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿದೆಯೇ ಎಂದು ಕೂಡ ಚರ್ಚಿಸಬೇಕಲ್ಲವೇ? ವಿರೋಧ ಪಕ್ಷಗಳ ಸಂಸದರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ, ಸರ್ಕಾರ ಮಂಡಿಸುವ ಮಸೂದೆಗಳಿಗೆ ಅನುಮೋದನೆ ಪಡೆಯುವ ಮುನ್ನ ಅವುಗಳ ಕುರಿತು ಚರ್ಚೆಗೆ ಅವಕಾಶ ಕಲ್ಪಿಸುವ ಉತ್ಸಾಹ ತೋರದವರು, ಇದೀಗ ಹೊಸ ಕಟ್ಟಡ ನಿರ್ಮಿಸಿರುವುದನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ವಿಪರ್ಯಾಸವಲ್ಲವೇ?

ಸಂಸತ್ತಿನ ಕಾರ್ಯಕಲಾಪಗಳು ಸುಗಮವಾಗಿ ನಡೆಯುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವ ಆಳುವ ಪಕ್ಷವೇ, ಕಲಾಪಗಳು ನಡೆಯದಿರುವ ಹಾಗೆ ನೋಡಿಕೊಳ್ಳಲು ಮುತುವರ್ಜಿ ವಹಿಸುವುದು ಸಾಧನೆಯೇ? ವಿದೇಶದಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೇಳೆ ನೀಡಿದ ಹೇಳಿಕೆಗೆ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಸ್ವತಃ ಆಳುವ ಪಕ್ಷದ ಸಂಸದರೇ ಕಲಾಪಗಳಿಗೆ ಅಡ್ಡಿಪಡಿಸಿದ್ದು ಕಣ್ಣ ಮುಂದೆಯೇ ಇದೆ.

ಸೆಂಟ್ರಲ್ ವಿಸ್ತಾ
ರಾಷ್ಟ್ರಪತಿ ದ್ರೌಪದಿ ಮುರ್ಮು

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಇನ್ನಿಲ್ಲದ ಉತ್ಸಾಹ ತೋರುವ ನರೇಂದ್ರ ಮೋದಿ ಅವರಿಗೆ, ಸಂಸತ್ತಿನ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಷ್ಟೇನೂ ಆಸಕ್ತಿ ಇದ್ದಂತಿಲ್ಲ. ಅವರ ಪಾಲ್ಗೊಳ್ಳುವಿಕೆ ಬಹುತೇಕ ಸಂದರ್ಭಗಳಲ್ಲಿ ಭಾಷಣ ಮಾಡುವುದಕ್ಕಷ್ಟೇ ಸೀಮಿತವಾಗಿರುವುದೇ ವಿನಾ, ವಿರೋಧ ಪಕ್ಷಗಳ ಸಂಸದರು ಕೇಳುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವ ಗೋಜಿಗೆ ಹೋಗಲಾರರು.

ಸಂಸತ್ತಿಗೆ ಹೊಸ ಕಟ್ಟಡ ಕಟ್ಟುವುದಕ್ಕಿಂತ ಮುಖ್ಯವಾಗಿ ಅಲ್ಲಿಗೆ ನಾವು ಆರಿಸಿ ಕಳಿಸುತ್ತಿರುವ ಪ್ರತಿನಿಧಿಗಳ ಗುಣಮಟ್ಟ ಸುಧಾರಿಸುವುದು ಹೇಗೆ ಎಂಬುದು ಹೆಚ್ಚು ಆದ್ಯತೆಯ ವಿಷಯವಾಗಬೇಕಿತ್ತು. ಜನರ ಮನಸ್ಸಿನಲ್ಲಿ ದ್ವೇಷ ಬಿತ್ತಲು ನಾಲಿಗೆ ಹರಿಬಿಡುವವರನ್ನು ಆಳುವ ಪಕ್ಷ ಆದ್ಯತೆಯ ಮೇರೆಗೆ ಸಂಸತ್ತಿಗೆ ಕರೆಸಿಕೊಳ್ಳುತ್ತಿದೆ. ಚುನಾವಣೆಗಳಲ್ಲಿ ಇಂತಹವರ ಗೆಲುವಿಗಾಗಿ ಹಗಲಿರುಳು ಶ್ರಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ಅಭ್ಯರ್ಥಿ ಎಂತಹವರೇ ಆಗಿದ್ದರೂ ತಮ್ಮ ಮುಖ ನೋಡಿಕೊಂಡು ಮತ ಚಲಾಯಿಸುವಂತೆ ಕರೆ ನೀಡುತ್ತಲೇ ಬಂದಿದ್ದಾರೆ. ಮೋದಿ ಮುಖ ತೋರಿಸಿ ಆರಿಸಿ ಹೋದವರೂ ಅಷ್ಟೇ; ಸಂಸತ್ ಕಲಾಪದ ವೇಳೆಯಲ್ಲಿ ಮೋದಿ ಭಜನೆಗೆ ತಮ್ಮ ಮಾತುಗಳನ್ನು ಮೀಸಲಿಡುತ್ತಿದ್ದಾರೆ. ಹೀಗಾಗಿಯೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 25 ಸಂಸದರನ್ನು ಆರಿಸಿ ಕಳಿಸಿದ ರಾಜ್ಯದ ಸಮಸ್ಯೆಗಳು ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದು ತೀರಾ ಅಪರೂಪ.

ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣಿನ ದೇಹದ ಮೇಲಿನ ಅಧಿಕಾರ ರಾಜಕಾರಣ

ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ರೂಪಿಸಬೇಕಿರುವ ನೀತಿಗಳ ಕುರಿತು ಚಿಂತಿಸುವ ಮತ್ತು ಚರ್ಚಿಸುವ ತಿಳಿವಳಿಕೆ, ಇಚ್ಛಾಶಕ್ತಿ ಹೊಂದಿರುವ ಸಂಸದರನ್ನು ಸಂಸತ್ತಿಗೆ ಆರಿಸಿ ಕಳಿಸುವುದು ಆದ್ಯತೆಯಾಗದೆ ಹೋದಲ್ಲಿ, ಭವ್ಯ ಕಟ್ಟಡಗಳ ನಿರ್ಮಾಣದಿಂದ ಸಾಧಿಸುವುದಾದರೂ ಏನನ್ನು? ‘ಮೋದಿ ಮುಖ ನೋಡಿಕೊಂಡು ಮತ ಚಲಾಯಿಸಿ’ ಎನ್ನುವುದು ಸಂಸದೀಯ ಪ್ರಜಾಪ್ರಭುತ್ವದ ಅಧಃಪತನಕ್ಕೆ ಇಂಬು ನೀಡುವುದಿಲ್ಲವೇ? ಮೋದಿ ಒಬ್ಬರೇ ಎಲ್ಲ ಬಿಜೆಪಿ ಸಂಸದರ ಸ್ಥಾನ ತುಂಬಲು ಸಾಧ್ಯವೇ? ತಮ್ಮ ನಡೆ-ನುಡಿಗಳ ಮೂಲಕ ಸಂಸತ್ತಿನ ಘನತೆಗೆ ಕುಂದು ತಂದವರು, ಹೊಸ ಕಟ್ಟಡ ನಿರ್ಮಿಸಲು ಈ ಪರಿ ಮುತುವರ್ಜಿ ತೋರಿದ್ದಾದರೂ ಏಕೆ? ಇತಿಹಾಸದ ಪುಟಗಳಲ್ಲಿ ‘ನೂತನ ಸಂಸತ್ ಭವನದ ನಿರ್ಮಾತೃ’ ಎಂದು ದಾಖಲಾಗುವ ಹಪಾಹಪಿಯೇ? ಅಧಿಕಾರದ ಏಣಿಯ ತುತ್ತತುದಿಯಲ್ಲಿ ನಿಂತು ಅಪರಿಮಿತ ಜನಮನ್ನಣೆ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾಯಕ, ವರ್ತಮಾನದ ವಿಮರ್ಶೆಯ ಕಣ್ಣಿಗೆ ಮುಸುಕು ಹೊದಿಸಿದಷ್ಟೇ ಸಲೀಸಾಗಿ ಇತಿಹಾಸದ ಭೂತಗನ್ನಡಿಗೂ ಮುಸುಕು ಹೊದಿಸಲು ಸಾಧ್ಯವೇ?

ಪೋಸ್ಟ್ ಹಂಚಿಕೊಳ್ಳಿ:

ಎಚ್ ಕೆ ಶರತ್
ಎಚ್ ಕೆ ಶರತ್
ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೇಷ್ಟ್ರು. ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಣಿಯದ ಆಸಕ್ತಿ. ಪುಸ್ತಕ ಪ್ರಕಾಶನ ಮತ್ತು ಮಾರಾಟ ಮತ್ತೊಂದು ಇಷ್ಟದ ಕಸುಬು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ ಜನ | ಅಮಾವಾಸ್ಯೆ ರಾತ್ರಿಯಲ್ಲಿ ಆಂಬುಲೆನ್ಸ್ ಮಂಜುನಾಥನೊಂದಿಗೆ ಮಾತುಕತೆ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಗಾಯ ಗಾರುಡಿ | ಮಾತು ಮರಣಿಸುತ್ತಿರುವ ಕಾಲದಲ್ಲಿ ಮಾತುಗಳೇ ಸಂಜೀವಿನಿಯಾಗುವ ಸೋಜಿಗ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ರೈತರ ಆತ್ಮಹತ್ಯೆ ಬೆಂಕಿ ಕಾರ್ಪೊರೇಟುಗಳನ್ನು ಸುಟ್ಟೀತು!

ರೈತರ ಆತ್ಮಹತ್ಯಾ ಸರಣಿಯ ಬೇರುಗಳಿರುವುದು1991ರಲ್ಲಿ ಪರಿಚಯಿಸಿದ ಹೊಸ ಆರ್ಥಿಕ ನೀತಿ ಮತ್ತು...