ಸರ್ಕಾರವು ಕೃಷಿ ಮತ್ತು ರೈತರ ವಿಚಾರದಲ್ಲಿ ತೋರುತ್ತಿರುವ ಈ ಉದಾಸೀನತೆಯನ್ನು ತಕ್ಷಣವೇ ಕೈಬಿಡದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯವು ತೀವ್ರ ಆಹಾರ ಧಾನ್ಯಗಳ ಕೊರತೆ ಮತ್ತು ಗ್ರಾಮೀಣ ಆರ್ಥಿಕತೆಯ ಸಂಪೂರ್ಣ ಕುಸಿತವನ್ನು ಎದುರಿಸಬೇಕಾಗುತ್ತದೆ.
ಭಾರತ ಎಂದಿಗೂ ಕೃಷಿ ಪ್ರಧಾನ ರಾಷ್ಟ್ರ. ಭಾರತದ ಬಹುಸಂಖ್ಯಾತರ ಜೀವನಾಧಾರವೂ, ದೇಶದ ಆರ್ಥಿಕತೆಯ ಬುನಾದಿಯೂ ಕೃಷಿಯೇ ಆಗಿದೆ. ಭಾರತದ ಮೊದಲ ಪಂಚವಾರ್ಷಿಕ ಯೋಜನೆ ಮತ್ತು 1960ರ ದಶಕದ ಹಸಿರು ಕ್ರಾಂತಿ ಕೂಡ ಕೃಷಿ ಮತ್ತು ರೈತರನ್ನೇ ಆಧರಿಸಿತ್ತು. ಆರಂಭದಲ್ಲಿ ಕೃಷಿ ಮತ್ತು ರೈತರಿಗೆ ಸರ್ಕಾರಗಳಿಂದ ದೊರೆತ ನೆರವಿನಿಂದಾಗಿ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯೂ ಆಯಿತು. ಆದ್ದರಿಂದಲೇ, ‘ರೈತ ದೇಶದ ಬೆನ್ನೆಲುಬು’ ಎಂಬ ನುಡಿಗಟ್ಟು ಪ್ರಚಲಿತದಲ್ಲಿದೆ.
ಆದರೆ, ಈಗೇನಾಗುತ್ತಿದೆ? ಈ ನುಡಿಗಟ್ಟು ಕೇವಲ ಭಾಷಣಗಳಿಗೆ ಮತ್ತು ಚುನಾವಣೆಗಳ ಪ್ರಣಾಳಿಕೆಗಳಿಗೆ ಸೀಮಿತವಾಗುತ್ತಿದೆ. ಪ್ರಕೃತಿಯ ವಿಕೋಪ ಒಂದೆಡೆಯಾದರೆ, ಆಡಳಿತಶಾಹಿಯ ಉದಾಸೀನತೆ ಮತ್ತು ಅಧಿಕಾರಸ್ಥರ ಆದ್ಯತೆಗಳ ಪಲ್ಲಟ ಇನ್ನೊಂದೆಡೆ. ಈ ಎರಡರ ನಡುವೆ ರೈತರು ಸಿಲುಕಿದ್ದಾರೆ. ಇದಕ್ಕೆ ಕರ್ನಾಟಕದ ರೈತರು ಹೊರತಾಗಿಲ್ಲ. ಪ್ರಸ್ತುತ, ಕರ್ನಾಟಕದಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭೀಕರ ಮಳೆಯಿಂದಾಗಿ ವ್ಯಾಪಕ ಬೆಳೆ ನಷ್ಟ ಸಂಭವಿಸಿದೆ. ಹವಾಮಾನ ವೈಪರೀತ್ಯವು ರೈತರ ಪಾಲಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಕೃಷಿ ಕ್ಷೇತ್ರವು ಜರ್ಜರಿತಗೊಂಡಿದೆ. ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಡೆಯಾಗಿದೆ. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತೆ ರೈತರು ಬೆಳೆದಿದ್ದ ಸೋಯಾಬಿನ್, ಹತ್ತಿ, ಹೆಸರು, ತೊಗರಿ ಹಾಗೂ ಕಬ್ಬಿನ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಬಿತ್ತನೆಗಾಗಿ ಸಾಲಸೋಲ ಮಾಡಿ ವ್ಯಯಿಸಿದ್ದ ಹಣವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಉತ್ತರ ಕರ್ನಾಟಕ ರೈತರ ಆರ್ಥಿಕ ಭವಿಷ್ಯವೇ ಮುರಿದುಬಿದ್ದಿದೆ. ರೈತರು ಕಂಗಾಲಾಗಿದ್ದಾರೆ.
ಈ ಬಿರುಮಳೆಯ ಹೊಡೆತದಿಂದ ಬದುಕುಳಿದಿರುವ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ. ಆದರೆ, ಬೆಳೆಯನ್ನು ಉಳಿಸಿಕೊಳ್ಳಲು ಅಗತ್ಯವಿರುವಷ್ಟು ರಸಗೊಬ್ಬರವೂ ಸಿಗದಂತಾಗಿದೆ. ರಾಜ್ಯದಲ್ಲಿ ರಸಗೊಬ್ಬರದ ಕೊರತೆಯೂ ರೈತರನ್ನು ಬಾಧಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಚಲುವರಾಯಸ್ವಾಮಿ ಅವರೇ ಸ್ವತಃ ಅಧಿಕೃತವಾಗಿ ಒಪ್ಪಿಕೊಂಡಿರುವಂತೆ, ‘ರಾಜ್ಯದಲ್ಲಿ ಸದ್ಯಕ್ಕೆ ಸುಮಾರು 38,000 ಟನ್ ರಸಗೊಬ್ಬರದ ಕೊರತೆ’ ಇದೆ. ಯೂರಿಯಾ, ಡಿಎಪಿ ಸೇರಿದಂತೆ ಪ್ರಮುಖ ರಸಗೊಬ್ಬರಗಳಿಗಾಗಿ ರೈತರು ಮುಂಜಾನೆಯಿಂದಲೇ ವಿವಿಧ ಸಹಕಾರ ಸಂಘಗಳ ಮುಂದೆ ಮತ್ತು ಕೃಷಿ ಕೇಂದ್ರಗಳ ಮುಂದೆ ಮಳೆ-ಬಿಸಿಲೆನ್ನದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಗೊಬ್ಬರಕ್ಕಾಗಿ ರೈತರು ಮತ್ತು ಅಧಿಕಾರಿಗಳ ನಡುವೆ ತೀವ್ರ ಜಟಾಪಟಿಗಳೂ ನಡೆದಿವೆ. ಪರಿಸ್ಥಿತಿ ಕೈಮೀರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ರೈತರ ಮೇಲೆ ಕೇಂದ್ರ ಸರ್ಕಾರಕ್ಕೂ ಕರುಣೆಯಿಲ್ಲ. ರಾಜ್ಯದಲ್ಲಿ ಕೊರತೆ ಇರುವ ರಸಗೊಬ್ಬರ ಪೂರೈಕೆಗೆ ಮೋದಿ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಬದಲಾಗಿ, ಅಗತ್ಯ ಇರುವಷ್ಟು ಹಂಚಿಕೆ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡುತ್ತಿದೆ.
ಮಳೆ ಅಬ್ಬರ, ಬೆಳೆ ನಾಶ ಹಾಗೂ ರಸಗೊಬ್ಬರ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದರೂ, ಸದ್ಯಕ್ಕೆ, ರಾಜ್ಯದಲ್ಲಿ ಕೃಷಿ ಸಚಿವರಿಲ್ಲ. ಕೃಷಿ ಖಾತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬಳಿಯೇ ಉಳಿದಿದೆ. ಆದರೆ, ಶಿವಕುಮಾರ್ ನೇತೃತ್ವದ ಹೊಸ ಸರ್ಕಾರವು ಕೃಷಿ ಮತ್ತು ರೈತರ ಹಿತರಕ್ಷಣೆಯ ವಿಚಾರದಲ್ಲಿ ಗಂಭೀರ ನಿಲುವು ತಳೆಯುತ್ತಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್, ತಕ್ಷಣವೇ ತುರ್ತು ಸಭೆಗಳನ್ನು ನಡೆಸಿ ರೈತರಿಗೆ ನೆರವಾಗುವ ಬದಲು, ರಾಜಕೀಯ ರ್‍ಯಾಲಿಗಳಲ್ಲಿ ಮಗ್ನರಾಗಿದ್ದಾರೆ. ವಿವಿಧ ದೇವಸ್ಥಾನಗಳಿಗೆ ‘ಟೆಂಪಲ್ ರನ್’ ಮಾಡುತ್ತಿದ್ದಾರೆ. ಜೊತೆಗೆ, ಮಾಜಿ ಮುಖ್ಯಮಂತ್ರಿಗಳ ಭೇಟಿಯ ನೆಪದಲ್ಲಿ ಸುತ್ತಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
‘ಯಥಾ ರಾಜ ತಥಾ ಮಂತ್ರಿ’ ಎಂಬಂತೆ ಡಿ.ಕೆ ಶಿವಕುಮಾರ್ ಅವರ ಸಂಪುಟ ಮಂತ್ರಿಗಳೂ ಅಸಮಾಧಾನದಿಂದ ಮುನಿಸಿಕೊಂಡಿದ್ದಾರೆ. ಖಾತೆ ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಹೊಸ ಸರ್ಕಾರ ರಚನೆಯಾದ ಬಳಿಕ ಸಂಪುಟ ಸಭೆಯೇ ನಡೆದಿಲ್ಲ. ತಮ್ಮ ಗೋಳುಗಳೇ ಮೇಲು ಎನ್ನುತ್ತಿರುವ ಸಚಿವರಿಗೆ ರೈತರ ಗೋಳು ಕಾಣುತ್ತಿಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ, ಬೆಳೆಗಳಿಗೆ ವಿಮಾ ಸೌಲಭ್ಯ ಒದಗಿಸುವ ಭರವಸೆ ನೀಡಿತ್ತು. ಈ ಭರವಸೆಗಳು ಇನ್ನೂ ಭರವಸೆಗಳಾಗಿಯೇ ಉಳಿದಿವೆ. ಒಂದು ವೇಳೆ, ಬೆಳೆಗಳಿಗೆ ವಿಮಾ ಸೌಲಭ್ಯಗಳು ಇದ್ದಿದ್ದರೆ, ಮಳೆಯಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ಆರ್ಥಿಕ ನೆರವಾದರೂ ದೊರೆಯುತ್ತಿತ್ತು. ಅದೂ ಇಲ್ಲದಂತಾಗಿದೆ.
ಈ ಲೇಖನ ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್
ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸುವ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಹಿಂದಿನ ಕೃಷಿ ಸಚಿವರು ಕೇವಲ ‘ಗೊಬ್ಬರದ ಕೊರತೆ ಇದೆ’ ಎಂದು ಹೇಳಿಕೆ ನೀಡಿ ಕೈತೊಳೆದುಕೊಂಡರೇ ಹೊರತು, ರೈತರಿಗೆ ನೆರವು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮನಸ್ಸು ಮಾಡಲಿಲ್ಲ.
ರಾಜ್ಯದ ಅರ್ಧದಷ್ಟು ಜನರ ಜೀವನಾಧಾರವಾಗಿರುವ ಕೃಷಿ ಕ್ಷೇತ್ರವು ಸರ್ಕಾರದ ಆದ್ಯತೆ ಆಗಿರಬೇಕು. ಆದರೆ, ರಾಜಕೀಯ ಮೇಲಾಟಗಳು, ದೇವಸ್ಥಾನ ಭೇಟಿಗಳು ಹಾಗೂ ಆಂತರಿಕ ಅಸಮಾಧಾನಗಳಲ್ಲಿ ಸರ್ಕಾರ ಮುಳುಗಿದೆ. ಸರ್ಕಾರವು ಕೃಷಿ ಮತ್ತು ರೈತರ ವಿಚಾರದಲ್ಲಿ ತೋರುತ್ತಿರುವ ಈ ಉದಾಸೀನತೆಯನ್ನು ತಕ್ಷಣವೇ ಕೈಬಿಡದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯವು ತೀವ್ರ ಆಹಾರ ಧಾನ್ಯಗಳ ಕೊರತೆ ಮತ್ತು ಗ್ರಾಮೀಣ ಆರ್ಥಿಕತೆಯ ಸಂಪೂರ್ಣ ಕುಸಿತವನ್ನು ಎದುರಿಸಬೇಕಾಗುತ್ತದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ಸುತ್ತಾಟಗಳನ್ನು ಹಾಗೂ ಸಚಿವರು ತಮ್ಮ ಮುನಿಸುಗಳನ್ನು ಬದಿಗಿಟ್ಟು, ರಾಜ್ಯದಲ್ಲಿ 38,000 ಟನ್ ಟನ್ ರಸಗೊಬ್ಬರದ ಕೊರತೆ ನೀಗಿಸಲು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕಿದೆ. ಲಕ್ಷಾಂತರ ರೈತ ಕುಟುಂಬಗಳ ಬವಣೆಯನ್ನು ಆಲಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಸಚಿವರ, ಶಾಸಕರ, ಅಧಿಕಾರಿಗಳ, ತಜ್ಞರ ತಂಡವನ್ನು ಕಳುಹಿಸಿ, ನಷ್ಟದ ನಿಖರ ಅಂದಾಜು ಮಾಡಿ ತಕ್ಷಣ ಪರಿಹಾರ ಧನ ಬಿಡುಗಡೆ ಮಾಡಬೇಕಿದೆ.




