ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು, 'ಒಡೆಯ-ಗುಲಾಮ'ನ ಬಾಂಧವ್ಯದ ಮೇಲಲ್ಲ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಬೆಳೆಯುತ್ತಿರುವ ಬೃಹತ್ ಆರ್ಥಿಕ ಶಕ್ತಿ. ಅಮೆರಿಕದ ದಬ್ಬಾಳಿಕೆಯನ್ನು ಸಹಿಸಿಕೊಂಡು ಮೌನವಾಗಿದ್ದರೆ ಜಾಗತಿಕ ಮಟ್ಟದಲ್ಲಿ ಭಾರತದ ಆಶಯಗಳಿಗೆ ಬೆಲೆ-ನೆಲೆ ಇಲ್ಲದಂತಾಗುತ್ತದೆ.
ಜಾಗತಿಕ ರಾಜಕಾರಣದಲ್ಲಿ ಅಮೆರಿಕ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಹೊರಟಾಗಲೆಲ್ಲ, ಸಾರ್ವಭೌಮ ದೇಶಗಳ ಮೇಲೆ ನಿರ್ಬಂಧಗಳ ಚಾಟಿ ಬೀಸುವುದು ಅದರ ಹಳೆಯ ಅಭ್ಯಾಸ. ಈಗಲೇ ತನ್ನ ದಬ್ಬಾಳಿಕೆಯನ್ನು ಮುಂದುವರೆಸುತ್ತಿರುವ ಅಮೆರಿಕ, ‘ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧ ಕಾಯ್ದೆ-2026’ನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ. ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ 100%ರಷ್ಟು ಸುಂಕ ಹೇರುವ ಅಧಿಕಾರವನ್ನು ಅಧ್ಯಕ್ಷ ಟ್ರಂಪ್‌ಗೆ ನೀಡಿದೆ. ಇದು ಅಮೆರಿಕದ ಅತ್ಯಂತ ಬೇಜವಾಬ್ದಾರಿ, ಏಕಪಕ್ಷೀಯ ಹಾಗೂ ಹೆದರಿಸಿ ಬೆದರಿಸುವ ‘ದಾದಾಗಿರಿ’ ನೀತಿ.
ಆದರೆ, ಅಮೆರಿಕದ ಈ ದುಂಡಾವರ್ತನೆಗೆ ಭಾರತ ಸರ್ಕಾರ ಅರ್ಥಾತ್ ಮೋದಿ ಸರ್ಕಾರ ತಲೆಬಾಗುತ್ತಿರುವುದು, ಮೌನವಾಗಿರುವುದು ಹಾಗೂ ಪ್ರಶ್ನಿಸಲು ಹಿಂಜರಿಯುತ್ತಿರುವುದು ಭಾರತೀಯರಿಗೆ ಕಳವಳ ಉಂಟುಮಾಡಿದೆ. 140 ಕೋಟಿ ಜನರ ಇಂಧನ ಭದ್ರತೆ ಮತ್ತು ದೇಶದ ಆರ್ಥಿಕ ಹಿತಾಸಕ್ತಿ ಆತಂಕದಲ್ಲಿರುವಾಗಲೂ ಪ್ರಧಾನಿ ಮೋದಿ ಅಮೆರಿಕದ ಮುಂದೆ ತಲೆ ಎತ್ತಿ ನಿಲ್ಲಲು ಯತ್ನಿಸುತ್ತಿಲ್ಲವೇಕೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಪ್ರಸ್ತುತ, ಭಾರತವು ತನ್ನ ಅಗತ್ಯದ 88%ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಆಮದಿನಲ್ಲಿ, ರಷ್ಯಾದ ಪಾಲು ಭಾರೀ (40ರಿಂದ 50%) ಪ್ರಮಾಣದಲ್ಲಿದೆ. ಮಧ್ಯಪ್ರಾಚ್ಯದಲ್ಲಿ ಸಾಲು ಸಾಲು ಯುದ್ಧಗಳು ಮತ್ತು ಜಲಸಂಧಿಗಳ ದಿಗ್ಬಂಧನಗಳಿಂದಾಗಿ ಜಾಗತಿಕ ತೈಲ ಪೂರೈಕೆ ಏರುಪೇರಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ರಷ್ಯಾದ ತೈಲ ಭಾರತದ ಇಂಧನ ಭದ್ರತೆಗೆ ಸಂಜೀವಿನಿಯಾಗಿದೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧ ಮತ್ತು ಜಲಸಂಧಿಗಳ ಬಿಕ್ಕಟ್ಟನ್ನು ಸೃಷ್ಟಿಸಿದ್ದೇ ಅಮೆರಿಕ. ಆದರೂ, ತಾನೇ ರೂಪಿಸಿದ ಯುದ್ಧಗಳು ಮತ್ತು ಜಾಗತಿಕ ಬಿಕ್ಕಟ್ಟುಗಳಿಗೆ ಜಗತ್ತಿನ ಇತರೆ ದೇಶಗಳು ಬೆಲೆ ತೆರಬೇಕು ಎನ್ನುವುದು ಅಮೆರಿಕದ ಸಾಮ್ರಾಜ್ಯಶಾಹಿ ಮಾನಸಿಕತೆ. ಯುಕ್ರೇನ್ ಮತ್ತು ಮಧ್ಯಪ್ರಾಚ್ಯದ ಸಂಘರ್ಷಗಳಲ್ಲಿ ಭಾರತದ ಯಾವುದೇ ಪಾತ್ರವಿಲ್ಲ. ಸ್ವತಃ ಯುರೋಪ್ ದೇಶಗಳು ತಮ್ಮ ಇಂಧನ ಅಗತ್ಯಕ್ಕಾಗಿ ರಷ್ಯಾದ ನೈಸರ್ಗಿಕ ಅನಿಲವನ್ನು ಇಂದಿಗೂ ಬಳಸಿಕೊಳ್ಳುತ್ತಿವೆ. ಈಗ, ಭಾರತವೂ ತನ್ನ ಇಂಧನ ಕೊರತೆಯನ್ನು ನೀಗಿಸಿಕೊಳ್ಳಲು ರಷ್ಯಾ ಕಚ್ಚಾ ತೈಲದ ಮೇಲೆ ಅವಲಂಬಿಸಿದೆ. ಆದರೆ, ಟ್ರಂಪ್ ಅವರು ತಮ್ಮ ದೇಶದ ಮಧ್ಯಂತರ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಜಾಗತಿಕ ತೈಲ ಬೆಲೆ ಏರಿಕೆಯ ಒತ್ತಡವನ್ನು ಭಾರತದಂತಹ ದೇಶಗಳ ಮೇಲೆ ಹೇರಲು ಮುಂದಾಗಿದ್ದಾರೆ.
ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿಸುವುದನ್ನು ನಿಲ್ಲಿಸಿ, ಅಮೆರಿಕದ ಶರತ್ತುಗಳಿಗೆ ಒಪ್ಪಿಕೊಳ್ಳುವಂತೆ ಭಾರತದ ಮೇಲೆ ಟ್ರಂಪ್ ಒತ್ತಡ ಹೇರುತ್ತಿದ್ದಾರೆ. ಇದು ಅಮೆರಿಕದ ನೇರ ಬೆದರಿಕೆ. ಬೆದರಿಕೆಯಷ್ಟೇ ಅಲ್ಲ, ಭಾರತದ ವ್ಯಾಪಾರ ಹಿತಾಸಕ್ತಿಗಳನ್ನು ಬಲಿ ಹಾಕುವ ಹುನ್ನಾರ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಭಾರತವನ್ನು ಅಸಮಾನ ಸ್ಥಾನಕ್ಕೆ ತಳ್ಳಿ, ತನ್ನ ಕೃಷಿ ಮಾರುಕಟ್ಟೆ ಮತ್ತು ಸೇವಾ ವಲಯಗಳನ್ನು ನಿಯಂತ್ರಿಸುವುದು ಅಮೆರಿಕದ ನಿಜವಾದ ತಂತ್ರ. ಈ ಬಲೆಗೆ ಬೀಳುವುದು ದೇಶದ ಭವಿಷ್ಯಕ್ಕೆ ಕಂಟಕ.
ಇದೇ ಸಮಯದಲ್ಲಿ, ಮತ್ತೊಂದು ಕಹಿ ಸತ್ಯವನ್ನು ಪ್ರಧಾನಿ ಮೋದಿ ಸರ್ಕಾರ ಗ್ರಹಿಸಬೇಕಿದೆ. ರಷ್ಯಾದ ತೈಲವನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿರುವ ಪ್ರಥಮ ದೇಶ ಚೀನಾ, ಎರಡನೆಯದ್ದು ಭಾರತ. ಆದರೆ, ಅಮೆರಿಕವು ಚೀನಾದ ಮೇಲೆ ಇಂತಹ 100% ಸುಂಕ ಹೇರಲು ಹಿಂಜರಿಯುತ್ತದೆ. ಏಕೆಂದರೆ ಚೀನಾ ತಕ್ಷಣವೇ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡುತ್ತದೆ ಎಂಬ ಭಯ ಅಮೆರಿಕಕ್ಕಿದೆ.
ಆದರೆ, ಭಾರತ ಯಾವುದೇ ಕಠಿಣ ಪ್ರತಿ-ಸುಂಕ ಅಥವಾ ರಾಜತಾಂತ್ರಿಕ ತಿರುಗೇಟು ನೀಡುವುದಿಲ್ಲ ಎಂಬ ಉಡಾಫೆ ಅಮೆರಿಕಕ್ಕಿದೆ. ನಾವು ಅಮೆರಿಕದ ಪ್ರತಿಯೊಂದು ದೌರ್ಜನ್ಯಕ್ಕೂ ತಲೆಬಾಗುತ್ತಾ ಹೋದರೆ, ಕತ್ತಲೆಯ ಕೋಣೆಯಲ್ಲಿ ನಮ್ಮನ್ನಿಟ್ಟು ಅಮೆರಿಕ ನಿರಂತರವಾಗಿ ಬೆದರಿಸುತ್ತಲೇ ಇರುತ್ತದೆ. ಕೆನಡಾದಂತಹ ಸಣ್ಣ ದೇಶಗಳೇ ಅಮೆರಿಕದ ಸುಂಕ ನೀತಿಯ ವಿರುದ್ಧ ಪ್ರತಿ-ಸುಂಕ ವಿಧಿಸಿ ಎದೆಸೆಟೆದು ನಿಲ್ಲುತ್ತಿರುವಾಗ, 140 ಕೋಟಿ ಜನರ ಭಾರತ ಏತಕ್ಕಾಗಿ ಹಿಂಜರಿಯಬೇಕು?
ಅಮೆರಿಕದ ಕಾಯ್ದೆಯಲ್ಲಿ ‘ವಿಶೇಷ ವಿನಾಯಿತಿ’ ಪಡೆಯಲು ಭಾರತ ಭಿಕ್ಷೆ ಬೇಡುವ ಅಗತ್ಯವೇನೂ ಇಲ್ಲ. ಯಾಕೆಂದರೆ, ಅಮೆರಿಕದ ದಬ್ಬಾಳಿಕೆ-ದಾದಾಗಿರಿಗೆ ಈ ಹಿಂದೆ ಭಾರತ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಮತ್ತು ಪ್ರತ್ಯುತ್ತರ ನೀಡಿದ ಉದಾಹರಣೆಗಳಿವೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಗೃಹ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಅವರು ಭಾರತವನ್ನು ನಾನಾ ರೀತಿಯಲ್ಲಿ ಬೆದರಿಸಿದ್ದರು. ಅಮೆರಿಕವು ತನ್ನ ಏಳನೇ ನೌಕಾಪಡೆಯನ್ನು ಬಂಗಾಳ ಕೊಲ್ಲಿಗೆ ಕಳುಹಿಸಿ ಭಾರತಕ್ಕೆ ನೇರ ಯುದ್ಧದ ಬೆದರಿಕೆ ಒಡ್ಡಿತ್ತು. ಅಂತಹ ಸಂದರ್ಭದಲ್ಲಿಯೂ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಎಳ್ಳಷ್ಟೂ ಹಿಂಜರಿಯಲಿಲ್ಲ. ವೈಯಕ್ತಿಕ ದಾಳಿಗಳು, ಆರ್ಥಿಕ ತಡೆಗಳು ಹಾಗೂ ನೌಕಾಪಡೆಯ ಬೆದರಿಕೆಗಳನ್ನು ಮೆಟ್ಟಿನಿಂತು, ರಷ್ಯಾದೊಂದಿಗೆ ಗಟ್ಟಿಯಾದ ಮೈತ್ರಿ ಬೆಳೆಸಿ, ಅಮೆರಿಕದ ಬೆದರಿಕೆಗೆ ಬಗ್ಗದೆ ತಮ್ಮತನ ತೋರಿದ್ದರು. ಆ ಮೂಲಕ ಜಗತ್ತಿನ ಸೂಪರ್ ಪವರ್ ದೇಶಕ್ಕೆ ಭಾರತದ ಅಸಲಿ ಸಾರ್ವಭೌಮತ್ವದ ರುಚಿ ತೋರಿಸಿದ್ದರು.
ಆದರೆ, ಇಂದಿನ ಮೋದಿ ಸರ್ಕಾರ ಅಮೆರಿಕದ ಪ್ರತಿಯೊಂದು ನಿಯಮಕ್ಕೂ, ನಿರ್ಬಂಧಕ್ಕೂ ಹೆದರಿ, ಒಳಗೊಳಗೇ ಒಪ್ಪಂದ ಮಾಡಿಕೊಳ್ಳಲು ಯತ್ನಿಸುತ್ತಿದೆ. ‘140 ಕೋಟಿ ಜನರ ಇಂಧನ ಭದ್ರತೆ ನಮ್ಮ ಹಕ್ಕು’ ಎಂದು ವಿದೇಶಾಂಗ ಸಚಿವರು ನೀಡುವ ಹೇಳಿಕೆಗಳು ಕೇವಲ ಪತ್ರಿಕಾ ಪ್ರಕಟಣೆಗಳಿಗೆ ಸೀಮಿತವಾಗಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ‘ಅಮೆರಿಕದ ಕಾಯ್ದೆಗಳು ಅನಧಿಕೃತ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಬಾಹಿರ. ವಿಶ್ವಸಂಸ್ಥೆ ವಿಧಿಸದ ಯಾವುದೇ ಏಕಪಕ್ಷೀಯ ನಿರ್ಬಂಧಗಳನ್ನು ಭಾರತ ಮಾನ್ಯ ಮಾಡುವುದಿಲ್ಲ, ನಮಗೆ ನಮ್ಮ ದೇಶದ ಹಿತಾಸಕ್ತಿಯೇ ಅಂತಿಮ’ ಎಂದು ಹೇಳುವ ಧೈರ್ಯ ತೋರುತ್ತಿಲ್ಲ.
ಈ ಲೇಖನ ಓದಿದ್ದೀರಾ?: ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!
ಪ್ರಧಾನಿ ಮೋದಿ ಅವರ ‘ವಿಶ್ವಗುರು’ ಎಂಬ ಬಿರುದು ಮತ್ತು ‘ಅಂತಾರಾಷ್ಟ್ರೀಯ ವರ್ಚಸ್ಸು’ ಕೇವಲ ಚುನಾವಣಾ ಪ್ರಚಾರದ ಭಾಷಣಗಳಿಗೆ ಸೀಮಿತವಾಗಿವೆ. ಅಮೆರಿಕದ ಅಧ್ಯಕ್ಷರ ಮುಂದೆ ಕಣ್ಣಲ್ಲಿ ಕಣ್ಣಿಟ್ಟು ಭಾರತದ ಸ್ವಾಯತ್ತತೆಯನ್ನು ಸಮರ್ಥಿಸಿಕೊಳ್ಳಲು ಮೋದಿ ಅವರು ಹಿಂಜರಿಯುತ್ತಿದ್ದಾರೆ. ಅವರ ಈ ಮೌನ ದೇಶದ ಇಂಧನ ಭದ್ರತೆಗೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ.
ಮೋದಿ ಸರ್ಕಾರ ಮಣಿದಂತೆಲ್ಲ, ಅಮೆರಿಕ ಮತ್ತಷ್ಟು ನಿರ್ಬಂಧ, ಸುಂಕದಂತಹ ಬೆದರಿಕೆಗಳನ್ನು ಒಡ್ಡುತ್ತಲೇ ಇದೆ. ಪ್ರಧಾನಿ ಮೋದಿ ಅವರ 56 ಇಂಚಿನ ಎದೆ ಮತ್ತು ಅದರೊಳಿಗಿನ ಧೈರ್ಯದ ಬಗ್ಗೆ ಭಾರತೀಯರಲ್ಲಿ ಮತ್ತೆ ಮತ್ತೆ ಪ್ರಶ್ನೆಗಳು ಹುಟ್ಟುತ್ತಲೇ ಇವೆ. ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿರುವ ಈ ಸಂದರ್ಭದಲ್ಲಾದರೂ, ಅಮೆರಿಕ ಎದುರು ಮೋದಿ ಅವರು ತನ್ನ 56 ಇಂಚಿನ ಎದೆಯನ್ನು ಸೆಟೆಸಿ ನಿಲ್ಲಬೇಕು. ಅಮೆರಿಕದ ‘ಸಂಸದೀಯ ಬೆದರಿಕೆ’ಗೆ ತಲೆಬಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು.
ಅಮೆರಿಕದ ಕಾಯ್ದೆಯನ್ನು ಬದಿಗೊತ್ತಿ, ದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನ ಸಿಗಲು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಬೇಕು. ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ಅಕ್ರಮ ಸುಂಕ ಹೇರಿದರೆ, ಭಾರತವೂ ಕೂಡ ಅಮೆರಿಕದಿಂದ ಬರುವ ಉತ್ಪನ್ನಗಳ ಮೇಲೆ ತಕ್ಷಣವೇ ಪ್ರತಿ-ಸುಂಕ ವಿಧಿಸಲಿದೆ ಎಂಬ ಖಡಕ್ ಸಂದೇಶ ರವಾನಿಸಬೇಕು. ಬ್ರಿಕ್ಸ್ ಮತ್ತು ಇತರ ಜಾಗತಿಕ ವೇದಿಕೆಗಳಲ್ಲಿ ಡಾಲರ್ ಅಧಿಪತ್ಯಕ್ಕೆ ಪರ್ಯಾಯವಾಗಿ ರೂಪಾಯಿ-ರೂಬಲ್ ಮತ್ತು ಸ್ಥಳೀಯ ಕರೆನ್ಸಿಗಳ ಮೂಲಕ ವ್ಯಾಪಾರ ಮಾಡುವ ಪ್ರಕ್ರಿಯೆಗೆ ತೊಡಬೇಕು. ಭಾರತದ ಕೃಷಿ ಮತ್ತು ಮಾರುಕಟ್ಟೆಯನ್ನು ಹಾಳುಮಾಡುವ ಅಮೆರಿಕದ ಏಕಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದಿಂದ (FTA) ಹೊರಬರಬೇಕು.
ದೇಶದ ಹಿತಾಸಕ್ತಿ ವಿಚಾರದಲ್ಲಿ ತಲೆಬಾಗುವುದು ರಾಜತಾಂತ್ರಿಕತೆಯಲ್ಲ, ಅದು ಶರಣಾಗತಿ! ಅಮೆರಿಕ ಜೊತೆಗಿನ ಭಾರತದ ನಂಟು ‘ಸಮಾನ ಸಾರ್ವಭೌಮತ್ವ’ದ ಮೇಲೆ ಆಧಾರಿತವಾಗಿರಬೇಕೇ ಹೊರತು, ‘ಒಡೆಯ-ಗುಲಾಮ’ನ ಬಾಂಧವ್ಯದ ಮೇಲಲ್ಲ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಬೆಳೆಯುತ್ತಿರುವ ಬೃಹತ್ ಆರ್ಥಿಕ ಶಕ್ತಿ. ಅಮೆರಿಕದ ದಬ್ಬಾಳಿಕೆಯನ್ನು ಸಹಿಸಿಕೊಂಡು ಮೌನವಾಗಿದ್ದರೆ ಜಾಗತಿಕ ಮಟ್ಟದಲ್ಲಿ ಭಾರತದ ಆಶಯಗಳಿಗೆ ಬೆಲೆ-ನೆಲೆ ಇಲ್ಲದಂತಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ತಮ್ಮ ಅಸ್ಪಷ್ಟ ನಿಲುವನ್ನು ಬಿಟ್ಟು, ಖಡಕ್ ನಾಯಕತ್ವ ಮತ್ತು ರಾಷ್ಟ್ರೀಯ ಸ್ವಾಭಿಮಾನವನ್ನು ಪ್ರದರ್ಶಿಸಬೇಕು.



