ಯಡಿಯೂರಪ್ಪನವರ ಅಭಿಮಾನೋತ್ಸವ ಕೇವಲ ಅಭಿಮಾನಿಗಳ ಸ್ವಯಂಸ್ಫೂರ್ತಿಯ ಸಂಭ್ರಮವಲ್ಲ. ಒಡೆದು ಚೂರಾಗಿರುವ ರಾಜ್ಯ ಬಿಜೆಪಿಯನ್ನು ಒಂದುಗೂಡಿಸಲು, ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಮತ್ತೊಮ್ಮೆ ಸೆಳೆಯಲು ಮತ್ತು 2028ರ ಚುನಾವಣೆಗೆ ಮುನ್ನುಡಿ ಬರೆಯಲು ಬಳಸುತ್ತಿರುವ ರಾಜಕೀಯ ವೇದಿಕೆಯಾಗಿ ನೋಡುವುದು ಸರಿ ಎನಿಸುತ್ತದೆ.
ಮೇ 9ರಂದು ಚಿತ್ರದುರ್ಗದಲ್ಲಿ ‘ಬಿಎಸ್‌ವೈ ಅಭಿಮಾನೋತ್ಸವ’ವನ್ನು ರಾಜ್ಯ ಬಿಜೆಪಿ ಹಮ್ಮಿಕೊಂಡಿದೆ. 83ರ ಹರೆಯದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಸಾರ್ವಜನಿಕ ಜೀವನಕ್ಕೆ ಅಡಿಯಿಟ್ಟು 50 ವರ್ಷಗಳನ್ನು ಪೂರೈಸಿದ ಈ ಸಂದರ್ಭವನ್ನು ಸ್ಮರಣೀಯಗೊಳಿಸಲು, 10 ಲಕ್ಷಕ್ಕೂ ಹೆಚ್ಚು ಜನ ಸೇರಿಸಲು ಬಿಜೆಪಿ ನಾಯಕರು ಬಿರುಸಿನಿಂದ ಓಡಾಡುತ್ತಿದ್ದಾರೆ. ಭಾರೀ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜಕೀಯದಲ್ಲಿ ಜನಸಂಪರ್ಕ ಅಗತ್ಯ. ನಾಯಕರು ಜನರ ನಡುವೆ ಇರುವುದು ಮುಖ್ಯ. ತಮ್ಮ ವಿಚಾರಧಾರೆ ಮತ್ತು ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಿಸುತ್ತಲೇ; ಅವರ ಕಷ್ಟ-ಸುಖ ಕೇಳಬೇಕು, ಸಮಸ್ಯೆಗಳನ್ನು ಪರಿಹರಿಸಬೇಕು, ಸೇವೆಗೆ ಸಿದ್ಧರಿರಬೇಕು. ಆದರೆ, ಇತ್ತೀಚಿನ ದಿನಗಳ ರಾಜಕಾರಣದಲ್ಲಿ ‘ಜನಸಂಪರ್ಕ’ವೆನ್ನುವುದು ಚುನಾವಣೆಗಳಿಗಷ್ಟೇ ಸೀಮಿತವಾಗಿದೆ. ನಾಯಕರು ಶಕ್ತಿಪ್ರದರ್ಶಿಸಬೇಕೆನಿಸಿದಾಗ ‘ಅದ್ದೂರಿ ಸಮಾವೇಶ’ಗಳ ಮೊರೆ ಹೋಗಲಾಗುತ್ತಿದೆ. ಸಾವಿರಾರು ಕುರ್ಚಿಗಳು, ಭವ್ಯ ವೇದಿಕೆಗಳು, ಹೆಲಿಕಾಪ್ಟರ್‍ಗಳ ಹಾರಾಟ, ನೂರಾರು ವಾಹನಗಳ ಓಡಾಟ, ಮೈಲಿಗಟ್ಟಲೆ ಮೆರವಣಿಗೆ, ಸುದ್ದಿ ಮಾಧ್ಯಮಗಳಲ್ಲಿ ಜಾಹೀರಾತು, ಕಟೌಟ್‌ಗಳು, ಫ್ಲೆಕ್ಸ್‌ಗಳು, ಪೋಸ್ಟರ್‍ಗಳು, ಡ್ರೋನ್ ಚಿತ್ರೀಕರಣ- ಎಲ್ಲವೂ ರಾಜಕೀಯದ ಅರ್ಥವನ್ನು ಬದಲಾಯಿಸುತ್ತಿದೆ. ಪ್ರಜೆಗಳೇ ಪ್ರಭುಗಳು ಎಂಬ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಅಣಕಿಸುವಂತಿದೆ. ಆತಂಕಕಾರಿ ಬೆಳವಣಿಗೆಯಾಗಿ ಬದಲಾಗುತ್ತಿದೆ.
ಜನಪ್ರಿಯ ನಾಯಕನೊಬ್ಬನಿಗೆ ಗೌರವ ಸಲ್ಲಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ವೈಭವದ ಸಮಾವೇಶ ಏರ್ಪಡಿಸುವ ಅಗತ್ಯವಿದೆಯೇ? ಅಥವಾ ಇದು ರಾಜಕೀಯ ಶಕ್ತಿಪ್ರದರ್ಶನವೇ? ಅಥವಾ ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಬಿಜೆಪಿ ವೇದಿಕೆ ಸಜ್ಜುಗೊಳಿಸಲಾಗುತ್ತಿದೆಯೇ? ಬಿಎಸ್‌ವೈ ಅಭಿಮಾನೋತ್ಸವದ ಹಿನ್ನೆಲೆಯಲ್ಲಿ ಈ ಎಲ್ಲ ಪ್ರಶ್ನೆಗಳು ಮುನ್ನಲೆಗೆ ಬಂದಿವೆ, ಚರ್ಚೆಗೊಳಗಾಗುತ್ತಿವೆ.
ಇದನ್ನು ಓದಿದ್ದೀರಾ?: ವಿಜಯ್ ಅನಿರೀಕ್ಷಿತ ಗೆಲುವು- ದ್ರಾವಿಡ ದನಿ ಉಡುಗಿದ ದ್ಯೋತಕವೇ?
ಕರ್ನಾಟಕ ರಾಜಕಾರಣದಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಹತ್ವದ ಸ್ಥಾನವಿದೆ. ಸ್ವಂತಶಕ್ತಿಯಿಂದ ಬೆಳೆದ ಜನನಾಯಕ ಎನ್ನುವ ಜನಮನ್ನಣೆಯಿದೆ. ರೈತರ ರಾಜಕಾರಣ, ಲಿಂಗಾಯತ ಸಮುದಾಯದ ಪ್ರಭಾವ, ಸಂಘಟನಾ ಸಾಮರ್ಥ್ಯದಿಂದ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದವರು. ಇಂದು ಬಿಜೆಪಿಯ ದೊಡ್ಡ ನಾಯಕರು ಎನಿಸಿಕೊಂಡ ಮೋದಿ ಮತ್ತು ಅಮಿತ್ ಶಾಗಳು ಗುಜರಾತಿನಲ್ಲಿ ರಾಜಕಾರಣ ಕಲಿಯುತ್ತಿದ್ದಾಗಲೇ, ಯಡಿಯೂರಪ್ಪನವರು 2008ರಲ್ಲಿಯೇ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.
ಆದರೆ, ಅವರು ಸ್ವಕ್ಷೇತ್ರ ಶಿಕಾರಿಪುರವನ್ನು ಪುತ್ರ ವಿಜಯೇಂದ್ರರಿಗೆ ಬಿಟ್ಟುಕೊಟ್ಟಾಗಲೇ ಸಕ್ರಿಯ ರಾಜಕಾರಣದಿಂದ ನಿರ್ಗಮಿಸಿದ್ದರು. ಅದಕ್ಕಿಂತಲೂ ಮುಖ್ಯವಾಗಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರನ್ನು, ವಯಸ್ಸಿನ ನೆಪ ಹೇಳಿ, ಸ್ವತಃ ಬಿಜೆಪಿಯ ದೆಹಲಿ ನಾಯಕರಾದ ಮೋದಿ-ಅಮಿತ್ ಶಾ 2021ರಲ್ಲಿ ಸಿಎಂ ಕುರ್ಚಿಯಿಂದ ಅವರನ್ನು ಕೆಳಗಿಳಿಸಿದಾಗಲೇ, ಅವರ ರಾಜಕೀಯ ಜೀವನ ಅಂತ್ಯವಾಗಿತ್ತು. ಅಂದಮೇಲೆ, ಈಗ ಸಾರ್ವಜನಿಕ ಬದುಕಿಗೆ ಬಂದು 50 ವರ್ಷಗಳು ತುಂಬಿದ ನೆಪದಲ್ಲಿ ಜರುಗಲಿರುವ ಉತ್ಸವ ಯಾರಿಗಾಗಿ? ಇದರ ಹಿಂದಿರುವ ಹುನ್ನಾರವೇನು?
ನಾಯಕನೊಬ್ಬನಿಗೆ ಗೌರವ ಸಲ್ಲಿಸುವುದು ತಪ್ಪಲ್ಲ. ಆದರೆ ಆ ಗೌರವ ಸಮಾಜಮುಖಿಯಾಗಿರಬೇಕು. ಜನರೇ ಖುದ್ದು ಆಚರಿಸುವಂತಿರಬೇಕು. ನಾಯಕರ ಜನಪ್ರಿಯತೆಯನ್ನು ಅಳೆಯುವುದು ಅಭಿಮಾನೋತ್ಸವದಿಂದಲ್ಲ, ಜನಜೀವನದಲ್ಲಿ ತಂದ ಬದಲಾವಣೆಯಿಂದ. ದುರದೃಷ್ಟಕ್ಕೆ ಯಡಿಯೂರಪ್ಪನವರನ್ನು ರಾಜಕೀಯವಾಗಿ ಬೆಳೆಸಿದ ಶಿಕಾರಿಪುರ, ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ 1983ರಲ್ಲಿ ಹೇಗಿತ್ತೋ, ಇವತ್ತು ಕೂಡ ಹಾಗೆಯೇ ಇದೆ. ಇನ್ನು ಯಡಿಯೂರಪ್ಪನವರ ಇಡೀ ಕುಟುಂಬಕ್ಕೆ ರಾಜಕೀಯವಾಗಿ ಬಲತುಂಬಿದ ಶಿವಮೊಗ್ಗ ಜಿಲ್ಲೆ- ಈಶ್ವರಪ್ಪ ಮತ್ತು ಯಡಿಯೂರಪ್ಪನವರ ಸ್ವಂತ ಆಸ್ತಿಯಂತೆ ಹರಿದು ಹಂಚಲ್ಪಟ್ಟಿದೆ.
ಶಾಸಕರಾಗಿ, ಸಂಸದರಾಗಿ, ಪಕ್ಷದ ಮುಖ್ಯಸ್ಥರಾಗಿ, ವಿರೋಧ ಪಕ್ಷದ ನಾಯಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಮೆರೆದ ಯಡಿಯೂರಪ್ಪನವರು, ತಮ್ಮನ್ನು ಬೆಳೆಸಿದ ಸಮುದಾಯಕ್ಕೂ, ನಾಡಿಗೂ ಕೊಟ್ಟ ಕೊಡುಗೆಗಿಂತ ಭಾರತೀಯ ಜನತಾ ಪಕ್ಷವನ್ನು ಬೆಳೆಸಿದ್ದೇ ಹೆಚ್ಚಾಗಿದೆ. ಆ ಹಾದಿಯಲ್ಲಿ ಯಡಿಯೂರಪ್ಪನವರು ಸವೆದದ್ದು ಮತ್ತು ಸವೆಸಿದ್ದು- ನಿಜಕ್ಕೂ ಅಧ್ಯಯನಯೋಗ್ಯವಾಗಿದೆ.
ಇಂತಹ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಪೋಕ್ಸೋ ಆರೋಪಿಯಾಗಿರುವ ಬಿಎಸ್‌ವೈ ಮೆರೆಸುವ ಅಗತ್ಯವಾದರೂ ಏನು ಎಂದು ಕೆದಕಿದರೆ- ಅಲ್ಲಿ ಬಿಜೆಪಿಯ ದಿಲ್ಲಿ ನಾಯಕರ ರಾಜಕೀಯ ಲೆಕ್ಕಾಚಾರಗಳು, ಅಧಿಕಾರ ಹಿಡಿಯುವ ಆಟಗಳು ಕಾಣುತ್ತವೆ. ಪಶ್ಚಿಮ ಬಂಗಾಳವನ್ನು ಗೆದ್ದಿರುವ ಬಿಜೆಪಿ, ಈಗ ಕರ್ನಾಟಕದ ಮೇಲೆ ಕಣ್ಣು ನೆಟ್ಟಿರುವ ಅನುಮಾನಕ್ಕೆ ಕಾರಣವಾಗುತ್ತದೆ. ಆದರೆ, ಕರ್ನಾಟಕವನ್ನು ಗೆಲ್ಲಲಿಕ್ಕೆ ಮೋದಿ-ಅಮಿತ್ ಶಾಗಳ ಅಧಿಕಾರದಾಟವಷ್ಟೇ ಸಾಲದಾಗಿದೆ. ವಿಶೇಷವಾಗಿ, ಬಹುಸಂಖ್ಯಾತರಾದ ಲಿಂಗಾಯತ ಸಮುದಾಯವನ್ನು ಪಕ್ಷದತ್ತ ಸೆಳೆಯಬೇಕಾಗಿದೆ. ಈಗ ಇರುವ ರಾಜ್ಯ ಬಿಜೆಪಿ ನಾಯಕರಿಗೆ ಆ ಶಕ್ತಿ ಮತ್ತು ವರ್ಚಸ್ಸು ಇಲ್ಲವಾಗಿದೆ. ಹಾಗಾಗಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ಯಡಿಯೂರಪ್ಪನವರು ಈಗ ಬಿಜೆಪಿಗೆ ಬೇಕಾಗಿದೆ. ಅಭಿಮಾನೋತ್ಸವ ನೆಪವಾಗಿದೆ. ಯಡಿಯೂರಪ್ಪನವರ ಹಿರಿತನ ಮತ್ತು ಜನಪ್ರಿಯತೆಯನ್ನು ಪಕ್ಷದ ಬಲವರ್ಧನೆಗೆ ಮತ್ತೊಮ್ಮೆ ಬಳಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ.
ಸೋಜಿಗದ ಸಂಗತಿ ಎಂದರೆ, ಜನರ ನಡುವೆಯಿಂದ ಎದ್ದುಬಂದ ಯಡಿಯೂರಪ್ಪನವರು ಜನರನ್ನು ಬಳಸಿಕೊಂಡು ಮುಖ್ಯಮಂತ್ರಿಯಾದರು. ಯಡಿಯೂರಪ್ಪನವರನ್ನು ಬಳಸಿಕೊಂಡ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಮೂಲಕ ದಕ್ಷಿಣ ಭಾರತದಲ್ಲಿ ಖಾತೆ ತೆರೆಯಿತು. ಬೆಳೆಸಿದ ಕರ್ನಾಟಕದ ಜನತೆಯನ್ನು ಯಡಿಯೂರಪ್ಪನವರು ಮರೆತರು. ಅದೇ ರೀತಿ ಬಿಎಸ್‌ವೈ ಬಳಸಿಕೊಂಡು ಬೆಳೆದ ಬಿಜೆಪಿ, ಅವರನ್ನೇ ಮರೆಯಿತು. ಅಧಿಕಾರದಿಂದ ಕೆಳಗಿಳಿಸಿತು, ಸಾರ್ವಜನಿಕವಾಗಿ ಅವಮಾನಿಸಿತು. ಬಾಳೆ ಎಲೆಯಂತೆ ಬಳಸಿ ಬಿಸಾಡಿತು.
ಇದನ್ನು ಓದಿದ್ದೀರಾ?: ಬೆಂಗಳೂರನ್ನು ನರಕವನ್ನಾಗಿಸುತ್ತಿರುವುದು ಮಳೆಯಲ್ಲ, ದುರ್ಬಲ ಆಡಳಿತ
ಇಷ್ಟಾದರೂ, ಯಡಿಯೂರಪ್ಪನವರು ಮಕ್ಕಳ ಮೇಲಿನ ಮೋಹಕ್ಕಾಗಿ, ಅವರ ಭವಿಷ್ಯದ ರಾಜಕಾರಣಕ್ಕಾಗಿ, ಸ್ವಾರ್ಥಕ್ಕಾಗಿ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಸಂಘದ ಸಂತೋಷ್‌ರೊಂದಿಗೆ ಕೂತು ಊಟ ಮಾಡಿ, ಮಾತನಾಡಿದ್ದಾರೆ. ತಮ್ಮನ್ನು ಪೊರೆದ ಪೋಷಿಸಿದ ಜನರನ್ನು ಕೇವಲ ಮತದಾರರನ್ನಾಗಿ, ತಮ್ಮ ರಾಜಕೀಯ ಲಾಭಕ್ಕೆ ಬಳಕೆಯಾಗುವ ಕಾಲಾಳುಗಳನ್ನಾಗಿ, ತಮ್ಮ ಸಂಪತ್ತಿಗಾಗಿ ಶ್ರಮಿಸುವ ಕೂಲಿಗಳನ್ನಾಗಿ ಕಂಡಿದ್ದಾರೆ.
ಹೀಗಾಗಿ ಯಡಿಯೂರಪ್ಪನವರ ಅಭಿಮಾನೋತ್ಸವವನ್ನು ಕೇವಲ ಅಭಿಮಾನಿಗಳ ಸ್ವಯಂಸ್ಫೂರ್ತಿಯ ಸಂಭ್ರಮವೆಂದು ನೋಡುವುದಕ್ಕಿಂತ, ಒಡೆದು ಚೂರಾಗಿರುವ ರಾಜ್ಯ ಬಿಜೆಪಿಯನ್ನು ಒಂದುಗೂಡಿಸಲು, ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಮತ್ತೊಮ್ಮೆ ಸೆಳೆಯಲು ಮತ್ತು 2028ರ ಚುನಾವಣೆಗೆ ಮುನ್ನುಡಿ ಬರೆಯಲು ಬಳಸುತ್ತಿರುವ ರಾಜಕೀಯ ವೇದಿಕೆಯಾಗಿ ನೋಡುವುದು ಹೆಚ್ಚು ಸಮಂಜಸವೆನಿಸುತ್ತದೆ.




