ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್‌ನ ಸಹಯೋಗದಲ್ಲಿ ಮೇ 12ರಂದು ಪಾಣೆಮಂಗಳೂರು ಆಲಡ್ಕದ ಎಸ್.ಎಸ್. ಆಡಿಟೋರಿಯಂನಲ್ಲಿ ಆಯೋಜಿಸಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ ಹಾಗೂ ಖ್ಯಾತ ಹಾಡುಗಾರ ರಹೀಂ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.
ಬಾಲ್ಯದಲ್ಲಿಯೇ ಸಂಗೀತದತ್ತ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ರಹೀಂ ಬಿ.ಸಿ.ರೋಡ್ ಅವರು, ತಮ್ಮ ತಾಯಿ ಪರಿಸರದ ಖ್ಯಾತ ಸಬೀನಾ ಹಾಡುಗಾರ್ತಿ ಉಮಾತುಮ್ಮ (ಮೋಲುದಾದ) ಅವರಿಂದ ಪ್ರೇರಣೆ ಪಡೆದು ಹಾಡುಗಾರಿಕೆಗೆ ಪ್ರವೇಶಿಸಿದ್ದರು. ಮಲಯಾಳಂ ಮಾಪಿಳ್ಳೆ ಹಾಡುಗಳಾದ ಪಕ್ಷಿಪಾಟ್, ಇರೀಲೋಗಂ, ಮಾನಿಕೈ ಮಾಣಿ ಮುತ್ತು ಮೊದಲಾದ ಹಾಡುಗಳ ಶೈಲಿಯಲ್ಲಿ ಬ್ಯಾರಿ ಹಾಡುಗಳನ್ನು ರಚಿಸಿ ಹಾಡುವ ಮೂಲಕ ಅವರು ವಿಶೇಷ ಗುರುತಿಸಿಕೊಂಡರು. ಬಳಿಕ ವಿವಿಧ ನಾಟಕಗಳಲ್ಲಿ ಹಿನ್ನೆಲೆ ಗಾಯಕರಾಗಿ ಜನಪ್ರಿಯತೆ ಗಳಿಸಿದರು.
ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ರಚನೆಯ ಹಾಗೂ ಪರಂಗಿಪೇಟೆ ಯುವಕ ಮಂಡಲ ಪ್ರದರ್ಶಿಸಿದ್ದ ನಾಟಕದಲ್ಲಿ ಹಾಡುವ ಮೂಲಕ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡ ಅವರು, ಅನೇಕ ನಾಟಕಗಳಲ್ಲಿ ಸ್ವರಚಿತ ಹಾಡುಗಳನ್ನು ಹಾಡಿ ಮೆಚ್ಚುಗೆ ಪಡೆದಿದ್ದಾರೆ. ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಬ್ಯಾರಿ ಕವನ ವಾಚನದ ಮೂಲಕವೂ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ.
ಹಾಡುಗಾರಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದ ರಹೀಂ ಬಿ.ಸಿ.ರೋಡ್ ಅವರು ಕರಾವಳಿ ಜಿಲ್ಲೆಗಳಲ್ಲಷ್ಟೇ ಅಲ್ಲದೆ ಕೇರಳದ ವಿವಿಧ ಭಾಗಗಳಲ್ಲಿ ನಡೆದ ರಸಮಂಜರಿ ಕಾರ್ಯಕ್ರಮಗಳಲ್ಲಿ ಬ್ಯಾರಿ, ತುಳು, ಮಲಯಾಳಂ, ಕನ್ನಡ, ಹಿಂದಿ ಹಾಡುಗಳ ಜೊತೆಗೆ ಕನ್ನಡ ಜಾನಪದ ಹಾಗೂ ಹಿಂದಿ ಖವ್ವಾಲಿಗಳನ್ನು ಕೂಡ ಮನಮೋಹಕವಾಗಿ ಹಾಡಿ ಜನಮನ ಗೆದ್ದಿದ್ದಾರೆ.
ರವಿ ಆಡಿಯೋ ಸೆಂಟರ್, ಪಾಣೆಮಂಗಳೂರು ಹೊರತಂದ ಧ್ವನಿ ಸುರುಳಿಗಳಿಗೆ ಸಾಹಿತ್ಯ ಬರೆದು ಹಾಡುವ ಮೂಲಕ ಬ್ಯಾರಿ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಬಳಿಕ ಅನೇಕ ಬ್ಯಾರಿ ಹಾಡುಗಳ ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚಿಸಿ ಗಾಯನ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಸೇರಿದಂತೆ ಅಳ್ವಾಸ್ ನುಡಿಸಿರಿ ಮತ್ತು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ವತಿಯಿಂದಲೂ ರಹೀಂ ಬಿ.ಸಿ.ರೋಡ್ ಅವರು ಸನ್ಮಾನಿಸಲ್ಪಟ್ಟಿದ್ದಾರೆ.





