ಈ ದಿನ ಸಂಪಾದಕೀಯ | ಬಿಡದಿ ಭೂಸ್ವಾಧೀನಕ್ಕೆ ‘ರೈತರು ಒಪ್ಪಿದ್ದಾರೆ’ ಎಂಬುದು ನಿಜವಲ್ಲ, ಸರ್ಕಾರಕ್ಕೆ ಶೋಭೆ ತರುವುದಿಲ್ಲ

Date:

ಅಭಿವೃದ್ಧಿಯ ಹೆಸರಿನಲ್ಲಿ ಆಹಾರ ಉತ್ಪಾದಿಸುವ ಫಲವತ್ತಾದ ಭೂಮಿಯನ್ನು ನಾಶಮಾಡುವುದು, ಸ್ವಾವಲಂಬಿ ರೈತರನ್ನು ಪರಿಹಾರದ ಹಣದ ಅವಲಂಬಿತರನ್ನಾಗಿಸುವುದು ಹಾಗೂ ಗ್ರಾಮೀಣ ಜೀವನೋಪಾಯವನ್ನು ನಗರ ರಿಯಲ್ ಎಸ್ಟೇಟ್‌ಗೆ ಬಲಿಕೊಡುವುದು ಅಭಿವೃದ್ಧಿಯ ಏಕೈಕ ಮಾದರಿ ಆಗಬಾರದು. ಸರ್ಕಾರಕ್ಕೆ ನಿಜವಾಗಿಯೂ ರೈತರ ಒಪ್ಪಿಗೆ ಇದೆ ಎಂಬ ವಿಶ್ವಾಸವಿದ್ದರೆ 26 ಗ್ರಾಮಗಳ ಗ್ರಾಮಸಭೆಗಳಲ್ಲಿ ಪಾರದರ್ಶಕವಾಗಿ ರೈತರ ಅಭಿಪ್ರಾಯ ದಾಖಲಿಸಲಿ.

ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರೈತರು ಪರಿಹಾರ ಪಡೆದು ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ ಎಂಬ ವಾದವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಮುಂದಿಡುತ್ತಿದೆ. ರೈತರಿಗೆ ಮಾರುಕಟ್ಟೆ ದರಕ್ಕಿಂತ ಉತ್ತಮ ಪರಿಹಾರ ನೀಡಲಾಗುತ್ತಿದೆ, ಭೂಮಿ ಕಳೆದುಕೊಳ್ಳುವ ಕುಟುಂಬಗಳ ಹಿತಾಸಕ್ತಿಯನ್ನು ರಕ್ಷಿಸುವ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಯೋಜನೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದು ಒಟ್ಟಾರೆ ರೈತ ಸಮುದಾಯದ ಅಭಿಪ್ರಾಯವಲ್ಲ ಎಂದು ಸರ್ಕಾರ ವಾದಿಸುತ್ತಿದೆ. ಆದರೆ, ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ನೆಚ್ಚಿಕೊಂಡು ತಲೆತಲಾಂತರಗಳಿಂದ ಜೀವನ ಸಾಗಿಸುತ್ತಿರುವ ಭೂಮಿಪುತ್ರರು ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ ಎಂಬುದೇ ವಾಸ್ತವ.

- Advertisement -

ಸರ್ಕಾರವು ಸಂಕಷ್ಟದಲ್ಲಿರುವ ಕೆಲವೇ ಕೆಲವು ಭೂಮಾಲೀಕರನ್ನು ಅಥವಾ ದಲ್ಲಾಳಿಗಳನ್ನು ಮುಂದಿಟ್ಟುಕೊಂಡು, ಇಡೀ ರೈತ ಸಮುದಾಯವೇ ಯೋಜನೆಗೆ ಒಪ್ಪಿಗೆ ನೀಡಿದೆ ಎಂದು ಬಿಂಬಿಸುತ್ತಿರುವುದು ಅಕ್ಷರಶಃ ವಿತಂಡವಾದದಂತೆ ಕಾಣುತ್ತಿದೆ. ಕೃಷಿಯನ್ನೇ ನೆಚ್ಚಿಕೊಂಡಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಆತಂಕ, ಪ್ರತಿಭಟನೆ ಹಾಗೂ ಆಕ್ರೋಶಗಳನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಅಭಿವೃದ್ಧಿಯ ನೆಪದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಸಿರು ನಿಶಾನೆ ತೋರಲು ಹೊರಟಿರುವ ಸರ್ಕಾರ, ಕೃಷಿಕರ ಭವಿಷ್ಯವನ್ನು ಬಲಿ ಕೊಡಲು ಹೊರಟಿದೆ. ರೈತರ ನೈಜ ಅಭಿಪ್ರಾಯಕ್ಕೆ ಬೆಲೆ ನೀಡದೆ, ‘ಒಪ್ಪಿಗೆ ಸಿಕ್ಕಿದೆ’ ಎಂದು ಸುಳ್ಳು ಹೇಳುತ್ತಿದೆ. ಆದರೆ, ಸರ್ಕಾರದ ಈ ವಾದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬುದೇ ವಾಸ್ತವ.

ಹಾಗೆ ನೋಡಿದರೆ, ಕಳೆದ ಜುಲೈ 23ರಂದು ಬೈರಮಂಗಲದಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ನೇತೃತ್ವದಲ್ಲಿ ನಡೆದ ‘ಪಬ್ಲಿಕ್‌ ಹಿಯರಿಂಗ್‌’ ಸರ್ಕಾರದ ವಾದವನ್ನು ಬಟಾಬಯಲು ಮಾಡಿದೆ. ಅಂದು ಬಿಡದಿ ಸೀಮೆಯ 26 ಗ್ರಾಮಗಳ ಸಂತ್ರಸ್ತ ರೈತರು ಮತ್ತು ಅವರ ಪ್ರತಿನಿಧಿಗಳು ತಮ್ಮ ಅಹವಾಲುಗಳನ್ನು ನೇರವಾಗಿ ಮಂಡಿಸಿದ್ದಾರೆ. ಅಲ್ಲಿ ನೆರೆದಿದ್ದ ಸಾವಿರಾರು ರೈತರು ‘ಟೌನ್‌ಶಿಪ್’ ಯೋಜನೆಗೆ ತಮ್ಮ ಭೂಮಿ ಬಿಟ್ಟುಕೊಡಲು ಸಿದ್ದರಿಲ್ಲವೆಂದು ಒಕ್ಕೊರಲಿನಿಂದ ಘೋಷಿಸಿದ್ದಾರೆ.

ಭೂಸ್ವಾಧೀನ ವಿರುದ್ಧದ ರೈತರ ಹೋರಾಟವು ಕೇವಲ ಭಾವನಾತ್ಮಕ ವಿರೋಧವಲ್ಲ. ಸ್ವಾಧೀನಕ್ಕೆ ಗುರುತಿಸಿರುವ ಸುಮಾರು 9,600 ಎಕರೆ ಪ್ರದೇಶ ಬಂಜರು ಭೂಮಿಯೂ ಅಲ್ಲ. ಅದು ವೃಷಭಾವತಿ ಮತ್ತು ಅರ್ಕಾವತಿ ಜಲಾನಯನ ಪ್ರದೇಶದಲ್ಲಿರುವ ನೀರಾವರಿ, ಫಲವತ್ತಾದ, ಬಹುಬೆಳೆ ಕೃಷಿಭೂಮಿ. ಈ ಪ್ರದೇಶದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಸುಮಾರು ಹತ್ತು ಲಕ್ಷ ಮರಗಳಿವೆ. ಸುಮಾರು 2,000 ಎಕರೆ ಹಿಪ್ಪುನೇರಳೆ ಬೆಳೆಯಿದೆ. ತರಕಾರಿ, ರಾಗಿ, ಮುಸುಕಿನ ಜೋಳ, ಬೇಬಿಕಾರ್ನ್, ಮಾವು, ಅಡಿಕೆ ಸೇರಿದಂತೆ ಹಲವು ಬೆಳೆಗಳ ಕೃಷಿಯಿದೆ. ಹೈನುಗಾರಿಕೆಯಿಂದ ಬೆಂಗಳೂರಿಗೆ ದಿನಕ್ಕೆ ಸುಮಾರು 1.5 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಅಂದರೆ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದು ಕೇವಲ ‘ಭೂಮಿ’ಯನ್ನಲ್ಲ; ಬೆಂಗಳೂರು ಮತ್ತು ರಾಮನಗರದ ಆಹಾರ ಸರಪಳಿಯ ಭಾಗವಾಗಿರುವ ಜೀವಂತ ಕೃಷಿ ಆರ್ಥಿಕತೆಯನ್ನು.

ಈ ಪ್ರಮಾಣದ ಆಹಾರ ಸರಪಳಿ ಹೊಂದಿರುವ, ವರ್ಷಂಪ್ರತಿ ಆದಾಯ ನೀಡುವ ಜಮೀನಿಗೆ ಒಮ್ಮೆ ಕೊಡುವ ಪರಿಹಾರದ ಹಣ ಹೇಗೆ ಪರ್ಯಾಯವಾಗಲು ಸಾಧ್ಯ? ಅರ್ಧ ಎಕರೆ, ಒಂದು ಎಕರೆ, ಕೆಲವು ಗುಂಟೆಗಳಷ್ಟೇ ಭೂಮಿ ಹೊಂದಿರುವ ಸಣ್ಣ ರೈತ ಕುಟುಂಬಗಳ ಜೀವನೋಪಾಯಕ್ಕೆ ಪರಿಹಾರದ ಮೊತ್ತ ಎಷ್ಟು ವರ್ಷ ಸಾಕಾಗುತ್ತದೆ? ಭೂಮಿಯಿಂದ ಬರುವ ತೆಂಗು, ಹಾಲು, ತರಕಾರಿ, ರೇಷ್ಮೆ ಹಾಗೂ ತೋಟಗಾರಿಕೆ ಆದಾಯಕ್ಕೆ ಪರಿಹಾರದ ಹಣ ಶಾಶ್ವತ ಪರ್ಯಾಯವಲ್ಲ. ಈ ಜಮೀನುಗಳಲ್ಲಿ ಕುಟುಂಬಗಳ ಬದುಕಷ್ಟೇ ಅಲ್ಲ, ಅವರ ಸಾಮಾಜಿಕ ಸಂಬಂಧ, ಪೂರ್ವಜರ ನೆನಪು, ಮುಂದಿನ ತಲೆಮಾರಿನ ಭದ್ರತೆಯೂ ನೆಲೆಗೊಂಡಿದೆ.

ಇನ್ನೂ ಗಂಭೀರ ಸಂಗತಿಯೆಂದರೆ, ಭೂಸ್ವಾಧೀನದಿಂದ ಭೂಮಾಲೀಕರಷ್ಟೇ ಬಾಧಿತರಾಗುವುದಿಲ್ಲ. ಗುತ್ತಿಗೆ ಕೃಷಿಕರು, ದಲಿತ ಮತ್ತು ಭೂರಹಿತ ಕೃಷಿಕರು, ಕೃಷಿ ಕೂಲಿ ಕಾರ್ಮಿಕರು, ಹೈನುಗಾರರು, ರೇಷ್ಮೆ ಚಟುವಟಿಕೆ ಅವಲಂಬಿಸಿರುವ ಕುಟುಂಬಗಳು ಕೂಡ ಜೀವನೋಪಾಯ ಕಳೆದುಕೊಳ್ಳುತ್ತಾರೆ. ಸಾವಿರಾರು ಕೃಷಿ ಕಾರ್ಮಿಕರಿಗೆ ಜಮೀನಿನ ಮಾಲೀಕತ್ವವೇ ಇಲ್ಲದಿರುವುದರಿಂದ ಅವರಿಗೆ ಪರಿಹಾರವೂ ಸಿಗುವುದಿಲ್ಲ. ಸರ್ಕಾರವು ಸಮಗ್ರ ಸಾಮಾಜಿಕ ಪರಿಣಾಮ ಮೌಲ್ಯಮಾಪನ ನಡೆಸಿದ್ದರೆ ಇಂತಹ ಕಾಣದ ಸಂತ್ರಸ್ತರ ನಿಜವಾದ ಸಂಖ್ಯೆ ಮತ್ತು ಅವರ ಮೇಲಿನ ಪರಿಣಾಮಗಳು ಸರ್ಕಾರಕ್ಕೂ ಅರ್ಥವಾಗಿರುತ್ತಿತ್ತು.

 ‘RFCTLARR ಕಾಯ್ದೆ–2013’ರ ಮೂಲ ಸುರಕ್ಷತಾ ನಿಯಮಗಳ ಅಡಿಯಲ್ಲಿ ಈ ಟೌನ್‌ಶಿಪ್‌ ಯೋಜನೆಯನ್ನು ವಿಶ್ಲೇಷಿಸಿ ನೋಡಿದರೆ ಇನ್ನೂ ಗಂಭೀರ ಸಂಗತಿಗಳು ಕಾಣುತ್ತವೆ. ಯೋಜನೆಯಿಂದಾಗುವ ಸಾಮಾಜಿಕ ಪರಿಣಾಮ ಮೌಲ್ಯಮಾಪನ, ಸಾರ್ವಜನಿಕ ವಿಚಾರಣೆ, ತಜ್ಞರ ಮೌಲ್ಯಮಾಪನ, ಸಾರ್ವಜನಿಕ ಉದ್ದೇಶದ ಪರಿಶೀಲನೆ ಹಾಗೂ ಆಹಾರ ಭದ್ರತೆಯ ಮೇಲಿನ ಪರಿಣಾಮದ ಕುರಿತು ಸರ್ಕಾರವು ಅಧ್ಯಯನವನ್ನೇ ನಡೆಸಿಲ್ಲ. ಸಾವಿರಾರು ಎಕರೆ ನೀರಾವರಿ ಮತ್ತು ಬಹುಬೆಳೆ ಕೃಷಿಭೂಮಿಯನ್ನು ನಗರ ಯೋಜನೆಗಾಗಿ ಪರಿವರ್ತಿಸುವಾಗ ಆಹಾರ ಭದ್ರತೆಯ ಮೇಲೆ ಅದರ ಪರಿಣಾಮವನ್ನು ಪರಿಶೀಲಿಸದೆ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದ್ದಾದರೂ ಹೇಗೆ?

ಪರಿಸರದ ವಿಚಾರದಲ್ಲಿ ಗಂಭೀರ ಅಂಶಗಳಿವೆ. ಪರಿಸರದ ಮೇಲಿನ ಪರಿಣಾಮಗಳನ್ನು ಪರಿಹಾರದ ಹಣದಿಂದ ಮುಚ್ಚಲಾಗದು. ಯೋಜನೆಗಾಗಿ ಸರ್ಕಾರವು ಗುರುತಿಸಿರುವ 9,600 ಎಕರೆ ಪ್ರದೇಶದಲ್ಲಿ ಲಕ್ಷಾಂತರ ಮರಗಳು, ಕೆರೆ–ಕೊಳವೆಬಾವಿ ವ್ಯವಸ್ಥೆ, ಜಲಾನಯನ ಪ್ರದೇಶ, ಪಶುಪಕ್ಷಿ ಜೀವವೈವಿಧ್ಯವಿದೆ. ಇವೆಲ್ಲವೂ ಬೆಂಗಳೂರಿನ ಪಶ್ಚಿಮ–ದಕ್ಷಿಣ ಭಾಗದ ಪರಿಸರ ಸುರಕ್ಷತಾ ವಲಯದಂತೆ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಈಗಾಗಲೇ ಅತಿಯಾದ ನಗರೀಕರಣ, ಸಂಚಾರ, ನೀರು, ತ್ಯಾಜ್ಯ ಹಾಗೂ ಉಷ್ಣತೆಯ ಒತ್ತಡ ಎದುರಿಸುತ್ತಿರುವಾಗ ಮತ್ತಷ್ಟು ಫಲವತ್ತಾದ ಹಸಿರು ಪ್ರದೇಶವನ್ನು ಕಾಂಕ್ರೀಟ್ ವಿಸ್ತರಣೆಗೆ ತೆರೆಯುವುದೇ ‘ಸ್ಮಾರ್ಟ್’ ಅಭಿವೃದ್ಧಿಯೇ ಎಂಬ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿದೆಯೇ?

ಈ ಲೇಖನ ಓದಿದ್ದೀರಾ?:  ಮಹಿಳೆಯರಿಲ್ಲದ ಸಚಿವ ಸಂಪುಟ: 33% ಮೀಸಲಾತಿ ಮಾತು ಎಲ್ಲೋಯ್ತು?

ಬಿಡದಿ ವಿವಾದವನ್ನು ‘ಪರಿಹಾರದ ಮೊತ್ತ ಎಷ್ಟು?’ ಅಥವಾ ‘ಎಷ್ಟು ರೈತರು ಹಣ ಪಡೆದಿದ್ದಾರೆ?’ ಎಂಬ ಲೆಕ್ಕಕ್ಕೆ ಇಳಿಸುವುದೇ ತಪ್ಪು. ಪರಿಹಾರ ಸ್ವೀಕರಿಸಿರುವ ಕೆಲವರ ಸಂಖ್ಯೆಯನ್ನು ಇಡೀ ಪ್ರದೇಶದ ರೈತರ ಸಮ್ಮತಿ ಎಂದು ಬಿಂಬಿಸಲಾಗದು. ಭಯ, ಗೊಂದಲ, ಆಡಳಿತಾತ್ಮಕ ಒತ್ತಡ ಅಥವಾ ಅನಿವಾರ್ಯತೆಯಿಂದ ಕೆಲವರು ಪರಿಹಾರ ಪಡೆದಿದ್ದರೆ ಅದನ್ನು ಸ್ವತಂತ್ರ ಹಾಗೂ ತಿಳಿವಳಿಕೆಯ ಸಮ್ಮತಿ ಎಂದು ಕರೆಯಲೂ ಸಾಧ್ಯವಿಲ್ಲ.

ಅಭಿವೃದ್ಧಿಯ ಹೆಸರಿನಲ್ಲಿ ಆಹಾರ ಉತ್ಪಾದಿಸುವ ಫಲವತ್ತಾದ ಭೂಮಿಯನ್ನು ನಾಶಮಾಡುವುದು, ಸ್ವಾವಲಂಬಿ ರೈತರನ್ನು ಪರಿಹಾರದ ಹಣದ ಅವಲಂಬಿತರನ್ನಾಗಿಸುವುದು ಹಾಗೂ ಗ್ರಾಮೀಣ ಜೀವನೋಪಾಯವನ್ನು ನಗರ ರಿಯಲ್ ಎಸ್ಟೇಟ್‌ಗೆ ಬಲಿಕೊಡುವುದು ಅಭಿವೃದ್ಧಿಯ ಏಕೈಕ ಮಾದರಿ ಆಗಬಾರದು. ಸರ್ಕಾರಕ್ಕೆ ನಿಜವಾಗಿಯೂ ರೈತರ ಒಪ್ಪಿಗೆ ಇದೆ ಎಂಬ ವಿಶ್ವಾಸವಿದ್ದರೆ 26 ಗ್ರಾಮಗಳ ಗ್ರಾಮಸಭೆಗಳಲ್ಲಿ ಪಾರದರ್ಶಕವಾಗಿ ರೈತರ ಅಭಿಪ್ರಾಯ ದಾಖಲಿಸಲಿ; ಸ್ವತಂತ್ರ ಸಾಮಾಜಿಕ ಪರಿಣಾಮ ಮೌಲ್ಯಮಾಪನ ನಡೆಸಲಿ; ಯೋಜನೆಯ ಸಂಪೂರ್ಣ ಮಾಸ್ಟರ್ ಪ್ಲಾನ್ ಪ್ರಕಟಿಸಲಿ; ಪರಿಸರ ಪರಿಣಾಮ, ಆಹಾರ ಭದ್ರತೆ ಹಾಗೂ ಜೀವನೋಪಾಯ ನಷ್ಟದ ಲೆಕ್ಕವನ್ನು ಜನರ ಮುಂದಿಡಲಿ.

ಅಲ್ಲಿಯವರೆಗೆ ‘ರೈತರು ಒಪ್ಪಿದ್ದಾರೆ, ಪರಿಹಾರ ಪಡೆದಿದ್ದಾರೆ’ ಎಂಬ ಮಾತನ್ನು ಪುನರಾವರ್ತಿಸುವುದರಿಂದ ಸತ್ಯ ಬದಲಾಗುವುದಿಲ್ಲ. ವಾಸ್ತವದಲ್ಲಿ ರೈತರ ನಿಲುವು ಸ್ಪಷ್ಟವಾಗಿದೆ; ‘ರೈತರು ಹಣದ ಮೊತ್ತಕ್ಕಾಗಿ ಹೋರಾಡುತ್ತಿಲ್ಲ; ತಮ್ಮ ಭೂಮಿ, ಕೃಷಿ ಮತ್ತು ಬದುಕನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ’. ಈ ವಾಸ್ತವವನ್ನು ಸರ್ಕಾರ ಒಪ್ಪಿಕೊಳ್ಳಬೇಕು. ವಿತಂಡವಾದವನ್ನು ನಿಲ್ಲಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಮರುಪರಿಶೀಲಿಸಿ, ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕು. ರೈತರ ಅಸಮ್ಮತಿಗೆ ತಲೆಬಾಗಿ ಯೋಜನೆಯನ್ನು ಕೈಬಿಡಬೇಕು!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...