ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವವು ಒಂದು ಸಾಂವಿಧಾನಿಕ ಮೌಲ್ಯ. ಪ್ರತಿನಿಧಿತ್ವವಿಲ್ಲದ ಅಧಿಕಾರವು ಅಪೂರ್ಣ. ಮಹಿಳೆಯರನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ಹೊರಗಿಡುವ ಯಾವುದೇ ವ್ಯವಸ್ಥೆ, ಅದು ಯಾವ ಪಕ್ಷವೇ ಆಗಿರಲಿ, ಸಮಾನತೆಯ ಆದರ್ಶಕ್ಕೆ ವಿರುದ್ಧವಾಗಿಯೇ ಕಾಣಿಸುತ್ತದೆ.
ರಾಜಕೀಯದಲ್ಲಿ ಮಾತು ಮತ್ತು ಕೃತಿಯ ನಡುವಿನ ಸಾಮ್ಯತೆಯೇ ಒಂದು ಪಕ್ಷದ ನೈತಿಕತೆಯನ್ನು ಅಳೆಯುವ ಪ್ರಮುಖ ಮಾನದಂಡ. ಚುನಾವಣಾ ವೇದಿಕೆಗಳಲ್ಲಿ ಪಕ್ಷಗಳು ಯಾವ ವಿಚಾರವಾಗಿ ಮಾತನಾಡುತ್ತವೆಯೋ, ಅಧಿಕಾರಕ್ಕೆ ಬಂದಾಗ ಅವುಗಳನ್ನು ಜಾರಿಗೊಳಿಸುವುದರಲ್ಲಿ ಆಯಾ ಪಕ್ಷಗಳ ಬದ್ಧತೆ ಪ್ರದರ್ಶನವಾಗುತ್ತದೆ. ಅವುಗಳ ವಿಶ್ವಾಸಾರ್ಹತೆಯೂ ಪ್ರತಿಫಲಿಸುತ್ತದೆ. ಇದರಲ್ಲಿ ಮಹಿಳೆಯರ ವಿಚಾರಗಳೇನೂ ಹೊರತಲ್ಲ. ಅಥವಾ ಬಿಟ್ಟುಬಿಡಲು ಸಾಧ್ಯವೂ ಇಲ್ಲ.
ಸದ್ಯದ ದೇಶದ ಪರಿಸ್ಥಿತಿಯಲ್ಲಿ, ಮಹಿಳಾ ಮೀಸಲಾತಿಯ ಬಗ್ಗೆ ಅತ್ಯಂತ ಜೋರಾಗಿ ಮಾತನಾಡಿರುವ ಪಕ್ಷ ಕಾಂಗ್ರೆಸ್. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33%ರಷ್ಟು ಮೀಸಲಾತಿ ಇರಬೇಕು, ಜಾರಿಯಾಗಲೇಬೇಕು ಎಂದು ಕಾಂಗ್ರೆಸ್ ನಿರಂತರವಾಗಿ ಒತ್ತಾಯಿಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವಾರು ಕೈ ನಾಯಕರು ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಮಹಿಳಾ ಪ್ರಾತಿನಿಧ್ಯದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ‘ಮಹಿಳೆಯರು ಕೇವಲ ಮತದಾರರಲ್ಲ, ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿಯೂ ಇರಬೇಕು’ ಎಂದು ವಾದಿಸಿದ್ದಾರೆ.
ಆದರೆ, ಕಾಂಗ್ರೆಸ್ ನಾಯಕರ ಈ ವಾದಕ್ಕೆ ಅರ್ಥವಿದೆಯೇ? ಮಹಿಳಾ ಸಮಾನತೆಯನ್ನು ತನ್ನ ರಾಜಕೀಯ ಸಿದ್ಧಾಂತದ ಭಾಗವೆಂದು ಪ್ರತಿಪಾದಿಸುವ ಕಾಂಗ್ರೆಸ್ ನಾಯಕರು ಈ ಪ್ರಶ್ನೆಗೆ ಉತ್ತರಿಸುವರೇ?
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಇತ್ತೀಚೆಗೆ, ಡಿ.ಕೆ ಶಿವಕುಮಾರ್ ಅವರಿಗೆ ಸರ್ಕಾರದ ಚುಕ್ಕಾಣಿ ನೀಡುವ ಮೂಲಕ ನಾಯಕತ್ವವನ್ನೂ ಬದಲಾಯಿಸಿತು. ಹೊಸ ನಾಯಕತ್ವದೊಂದಿಗೆ, ಹೊಸ ಸಚಿವ ಸಂಪುಟವನ್ನೂ ರಚಿಸಿದೆ. ಆದರೆ, ಸಚಿವ ಸಂಪುಟದಲ್ಲಿ ಮಹಿಳೆಯರನ್ನು ಹೊರಗಿಟ್ಟಿದೆ. ರಾಜ್ಯದಲ್ಲಿ ಪ್ರಸ್ತುತ, 33 ಸಚಿವರ ಸಂಪುಟವಿದ್ದು, ಎಣಿಕೆಗೂ ಒಬ್ಬರೇ ಒಬ್ಬ ಮಹಿಳಾ ಸಚಿವರಿಲ್ಲ!
ಭಾರತೀಯ ರಾಜಕಾರಣದಲ್ಲಿ ಮಹಿಳೆಯರನ್ನು ಚುನಾವಣಾ ಪ್ರಚಾರದ ಮುಖಗಳಾಗಿ ಬಳಸುವುದು ಸಾಮಾನ್ಯ. ಮಹಿಳೆಯರ ಹೆಸರಿನಲ್ಲಿ ಯೋಜನೆಗಳನ್ನು ಘೋಷಿಸುವುದು, ಮಹಿಳಾ ಸಬಲೀಕರಣದ ಭಾಷಣ ಮಾಡುವುದು, ಮಹಿಳಾ ಮತದಾರರನ್ನು ಸೆಳೆಯುವ ಭರವಸೆಗಳನ್ನು ನೀಡುವುದು ಎಲ್ಲ ಪಕ್ಷಗಳಿಗೂ ಹೊಸದಲ್ಲ. ಆದರೆ, ಅಧಿಕಾರ ಹಂಚಿಕೆಯ ವಿಚಾರಗಳು ಬಂದಾಗ, ಮಹಿಳೆಯರನ್ನು ಮೂಲೆಗುಂಪು ಮಾಡಲಾಗುತ್ತದೆ. ಪುರುಷ ನಾಯಕತ್ವಕ್ಕೆ ಅಧಿಕಾರ ಹಂಚಿಕೆ ಸೀಮಿತವಾಗುತ್ತದೆ. ಇದು ಪುನರಾವರ್ತಿತ ಮಾದರಿ. ಇದನ್ನೇ ಕಾಂಗ್ರೆಸ್ ಮತ್ತೆ-ಮತ್ತೆ ಪಾಲಿಸುತ್ತಿದೆ. ಈಗಲೂ ಪುರುಷಾಧಿಕಾರಕ್ಕೇ ಅಂಟಿಕೊಂಡಿದೆ.
ಸಚಿವ ಸಂಪುಟವು ಕೇವಲ ಆಡಳಿತಾತ್ಮಕ ತಂಡವಲ್ಲ. ಅದು ಸರ್ಕಾರವನ್ನು ಮುನ್ನಡೆಸುವ ಪ್ರಮುಖ ಅಂಗ. ಯಾವ ಸಮುದಾಯಗಳಿಗೆ ಸ್ಥಾನ ನೀಡಲಾಗಿದೆ, ಯಾವ ವರ್ಗಗಳನ್ನು ಪ್ರತಿನಿಧಿಸಲಾಗಿದೆ, ಯಾರ ಧ್ವನಿಗೆ ಅಧಿಕಾರದ ಮೇಜಿನಲ್ಲಿ ಸ್ಥಾನ ಸಿಕ್ಕಿದೆ ಎಂಬುದನ್ನು ಅದು ಪ್ರತಿಬಿಂಬಿಸುತ್ತದೆ. ಹೀಗಾಗಿ ಮಹಿಳೆಯರ ಅನುಪಸ್ಥಿತಿಯು ಮಹಿಳೆಯರಿಗೆ ಅವಕಾಶವಿಲ್ಲ ಎಂದು ಮಾತ್ರವೇ ಹೇಳುವುದಿಲ್ಲ. ರಾಜ್ಯದ ಅರ್ಧದಷ್ಟಿರುವ ಮಹಿಳೆಯರನ್ನು ಕಡೆಗಣಿಸುತ್ತಿರುವ ಸರ್ಕಾರದ ಧೋರಣೆಯನ್ನೂ ಬಿಂಬಿಸುತ್ತದೆ.
ಮಹಿಳೆಯರು ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಗೆ ಬರುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸ್ವಸಹಾಯ ಸಂಘಗಳು, ಕೃಷಿ, ಆರೋಗ್ಯ, ಶಿಕ್ಷಣ, ಉದ್ಯಮ, ವಿಜ್ಞಾನ, ನ್ಯಾಯಾಂಗ ಹಾಗೂ ಆಡಳಿತದವರೆಗೆ ಮಹಿಳೆಯರ ಪಾತ್ರ ನಿರ್ಣಾಯಕವಾಗಿದೆ. ಆದರೆ, ರಾಜ್ಯದ ಅತ್ಯುನ್ನತ ಕಾರ್ಯನಿರ್ವಾಹಕ ಅಧಿಕಾರ ಕೇಂದ್ರವಾದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ಸಿಗದಿದ್ದರೆ ಏನರ್ಥ. ‘ಅರ್ಹ ಮಹಿಳೆಯರಿಲ್ಲ’ ಎಂಬುದು ಕಾಂಗ್ರೆಸ್‌ನ ವಾದವೇ? ಈ ವಾದವನ್ನು ಸಮಾಜ ಒಪ್ಪುತ್ತದೆಯೇ?
ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ಕಾಂಗ್ರೆಸ್‌ನ ಹೈಕಮಾಂಡ್ ಪಾತ್ರ ಬಹುಮುಖ್ಯವಾದದ್ದು. ಹೀಗಿರುವಾಗ, ಸಚಿವರಾಗುವವರ ಅಂತಿಮ ಪಟ್ಟಿಯಲ್ಲಿದ್ದ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳುವಾಗ ಮಹಿಳೆಯರ ಪ್ರತಿನಿಧಿತ್ವದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯಿಂದ ಹಿಡಿದು ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ವರೆಗೆ ಯಾರೊಬ್ಬರಿಗೂ ಯಾವುದೇ ಪ್ರಶ್ನೆಗಳು ಎದುರಾಗಲಿಲ್ಲವೇ? ಸಚಿವ ಸಂಪುಟದ ಪಟ್ಟಿ ಅಂತಿಮಗೊಳ್ಳುವ ಮೊದಲು ಮಹಿಳಾ ಪಾಲುದಾರಿಕೆಯ ಕೊರತೆಯನ್ನು ಸರಿಪಡಿಸುವ ಪ್ರಯತ್ನವನ್ನೇ ಮಾಡಲಿಲ್ಲವೇ? ನಡೆದಿದ್ದರೆ ಅದರ ಫಲಿತಾಂಶ ಏನು? ನಡೆದಿರದಿದ್ದರೆ, ಮಹಿಳಾ ರಾಜಕೀಯ ಸಬಲೀಕರಣದ ಘೋಷಣೆಗಳ ಅರ್ಥವೇನು? ಈ ಪ್ರಶ್ನೆಗಳಿಗಾದರೂ ಕಾಂಗ್ರೆಸ್ ನಾಯಕತ್ವದಲ್ಲಿ ಉತ್ತರವಿದೆಯೇ?
ನಿಜಕ್ಕೂ ಕಾಂಗ್ರೆಸ್ ಮಹಿಳಾ ಸಬಲೀಕರಣ ಮತ್ತು ಮಹಿಳಾ ಪ್ರಾತಿನಿಧಿತ್ವಕ್ಕೆ ಮನ್ನಣೆ ಕೊಡುವುದೇ ಆದರೆ, ಪಟ್ಟಿಯಲ್ಲಿದ್ದ ಏಕೈಕ ಮಹಿಳೆ ಗಾಯತ್ರಿ ಅವರ ಹೆಸರನ್ನು ಕೈಬಿಡುವ ದರ್ದು ಏನಿತ್ತು? ಅಥವಾ ಅವರು ಈಗತಾನೇ ಶಾಸಕಿಯಾಗಿದ್ದಾರೆ ಎಂಬ ಕಾರಣ ಅಡ್ಡಿ ಬಂದರೆ, ಹಿರಿಯ ಶಾಸಕಿಯರು ಸಾಕಷ್ಟು ಸಂಖ್ಯೆಯಲ್ಲಿದ್ದರಲ್ಲ?
ಕಾಂಗ್ರೆಸ್ ಪ್ರಕಾರ, ಮಹಿಳಾ ಮೀಸಲಾತಿ ಅಥವಾ ಮಹಿಳಾ ಪಾಲುದಾರಿಕೆ ಎಂದರೆ, ಕೇವಲ ಸಂಸತ್ತು ಅಥವಾ ವಿಧಾನಸಭೆಯಲ್ಲಿ ಕೆಲವು ಸ್ಥಾನಗಳನ್ನು ಕೊಡುವುದಷ್ಟೇ ಎಂಬಂತಿದೆ. ಆದರೆ, ಮಹಿಳಾ ಪಾಲುದಾರಿಕೆಯ ನಿಜವಾದ ಅರ್ಥ ಅಧಿಕಾರದ ಪ್ರತಿಯೊಂದು ಹಂತದಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಸಂಪುಟ, ಪ್ರಮುಖ ಖಾತೆಗಳು, ಪಕ್ಷದ ನಿರ್ಧಾರ ಕೈಗೊಳ್ಳುವ ಸಮಿತಿಗಳು -ಇವೆಲ್ಲೆಡೆ ಮಹಿಳೆಯರ ಹಾಜರಾತಿ ಕಾಣಿಸದಿದ್ದರೆ, ಮೀಸಲಾತಿಯ ಚರ್ಚೆ ಅಪೂರ್ಣವಾಗಿಯೇ ಉಳಿಯುತ್ತದೆ.
ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!
ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವವು ಒಂದು ಸಾಂವಿಧಾನಿಕ ಮೌಲ್ಯ. ಪ್ರತಿನಿಧಿತ್ವವಿಲ್ಲದ ಅಧಿಕಾರವು ಅಪೂರ್ಣ. ಮಹಿಳೆಯರನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ಹೊರಗಿಡುವ ಯಾವುದೇ ವ್ಯವಸ್ಥೆ, ಅದು ಯಾವ ಪಕ್ಷವೇ ಆಗಿರಲಿ, ಸಮಾನತೆಯ ಆದರ್ಶಕ್ಕೆ ವಿರುದ್ಧವಾಗಿಯೇ ಕಾಣಿಸುತ್ತದೆ.
ಮಹಿಳಾ ಮೀಸಲಾತಿಯ ಪರವಾಗಿ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವ ಪಕ್ಷಗಳಿಗಾದರೂ ಇದರ ಎಚ್ಚರಿಕೆ ಇರಬೇಕು. ಅಂತಹ ಪಕ್ಷಗಳು ತಮ್ಮದೇ ಸರ್ಕಾರಗಳಲ್ಲಿ ಕನಿಷ್ಠ ನೈತಿಕ ಮಾನದಂಡವನ್ನು ಪಾಲಿಸಬೇಕು. ಅಂತಹ ರಾಜಕೀಯ ಸಂಕಲ್ಪವಿದ್ದಾಗ ಮಾತ್ರವೇ, ಆಯಾ ಪಕ್ಷಗಳು ಮಹಿಳೆಯರ ವಿಚಾರವನ್ನು ಬಹಿರಂಗವಾಗಿ ಮಾತನಾಡುವ ನೈತಿಕತೆಯನ್ನು ಉಳಿಸಿಕೊಳ್ಳುತ್ತವೆ.
ಮಹಿಳೆಯರಿಗೆ 33% ಮೀಸಲಾತಿ ಕೊಡಲೇಬೇಕು ಎನ್ನುವ ಕಾಂಗ್ರೆಸ್ ಪಕ್ಷ ಈ ನೈತಿಕತೆಯನ್ನು ಉಳಿಸಿಕೊಳ್ಳಬೇಕಿತ್ತು. ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ನ್ಯಾಯಯುತ ಪಾಲು ಮತ್ತು ಸ್ಥಾನಮಾನ ನೀಡಬೇಕಿತ್ತು. ಆದರೆ, ಅದಾಗಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಎರಡು ರೀತಿಯ ನಡೆ-ನುಡಿ ಹೊಂದಿರುವಂತೆಯೇ ಕಾಣುತ್ತದೆ!



