ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳು, ಕುಗ್ಗುತ್ತಿರುವ ಮೋದಿಯವರ ವರ್ಚಸ್ಸು... ಇದಕ್ಕೆ ಪೂರಕವಾಗಿ ದೇವೇಗೌಡರ ಪ್ರಬುದ್ಧತೆಯತ್ತ ರಾಹುಲ್ ಹೇಳಿಕೆ... ಗಮನಾರ್ಹವಾದುದು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಪ್ರಬುದ್ಧರಲ್ಲ, ಅನುಭವದ ಕೊರತೆ ಇದೆ ಎಂದು ಹೇಳಲಾರೆ, ರಾಜಕೀಯದಲ್ಲಿ ವೇಗವಾಗಿ ಮುನ್ನಡೆಯಬೇಕೆಂಬ ಮನಸ್ಸಿದೆ’ ಎಂದಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಎಸ್. ನಿಜಲಿಂಗಪ್ಪನವರ ಕಾಲದಿಂದ ದೇಶದ ರಾಜಕಾರಣವನ್ನು ಕಂಡಿರುವ, ದೇಶದ ಪ್ರಧಾನಿ ಪಟ್ಟದಲ್ಲಿ ಕೂತು ಕೆಳಗಿಳಿದಿರುವ, 93ನೇ ವಯಸ್ಸಿನಲ್ಲಿಯೂ ರಾಜಕಾರಣದಲ್ಲಿ ಸಕ್ರಿಯರಾಗಿರುವ ಗೌಡರ ಈ ಮಾತು ಈ ಕ್ಷಣಕ್ಕೆ ಬಹಳ ಮುಖ್ಯವೆನಿಸುತ್ತಿದೆ.
ಹಾಗಂತ ಗೌಡರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ, ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಬರುವಂತಿಲ್ಲ. ವಯೋಸಹಜ ಮಾತು ಆಗಿರಬಹುದೇ ಎಂದರೆ, ‘ಡಯಾಲಿಸಿಸ್ ದೇಹಕ್ಕೆ ಹೊರತು, ನನ್ನ ನೆನಪಿನ ಶಕ್ತಿಗಲ್ಲ, ಬ್ರೈನ್ ಡಯಾಲಿಸಿಸ್ ಶುರುವಾಗಿಲ್ಲ’ ಎನ್ನುವ ಎಚ್ಚರಿಕೆಯ ಮಾತನ್ನೂ ಮರೆಯುವಂತಿಲ್ಲ.
ಸೋಜಿಗದ ಸಂಗತಿ ಎಂದರೆ, ಇದೇ ಗೌಡರು, 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಹಾಗೂ ಸಂಪತ್ತು ಮರುಹಂಚಿಕೆ ಕುರಿತಾದ ರಾಹುಲ್ ಗಾಂಧಿಯವರ ಪ್ರಸ್ತಾಪಗಳನ್ನು ತೀವ್ರವಾಗಿ ಟೀಕಿಸಿದ್ದರು. “ರಾಹುಲ್ ಗಾಂಧಿ ಅವರ ಇಂತಹ ಅಪ್ರಬುದ್ಧ ಆರ್ಥಿಕ ಆಲೋಚನೆಗಳನ್ನು ಅವರ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಹೇಗೆ ಒಪ್ಪುತ್ತಾರೋ?” ಎಂದು ಪ್ರಶ್ನಿಸಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯ ‘ಬಿ-ಟೀಮ್’ ಎಂದು ಕರೆದಾಗ, ಗೌಡರು ಗರಂ ಆಗಿ, “ರಾಹುಲ್ ಗಾಂಧಿ ಅವರಿಗೆ ಇತಿಹಾಸದ ತಿಳಿವಳಿಕೆಯ ಕೊರತೆಯಿದೆ, ಅವರ ಹೇಳಿಕೆಗಳು ಅಪ್ರಬುದ್ಧತೆಯಿಂದ ಕೂಡಿವೆ” ಎಂದು ಕುಟುಕಿದ್ದರು.
ಇಂತಹ ಗೌಡರು ಈಗ ರಾಹುಲ್ ಗಾಂಧಿಯವರಲ್ಲಿ ಪ್ರಬುದ್ಧತೆಯನ್ನು ಗುರುತಿಸುತ್ತಿದ್ದಾರೆ. ಈ ಹೇಳಿಕೆಯ ಹಿಂದೆ, ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳು, ಕುಗ್ಗುತ್ತಿರುವ ಮೋದಿಯವರ ವರ್ಚಸ್ಸು ತಳುಕು ಹಾಕಿಕೊಂಡಿರಬಹುದು. ಇದಕ್ಕೆ ಪೂರಕವಾಗಿ ರಾಹುಲ್ ಗಾಂಧಿಯವರ ಇತ್ತೀಚಿನ ನಡೆ-ನುಡಿಗಳೂ ಕಾರಣವಾಗಿರಬಹುದು.
ಇದನ್ನು ಓದಿದ್ದೀರಾ?: ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?
ಸದ್ಯ ದೇಶದ ರಾಜಕಾರಣದಲ್ಲಿ ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಮುಖ ವಿಷಯವಾಗಿದೆ. ಇದನ್ನು ಸವಾಲಿನಂತೆ ಸ್ವೀಕರಿಸಿರುವ ರಾಹುಲ್ ಗಾಂಧಿ, ಆಯೋಗದ ಮತ ಕಳವು ಕೃತ್ಯವನ್ನು ದೇಶದ ಮುಂದಿಡುತ್ತಿರುವುದು, ಜನ ಅವರತ್ತ ತಿರುಗಿ ನೋಡುವಂತೆ ಮಾಡಿದೆ.
ಆ ನಿಟ್ಟಿನಲ್ಲಿ ಅಕ್ಟೋಬರ್ 6ರಂದು ಇಂಡಿಯಾ ಮೈತ್ರಿಕೂಟದ ಸಂಸದರು ಚುನಾವಣಾ ಆಯೋಗದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ರಾಹುಲ್ ಮುಂಚೂಣಿಯಲ್ಲಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಬ್ಯಾರಿಕೇಡ್ ಏರಿ ನಿಂತ ದೃಶ್ಯ- ಹಲವರಲ್ಲಿ ಹಲವು ರೀತಿಯ ತರಂಗಗಳನ್ನು ಸೃಷ್ಟಿಸಿದೆ.
ಅದು ಕೇವಲ ಒಂದು ಪ್ರತಿಭಟನೆಯ ಚಿತ್ರವಲ್ಲ. ರಾಹುಲ್ ಗಾಂಧಿ ತಮ್ಮನ್ನು ಸಂಸತ್ತಿನ ಒಳಗಿನ ಪ್ರತಿಪಕ್ಷ ನಾಯಕನಿಂದ, ಬೀದಿ ಮೇಲಿನ ಪ್ರತಿರೋಧದ ನಾಯಕನಾಗಿಯೂ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ರಾಜಕೀಯ ಸಂದೇಶವನ್ನು ರವಾನಿಸಿದ ಚಿತ್ರ.
ಅದೊಂದೇ ಅಲ್ಲ, ಅಕ್ಟೋಬರ್ 4ರಂದು ಅವರು ‘ಸತ್ಯಾಗ್ರಹ’ ಎಂಬ ಡಿಜಿಟಲ್ ವೇದಿಕೆಯನ್ನು ಆರಂಭಿಸಿದರು. ವಿದ್ಯಾರ್ಥಿಗಳು, ರೈತರು, ಆದಿವಾಸಿಗಳು, ದಲಿತರು, ಮಹಿಳೆಯರು- ದನಿ ಇಲ್ಲದವರಿಗೆ ಪ್ರಭುತ್ವವನ್ನು ಪ್ರಶ್ನಿಸುವ ವೇದಿಕೆಯೊದಗಿಸಿಕೊಟ್ಟರು. ಅವರನ್ನೆಲ್ಲ ಒಂದೇ ವೇದಿಕೆಯಡಿ ತಂದು ಅವರಲ್ಲಿ ಧೈರ್ಯ ತುಂಬಿದರು.
ಅದಕ್ಕೂ ಹಿಂದೆ ‘ಛಾತ್ರೋಂನ್ ಕಿ ಗೂಂಜ್’ ಕಾರ್ಯಕ್ರಮಗಳ ಮೂಲಕ ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದಕ್ಕಿಳಿದಿದ್ದರು. ಆ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಯುವಜನರೊಂದಿಗೆ ನೇರವಾಗಿ ಸಂವಾದಿಸಿದರು, ಅವರ ಒಲವು ಸಂಪಾದಿಸಿದರು.
ಹೀಗೆ… ಸಂವಿಧಾನ, ಪ್ರಜಾಪ್ರಭುತ್ವ, ಚುನಾವಣಾ ಆಯೋಗ, ಮತ ಕಳವು ಮುಂತಾದ ಪ್ರಶ್ನೆಗಳನ್ನು ನಿರಂತರವಾಗಿ ಮುಂದಿಡುತಲೇ, ತಮ್ಮ ರಾಜಕೀಯ ಬದುಕಿಗೆ ಸ್ಪಷ್ಟವಾದ ವಿಷಯಾಧಾರಿತ ಖಚಿತತೆ ನೀಡುತ್ತಿದ್ದಾರೆ. ಹಾಗೆಯೇ ಬೀದಿ ಹೋರಾಟ, ಸಂಸತ್ತಿನ ಪ್ರತಿರೋಧ, ಯುವಜನರೊಂದಿಗಿನ ಸಂವಾದ, ಅಂಚಿನ ಜನರನ್ನು ಅಪ್ಪಿಕೊಳ್ಳುವುದು, ಅನ್ಯಾಯ ಕಂಡಾಕ್ಷಣ ಖಂಡಿಸುವುದನ್ನು ರಾಹುಲ್ ರಾಜಕೀಯದ ಪ್ರಮುಖ ಸಾಧನಗಳನ್ನಾಗಿ ಮಾಡಿಕೊಂಡಿದ್ದಾರೆ.
ಆದರೆ ಸಂಘಪರಿವಾರ, ಬಿಜೆಪಿ ಮತ್ತು ಭಕ್ತರು ಈಗಲೂ ರಾಹುಲ್ ಅವರನ್ನು ಗೇಲಿಯ ವಸ್ತುವನ್ನಾಗಿಯೇ ನೋಡುತ್ತಿದ್ದಾರೆ. ಆದರೆ, ಅವರೆಷ್ಟೇ ಗೇಲಿ ಮಾಡಿದರೂ, ರಾಹುಲ್ ಕುಗ್ಗುತ್ತಿಲ್ಲ. ಒಂದಿನಿತೂ ಹೆದರುತ್ತಿಲ್ಲ. ತಮಗನಿಸಿದ್ದನ್ನು ನೇರವಾಗಿ ಹೇಳುತ್ತಾ ಬರುತ್ತಿದ್ದಾರೆ. ಅಂಬಾನಿ-ಅದಾನಿ-ಮೋದಿ ಸಂಬಂಧವನ್ನು ಬಯಲು ಮಾಡುತ್ತಿದ್ದಾರೆ. ಮಾಧ್ಯಮಗಳ ಪಕ್ಷಪಾತ ನೀತಿಯನ್ನು ಪತ್ರಕರ್ತರ ಸಮ್ಮುಖದಲ್ಲಿಯೇ ಖಂಡಿಸುತ್ತಿದ್ದಾರೆ.
ಅಸಲಿಗೆ ರಾಹುಲ್ ಗಾಂಧಿಯವರನ್ನು ಇಷ್ಟೊಂದು ನೇರ, ನಿಷ್ಠುರ, ಪ್ರಖರ ಮತ್ತು ಧೈರ್ಯವಂತ ವ್ಯಕ್ತಿಯನ್ನಾಗಿ ಮಾರ್ಪಡಿಸಿದ್ದು ಬಿಜೆಪಿಯೇ. ನಿರಂತರ ದಾಳಿ, ವ್ಯಂಗ್ಯ, ಕುಚೇಷ್ಟೆ, ಅಪಮಾನ, ನಿಂದನೆ ಮಾಡುವುದರಿಂದ ರಾಹುಲ್‌ರನ್ನು ಹೊಸಕಿ ಹಾಕಬಹುದು ಎಂದು ಬಿಜೆಪಿ ಭಾವಿಸಿತ್ತು. ಅದಕ್ಕಾಗಿ ಕೋಟ್ಯಂತರ ರೂಪಾಯಿ ಸುರಿದು ಐಟಿ ಸೆಲ್ ಸ್ಥಾಪಿಸಿ, ಸುಳ್ಳು ಸೃಷ್ಟಿಸಿ, ಬಿತ್ತರಿಸಿ ರಾಹುಲ್ ರನ್ನು ಹಣಿಯುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿಸಿಕೊಂಡಿತ್ತು. ಅಷ್ಟೇ ಅಲ್ಲ, ರಾಹುಲ್ ವಿರುದ್ಧ ದೇಶಾದ್ಯಂತ ಹತ್ತಾರು ಕೇಸುಗಳು ದಾಖಲಾಗುವಂತೆ ನೋಡಿಕೊಂಡಿತ್ತು. ಪಾರ್ಲಿಮೆಂಟಿನಿಂದಲೂ ಹೊರಹಾಕಿ ಕೆಟ್ಟ ಇತಿಹಾಸ ಸೃಷ್ಟಿಸಿತ್ತು.
ಇದಕ್ಕೆ ವ್ಯತಿರಿಕ್ತವಾಗಿ, ಪ್ರಧಾನಿಯಾಗಿರುವ ಮೋದಿಯವರಾದರೂ ಉತ್ತಮ ಆಡಳಿತ, ದೇಶದ ಅಭಿವೃದ್ಧಿ, ಜನರ ಜೀವನ ಮಟ್ಟ ಸುಧಾರಿಸಿದ್ದಾರ? ಕಳೆದ ಹನ್ನೆರಡು ವರ್ಷಗಳಲ್ಲಿ ಮೋದಿ-ಅಮಿತ್ ಶಾ ಅವರ ಕುತಂತ್ರಗಳದ್ದೇ ಕಾರುಬಾರು. ಅದೇ ಆಡಳಿತವಾಗಿದೆ, ಕಾನೂನಾಗಿದೆ. ಅಪರಿಮಿತ ಅಧಿಕಾರ ಬಲದಿಂದ ರಾಹುಲ್ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ನಿರಂತರ ದಾಳಿ ಮಾಡುತ್ತಿದೆ. ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ.
ಎಲ್ಲದಕ್ಕೂ ಒಂದು ಮಿತಿ ಎಂಬುದಿದೆಯಲ್ಲವೇ? ಪರಿಸ್ಥಿತಿ ಈಗ ಬದಲಾಗಿದೆ. ರಾಹುಲ್ ಮಾಡಿದ ಎರಡು ಭಾರತ್ ಜೋಡೋ ಯಾತ್ರೆಗಳು ಅವರ ಮನೋಬಲವನ್ನು ಇಮ್ಮಡಿಗೊಳಿಸಿವೆ. ವಿದ್ಯಾರ್ಥಿ-ಯುವಸಮೂಹದ ಬೆನ್ನಿಗೆ ನಿಂತು ಬೆಂಬಲಿಸುತ್ತಿರುವುದು, ಎಸ್ಐಆರ್ ಕುರಿತು ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸುತ್ತಿರುವುದು- ಪ್ರಧಾನಿ ಮೋದಿಯವರ ಮುಖವಾಡವನ್ನು ಕಳಚಿಡುತ್ತಿದೆ. ರಾಹುಲ್ ಅವರ ನೇರ, ನಿಷ್ಠುರ ಮಾತು-ವರ್ತನೆಗಳು ಜನರನ್ನು ಪ್ರಭಾವಿಸತೊಡಗಿವೆ.
ಇದನ್ನು ಓದಿದ್ದೀರಾ?: ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ
ಅಮೆರಿಕಾದ ಪ್ರಮುಖ ಕಾರ್ಮಿಕ ಮುಖಂಡ ನಿಕೋಲಸ್ ಕ್ಲೈನ್, ‘ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ಅವರು ನಿಮ್ಮನ್ನು ನೋಡಿ ನಗುತ್ತಾರೆ, ನಂತರ ಅವರು ನಿಮ್ಮೊಂದಿಗೆ ಹೋರಾಡುತ್ತಾರೆ, ತದನಂತರ ನೀವು ಗೆಲ್ಲುತ್ತೀರಿ’ ಎನ್ನುವ ಸುಪ್ರಸಿದ್ಧ ವ್ಯಾಖ್ಯಾನದಂತೆ, ‘ಪಪ್ಪು’ ಎಂದು ಆಡಿಕೊಂಡು ನಗಾಡಿದ್ದ ಪ್ರಧಾನಿ ಮೋದಿಯವರೇ ಇಂದು ಅದೇ ರಾಹುಲ್ ಗಾಂಧಿಯ ಪ್ರತಿ ನಡೆಯನ್ನೂ ಅನುಕರಿಸಲು ಹಾತೊರೆಯುತ್ತಿದ್ದಾರೆ.
ದಿನದಿಂದ ದಿನಕ್ಕೆ ರಾಹುಲ್ ಗಾಂಧಿ ಜನ ಮನದಲ್ಲಿ ಜಾಗ ಪಡೆದು ಪ್ರಬುದ್ಧರಾಗುತ್ತಿದ್ದರೆ, ಮೋದಿಯವರು ಕೆಟ್ಟ ಆಡಳಿತದಿಂದ ನಿಧಾನವಾಗಿ ಜನ ಮನದಿಂದ ಮರೆಯಾಗುತ್ತಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ಕವಿವಾಣಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.




