ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು ಒಂದೆಡೆಯಾದರೆ, ಜಾಗತಿಕ ಆರ್ಥಿಕ ಸಮತೋಲನದ ಮಹತ್ವಾಕಾಂಕ್ಷೆ ಮತ್ತೊಂದೆಡೆ. ದೆಹಲಿಯಲ್ಲಿ ಇಂದು ಆರಂಭವಾಗಿರುವ BRICS ಶೃಂಗಸಭೆಯು ಈ ವೈರುಧ್ಯಗಳ ಕದನ ರಂಗವಾಗಿ ಬದಲಾಗಿದೆಯೋ ಅಥವಾ ರಾಜತಾಂತ್ರಿಕ ಒಮ್ಮತದ ಹೊಸ ವೇದಿಕೆಯಾಗುತ್ತದೆಯೋ ಎಂಬುದಕ್ಕೆ ಉತ್ತರ ಹುಡುಕುವ ಹಾದಿಯಲ್ಲಿದೆ.
ಬ್ರಿಕ್ಸ್ (BRICS) ಎಂಬುದು ವಿಶ್ವದ ಪ್ರಮುಖ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸಿರುವ ಒಂದು ಪ್ರಭಾವಿ ಅಂತಾರಾಷ್ಟ್ರೀಯ ಆರ್ಥಿಕ ಹಾಗೂ ರಾಜಕೀಯ ಒಕ್ಕೂಟ. ಪಾಶ್ಚಿಮಾತ್ಯ ದೇಶಗಳ ಏಕಪಕ್ಷೀಯ ಆರ್ಥಿಕ ಹಾಗೂ ರಾಜಕೀಯ ಪ್ರಾಬಲ್ಯಕ್ಕೆ ಪರ್ಯಾಯವಾಗಿ ನಿಲ್ಲುವುದು ಮತ್ತು ಜಾಗತಿಕ ದಕ್ಷಿಣದ (Global South) ಧ್ವನಿಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಟ್ಟಿಯಾಗಿ ಪ್ರತಿಧ್ವನಿಸುವುದು ಈ ಒಕ್ಕೂಟದ ಮುಖ್ಯ ಉದ್ದೇಶ. 2001ರಲ್ಲಿ ಆರ್ಥಿಕ ತಜ್ಞ ಜಿಮ್ ಓ’ನೀಲ್ ಅವರು ‘BRIC’ ಎಂಬ ಪದವನ್ನು ರೂಪಿಸಿದರು. 2006ರಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ರಾಷ್ಟ್ರಗಳು ಈ ಪರಿಕಲ್ಪನೆಯ ಆಧಾರದ ಮೇಲೆ ಅನೌಪಚಾರಿಕವಾಗಿ ಒಗ್ಗೂಡಿದವು. ತದನಂತರ 2009ರಲ್ಲಿ ರಷ್ಯಾದ ಯೆಕಟೆರಿನ್ಬರ್ಗ್ನಲ್ಲಿ ಈ ರಾಷ್ಟ್ರಗಳ ಮೊದಲ ಅಧಿಕೃತ ವಾರ್ಷಿಕ ಶೃಂಗಸಭೆ ನಡೆಯಿತು ಮತ್ತು 2010ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಗೊಂಡ ಬಳಿಕ ಇದು ‘ಬ್ರಿಕ್ಸ್’ (BRICS) ಎಂದು ಮರುನಾಮಕರಣಗೊಂಡಿತು.
ಪ್ರಾರಂಭದಲ್ಲಿ ಕೇವಲ ನಾಲ್ಕು ದೇಶಗಳನ್ನು ಹೊಂದಿದ್ದ ಈ ಒಕ್ಕೂಟ ಕಾಲಕ್ರಮೇಣ ತನ್ನ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿಕೊಂಡಿದೆ. 2023ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳು ಸದಸ್ಯತ್ವ ಪಡೆದರೆ, 2025ರಲ್ಲಿ ಇಂಡೋನೇಷ್ಯಾ ಕೂಡ ಈ ಒಕ್ಕೂಟಕ್ಕೆ ಸೇರ್ಪಡೆಗೊಂಡಿತು. ಇದರೊಂದಿಗೆ ಪ್ರಸ್ತುತ ಒಟ್ಟು 11 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ BRICS ಒಕ್ಕೂಟವು ವಿಶ್ವದ ಜನಸಂಖ್ಯೆಯ ಸುಮಾರು ಶೇ. 49 ರಷ್ಟು ಭಾಗವನ್ನು ಮತ್ತು ಜಾಗತಿಕ ಜಿಡಿಪಿಯ ಶೇ. 40 ರಷ್ಟನ್ನು ಪ್ರತಿನಿಧಿಸುವ ಮೂಲಕ ಅತ್ಯಂತ ಪ್ರಭಾವಿ ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದೆ.
ಅಲ್ಲಿಂದ ಇಲ್ಲಿವರೆಗಿನ ಈ ಒಕ್ಕೂಟದ ಪ್ರಯಾಣವು ಆರ್ಥಿಕ ಸ್ವಾಲಂಬನೆಯ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಗಳನ್ನಿಟ್ಟಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ನೆರವು ಒದಗಿಸಲು BRICS ರಾಷ್ಟ್ರಗಳು 2014ರಲ್ಲಿ ಶಾಂಘೈನಲ್ಲಿ ‘ನ್ಯೂ ಡೆವಲಪ್ಮೆಂಟ್ ಬ್ಯಾಂಕ್’ (NDB) ಅನ್ನು ಸ್ಥಾಪಿಸಿದವು. ಇದು ಇಂದು ಪಾಶ್ಚಿಮಾತ್ಯ ನೇತೃತ್ವದ ಹಣಕಾಸು ಸಂಸ್ಥೆಗಳಿಗೆ ಪರ್ಯಾಯ ಅಭಿವೃದ್ಧಿ ಹಣಕಾಸು ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯವರೆಗೆ ಬಂದು ತಲುಪಿರುವ BRICS, ಜಾಗತಿಕ ಬಿಕ್ಕಟ್ಟುಗಳು, ಪಶ್ಚಿಮದ ಆರ್ಥಿಕ ನಿರ್ಬಂಧಗಳು ಮತ್ತು ಅಮೆರಿಕದ ಡಾಲರ್ ಪ್ರಾಬಲ್ಯಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವ ಅಂತಾರಾಷ್ಟ್ರೀಯ ರಾಜಕಾರಣದ ಕೇಂದ್ರ ಬಿಂದುವಾಗಿ ರೂಪುಗೊಂಡಿದೆ.
ಕಳೆದ ಎರಡು ದಶಕಗಳಲ್ಲಿ ಕೇವಲ ಆರ್ಥಿಕ ಚಿಂತನೆಯೊಂದರಿಂದ ಆರಂಭವಾಗಿ ವಿಶ್ವದ ಪ್ರಮುಖ ಶಕ್ತಿ ಕೇಂದ್ರವಾಗಿ ಬೆಳೆದಿರುವ BRICS ಒಕ್ಕೂಟ ಈಗ ತನ್ನ ಅಸ್ತಿತ್ವದ ಅತ್ಯಂತ ನಿರ್ಣಾಯಕ ಮತ್ತು ಮಹತ್ವದ ಘಟ್ಟದಲ್ಲಿದೆ. ಇದುವರೆಗೆ ಅಮೆರಿಕ ಮತ್ತು ಯುರೋಪ್ ನೇತೃತ್ವದ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಒಂದು ಸೌಮ್ಯ ಪರ್ಯಾಯವಾಗಿ ಕಾಣಿಸಿಕೊಂಡಿದ್ದ ಈ ವೇದಿಕೆ, ಈಗ ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯದ ಬಿಕ್ಕಟ್ಟುಗಳು ಮತ್ತು ಅಮೆರಿಕದ ಆಕ್ರಮಣಕಾರಿ ಸುಂಕ ನೀತಿಗಳ ಹಿನ್ನೆಲೆಯಲ್ಲಿ ಹೆಚ್ಚು ರಾಜಕೀಯ ಹಾಗೂ ಕಾರ್ಯತಂತ್ರದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಭವಿಷ್ಯದಲ್ಲಿ ಈ ಒಕ್ಕೂಟವು ತನ್ನ ಸದಸ್ಯ ರಾಷ್ಟ್ರಗಳ ನಡುವಿನ ಆಂತರಿಕ ಬಿಕ್ಕಟ್ಟುಗಳನ್ನು ಮೀರಿ ತನ್ನ ಮೂಲ ಉದ್ದೇಶದಂತೆ ಜಾಗತಿಕ ದಕ್ಷಿಣದ ನಿಜವಾದ ಧ್ವನಿಯಾಗಿ ಹೊರಹೊಮ್ಮಲು ಕೆಲವು ಕಠಿಣ ಹಾದಿಗಳನ್ನು ಕ್ರಮಿಸಬೇಕಿದೆ.
ಮುಂದಿನ ದಿನಗಳಲ್ಲಿ BRICS ಎದುರಿಸಲಿರುವ ಅತಿ ದೊಡ್ಡ ಸವಾಲು ಅಮೆರಿಕದ ಡಾಲರ್ ಪ್ರಾಬಲ್ಯಕ್ಕೆ ಪರ್ಯಾಯ ರೂಪಿಸುವುದು. ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ನಡೆಸಲು ಮತ್ತು ಪರ್ಯಾಯ ಪಾವತಿ ವ್ಯವಸ್ಥೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೂ, ಪ್ರತಿ ದೇಶದ ಆರ್ಥಿಕ ಸಾಮರ್ಥ್ಯ, ಹಣದುಬ್ಬರ ಮತ್ತು ಜಿಡಿಪಿಯಲ್ಲಿರುವ ಅಗಾಧ ವ್ಯತ್ಯಾಸದಿಂದಾಗಿ ಇದು ಅಷ್ಟು ಸುಲಭವಲ್ಲ. ಚೀನಾ ತನ್ನ ಕರೆನ್ಸಿಯಾದ ಯುವಾನ್ ಅನ್ನು ಮುಂಚೂಣಿಗೆ ತರಲು ಬಯಸಿದರೆ, ಭಾರತದಂತಹ ರಾಷ್ಟ್ರಗಳು ತಮ್ಮದೇ ಆದ ಆರ್ಥಿಕ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಯತ್ನಿಸುತ್ತವೆ. ಹೀಗಾಗಿ, ಆರ್ಥಿಕ ಸಮಾನತೆಯಿಲ್ಲದೆ ಒಮ್ಮತದ ಕರೆನ್ಸಿ ವ್ಯವಸ್ಥೆ ರೂಪಿಸುವುದು ಅಂದರೆ, ಪರ್ಯಾಯ ಪಾವತಿ ವ್ಯವಸ್ಥೆ ರೂಪಿಸುವುದು ದೀರ್ಘಕಾಲಿಕವಾಗಿ ಚರ್ಚೆಗೊಳಪಡುತ್ತದೆ.
ಹಾಗೆಯೇ, ಒಕ್ಕೂಟದ ವಿಸ್ತರಣೆಯು BRICS ಒಕ್ಕೂಟಕ್ಕೆ ಬಲ ತಂದಿದೆಯಾದರೂ, ಅದು ಹೊಸ ಆಂತರಿಕ ಸಂಘರ್ಷಗಳಿಗೂ ಮುನ್ನುಡಿ ಬರೆದಿದೆ. ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳು ಒಂದೇ ವೇದಿಕೆಯಲ್ಲಿ ಬಂದಿರುವುದು ಆರ್ಥಿಕ ಸಹಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ, ಆ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಾದೇಶಿಕ ಯುದ್ಧಗಳು ಮತ್ತು ಶೀತಲ ಸಮರಗಳು BRICSನ ಒಗ್ಗಟ್ಟನ್ನು ಪರೀಕ್ಷೆಗೊಳಪಡಿಸುತ್ತಿವೆ. ಚೀನಾವು ಈ ವೇದಿಕೆಯನ್ನು ಸಂಪೂರ್ಣವಾಗಿ ತನ್ನ ಭೌಗೋಳಿಕ ರಾಜಕೀಯ ಹಿತಾಸಕ್ತಿಗಾಗಿ ಮತ್ತು ಅಮೆರಿಕದ ವಿರುದ್ಧದ ಬ್ಲಾಕ್ ಆಗಿ ಬಳಸಿಕೊಳ್ಳಲು ಬಯಸಿದರೆ, ಭಾರತ ಮತ್ತು ಬ್ರೆಜಿಲ್ನಂತಹ ದೇಶಗಳು ಇದನ್ನು ಯಾವುದೇ ನಿರ್ದಿಷ್ಟ ರಾಷ್ಟ್ರದ ಕಪಿಮುಷ್ಟಿಗೆ ಸಿಲುಕದ ಸ್ವತಂತ್ರ ವೇದಿಕೆಯಾಗಿ ಉಳಿಸಲು ಹೆಣಗುತ್ತಿವೆ. ಚೀನಾ-ಭಾರತ ಒಂದೇ ವೇದಿಕೆಯಲ್ಲಿ ಸಹಕರಿಸಬೇಕಾದರೂ, ಪರಸ್ಪರ ವಿಶ್ವಾಸದ ಕೊರತೆ ಅವುಗಳ ಸಹಕಾರಕ್ಕೆ ಮಿತಿ ವಿಧಿಸುತ್ತದೆ. ಭಾರತವು ಚೀನಾದ ಪ್ರಾಬಲ್ಯ ಹೆಚ್ಚಾಗದಂತೆ ನೋಡಿಕೊಳ್ಳಲು ಬಯಸುತ್ತದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?
ಉಕ್ರೇನ್ ಯುದ್ಧದ ವಿಚಾರದಲ್ಲಿ BRICS ಸದಸ್ಯ ರಾಷ್ಟ್ರಗಳ ನಿಲುವು ಒಂದೇ ಆಗಿಲ್ಲ. ರಷ್ಯಾ ತನ್ನ ಕ್ರಮಗಳಿಗೆ ಬೆಂಬಲ ಅಥವಾ ಕನಿಷ್ಠ ವಿರೋಧವಿಲ್ಲದ ನಿಲುವನ್ನು ಬಯಸುತ್ತದೆ. ಆದರೆ ಭಾರತ, ಬ್ರೆಜಿಲ್ ಮತ್ತು ಇತರ ರಾಷ್ಟ್ರಗಳು ಯುದ್ಧದ ಪರಿಣಾಮಗಳನ್ನು ಕಡಿಮೆ ಮಾಡುವುದರ ಜೊತೆಗೆ ಪಶ್ಚಿಮ ರಾಷ್ಟ್ರಗಳೊಂದಿಗೆ ತಮ್ಮ ಸಂಬಂಧಗಳನ್ನೂ ಕಾಪಾಡಿಕೊಳ್ಳಬೇಕಾಗಿದೆ. ಹೀಗಾಗಿ, ಯುದ್ಧದ ಕುರಿತು ಕಠಿಣ ಸಾಮಾನ್ಯ ನಿಲುವು ರೂಪಿಸುವುದು ಕಷ್ಟ.
ಈ ಎಲ್ಲದರ ನಡುವೆ ಭಾರತಕ್ಕೆ ದ್ವಂದ್ವ ಸವಾಲಿದೆ. ಒಂದೆಡೆ, BRICS ಮೂಲಕ ಜಾಗತಿಕ ದಕ್ಷಿಣದ ರಾಷ್ಟ್ರಗಳ ಸಹಕಾರವನ್ನು ಬಲಪಡಿಸಬೇಕು. ಮತ್ತೊಂದೆಡೆ, ಅಮೆರಿಕ ಮತ್ತು ಯುರೋಪ್ಗಳೊಂದಿಗೆ ತನ್ನ ವ್ಯಾಪಾರ, ತಂತ್ರಜ್ಞಾನ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು. ಒಕ್ಕೂಟದ ಭವಿಷ್ಯ ಅದು ಪ್ರತಿ ವಿಚಾರದಲ್ಲೂ ಒಂದೇ ರೀತಿಯ ಒಮ್ಮತ ಸಾಧಿಸುವುದರ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಜತೆಗೆ ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ಹಿತಾಸಕ್ತಿಯ ಆರ್ಥಿಕ ಮತ್ತು ತಾಂತ್ರಿಕ ಸಹಕಾರವನ್ನು ಹೇಗೆ ಮುಂದುವರಿಸುತ್ತದೆ ಎಂಬುದರ ಮೇಲೆ ನಿಂತಿದೆ. ಕೃತಕ ಬುದ್ಧಿಮತ್ತೆ (AI), ನವೀಕರಿಸಬಹುದಾದ ಇಂಧನ, ಹವಾಮಾನ ಬದಲಾವಣೆ ಮತ್ತು ಜಾಗತಿಕ ಪೂರೈಕೆ ಸರಪಳಿಯ ಸುರಕ್ಷತೆಯಂತಹ ವಿಷಯಗಳಲ್ಲಿ ಒಕ್ಕೂಟವು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಜಾಗತಿಕವಾಗಿ ತನ್ನ ಪ್ರಭಾವವನ್ನು ಗಟ್ಟಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬದಲಾಗುತ್ತಿರುವ ಬಹುಧ್ರುವೀಯ ಜಗತ್ತಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಭದ್ರತೆ ಮತ್ತು ರಾಜತಾಂತ್ರಿಕ ಸ್ವಾತಂತ್ರ್ಯವನ್ನು ತಂದುಕೊಡುವ ಪ್ರಮುಖ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ಈ ಎಲ್ಲಾ ಸವಾಲುಗಳನ್ನು ದಾಟಿ ಈ ಬಾರಿಯ BRICS ಯಶಸ್ವಿಯಾಗಬೇಕಿದೆ.





