ಇಲ್ಲಿಯವರೆಗೆ ನಡೆದ ಅಧಿವೇಶನಗಳೆಲ್ಲವೂ ಆಡಳಿತ ಪಕ್ಷ ಮತ್ತು ವಿಪಕ್ಷಗಳ 'ಹೊಂದಾಣಿಕೆ ರಾಜಕಾರಣ'ಕ್ಕೆ ಬಲಿಯಾಗಿ ಇತಿಹಾಸ ಬರೆದಿವೆ. ಈ ಬಾರಿಯಾದರೂ ಅಧಿವೇಶನ ಜನರ ನೈಜ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಲಿ.
ಆಗಸ್ಟ್ 13ರ ಗುರುವಾರದಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನಕ್ಕೆ ಹಿರಿಯ ಕಾಂಗ್ರೆಸ್ ನಾಯಕ, ಶಿರಾ ಶಾಸಕ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಹಂಗಾಮಿ ಸಭಾಧ್ಯಕ್ಷರಾಗಿ; ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹಂಗಾಮಿ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. 10 ದಿನಗಳ ಕಾಲ ನಡೆಯುವ ರಾಜ್ಯ ವಿಧಾನಮಂಡಲ ಅಧಿವೇಶನ, ಡಿ.ಕೆ. ಶಿವಕುಮಾರ್ ಅವರ ಪಾಲಿಗೆ ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನವಾಗಿದೆ.
ಮೊದಲ ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸ್ವಪಕ್ಷ ಮತ್ತು ವಿಪಕ್ಷಗಳಿಂದ ಸಮಸ್ಯೆ ಮತ್ತು ಸವಾಲು ಎದುರಾಗಿದೆ. ಪ್ರಮಾಣವಚನ ಸ್ವೀಕರಿಸಿದ 19 ಹೊಸ ಸಚಿವರಿಗೆ ಖಾತೆ ಹಂಚಿಕೆಯಾಗದಿರುವುದು, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸದಿರುವುದು, ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಂದ ಬಂಡಾಯ ವ್ಯಕ್ತವಾಗುತ್ತಿರುವುದು- ಪಕ್ಷದೊಳಗಿನ ಬಿಕ್ಕಟ್ಟಾಗಿದೆ. ಹಾಗೆಯೇ ವಿಧಾನ ಪರಿಷತ್ತಿನ ಸಭಾಪತಿ ಹಾಗೂ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಸೂಕ್ತವಾದವರ ನೇಮಕ ಆಗದಿರುವುದು- ಸಾಂವಿಧಾನಿಕ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.
ಹಾಗೆಯೇ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗಳಿಂದ ಅಧಿವೇಶನಕ್ಕೆ ಪೂರ್ವತಯಾರಿಯಾಗಿ ಭಾನುವಾರವೇ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ(ಜಿಬಿಐಟಿ) ವಿರುದ್ಧ, ರೈತರ ಪರ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿದೆ.
ವಿರೋಧ ಪಕ್ಷಗಳ ಪಾದಯಾತ್ರೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡು, ‘ಹಿಂದಿನ ಸರ್ಕಾರ ಎಕರೆಗೆ ಕೇವಲ 25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಜೊತೆಗೆ ವಿಶ್ವದರ್ಜೆಯ ರಸ್ತೆಗಳು, ಮೆಟ್ರೊ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಐಟಿ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದಿರುವುದು ಬಿಡದಿ ಭಾಗದ ರೈತರನ್ನು ಕೆರಳಿಸಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಮಿತ್ ಶಾ ರಾಜೀನಾಮೆ ನೀಡಬೇಕಲ್ಲವೇ?
ಅದರಲ್ಲೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು, ‘ಆಗ ಬೇಡ ಎಂದಿದ್ದ ಶಿವಕುಮಾರ್, ಮುಖ್ಯಮಂತ್ರಿಯಾದ ಬಳಿಕ ಅತಿ ಕಾಳಜಿ ವಹಿಸುತ್ತಿದ್ದಾರೆ. ಯಾರಿಗೋ ಲಾಭ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ. ಆಗ ಎಕರೆಗೆ 2 ಕೋಟಿ ಎಂದವರು, ಈಗ 3 ಕೋಟಿಗೂ ಹೆಚ್ಚು ಕೊಡುತ್ತೇವೆ ಎನ್ನುತ್ತಿದ್ದಾರೆ. ಯಾವ ಆಧಾರದ ಮೇಲೆ ಹೀಗೆ ಹೇಳುತ್ತಿದ್ದಾರೆ, ಇದೇನು ಚೌಕಾಸಿ ವ್ಯಾಪಾರವೇ’ ಎಂದಿರುವುದು ಸರ್ಕಾರದ ದ್ವಂದ್ವ ನಿಲುವನ್ನು, ಯೋಜನೆಯ ಹಿಂದಿರುವ ಹಿತಾಸಕ್ತಿಯನ್ನು ಬಯಲುಗೊಳಿಸಿದೆ.
ಇದರ ಜೊತೆಗೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಅಕ್ರಮ ಹಣ ವರ್ಗಾವಣೆ ಹಗರಣ ನ್ಯಾಯಾಲಯದಲ್ಲಿದ್ದರೂ, ಅವ್ಯವಹಾರ ಹಾಗೂ ಕ್ರಿಮಿನಲ್ ಸಂಚಿನಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಪ್ರಧಾನ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ 2-6-2026 ರಂದು ಪ್ರಕಟಣೆ ಹೊರಡಿಸಿದ್ದರೂ, ಆಳುವ ಕಾಂಗ್ರೆಸ್ ಪಕ್ಷ ಅವರನ್ನು 3-8-2026ರಂದು ಮತ್ತೆ ಸಚಿವರನ್ನಾಗಿಸಿದೆ. ಇದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ಸದನದ ಕಲಾಪವನ್ನು ಕಾವೇರಿಸಲು ಅತ್ಯುತ್ತಮ ಅವಕಾಶವಾಗಿ ವಿಪಕ್ಷಗಳಿಗೆ ಒದಗಿಬಂದಿದೆ.
ಇದಲ್ಲದೆ, ಮುಂಗಾರು ಮಳೆ ಸಕಾಲಕ್ಕೆ ಸುರಿಯದೆ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದೆ. ಬರಗಾಲವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೆ, ಪರಿಹಾರಕ್ಕೆ ಮುಂದಾಗದೆ, ಜನರ ಕೈಗೆ ಕೆಲಸ ಕೊಡದೆ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನ ಗುಳೆ ಹೋಗುತ್ತಿರುವುದು ಸಮಸ್ಯೆ ಸೃಷ್ಟಿಸಿದೆ. ಇದರ ನಡುವೆಯೇ ಅಲ್ಪಸ್ವಲ್ಪ ಸುರಿದ ಮಳೆಯಿಂದ ಕಬಿನಿ-ಕಾವೇರಿ ತುಂಬುತ್ತಿದೆ. ಆದರೆ, ಕಾವೇರಿ ಕೊಳ್ಳದ ರೈತರಿಗೆ ಬೆಳೆ ಬೆಳೆಯದಿರಲು ತಾಕೀತು ಮಾಡಿದ ಸರ್ಕಾರ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಇದು ಸಹಜವಾಗಿಯೇ ಕಾವೇರಿ ಕೊಳ್ಳದ ರೈತರನ್ನು ರೊಚ್ಚಿಗೆಬ್ಬಿಸಿದೆ. ಇದು ಆಳುವ ಪಕ್ಷವನ್ನು ಹಣಿಯಲು ವಿರೋಧ ಪಕ್ಷಗಳಿಗೆ ಅನುಕೂಲ ಮಾಡಿಕೊಡಬಹುದು.
ಇನ್ನು ದೇಶದಾದ್ಯಂತ ಪರೀಕ್ಷಾ ಪದ್ಧತಿ, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ವಿದ್ಯಾರ್ಥಿಗಳು ಬೀದಿಗಿಳಿದು ಮಾಡಿದ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಆ ವಿದ್ಯಾರ್ಥಿಗಳ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಂತಿದ್ದಾರೆ. ಆದರೆ, ಅವರದೇ ಪಕ್ಷದ ಆಡಳಿತವಿರುವ ರಾಜ್ಯದಲ್ಲಿ, ಕೆಪಿಎಸ್‌ಸಿ ಕಳಂಕ ಮೆತ್ತಿಕೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾರಕಕ್ಕೇರಿದೆ. ಉದ್ಯೋಗಾಕಾಂಕ್ಷಿಗಳು ಕೆಪಿಎಸ್‌ಸಿ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇದು ಕೂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇದೆಲ್ಲದಕ್ಕೂ ಉತ್ತರ ನೀಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿದ್ಧರಾಗಿದ್ದಾರೆಯೇ, ಅವರ ಸಹಾಯಕ್ಕೆ ಸಚಿವ ಸಂಪುಟ ನಿಲ್ಲಲಿದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಏಕೆಂದರೆ ಈಗ ಸಚಿವರಾಗಿರುವವರ ಪೈಕಿ ಶೇ. 75ರಷ್ಟು ಹೊಸಬರು. ಸಂಸದೀಯ ವ್ಯವಹಾರಗಳ ಬಗ್ಗೆ ಅರಿವಿಲ್ಲದವರು. ಅನನುಭವಿಗಳು. ಅದಕ್ಕಿಂತ ಕಾಂಗ್ರೆಸ್ಸಿನ ಹೆಚ್ಚಿನಪಾಲು ಸಚಿವರು ಜಡತ್ವಕ್ಕೆ ಅಂಟಿಕೊಂಡವರು. ಸುಲಭದ ಗೆಲುವಿಗೆ, ಸುಗಮ ಹಾದಿಗೆ ಹಾತೊರೆಯುವವರು. ಸಮಸ್ಯೆ ಎದುರಾದಾಗ, ಶಿವಕುಮಾರ್ ಅವರನ್ನು ಮುಂದೆ ಬಿಟ್ಟು ಹಿಂದೆ ನಿಲ್ಲುವವರು. ಶಿವಕುಮಾರ್ ಕೂಡ, ‘ಅಧಿವೇಶನದಲ್ಲಿ ಚರ್ಚೆ ಮಾಡಲಿ, ಉತ್ತರಿಸುತ್ತೇನೆ’ ಎಂದಿದ್ದಾರೆ. ಅವರ ಈ ಹೇಳಿಕೆ ಉಡಾಫೆಯಂತೆ ಕಾಣುತ್ತಿದೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ.
ಈ ನಿಟ್ಟಿನಲ್ಲಿ ಮಳೆಗಾಲದ ಅಧಿವೇಶನ ಎನ್ನುವುದು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಸುರೇಶ್ ಬಾಬು ಅವರಿಗೆ, ನಾಡಿನ ಜನರ ಪರವಾಗಿ ಸದನದಲ್ಲಿ ಧ್ವನಿ ಎತ್ತಲು ಅಪೂರ್ವ ಅವಕಾಶ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ- ವಿರೋಧ ಪಕ್ಷಗಳು ‘ಹೊಂದಾಣಿಕೆ ರಾಜಕಾರಣ’ ಎಂಬ ಕಳಂಕದಿಂದ ಮುಕ್ತವಾಗಬಹುದು. ಅಲ್ಲದೆ, ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಎಡವಿದಾಗ, ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾದಾಗ ಎಚ್ಚರಿಸುವ ಕೆಲಸ ಮಾಡಬೇಕೇ ಹೊರತು ಘೋಷಣೆ, ಗದ್ದಲ, ಸಭಾತ್ಯಾಗವಲ್ಲ. ಆ ನಡವಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ. ಇದನ್ನು ಅರಿತು ಪ್ರಾಮಾಣಿಕವಾಗಿ ವರ್ತಿಸಿದರೆ, ಜನರ ವಿಶ್ವಾಸ ಗಳಿಸಬಹುದು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಂಸತ್ತಿಗೆ ಬರದೆ, ಉತ್ತರಿಸದೆ ಗೃಹ ಸಚಿವ ಅಮಿತ್ ಶಾ ಅಡಗಿಕೊಂಡಿರುವುದೇಕೆ?
ಆಡಳಿತ ಮತ್ತು ವಿಪಕ್ಷ- ಯಾರೇ ಆದರೂ, ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದಕ್ಕೆ, ಹೇಳಿಕೆಗಳನ್ನು ದಾಖಲಿಸುವುದಕ್ಕೆ, ನಿಲುವುಗಳನ್ನು ವ್ಯಕ್ತಪಡಿಸುವುದಕ್ಕೆ, ನೀತಿಗಳ ಪರಿಶೀಲನೆಗೆ, ನಿರ್ದಿಷ್ಟ ವಿಚಾರಗಳ ಟೀಕೆಗೆ ಇರುವ ವೇದಿಕೆ ಸದನ ಎಂಬುದನ್ನು ಮೊದಲು ಅರಿಯಬೇಕಿದೆ. ಯಾವುದೇ ವಿಷಯದ ಬಗ್ಗೆ, ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆ ನಡೆಸಿದರೆ ಪರಿಹಾರದ ದಾರಿ ಸಿಕ್ಕೇ ಸಿಗುತ್ತದೆ. ಆಡಳಿತ ಪಕ್ಷ ಹಠಮಾರಿ ಧೋರಣೆ ತಳೆಯದೆ, ಪ್ರತಿಪಕ್ಷಗಳ ಮಾತನ್ನು ಸಂಯಮದಿಂದ ಆಲಿಸಬೇಕು ಮತ್ತು ಟೀಕೆ, ನ್ಯೂನತೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಸುಧಾರಣೆಗಳನ್ನು ಕಂಡುಕೊಳ್ಳಬೇಕು.
ದುರದೃಷ್ಟವಶಾತ್, ಇಲ್ಲಿಯವರೆಗೆ ನಡೆದ ಅಧಿವೇಶನಗಳೆಲ್ಲವೂ ಆಡಳಿತ ಪಕ್ಷ ಮತ್ತು ವಿಪಕ್ಷಗಳ ‘ಹೊಂದಾಣಿಕೆ ರಾಜಕಾರಣ’ಕ್ಕೆ ಬಲಿಯಾಗಿ ಇತಿಹಾಸ ಬರೆದಿವೆ. ಈ ಬಾರಿಯಾದರೂ ಅಧಿವೇಶನ ಜನರ ನೈಜ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಲಿ. ಕನ್ನಡಿಗರ ತೆರಿಗೆ ಹಣ ಪೋಲಾಗದಂತೆ, ಅಧಿವೇಶನವನ್ನು ಹೆಚ್ಚು ಫಲಪ್ರದಗೊಳಿಸಲಿ. ಅದು ಜನಪ್ರತಿನಿಧಿಗಳ ಜವಾಬ್ದಾರಿಯಾಗಲಿ.




