ಪರಿಶಿಷ್ಟ ಜಾತಿಗೆ ಸೇರಿದವರು ಹಿಂದೂಧರ್ಮ, ಬೌದ್ಧ ಧರ್ಮ ಹಾಗೂ ಸಿಖ್ ಧರ್ಮದ ವಿನಾ ಬೇರೆ ಯಾವ ಧರ್ಮಕ್ಕೆ ಮತಾಂತರಗೊಂಡರೆ ತಕ್ಷಣದಿಂದಲೇ ಅವರು, ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಶಾಸನಾತ್ಮಕ ಸೌಲಭ್ಯಗಳು ಮತ್ತು ರಕ್ಷಣೆಗಳನ್ನು ಕಳೆದುಕೊಳ್ಳುವರು ಎಂಬುದಾಗಿ ಸುಪ್ರೀಮ್ ಕೋರ್ಟ್ ತೀರ್ಪು ನೀಡಿದೆ. ಭಾರತೀಯ ಸಮಾಜದ ಮೇಲೆ ಜಾತಿಭೇದದ ಉಕ್ಕಿನ ಹಿಡಿತದ ಕಠೋರ ವಾಸ್ತವವನ್ನು ಈ ತೀರ್ಪು ಅವಗಣಿಸಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಅನುಗಾಲದಿಂದ ತಳೆದಿರುವ ನಿಲುವಿಗೆ ಈ ತೀರ್ಪು ಪುಷ್ಟಿ ನೀಡಿರುವುದು ನಿಚ್ಚಳ.
ಕ್ರೈಸ್ತ ಮತವನ್ನು ಸ್ವೀಕರಿಸಿದ್ದ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬ ತನ್ನ ಮೇಲೆ ನಡೆದ ಜಾತಿವಾದಿ ದಾಳಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಅಡಿಯಲ್ಲಿ ರಕ್ಷಣೆ ಬಯಸಿದ್ದ ಅರ್ಜಿಯನ್ನು ಆಂಧ್ರಪ್ರದೇಶದ ಹೈಕೋರ್ಟು ಇತ್ತೀಚೆಗೆ ವಜಾ ಮಾಡಿತ್ತು. ಇದೀಗ ಸುಪ್ರೀಮ್ ಕೋರ್ಟು ಕೂಡ ಹೈಕೋರ್ಟಿನ ತೀರ್ಪನ್ನು ಎತ್ತಿ ಹಿಡಿದಿದೆ. ತಾನು ಮಾದಿಗ ಜಾತಿಗೆ ಸೇರಿದವನೆಂದು ಸರ್ಕಾರವೇ ನೀಡಿರುವ ಪ್ರಮಾಣ ಪತ್ರ ತನ್ನ ಬಳಿ ಇರುವುದಾಗಿ ಮೇಲ್ಮನವಿದಾರನ ನಿವೇದನೆಯನ್ನು ನ್ಯಾಯಾಲಯ ಲಕ್ಷಿಸಿಲ್ಲ. ಮೇಲ್ಮನವಿದಾರನು ಕ್ರೈಸ್ತ ಧರ್ಮವನ್ನು ಆಚರಿಸುತ್ತಿರುವ ವ್ಯಕ್ತಿ. ಹೀಗಿರುವಾಗ ಪ್ರಮಾಣಪತ್ರ ಲೆಕ್ಕಕ್ಕೆ ಬರುವುದಿಲ್ಲ. ಮೇಲ್ಮನವಿದಾರ ಹಿಂದೂ ಧರ್ಮಕ್ಕೆ ಮರಳಿದ್ದಾರೆನ್ನಲು ಯಾವ ಸಾಕ್ಷ್ಯವೂ ಇಲ್ಲ ಎಂದಿದೆ.
ಈ ತೀರ್ಪು 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶ ಆಧರಿಸಿದೆ. ಹಿಂದೂ ಧರ್ಮವನ್ನು ಬಿಟ್ಟು ಇತರೆ ಯಾವುದೇ ಧರ್ಮವನ್ನು ಅನುಸರಿಸುವವರನ್ನು ಪರಿಶಿಷ್ಟ ಜಾತಿಯ ಸದಸ್ಯರೆಂದು ಕರೆಯಲು ಬರುವುದಿಲ್ಲ ಎಂದು ಈ ಆದೇಶ ಹೇಳಿತ್ತು. ತರುವಾಯ 1956ರಲ್ಲಿ ಹಿಂದೂಧರ್ಮದ ಜೊತೆಗೆ ಸಿಖ್ ಧರ್ಮವನ್ನು ಸೇರಿಸಲಾಯಿತು. 1990ರಲ್ಲಿ ಬೌದ್ಧ ಧರ್ಮ ಕೂಡ ಈ ಆದೇಶದ ವ್ಯಾಪ್ತಿಗೆ ಸೇರಿತು. ಖುದ್ದು ಬಿ.ಆರ್.ಅಂಬೇಡ್ಕರ್ ಅವರೇ 1956ರಲ್ಲಿ ಬುದ್ಧಧರ್ಮಕ್ಕೆ ಲಕ್ಷಾಂತರ ಅಸ್ಪೃಶ್ಯರ ಸಾಮೂಹಿಕ ಮತಾಂತರದ ನೇತೃತ್ವ ವಹಿಸಿದ್ದರು. ಆದರೆ 1956ರಲ್ಲಿ ಸಿಖ್ ಧರ್ಮಕ್ಕೆ ಮತಾಂತರ ಹೊಂದಿದ ಅಸ್ಪೃಶ್ಯರಿಗೆ ಮಾತ್ರವೇ ಮೀಸಲಾತಿ ಮತ್ತು ಸಂರಕ್ಷಣೆಯ ಸೌಲಭ್ಯಗಳನ್ನು ವಿಸ್ತರಿಸಲಾಯಿತು. ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ ಅಸ್ಪೃಶ್ಯರು 1990ರ ತನಕ ಕಾಯಬೇಕಾಯಿತು. ಈ ವಿಪರೀತ ವಿಳಂಬ ಅಸ್ಪೃಶ್ಯರು ಹಿಂದೂ ಧರ್ಮದ ಅಮಾನುಷ ಹಿಡಿತದಿಂದ ಬಿಡಿಸಿಕೊಂಡು ಬೌದ್ಧ ಧರ್ಮ ಸ್ವೀಕರಿಸುವ ವೇಗವನ್ನು ಕತ್ತರಿಸಿ ಹಾಕಿತೆಂಬುದು ಬೇರೆಯದೇ ಚರ್ಚೆಯ ವಸ್ತು. ಆದರೆ 1950ರ ಆದೇಶಕ್ಕೆ ಆರೇ ವರ್ಷಗಳ ನಂತರ ಸಿಖ್ ಧರ್ಮ ಸೇರಿತು ಮತ್ತು 40 ವರ್ಷಗಳ ತರುವಾಯ ಬೌದ್ಧದ ಸೇರ್ಪಡೆಯಾಯಿತು. ಅರ್ಥಾತ್ ಈ ಆದೇಶಕ್ಕೆ ತಿದ್ದುಪಡಿಗಳಾಗುತ್ತ ಬಂದಿವೆ ಎಂಬುದು ಗಮನಾರ್ಹ ಸಂಗತಿ.
ಜಾತಿಗ್ರಸ್ತ ವ್ಯಾಧಿ ಆಳಕ್ಕೆ ಬೇರಿಳಿಸಿರುವ ಭಾರತದಲ್ಲಿ ಮೇಲು ಕೀಳಿನ ಜಾತಿ ಭೇದದ ವಾಸ್ತವ ಮತಾಂತರ ಹೊಂದಿದಾಕ್ಷಣ ಮಾಯವಾಗಿಬಿಡುವುದಿಲ್ಲ. ಈ ಮಾತಿಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಕೊಲೆ, ಅತ್ಯಾಚಾರ, ದೌರ್ಜನ್ಯ, ಬಹಿಷ್ಕಾರ ಮುಂತಾದ ಲಕ್ಷಾಂತರ ಉದಾಹರಣೆಗಳು ದೊರೆಯುತ್ತವೆ. ಮತಾಂತರ ಹೊಂದಿದ ಪರಿಶಿಷ್ಟರನ್ನು ಹೊಸ ಧರ್ಮ ಅಥವಾ ಅವರ ಹಳೆಯ ಧರ್ಮಗಳು ಸಮಾನರೆಂದು ಆಲಿಂಗಿಸಿ ತಬ್ಬಿ ಹಿಡಿದು ಹತ್ತಿರ ಕರೆದುಕೊಳ್ಳುವುದಿಲ್ಲ. ಅವರೊಂದಿಗೆ ವಿವಾಹ ಸಂಬಂಧಗಳನ್ನು ಬೆಳೆಸುವುದಿಲ್ಲ, ಇಲ್ಲವೇ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಒಟ್ಟಿಗೆ ಊಟ ಮಾಡುವುದಿಲ್ಲ. ಕ್ರೈಸ್ತ ಅಥವಾ ಮುಸ್ಲಿಮ್ ಧರ್ಮಕ್ಕೆ ಮತಾಂತರ ಹೊಂದಿದವರೂ ತಾರತಮ್ಯದಿಂದ ಮುಕ್ತರಾಗಿಲ್ಲ. ಸಿಖ್-ಬೌದ್ಧವೂ ಸೇರಿದಂತೆ ಕ್ರೈಸ್ತ-ಮುಸ್ಲಿಮ್ ಧರ್ಮಗಳಿಗೆ ಮತಾಂತರ ಹೊಂದಿದವರು ಅಸ್ಪೃಶ್ಯತೆಯ ಭೇದಭಾವವನ್ನು ಎದುರಿಸಿಲ್ಲ ಎಂಬ ನಿರ್ಣಾಯಕ ಉದಾಹರಣೆಗಳನ್ನು, ಮತಾಂತರಿಗಳಿಗೆ ಮೀಸಲಾತಿ-ಸಂರಕ್ಷಣೆ ಸೌಲಭ್ಯ ಕೂಡದು ಎಂದು ವಾದಿಸುವವರು ನೀಡಲು ಸಿದ್ಧರಿದ್ದಾರೆಯೇ? ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳು ಸೈದ್ಧಾಂತಿಕವಾಗಿ ಜಾತಿ ಪದ್ಧತಿಯನ್ನು ಒಪ್ಪಿಲ್ಲ ಎಂಬ ಕಾರಣವನ್ನೇ ನೀಡುವುದಾದರೆ, ಸಿಖ್ ಧರ್ಮ ಮತ್ತು ಬೌದ್ಧ ಕೂಡ ಸೈದ್ಧಾಂತಿಕವಾಗಿ ಜಾತಿ ಪದ್ಧತಿಯನ್ನು ಒಪ್ಪಿಲ್ಲ.
ಅಸಮಾನ ಸಮಾಜದಲ್ಲಿ ಮತಾಂತರವು ಸಮಾನತೆಯನ್ನು ಗಳಿಸಿಕೊಡುವುದಿಲ್ಲ. ಕಾಕಾ ಕಾಲೇಲ್ಕರ್ ಅಧ್ಯಕ್ಷತೆಯ ಮೊದಲ ಹಿಂದುಳಿದ ವರ್ಗಗಳ ಆಯೋಗವು ಕ್ರೈಸ್ತ ಮತ್ತು ಮುಸ್ಲಿಮರಲ್ಲಿಯೂ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ನೆಲೆಸಿರುವುದನ್ನು ಎಂದು ಹೇಳಿದೆ. ಮಂಡಲ್ ಆಯೋಗವೂ ಈ ಮಾತನ್ನು ಪುನರುಚ್ಚರಿಸಿದೆ.
ನ್ಯಾಯಾಲಯದ ತೀರ್ಪು 1950ರ ಆದೇಶದಲ್ಲಿನ ನಿರ್ಬಂಧಗಳನ್ನು ಆಧರಿಸಿದೆ. ಹಿಂದೂ, ಬೌದ್ಧ, ಸಿಖ್ ಧರ್ಮದ ವಿನಾ ಬೇರೆ ಯಾವುದೇ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಪರಿಶಿಷ್ಟ ಜಾತಿಯ ಶಾಸನಾತ್ಮಕ ಸೌಲಭ್ಯಗಳು ಮತ್ತು ಸಂರಕ್ಷಣೆಗಳು ದೊರೆಯುವುದಿಲ್ಲ ಎಂಬ ನಿರ್ಬಂಧಗಳಿವು. ಆದರೆ 1950ರ ಈ ಆದೇಶವನ್ನು ಪ್ರಶ್ನಿಸಿದ್ದು, ಕ್ರೈಸ್ತ ಮತ್ತು ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡ ಅಸ್ಪೃಶ್ಯರಿಗೂ ಈ ಸೌಲತ್ತು ವಿಸ್ತರಿಸಬೇಕೆಂದು 2004ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇನ್ನೂ ಸುಪ್ರೀಮ್ ಕೋರ್ಟಿನಲ್ಲಿ ಮುಂದುವರೆದಿದೆ.
ಹಾಲಿ ತೀರ್ಪಿನಲ್ಲಿ ಹಿಂದೂ ಧರ್ಮಕ್ಕೆ ಮರು ಮತಾಂತರ ಹೊಂದುವ ಕುರಿತ ಪ್ರಸ್ತಾಪವಿದೆ. ಕ್ರೈಸ್ತ-ಇಸ್ಲಾಮ್ ಗೆ ಮತಾಂತರ ಹೊಂದಿದವರು ಒಂದು ವೇಳೆ ಹಿಂದೂ-ಸಿಖ್-ಬೌದ್ಧಕ್ಕೆ ಮರುಮತಾಂತರ ಹೊಂದುವುದೇ ಆದಲ್ಲಿ ಅದಕ್ಕೆ ಮೂರು ಷರತ್ತುಗಳನ್ನು ಹಾಲಿ ತೀರ್ಪು ವಿಧಿಸಿದೆ. ಒಂದನೆಯದಾಗಿ ಸಂಬಂಧಿತ ವ್ಯಕ್ತಿಯು ತನ್ನ ಮೂಲ ಪರಿಶಿಷ್ಟ ಜಾತಿಯೆಂದು ರುಜುವಾತು ಮಾಡಬೇಕು. ಮರುಮತಾಂತರ ಹೊಂದಿದ ವಿಶ್ವಾಸಾರ್ಹ ಮತ್ತು ಪ್ರಶ್ನಾತೀತ ಪ್ರಮಾಣ ಇರಬೇಕು. ಮೂಲ ಜಾತಿಯ ಸದಸ್ಯರು ಈ ಮರುಮತಾಂತರವನ್ನು ಒಪ್ಪಿ ಆತನನ್ನು ಸಮುದಾಯದೊಳಕ್ಕೆ ಸ್ವೀಕರಿಸುವ ಪುರಾವೆಯನ್ನೂ ಪ್ರಸ್ತುತಪಡಿಸಬೇಕು. ತೊರೆಯುತ್ತಿರುವ ಧರ್ಮದೊಂದಿಗೆ ಎಲ್ಲ ಬಗೆಯ ಸಂಬಂಧಗಳನ್ನು ಕಡಿದುಕೊಳ್ಳಬೇಕು.
ಮತಾಂತರ ಹೊಂದಿದವರು ತಮ್ಮ ಮೀಸಲಾತಿ ಮತ್ತು ಸಂರಕ್ಷಣೆಯ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಈ ನಿಲುವು ಸಂವಿಧಾನ ನೀಡುವ ಹಕ್ಕುಗಳೊಂದಿಗೆ ಘರ್ಷಣೆಗೆ ಇಳಿಯುತ್ತದೆ. ಸಂವಿಧಾನದ 14- 18ನೆಯ ಅನುಚ್ಛೇದಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದು ಸಾರುತ್ತವೆ. ಅದೇ ರೀತಿ ಸಂವಿಧಾನದ 25-28ನೆಯ ಅನುಚ್ಛೇದಗಳು ಸಮಾನತೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಸಾರುತ್ತವೆ. ಕಾನೂನಿನ ಮುಂದೆ ಸಮಾನತೆಯನ್ನು ಸಾರಿ ಧರ್ಮದ ಆಧಾರದ ಮೇಲೆ ತಾರತಮ್ಯ ನಡೆಸುವುದನ್ನು ನಿಷೇಧಿಸುತ್ತವೆ. ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನೂ ನೀಡುತ್ತವೆ. ಹಿಂದೂ- ಬೌದ್ಧ-ಸಿಖ್ ಧರ್ಮಗಳ ವಿನಾ ಬೇರೆ ಯಾವುದೇ ಧರ್ಮಕ್ಕೆ ಮತಾಂತರ ಹೊಂದಿದರೆ ಪರಿಶಿಷ್ಟ ಜಾತಿಯ ಸೌಲತ್ತುಗಳು ಮತ್ತು ಸಂರಕ್ಷಣೆಗಳು ದೊರೆಯುವುದಿಲ್ಲ ಎಂಬ ಆದೇಶವು ಧಾರ್ಮಿಕ ಮತ್ತು ಸಮಾನತೆಯ ಮೂಲಭೂತ ಹಕ್ಕುಗಳೊಂದಿಗೆ ಘರ್ಷಣೆಗೆ ಇಳಿಯುತ್ತದೆ. ಹೀಗಾಗಿ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲೇ ಮತಾಂತರ ಹೊಂದಿದವರಿಗೆ ಮೀಸಲಾತಿ-ಸಂರಕ್ಷಣೆಯನ್ನು ನಿರಾಕರಿಸುವುದು ಸಂವಿಧಾನಬದ್ಧ ನಡೆ ಎನಿಸುವುದಿಲ್ಲ.
ಪರಿಶಿಷ್ಟ ಜಾತಿಗಳ 1950ರ ಆದೇಶದಂತೆ, 1950ರ (ಪರಿಶಿಷ್ಟ ಪಂಗಡಗಳ) ಆದೇಶ ಕೂಡ, ಧರ್ಮಾಧಾರಿತ ಅಲ್ಲ. ವ್ಯಕ್ತಿಯ ಪರಿಶಿಷ್ಟ ಪಂಗಡದ ಸ್ಥಾನಮಾನವು, ಗಿರಿಜನರ ಅಸ್ಮಿತೆ, ಅವರು ಅನುಸರಿಸಿಕೊಂಡು ಬಂದಿರುವ ಆಚರಣೆಗಳು ಪದ್ಧತಿಗಳನ್ನು ಅವಲಂಬಿಸಿರುತ್ತದೆಯೇ ವಿನಾ ಅವರ ಧರ್ಮವನ್ನು ಅಲ್ಲ.
ಆದರೆ ನ್ಯಾಯಾಲಯದ ಹಾಲಿ ತೀರ್ಪು ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತೂ ನಿರ್ಬಂಧ ವಿಧಿಸಿದೆ. ಗಿರಿಜನರು ಸಾರಸರ್ವಸ್ವದಲ್ಲಿ ತಮ್ಮ ಪಂಗಡದಲ್ಲೇ ಮುಂದುವರೆದಿದ್ದರೆ ಮಾತ್ರ ಮೀಸಲು ಮತ್ತು ಸಂರಕ್ಷಣೆ ಸೌಲಭ್ಯ ದೊರೆಯುತ್ತವೆ ಎಂದಿದೆ. ಪರಿಶಿಷ್ಟ ಜಾತಿಗಳ ಮೇಲಿನ ಮತಾಂತರ ನಿರ್ಬಂಧಗಳನ್ನು ಪರಿಶಿಷ್ಟ ಪಂಗಡಗಳಿಗೂ ವಿಸ್ತರಿಸಿದೆ.
ಇದೇ ತರ್ಕ ಇತರೆ ಹಿಂದುಳಿದ ಜಾತಿಗಳಿಗೂ ಅನ್ವಯಿಸುವುದೇ? ನ್ಯಾಯಮೂರ್ತಿ ರಂಗನಾಥ ಮಿಶ್ರ ಆಯೋಗ 2007ರಲ್ಲಿ ನೀಡಿದ ವರದಿಯು ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳಿಗೆ ಮತಾಂತರ ಹೊಂದಿದ ಪರಿಶಿಷ್ಟ ಜಾತಿಗಳಿಗೂ ಮೀಸಲಾತಿ ಸಿಗಬೇಕು ಎಂದು ಶಿಫಾರಸು ಮಾಡಿತ್ತು. ಈ ವರದಿಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ, 2022ರಲ್ಲಿ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗವನ್ನು ನೇಮಕ ಮಾಡಿತು. ಈ ಆಯೋಗಕ್ಕೆ ನೀಡಲಾಗಿರುವ ಗಡುವು ಇದೇ ಏಪ್ರಿಲ್‌ಗೆ ತೀರಲಿದೆ.
ಜಾತಿ ಮತ್ತು ವರ್ಣಗಳ ಆಧಾರದಲ್ಲಿ ತಾರತಮ್ಯ ಆಚರಣೆಯನ್ನು ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳು ಬೆಂಬಲಿಸಿಲ್ಲ ಎಂಬ ವಾದವನ್ನು ಮುಂದೆ ಮಾಡಲಾಗಿದೆ. ಆದರೆ ಈ ಎರಡೂ ಧರ್ಮಗಳಲ್ಲಿ ಜಾತಿ ಭೇದವಿರುವುದು ವಾಸ್ತವ. ತಾರತಮ್ಯ ಗುರುತಿಸಲು ಧರ್ಮದ ಗೆರೆಗಳನ್ನು ಎಳೆಯುವುದು ಸಲ್ಲದು.




