ಬೀದರ್‌ ಜಿಲ್ಲೆಯ ಅರ್ಧದಷ್ಟು RO ಪ್ಲಾಂಟ್‌ಗಳಲ್ಲಿ ನೀರೇ ಇಲ್ಲ; ಕೋಟ್ಯಂತರ ಅನುದಾನ ಹರಿದದ್ದು ಎಲ್ಲಿಗೆ?

Date:

ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ಮತ್ತು ಶುದ್ಧ ಕುಡಿಯುವ ನೀರು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಈಗ ಬೀದರ್ ಜಿಲ್ಲೆಯಲ್ಲಿ ಹಳ್ಳ ಹಿಡಿದಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಏಜೆನ್ಸಿಗಳ ಬೇಜವಾಬ್ದಾರಿಯಿಂದಾಗಿ ಜಿಲ್ಲೆಯ ಅರ್ಧದಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು (RO Plants) ಬಾಗಿಲು ಮುಚ್ಚಿವೆ. ಶುದ್ಧ ನೀರು ಕೊಡಬೇಕಿದ್ದ ಘಟಕಗಳೇ ಇಂದು ಧೂಳು ಹಿಡಿದು ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಜಿಲ್ಲೆಯ ಒಟ್ಟು 185 ಗ್ರಾಮ ಪಂಚಾಯತ್ ವ್ಯಾಪ್ತಿಯ 8 ತಾಲೂಕುಗಳಲ್ಲಿ ಪ್ರತಿಯೊಬ್ಬರಿಗೂ ಶುದ್ಧ ನೀರು ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಘಟಕಗಳನ್ನು ಸ್ಥಾಪಿಸಿತ್ತು. ಆದರೆ, ಇಂದು ಸೂಕ್ತ ನಿರ್ವಹಣೆ ಇಲ್ಲದೆ ಈ ಘಟಕಗಳು ಪಾಳುಬಿದ್ದ ಸ್ಥಿತಿಯಲ್ಲಿವೆ. ಜಿಲ್ಲೆಯ ಒಟ್ಟು 391 ಘಟಕಗಳ ಪೈಕಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸುಸ್ಥಿತಿಯಲ್ಲಿವೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಕಿ-ಅಂಶಗಳೇ ಹೇಳುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಇಲಾಖೆಯ ವರದಿಯ ಪ್ರಕಾರ, ಗ್ರಾಮ ಪಂಚಾಯತ್ ಸುಪರ್ದಿಯಲ್ಲಿರುವ 298 ಘಟಕಗಳಲ್ಲಿ ಕೇವಲ 102 ಘಟಕಗಳು ಮಾತ್ರ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿವೆ. ಉಳಿದ 196 ಘಟಕಗಳು ತಾಂತ್ರಿಕ ದೋಷ ಅಥವಾ ನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿವೆ. ಇನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೇರ ನಿರ್ವಹಣೆಯಲ್ಲಿರುವ 93 ಘಟಕಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಇವು ನೀರು ಕೊಡುವುದನ್ನು ನಿಲ್ಲಿಸಿ ವರ್ಷಗಳೇ ಕಳೆದರೂ, ದುರಸ್ತಿ ಮಾಡುವ ಗೋಜಿಗೆ ಯಾರೂ ಹೋಗಿಲ್ಲ.

WhatsApp Image 2026 03 30 at 12.48.01 PM
ಸುಂದಾಳ ಗ್ರಾ.ಪಂ. ವ್ಯಾಪ್ತಿಯ ನಂದ್ಯಾಳ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದೆ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL), ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕೋಪರೇಟಿವ್‌ ಸೇರಿದಂತೆ ವಿವಿಧ ಸಂಸ್ಥೆಗಳ ಧನಸಹಾಯದೊಂದಿಗೆ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಘಟಕಗಳನ್ನು ಅಳವಡಿಸಲಾಗಿದೆ. ಆದರೆ, ಅಳವಡಿಕೆಯಾದ ನಂತರ ಕೇವಲ ಪ್ರದರ್ಶನದ ವಸ್ತುಗಳಾಗಿವೆ.

ವಿಶೇಷವಾಗಿ ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಭಾಗದಲ್ಲಿ ಒಟ್ಟು 110 ಶುದ್ಧ ನೀರಿನ ಘಟಕಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 55 ಘಟಕಗಳು ನೇರವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ವಹಣೆಯಲ್ಲಿವೆ. ಒಟ್ಟಾರೆ 110 ಘಟಕಗಳ ಪೈಕಿ ಕೇವಲ 58 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 52 ಘಟಕಗಳು ರಿಪೇರಿ ಹಂತದಲ್ಲಿದ್ದು, ಅವುಗಳನ್ನು ದುರಸ್ತಿಗೆ ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಪಾಳು ಬಿದ್ದ ಘಟಕ ದಾಖಲೆಯಲ್ಲಿ ʼವರ್ಕಿಂಗ್‌ʼ‌ ಸ್ಟೇಟಸ್:

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀಡಿದ ಮಾಹಿತಿ ಪಡೆದು ಈದಿನ.ಕಾಮ್‌ ತಂಡವು ಶುದ್ಧ ನೀರಿನ ಘಟಕಗಳ ರಿಯಾಲಿಟಿ ಚೆಕ್ ಅಭಿಯಾನ ನಡೆಸಿತು. ಇಲಾಖೆ ನೀಡಿದ ಮಾಹಿತಿ ಪ್ರಕಾರ ಹಲವು ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳು ಕೆಲಸ ನಿಲ್ಲಿಸಿದ್ದರೂ ದಾಖಲೆಯಲ್ಲಿ ʼವರ್ಕಿಂಗ್‌ʼ ಎಂದು ನಮೂದಿಸಲಾಗಿದೆ. ಇನ್ನು ಶುದ್ಧ ನೀರಿನ ಘಟಕ ನಿರ್ವಹಣೆಗೆ ಅನುದಾನ ಬಂದರೂ, ಅದು ಖಾಲಿಯಾಗುತ್ತಿದ್ದರೂ ಘಟಕಗಳು ಮಾತ್ರ ತುಕ್ಕು ಹಿಡಿಯುತ್ತಿವೆ.

ಔರಾದ್‌ ತಾಲೂಕಿನ ಬೆಳಕುಣಿ(ಚೌ) ಸೇರಿ ಇತರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಅಳವಡಿಸಲಾದ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆಯ ದಾಖಲೆಯಲ್ಲಿದೆ. ಆದರೆ, ಖುದ್ದಾಗಿ ಭೇಟಿ ನೀಡಿದಾಗ ಅಲ್ಲಿನ ಘಟಕಗಳು ನಿರ್ವಹಣೆಯಿಲ್ಲದೆ ಸೊರಗಿರುವುದು ತಿಳಿದು ಬಂದಿದೆ.

ಪಾಳು ಬಿದ್ದ ನೀರಿನ ಘಟಕಗಳು :

ಗ್ರಾಮೀಣ ಜನರು ಬಳಸುವ ಬೋರ್‌ವೆಲ್, ತೆರೆದ ಬಾವಿ ನೀರು ಕಲುಷಿತವಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರವಾಗಿ ಅಳವಡಿಸಲಾದ ಶುದ್ಧ ನೀರಿನ ಘಟಕಗಳಿಂದಲೂ ಶುದ್ಧ ನೀರು ಸಿಗುವುದು ಮರೀಚಿಕೆಯಾಗಿದೆ. ಪ್ರತಿಯೊಂದು ಘಟಕ ಅಳವಡಿಸಲು ಅಂದಾಜು ₹12 ಲಕ್ಷ, ಅದಕ್ಕಿಂತ ಹೆಚ್ಚು ಅನುದಾನ ವೆಚ್ಚ ಮಾಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ತಾಂತ್ರಿಕ ದೋಷ, ಸೂಕ್ತ ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿವೆ. ಕೆಲಕಡೆ ಶುದ್ಧ ನೀರಿನ ಘಟಕ ನಿರ್ಮಿಸಿದಾಗಿನಿಂದ ಬಾಗಿಲು ತೆರೆಯದೆ ಸುತ್ತಲೂ ಗಿಡಗಂಟಿ ಬೆಳೆದು ನಿಂತಿದೆ.

ಔರಾದ್‌ ತಾಲೂಕಿನ ಬೋರ್ಗಿ (ಜೆ), ಜೋಜನಾ ಹಾಗೂ ಕಮಲನಗರ ತಾಲೂಕಿನ ಚಾಂದೋರಿ, ಬಸನಾಳ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿಗಳ ಸೂಕ್ತ ನಿರ್ವಹಣೆಯಿಂದ ಅಲ್ಲಿನ ಗ್ರಾಮಸ್ಥರಿಗೆ ರಿಯಾಯಿತಿ ದರದಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿದೆ. ಇದರಿಂದ ಗ್ರಾಮ ಪಂಚಾಯತ್‌ಗೆ ಆದಾಯ ಮೂಲ ವೃದ್ಧಿಸುತ್ತಿದೆ.

WhatsApp Image 2026 03 30 at 12.48.03 PM
ಔರಾದ್‌ ತಾಲೂಕಿನ ಫುಲಾ ಸಿಂಗ್‌ ತಾಂಡಾದಲ್ಲಿ ಹಾಳಾದ ನೀರಿನ ಘಟಕ

ಪ್ರತಿ ವರ್ಷ ಜಿಲ್ಲೆಯ ಜನ ಬೇಸಿಗೆಯ ಬಿಸಿಲಿನ ಪ್ರಖರತೆಗೆ ತತ್ತರಿಸುತ್ತಾರೆ. ನೀರಿಗಾಗಿ ಹಗಲಿರುಳು ಅಲೆದಾಡುವುದು, ನೀರಿಗಾಗಿ ಒಂದೆರಡು ಕಿ.ಮೀ. ಪಕ್ಕದೂರಿಗೆ ನಡೆದು ಹೋಗುವ ದುಸ್ಥಿತಿ ಇದ್ದೇ ಇರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳೇ ಕಾಣದ ಹಲವು ಗ್ರಾಮಸ್ಥರು ದೂರದ ಊರಿಗೆ ತೆರಳಿ ಹಣ ಕೊಟ್ಟು ಖಾಸಗಿಯವರ ಬಳಿ ಶುದ್ಧ ನೀರು ಪಡೆಯುವುದು ಇನ್ನೂ ತಪ್ಪಿಲ್ಲ.

ದುರಸ್ತಿಗಾಗಿ ₹2.27 ಕೋಟಿ ಬಿಡುಗಡೆ

“ಬೀದರ್‌ ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ಸುಪರ್ದಿಯಲ್ಲಿರುವ 298 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕಳೆದ ಮೂರು ವರ್ಷಗಳಲ್ಲಿ ಘಟಕಗಳ ನಿರ್ವಹಣೆಗಾಗಿ ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಿಗೆ ಪ್ರತಿ ಘಟಕಕ್ಕೆ ತಿಂಗಳಿಗೆ ₹3 ಸಾವಿರ ಅನುದಾನ ನಿಗದಿಪಡಿಸಿದೆ. 2023, 2024 ಹಾಗೂ 2025ರ 2 ವರ್ಷ ಅವಧಿಯಲ್ಲಿ ಘಟಕಗಳಿಗಾಗಿ ₹2.27 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನಃ ಆರಂಭಿಸಲು External Aided Project (EAP) ನಡಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಆದ್ಯತೆ ಮೇರೆಗೆ ದುರಸ್ತಿಗೊಳಿಸಿ ಚಾಲನೆ ನೀಡಲು SDP-Non SDP ಅಡಿ ಒಟ್ಟು ₹34 ಲಕ್ಷ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಔರಾದ್‌ ತಾಲೂಕಿನ ಸುಂದಾಳ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ನಂದ್ಯಾಳ ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಈ ಬಾರಿಯೂ ಗ್ರಾಮದಲ್ಲಿರುವ ಒಂದು ಬೋರ್‌ವೆಲ್ ಕೆಟ್ಟು ಹೋದ ಹಿನ್ನೆಲೆ ಖಾಸಗಿಯವರಿಂದ ತಿಂಗಳಿಗೆ ₹10 ಸಾವಿರ ಹಣ ಕೊಟ್ಟು ನೀರು ಖರೀದಿಸಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.

ನನ್ನ ಸುತ್ತಾಟದ ವೇಳೆ ಗ್ರಾಮದಲ್ಲಿ ಬೋರ್‌ವೆಲ್ ಕಂಡಿತು, ಅಲ್ಲಿನ ಮಹಿಳೆಯರು ನೀರು ತುಂಬಿಸಿಕೊಳ್ಳುತ್ತಿದ್ದರು.

“ಯಾಕೆ ನೀರಿನ ಸಮಸ್ಯೆ ಇದೇನಾ?” ಎಂದು ಕೇಳ್ದೆ.

“ಅದೇನ್‌ ಕೇಳ್ತೀರಿ ಸರ್‌, ಹರ್‌ ವರ್ಷ ಬ್ಯಾಸಕಿದಾಗ ನೀರಿನ ಬರ ಇದ್ದೇ ಇರ್ತುದ್”‌ ಎಂದು ಮಹಿಳೆಯರು ಒಂದೇ ಉಸಿರಿನಲ್ಲಿ ಉತ್ತರಿಸಿದರು.

“ಬೇರೆ ಕೊಳವೆಬಾವಿ ಕೆಟ್ಟಿದೆ ಅಂತೆ, ಮತ್ತೆ ಎಲ್ಲರೂ ಈ ನೀರು ಕುಡಿಯಲು ಬಳಸಬಹುದು ಅಲ್ವಾ?” ಎಂದು ಮರುಪ್ರಶ್ನಿಸಿದೆ.

WhatsApp Image 2026 03 30 at 12.48.05 PM
ಫುಲಾಸಿಂಗ್‌ ತಾಂಡಾ ಯುವಕರು ಪಕ್ಕದ ನಾಮನಾಯ್ಕ ತಾಂಡಾದಿಂದ ಬೈಕ್‌ ಮೇಲೆ ನೀರು ತರುತ್ತಿರುವುದು

“ಈ ನೀರು ಕುಡಿದರೆ ಹೊಟ್ಟೆ ನೋವು ಬರುತ್ತದೆ ಎಂದು ಭಾಳ್‌ ಜನ ಬಳಸುವುದಿಲ್ಲ ಸರ್” ಎಂದು‌ ಬಟ್ಟೆ ತೊಳೆಯುತ್ತಿದ್ದ ಅಶ್ವಿನಿ ಅವರು ಹೇಳಿದರು.

ನಾನು “ನಿಮ್ಮೂರಿನಲ್ಲಿ ಶುದ್ಧ ನೀರಿನ ಘಟಕ ಇಲ್ವಾ?” ಎಂದು ಕೇಳಿದೆ.

“ಏನಿಲ್ಲ ಸರ್‌, ಹಣ ಇದ್ದವರು ಪಕ್ಕದ ಊರಿಗೆ ಹೋಗಿ ಖಾಸಗಿ ಅವರಿಂದ ಹಣ ಕೊಟ್ಟು ತರುತ್ತಾರೆ. ನಾವೆಲ್ಲರೂ ಇದೇ ನೀರು ಬಳಸುತ್ತೇವೆ” ಎಂದು ಉತ್ತರಿಸಿದರು.

ನಂದ್ಯಾಳದಲ್ಲಿ ಖಾಸಗಿಯವರ ಬಾಡಿಗೆ ಪಡೆದ ಕೊಳವೆ ಬಾವಿಯ ನೀರು ಓಣಿಯಲ್ಲಿ ಹಿಂದೆ ಸ್ಥಾಪಿಸಲಾದ ಟ್ಯಾಂಕರ್‌ಗೆ ಬಿಡಲಾಗುತ್ತಿದೆ, ಅಲ್ಲಿಂದ ಪೈಪ್‌ಲೈನ್ ಮುಖಾಂತರ ಮನೆಗಳಿಗೆ ಬರುತ್ತದೆ. ಆದರೆ, ಟ್ಯಾಂಕರ್‌ಗಳು ಸ್ವಚ್ಛತೆ ಇಲ್ಲದಿರುವುದಕ್ಕೆ ಆ ನೀರು ಯಾರು ಕುಡಿಯಲು ಬಳಸುವುದಿಲ್ಲ. ಕುಡಿಯುವ ನೀರಿಗಾಗಿ ಬೇರೆಡೆ ಹೋಗಲೇಬೇಕು ಎಂಬುದು ಅಲ್ಲಿನ ಜನರ ಅಸಹಾಯಕತೆ ಮಾತು.

ಕುಡಿಯುವುದಕ್ಕೆ ಯೋಗ್ಯವಲ್ಲದ ಕೊಳವೆಬಾವಿ, ತೆರೆದ ಬಾವಿಗಳನ್ನು ಗುರುತಿಸಿ ಪತ್ತೆ ಹಚ್ಚುವ ಕೆಲಸ ಆಗಬೇಕು. ಜನರಿಗೆ ಶುದ್ಧ ನೀರು ಒದಗಿಸುವುದು ಪಂಚಾಯತ್‌ ವ್ಯವಸ್ಥೆಯ ಕರ್ತವ್ಯ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿದರೆ ಮಾತ್ರ ಜನರಿಗೆ ʼಪರಿಶುದ್ಧ ನೀರುʼ ಸಿಗಬಹುದು.

‌ನನ್ನ ಮುಂದಿನ ಸುತ್ತಾಟ ಔರಾದ್‌ ತಾಲೂಕಿನ ಬೆಳಕುಣಿ (ಚೌ) ಗ್ರಾಮ ಪಂಚಾಯತ್‌ ವ್ಯಾಪ್ತಿಯ ಫುಲಾ ಸಿಂಗ್ ತಾಂಡಾ ಕಡೆ ಹೊರಟಿತು. ಅಲ್ಲಿನ ನಿವಾಸಿಗಳ ನೀರಿನ ಬವಣೆ ಕತೆ ಸ್ವಲ್ಪ ವಿಭಿನ್ನವಾಗಿ ಕಂಡಿತು.

150ಕ್ಕೂ ಅಧಿಕ ಮನೆಗಳಿರುವ ಈ ತಾಂಡಾದಲ್ಲಿ ಬೇಸಿಗೆಯಲ್ಲಿ ಅಂತರ್ಜಲ ಕುಸಿತದಿಂದ ಇರುವ ಬೋರ್‌ವೆಲ್ ಬತ್ತಿ ಹೋಗುತ್ತವೆ. ನೀರಿನ ಅಭಾವ ಉಂಟಾಗಿ ಜನರು 1 ಕಿ.ಮೀ. ದೂರ ಇರುವ ಡೋಣಗಾಂವ (ಎಂ), ನೆರೆಯ ತಾಂಡಾವೊಂದಕ್ಕೆ ತೆರಳಿ ನೀರು ತರುವುದು ಸಹಜವಾಗಿದೆ.

ಈ ತಾಂಡಾದಲ್ಲಿ ಮನೆ-ಮನೆಗೆ ಶುದ್ಧ ನೀರು ಒದಗಿಸುವ ಜಲ ಜೀವನ್‌ ಮಿಷನ್‌ (ಜೆಜೆಎಂ) ಅಪೂರ್ಣವಾಗಿದ್ದು, ಪೈಪ್‌ಲೈನ್, ಟ್ಯಾಂಕರ್‌ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರ ಅರ್ಧಕ್ಕೆ ಕೈಬಿಟ್ಟು ಹೋಗಿದ್ದಾರೆ. ಕುಡಿಯುವ ನೀರಿಗಾಗಿ ಕೆಲವರು ದ್ವಿಚಕ್ರ ವಾಹನ ಮೇಲೆ ಹೊರಟಿದರೆ, ಉಳಿದವರಿಗೆ ಕಾಲ್ನಿಡಿಗೆ ಅನಿವಾರ್ಯ. ಈ ತಾಂಡಾದಲ್ಲಿ 2 ವರ್ಷಗಳ ಹಿಂದಷ್ಟೇ ಅಳವಡಿಸಲಾದ ಶುದ್ಧ ನೀರಿನ ಘಟಕ ದುರಸ್ತಿಗಾಗಿ ಕಾಯುತ್ತಿದೆ.

ತಾಂಡಾ ಜನರಿಗೆ ನೀರಿನ ಸಮಸ್ಯೆ ಬಗ್ಗೆ ವಿಚಾರಿಸಿದರೆ, “ಹಮಾರೆ ತಾಂಡಾ ಮೇ ಪಾನೀ ಕಾ ಬಹುತ್‌ ಪರೇಶಾನ್‌ ಹೈ” ಎಂದು ಎಲ್ಲರೂ ಒಂದೇ ಹೇಳುತ್ತಿದ್ದರು.

ನೀರಿನ ಕುರಿತು ವಿಚಾರಿಸುವ ವೇಳೆ, ಬೈಕ್‌ ಮೇಲೆ ನಾಲ್ಕು ಕೊಡ ನೀರು, ಒಂದು ಬಾಟಲ್‌ ನೀರು ತುಂಬಿಸಿಕೊಂಡು ಬರುತ್ತಿರುವ ಇಬ್ಬರು ಯುವಕರ ಮಾತಾಡಿಸಿದೆ. ಅವರು ʼಒಂದು ಕಿ.ಮೀ. ದೂರದ ನಾಮನಾಯ್ಕ ತಾಂಡಾದಿಂದ ನೀರು ತರುತ್ತಿದ್ದೇವೆʼ ಎಂದು ಹೇಳತೊಡಗಿದರು.

ಬೇಸಿಗೆ ಮುನ್ನವೇ ಜಿಲ್ಲೆಯ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ. ಮೇ ತಿಂಗಳವರೆಗೆ ನೀರಿನ ತತ್ವಾರ ಉಂಟಾಗುವ ಗ್ರಾಮಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಆದರೆ, ಪ್ರತಿ ವರ್ಷವೂ ಕುಡಿಯುವ ನೀರಿಗಾಗಿ ಪರದಾಟ ನಡೆಸುವ ಜನರಿಗೆ ಶಾಶ್ವತ ನೀರು ಒದಗಿಸುವ ಕೆಲಸ ಆಡಳಿತ ವ್ಯವಸ್ಥೆ ಮಾಡದೇ ಇರುವುದು ವಿಪರ್ಯಾಸವೇ ಸರಿ.

ಇದನ್ನೂ ಓದಿ : ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ ₹5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಜಲದಾಹಕ್ಕಾಗಿ ಅಲೆದಾಟ ನಡೆಸುತ್ತಿರುವ ವಿವಿಧ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವುದು ಅಪರೂಪ. ಜನರಿಗೆ ಶುದ್ಧ ಕುಡಿಯುವ ನೀರು ಕೊಡಬೇಕಾದ ಘಟಕಗಳು ತಾವೇ ಬಾಯಾರಿದ ಮೇಲೆ ಅಧಿಕಾರಿಗಳು ನಿಷ್ಕಾಳಜಿ ತೋರಿದರೆ ಹೇಗೆ? ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಮೂಲಭೂತ ಕರ್ತವ್ಯ. ಆಡಳಿತ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಮರುಕಳಿಸದಂತೆ ಎಚ್ಚರ ವಹಿಸಿದರೆ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರು, ಕ್ಲಿನಿಕ್‌ಗಳ ವಿರುದ್ಧ ಕ್ರಮಕ್ಕೆ ಕರವೇ ಕಾವಲುಪಡೆ ಆಗ್ರಹ

ಬೀದರ್ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವೈದ್ಯರೆಂದು ಹೇಳಿಕೊಂಡು ನಕಲಿ...

ಬೀದರ್‌ | ಭಗತ್‌ ಸಿಂಗ್‌ ಜಯಂತಿ : ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆ

ಭಗತ್‌ ಸಿಂಗ್‌ ಅವರು ಕೇವಲ 23ನೇ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...

ಬೀದರ್‌ | ಬರ : ಪ್ರತಿ ಎಕರೆಗೆ ₹50 ಸಾವಿರ ಪರಿಹಾರ, ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತರಿಂದ ಬೈಕ್‌ ರ‍್ಯಾಲಿ

ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಾನೂನುಬದ್ಧ...