ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುತ್ತಿರುವ ಪಡಿತರ ಅಕ್ಕಿ ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಡಿತರ ವಿತರಣೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯವನ್ನು ತಕ್ಷಣ ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಒತ್ತಾಯಿಸಿದೆ.
ಈ ಸಂಬಂಧ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಮಂಟೇಸ್ವಾಮಿ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಸರ್ವರ್ ಸಮಸ್ಯೆಯಿಂದ ಗ್ರಾಹಕರು ತಮ್ಮ ಪಡಿತರ ಅಕ್ಕಿ ಪಡೆಯಲು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಪೂರ್ತಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ದಿನವಿಡೀ ಕಾದರೂ ಸರ್ವರ್ ಸಮಸ್ಯೆಯಿಂದ ಅಕ್ಕಿ ದೊರೆಯದೇ ಗ್ರಾಹಕರು ಖಾಲಿಹಸ್ತದಿಂದ ಹಿಂದಿರುಗುವಂತಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಸರ್ಕಾರದ ಮಟ್ಟದಲ್ಲಿನ ಈ ತಾಂತ್ರಿಕ ದೋಷದಿಂದ ಕೂಲಿ ಕೆಲಸ ಮಾಡುತ್ತಿರುವ ಬಿಪಿಎಲ್ ಪಡಿತರ ಚೀಟಿದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಕಾಲದಲ್ಲಿ ಅಕ್ಕಿ ದೊರೆಯದ ಕಾರಣ ನ್ಯಾಯಬೆಲೆ ಅಂಗಡಿ ಸಿಬ್ಬಂದಿಯೊಂದಿಗೆ ಗ್ರಾಹಕರು ವಾಗ್ವಾದ ನಡೆಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ, ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳಲ್ಲಿ ವಿತರಿಸುತ್ತಿರುವುದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಸಮಸ್ಯೆ ಎದುರಾಗುತ್ತಿದೆ ಎಂದು ಕಾರಣ ನೀಡಲಾಗುತ್ತಿದೆ. ಆದರೆ ಸಮಸ್ಯೆ ಮುಂದುವರಿದರೆ ತಿಂಗಳ ಅಂತ್ಯದೊಳಗೆ ಅನೇಕ ಫಲಾನುಭವಿಗಳು ಪಡಿತರ ಪಡೆಯುವುದರಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಮೇ ತಿಂಗಳ ಪಡಿತರ ಅಕ್ಕಿಯನ್ನು ರಾಜ್ಯ ಸರ್ಕಾರ ಇನ್ನೂ ವಿತರಿಸಿಲ್ಲ. ಕೇಂದ್ರ ಸರ್ಕಾರ ಮುಂಗಡವಾಗಿ ಬಿಡುಗಡೆ ಮಾಡಿರುವ ಎರಡು ತಿಂಗಳ ಅಕ್ಕಿಯನ್ನು ಹೊಂದಾಣಿಕೆ ಮಾಡಿಕೊಂಡು, ಗ್ರಾಹಕರಿಂದ ಎರಡೆರಡು ಬಾರಿ ಬೆರಳಚ್ಚು ಪಡೆಯುತ್ತಿರುವುದೂ ಸರ್ವರ್ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ವಿಡಿಯೋ ವೀಕ್ಷಿಸಿ:https://youtu.be/AZ7t09oFqBM?si=zbu7mUsSm2Z7zX6L
ಈ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರ ಅಕ್ಕಿ ವಿತರಣೆಯನ್ನು ಜೂನ್ ಮೊದಲ ವಾರದವರೆಗೂ ವಿಸ್ತರಿಸುವಂತೆ ಸರ್ಕಾರ ಸೂಕ್ತ ಆದೇಶ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಇಂಧನ ದರ ಏರಿಕೆ ಖಂಡಿಸಿ ಎಸ್ಯುಸಿಐ(ಸಿ) ಪ್ರತಿಭಟನೆ
ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಸಂಚಾಲಕರಾದ ಡಾ. ಜಿ.ವಿ. ರವಿಶಂಕರ್, ಕಾರ್ಯದರ್ಶಿ ಶ್ರೀಕಂಠೇಶ್, ಆನಂದ್, ಸಂದೇಶ್, ದುರ್ಗಾ ಪ್ರಸಾದ್, ಹರೀಶ್, ದಯಾನಂದ ನಾಯಕ್, ದೂರ ರಾಜಣ್ಣ ಸೇರಿದಂತೆ ಹಲವರು ಇದ್ದರು.




