- 6ನೇ ತರಗತಿಯಿಂದ ವೃತ್ತಿಪರ ತರಬೇತಿ ಶಿಕ್ಷಣ – ದುಷ್ಪರಿಣಾಮವೇ ಹೆಚ್ಚು
- ಶಿಕ್ಷಣ ಕೇಂದ್ರೀಕರಣ ಪರಿಣಾಮ ಶಿಕ್ಷಣದಿಂದ ವಂಚಿತರಾಗುವ ಗ್ರಾಮೀಣ ಭಾಗದ ಮಕ್ಕಳು
ಶಾಲಾ ಶಿಕ್ಷಣದಲ್ಲಿ ತಮ್ಮದೇ ಆದ ಪಠ್ಯಕ್ರಮ, ಶಿಕ್ಷಣ ನೀತಿ ರೂಪಿಸಿಕೊಳ್ಳುವುದು ಆಯಾ ರಾಜ್ಯಗಳ ಹಕ್ಕು. ಆದರೆ, ಅದನ್ನು ಬುಡಮೇಲು ಮಾಡಿ ಶಾಲಾ ಶಿಕ್ಷಣವು ಕೇಂದ್ರೀಕರಣಗೊಳ್ಳುತ್ತಿರುವುದು ಮುಂದಿನ ತಲೆಮಾರಿನ ಮಕ್ಕಳ ಶಿಕ್ಷಣವು ಅತಂತ್ರ ಸ್ಥಿತಿಗೆ ದೂಡುತ್ತಿದೆ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ‘ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ’ವು (ಎನ್‌ಸಿಪಿಸಿಆರ್) ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, “ರಾಜ್ಯ, ಬೋರ್ಡ್ ಅಥವಾ ಶಾಲೆಯು ಪ್ರಾಥಮಿಕ ಶಿಕ್ಷಣದಲ್ಲಿ ಅಕಾಡೆಮಿಕ್ ಪ್ರಾಧಿಕಾರ ಸೂಚಿಸಿರುವಂತೆ ಪಾಲಿಸಬೇಕು. ಅದರ ಹೊರತಾಗಿ ತಮ್ಮದೇ ಪಠ್ಯಕ್ರಮ (ಪಠ್ಯಸೂಚಿ ಮತ್ತು ಪಠ್ಯಪುಸ್ತಕ), ಮೌಲ್ಯ ಮಾಪನ ವಿಧಾನ ಅಳವಡಿಸಿಕೊಂಡರೆ ಅದು ಶಿಕ್ಷಣ ಹಕ್ಕು ಕಾಯಿದೆಯ (ಆರ್‍ಟಿಇ) ಉಲ್ಲಂಘನೆಯಾಗುತ್ತದೆ. ಇದನ್ನು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಬೇಕು” ಎಂದು ಹೇಳಿದೆ.
“ಉನ್ನತ ಶಿಕ್ಷಣದಲ್ಲಿ ಜಾರಿಗೊಳ್ಳುತ್ತಿರುವ ‘ಕೇಂದ್ರೀಕರಣ ನೀತಿ’ಯನ್ನು ಶಾಲಾ ಶಿಕ್ಷಣಕ್ಕೂ ವಿಸ್ತರಿಸಲಾಗುತ್ತಿದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿಯಿಂದ ಎನ್‌ಸಿಇಆರ್‌ಟಿ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವೂ ಕೇಂದ್ರೀಕರಣದ ಸುಳಿಗೆ ಸಿಲುಕುವ ಸಾದ್ಯತೆಯಿದೆ” ಎಂದು ಆತಂಕ ವ್ಯಕ್ತಪಡಿಸಿದೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ವಿಟಿಯು ಮೊದಲ ಸೆಮಿಷ್ಟರ್ ಪರೀಕ್ಷೆ ಮುಂದೂಡಿಕೆ
“ಕೇಂದ್ರೀಕರಣ ಶಿಕ್ಷಣ ಕಳವಳಕಾರಿ, ಆದರೆ ನಿರೀಕ್ಷಿತ. ಸಂವಿಧಾನದ ಅನುಬಂಧ 7ರ ಅನುಸಾರ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಶಿಕ್ಷಣದ ಕುರಿತು ರಾಜ್ಯಗಳಿಗೂ ಸಮಾನ ಅಧಿಕಾರವಿದೆ, ಹಕ್ಕುಗಳಿವೆ. ಶಾಲಾ ಶಿಕ್ಷಣದಲ್ಲಿ ತಮ್ಮದೇ ಪಠ್ಯಕ್ರಮ, ಶಿಕ್ಷಣ ನೀತಿ ರೂಪಿಸಿಕೊಳ್ಳುವುದು ರಾಜ್ಯಗಳ ಸಂವಿಧಾನಿಕ ಹಕ್ಕು. ಆದರೆ ರಾಜ್ಯಗಳ ಅಧಿಕಾರ, ಹಕ್ಕುಗಳನ್ನು ಮೊಟಕುಗೊಳಿಸುವ ಈ ಮೇಲಿನ ಆದೇಶ ಸಂವಿಧಾನದ ನೀತಿಯನ್ನು ಉಲ್ಲಂಘಿಸುತ್ತದೆ” ಎಂದು ಆಯೋಗ ಹೇಳಿದೆ.
“ಮೋದಿ-ಶಾರವರ ಒಂದು ದೇಶ, ಒಂದು ಪಠ್ಯಕ್ರಮ, ಒಂದು ಮೌಲ್ಯಮಾಪನ’ ನೀತಿಯನ್ನು ಶಾಲಾ ಶಿಕ್ಷಣದಲ್ಲಿ ಜಾರಿಗೊಳಿಸುವ ತಂತ್ರ ಎನ್ನುವುದು ಸ್ಪಷ್ಟವಾಗಿದೆ. ಒಮ್ಮೆ ಶಾಲಾ ಶಿಕ್ಷಣವು ಕೇಂದ್ರೀಕರಣಗೊಂಡರೆ ತಳ ಸಮುದಾಯದ, ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ” ಎಂದು ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಹೇಳಿದ್ದಾರೆ
“ಎನ್ಇಪಿ ನೀತಿ ಜಾರಿಯಾಗುವ ಸಂದರ್ಭದಲ್ಲಿ ಈ ಬಗ್ಗೆ ಎಚ್ಚರಿಸಲಾಗಿತ್ತು. ಈಗ ನಿಜವಾಗುತ್ತಿದೆ. ಜೊತೆಗೆ 6ನೇ ತರಗತಿಯಿಂದ ವೃತ್ತಿಪರ ತರಬೇತಿ ಕೊಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಇದರ ದುಷ್ಪರಿಣಾಮ ನಮಗೆ ಗೊತ್ತಿಲ್ಲವೇ? ಗೊತ್ತಿದ್ದೂ ನಾಗರಿಕ ಸಮಾಜದ ಮೌನ ಮತ್ತು ನಿರ್ಲಕ್ಷ್ಯ ಸರ್ವಾಧಿಕಾರಿ ಧೋರಣೆಗೆ ಸುಲಭದ ಹಾದಿ ಮಾಡಿಕೊಡುತ್ತಿದೆ. ಮುಂದಿನ ತಲೆಮಾರಿನ ಮಕ್ಕಳ ಶಿಕ್ಷಣವು ಅತಂತ್ರ ಸ್ಥಿತಿಯಲ್ಲಿದೆ” ಎಂದು ಶ್ರೀಪಾದ್ ಭಟ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.