ಪ್ರಸ್ತುತ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸುವುದು, ಪರೀಕ್ಷೆ ಬರೆಯುವುದು ಹಾಗೂ ಪದವಿ ಪಡೆಯುವುದು ಹೇಗೆ? ಎಂಬುದರ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಹಲವರು ಶುಲ್ಕ ಪಾವತಿಸಿ, ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವುದರಿಂದ ಭವಿಷ್ಯದ ಯೋಜನೆಗಳು ಅಸ್ಥಿರವಾಗಿವೆ.
ಸರ್ಕಾರ ಮತ್ತು ರಾಜ್ಯಪಾಲರ ಅನುಮೋದೆನೆ ಪಡೆಯದೆ, ನಿಯಮಾವಳಿಗಳನ್ನು ರಚಿಸಿ, 2018-19ನೇ ಸಾಲಿನಿಂದ ಎಂಟು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ನಡೆಸಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇದೀಗ ಗಂಭೀರ ಆರೋಪಕ್ಕೆ ಗುರಿಯಾಗಿದೆ.
ವಿಶ್ವದ ಮೊದಲ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಹೆಸರಾಗಿದ್ದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೋಟಗೋಡಿಯ ಜಾನಪದ ವಿವಿ, ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದೆ. ಬೋಧಕ/ ಬೋಧಕೇತರ ಸಿಬ್ಬಂದಿಗಳ ಅಕ್ರಮ ನೇಮಕಾತಿಯಲ್ಲಿ ಭ್ರಷ್ಟಾಚಾರ, ಆಡಳಿತದ ಜಾಟಾಪಟಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ವೇತನ ವಿಳಂಬ, ಪಿಎಚ್‌ಡಿ ಪ್ರವೇಶಾತಿ ಮತ್ತು ಸಂದರ್ಶನದಲ್ಲಿ ಅಕ್ರಮಗಳಂತಹ ಆರೋಪಗಳನ್ನು ಹೊತ್ತಿರುವ ಜಾನಪದ ವಿವಿಗೆ ಮತ್ತೊಂದು ಗಂಬೀರ ಆರೋಪ ಎದುರಾಗಿದೆ.
ಸೆಪ್ಟೆಂಬರ್ 8ರಂದು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸೆಪ್ಟೆಂಬರ್ 8ರಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಸರ್ಕಾರ ಹಾಗೂ ರಾಜ್ಯಪಾಲರ ಅನುಮೋದನೆ ಪಡೆಯದೆ ಕೋರ್ಸಗಳನ್ನು ನಡೆಸಿರುವುದರ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮ 2011ರ ಪ್ರಕರಣ 43(2)ರ ಅನ್ವಯಗಳ ಪ್ರಕಾರ ಅನುಮೋದನೆ ಪಡೆಯದೆ
ಕೋರ್ಸ್‌ಗಳನ್ನು ಆರಂಭಿಸಿರುವುದನ್ನು ಉನ್ನತ ಶಿಕ್ಷಣ ಇಲಾಖೆ ಗಂಬೀರ ಆರೋಪ ಎಂದು ತಿಳಿಸಿದೆ.
ಅನುಮೋದನೆ ಪಡೆಯದ ಕೋರ್ಸ್‌ಗಳು ಯಾವವು?: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸರ್ಕಾರ ಹಾಗೂ ರಾಜ್ಯಪಾಲರ ಅನುಮೋದನೆ ಪಡೆಯದೆ, ನಿಯಮಾವಳಿಗಳನ್ನು ರಚಿಸದೆ ಆರಂಭಸಿರುವ ಕೋರ್ಸಗಳು ಎಂಎ ಕನ್ನಡ ಮತ್ತು ಜಾನಪದ, ಎಂಎ ಇಂಗ್ಲೀಷ್, ಎಂಎ ಅರ್ಥಶಾಸ್ತ್ರ, ಎಂಎ ಸಮಾಜಶಾಸ್ತ್ರ, ಎಂಎಸ್‌ಡಬ್ಲ್ಯೂ, ಮಾಸ್ಟರ್ ಆಫ್ ವಿಷ್ಯೂವಲ್ ಆರ್ಟ್ ಹಾಗೂ ಎಂಎ ಮಹಿಳಾ ಅಧ್ಯಯನ ಕೋರ್ಸ್‌ಗಳಿಗೆ ಮೊದಲು ನಿಯಮಾವಳಿಗಳನ್ನು ರಚಿಸಿ, ಘನತೆವೆತ್ತ ಕುಲಾಧಿಪತಿ(ರಾಜ್ಯಪಾಲರು) ಅವರಿಂದ ಅನುಮೋದನೆ ಪಡೆದು ಆರಂಭಿಸಬೇಕಿತ್ತು. ಆದರೆ ಈ ನಿಯಮಾವಳಿಗಳನ್ನು ರಚಿಸದೆ, ಅನುಮೋದನೆಯನ್ನು ಪಡೆಯದೆ 2018-19ನೇ ಸಾಲಿನಿಂದ 2025ರವರೆಗೆ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸಿದೆ.
ಘಟನೊತ್ತರ ಬಳಿಕ ಅನುಮೊದನೆಗೆ ಪ್ರಸ್ತಾವನೆ: ವಿಶ್ವವಿದ್ಯಾಲಯವು 2018-19ನೇ ಸಾಲಿನಲ್ಲಿ ಅನುಮೋದನೆ ಪಡೆಯದೆ ಎಂಟು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಆರಂಭಿಸಿದ ಬಳಿಕ 2025ರಲ್ಲಿ ಈ ಕೋರ್ಸ್‌ಗಳಿಗೆ ಅನುಮೋದನೆ ಪಡೆಯಲು ಸರ್ಕಾರಕ್ಕೆ ಕರಡು ಪ್ರತಿಯನ್ನು ಸಲ್ಲಿಸಿತ್ತು. ಈ ವೇಳೆ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ, ಸರ್ಕಾರ ಹಾಗೂ ರಾಜ್ಯಪಾಲರ ಅನುಮೋದನೆ ಪಡೆಯದೆ 2018-19ರಿಂದ 2025ರವರೆಗೆ ಎಂಟು ಕೋರ್ಸ್‌ಗಳನ್ನು ನಡೆಸಿರುವುದು ಬಯಲಾಗಿದೆ.
ಎಂಟು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲು ಸೂಚನೆ: ಸರ್ಕಾರದ ಅನುಮೋದನೆ ಪಡೆಯದೇ 2018-19ನೇ ಸಾಲಿನಿಂದ ಪ್ರಾರಂಭಿಸಲಾಗಿರುವ 08 ಕೋರ್ಸ್‌ಗಳ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸರ್ಕಾರ ವಿಶ್ವವಿದ್ಯಾಲಯಕ್ಕೆ ಸ್ಪಷ್ಟವಾಗಿ ಸೂಚಿಸಿದೆ. ಜತೆಗೆ ವಿಶ್ವವಿದ್ಯಾಲಯವು ಕಳೆದ ಅವಧಿಯಲ್ಲಿ ಈ ಎಂಟು ಕೋರ್ಸ್‌ಗಳಿಗೆ ಒಟ್ಟು ಎಷ್ಟು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗಿರುತ್ತದೆ ಎಂಬುದರ ಬಗ್ಗೆ ವಿಷಯವಾರು ವಿವರವನ್ನು ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.
ಬೋಧಕ ಬೋಧಕೇತರ ಸಿಬ್ಬಂದಿ ವಜಾ: ವಿಶ್ವವಿದ್ಯಾಲಯವು ಸರ್ಕಾರದಿಂದ ಅನುಮೋದನೆ ಪಡೆಯದ 08 ಕೋರ್ಸ್‌ಗಳನ್ನು ನಡೆಸಲು ನೇಮಕ ಮಾಡಿಕೊಂಡಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ವಿಶ್ವವಿದ್ಯಾಲಯದ ಸೇವೆಯಿಂದ ತಕ್ಷಣದಿಂದಲೇ ವಜಾಗೊಳಿಸಲು ಸರ್ಕಾರ ಸೂಚಿಸಿದೆ.
ವರದಿ ಸಲ್ಲಿಸದಿದ್ದಲ್ಲಿ ಶಿಸ್ತು ಕ್ರಮ : 2018-19ನೇ ಸಾಲಿನಿಂದ 2025ನೇ ಸಾಲಿನವರೆಗೆ ಮೇಲ್ಕಂಡ 08 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಅಗತ್ಯ ಅನುಮೋದನೆ ಪಡೆಯದೆ ಪ್ರಾರಂಭಿಸಿರುವ ಮೂಲಕ ಗಂಭೀರ ಲೋಪವೆಸಗಿರುವ ವಿರುದ್ಧ ನಿಯಮಾನುಸಾರ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ ಒಂದು ವಾರದೊಳಗಾಗಿ ಸರ್ಕಾರಕ್ಕೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸರ್ಕಾರಕ್ಕೆ ಅನುಪಾಲನಾ ವರದಿಯನ್ನು 07 ದಿನಗಳೊಳಗಾಗಿ ತಪ್ಪದೇ ಸಲ್ಲಿಸುವಂತೆ ತಿಳಿಸಿದೆ. ಒಂದು ವೇಳೆ ಸದರಿ ಸೂಚನೆಗಳನ್ನು ಪಾಲಿಸದೇ ವಿಳಂಬ ನೀತಿ ಅನುಸರಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಿಯಮಾನುಸಾರ ಕ್ರಮವಹಿಸಲಾಗುವುದು” ಎಂದು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವೀರಭದ್ರ ಅವರು ಎಚ್ಚರಿಕೆ ನೀಡಿದ್ದಾರೆ.
“ಎಂಟು ಕೋರ್ಸ್‌ಗಳಿಗೆ ಅನುಮೋದನೆ ಪಡೆಯಬೇಕಿತ್ತು. ಆದರೆ ಆಗಿನ ಕುಲಸಚಿವರು ಅನುಮೋದನೆ ಪಡೆಯದೆ ಕೋರ್ಸ್‌ಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈ ವಿಷಯ ಈಗ ಸರ್ಕಾರಕ್ಕೆ ಗೊತ್ತಾಗಿದ್ದು, ಎಂಟು ಕೋರ್ಸ್‌ಗಳನ್ನು ಸ್ಥಗಿತಗಿಳಿಸಲು ಆದೇಶಿಸಿದ್ದು, ಆದೇಶದಂತೆ ನಾವು ಸದರಿ ಕೋರ್ಸ್‌ಗಳನ್ನು ಸ್ಥಗಿತ ಮಾಡುತ್ತೇವೆ” ಎಂದು ಜಾನಪದ ವಿವಿ ಕುಲಸಚಿವ ಗುರುಪ್ರಸಾದ ಅವರು ಪತ್ರಿಕೆ ಹೇಳಿಕೆ ನೀಡಿದ್ದಾರೆ.
“ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಲವು ಆರೋಪಗಳನ್ನು ಎದುರಿಸುತ್ತಿದ್ದು, ಇವುಗಳ ಜತೆಗೆ ಎಂಟು ಸ್ನಾತಕೋತ್ತರ ಪದವಿಗಳು ಸರ್ಕಾರ ಹಾಗೂ ಕುಲಾಧಿಪತಿ(ರಾಜ್ಯಪಾಲರು) ಅವರಿಂದ ಅಮೋದನೆ ಪಡೆಯದೆ ಆರಂಭಿಸಿರುವ ಗಂಭೀರ ಆರೋಪಕ್ಕೂ ಗುರಿಯಾಗಿದೆ. ಇದರಿಂದ ಸ್ನಾತಕೊತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈಗ ತಮ್ಮ ಶೈಕ್ಷಣಿಕ ಸ್ಥಿತಿಯ ಬಗ್ಗೆ ಆತಂಕಗೊಂಡಿದ್ದಾರೆ.
ಈ ಕುರಿತು ಮಾಹಿತಿ ಪಡೆಯಲು ಈ ದಿನ.ಕಾಮ್ ಜಾನಪದ ವಿವಿ ಕುಲಸಚಿವ ಗುರುಪ್ರಸಾದ ಅವರನ್ನು ಸಂಪರ್ಕಿಸಿದೆ. ಆದರೆ ಅವರು ಯಾವುದೇ ಕರೆಗೆ ಲಭ್ಯವಾಗಿಲ್ಲ.
ಸರ್ಕಾರದ ಸೆಪ್ಟೆಂಬರ್ 8ರ ನೋಟಿಸ್‌ನಂತೆ ಎಂಟು ಸ್ನಾತಕೋತ್ತರ ಕೋರ್ಸ್‌ಗಳಿಗೆ ಹೊಸ ಪ್ರವೇಶಾತಿಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಕೋರ್ಸ್‌ಗಳಿಗೆ ನೇಮಕವಾಗಿದ್ದ ಬೋಧಕ/ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಸೂಚಿಸಿರುವುದರಿಂದ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತರಗತಿ, ಮಾರ್ಗದರ್ಶನ ಮತ್ತು ಪರೀಕ್ಷೆ ನಡೆಯುವಿಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
2018-19ರಿಂದ ನಡೆಸಿದ ಕೋರ್ಸ್‌ಗಳಿಗೆ ಸರ್ಕಾರ ಮತ್ತು ರಾಜ್ಯಪಾಲರ ಅನುಮೋದನೆ(ನಿಯಮಾವಳಿ/ಸ್ಟ್ಯಾಚ್ಯೂಟ್) ಇಲ್ಲದ ಕಾರಣ, ಈಗಾಗಲೇ ಪದವಿ ಪಡೆದವರು ಅಥವಾ ಪೂರ್ಣಗೊಳಿಸುತ್ತಿರುವವರ ಪದವಿ ಪತ್ರಗಳ ಮಾನ್ಯತೆ ಪ್ರಶ್ನಾರ್ಹವಾಗುವ ಅಪಾಯವಿದೆ. ಉದ್ಯೋಗ, ಹೆಚ್ಚಿನ ಅಧ್ಯಯನ ಅಥವಾ ಸರ್ಕಾರಿ ನೇಮಕಾತಿಗಳಲ್ಲಿ ಸಮಸ್ಯೆ ಉಂಟಾಗಬಹುದು.
ಪ್ರಸ್ತುತ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸುವುದು, ಪರೀಕ್ಷೆ ಬರೆಯುವುದು ಹಾಗೂ ಪದವಿ ಪಡೆಯುವುದು ಹೇಗೆ? ಎಂಬುದರ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಹಲವರು ಶುಲ್ಕ ಪಾವತಿಸಿ, ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವುದರಿಂದ ಭವಿಷ್ಯದ ಯೋಜನೆಗಳು ಅಸ್ಥಿರವಾಗಿವೆ.
ಇದನ್ನೂ ಓದಿದ್ದೀರಾ? ಕಸ್ತೂರಿರಂಗನ್ ವರದಿ: ಕೇಂದ್ರ ಸರ್ಕಾರ ವಜಾ ಗೊಳಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ; ಮಲೆನಾಡಿನ ಜನತೆ
ಇದೇ ವಿಷಯದ ಬಗ್ಗೆ ಏಪ್ರಿಲ್ 2026ರಲ್ಲಿಯೂ ಸರ್ಕಾರ ತನಿಖಾ ಸಮಿತಿ ರಚಿಸಿ, ವಿದ್ಯಾರ್ಥಿ ಸಂಖ್ಯೆ, ಪದವಿ ಪಡೆದವರು, ಪಠ್ಯಕ್ರಮ ಮುಂತಾದ ವಿವರಗಳನ್ನು ಕೇಳಿತ್ತು. ಅಲ್ಲಿಯೂ ಅಧ್ಯಾಪಕರು “ಈಗಾಗಲೇ ಪದವಿ ಪಡೆದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಒಂದು ಬಾರಿ ಅನುಮೋದನೆ ನೀಡಿ” ಎಂದು ಕೋರಿದ್ದರು. ಇಂತಹ ಪ್ರಕರಣಗಳಲ್ಲಿ(ಉದಾ: ಹಿಂದೆ ಕೆಎಸ್‌ಒಯು ಸಂಬಂಧಿತ ವಿಷಯಗಳಲ್ಲಿ) ಸರ್ಕಾರ ಅಥವಾ ನ್ಯಾಯಾಲಯಗಳು bona fide ವಿದ್ಯಾರ್ಥಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಬಾರಿಯ ಕ್ರಮಬದ್ಧಗೊಳಿಸುವಿಕೆ ಅಥವಾ ವಿಶೇಷ ಅನುಮೋದನೆ ನೀಡುವ ಪ್ರವೃತ್ತಿ ಕಂಡುಬಂದಿತ್ತು. ಆದರೆ ಇಲ್ಲಿ ಅಂತಿಮ ನಿರ್ಧಾರ ಬಾಕಿ ಇದೆ.
ಕುಲಸಚಿವರು ಸರ್ಕಾರದ ಆದೇಶಕ್ಕೆ ಬದ್ಧರಾಗಿ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ವಿಶ್ವವಿದ್ಯಾಲಯವು 7 ದಿನಗಳಲ್ಲಿ ಅನುಪಾಲನಾ ವರದಿ ಸಲ್ಲಿಸಬೇಕಾಗಿದೆ. ಅದರ ನಂತರ ಸರ್ಕಾರ ಮುಂದಿನ ಕ್ರಮಗಳನ್ನು (ನಿಯಮಾವಳಿ ಅನುಮೋದನೆ, ವಿದ್ಯಾರ್ಥಿಗಳಿಗೆ ಪರಿಹಾರ, ಅಥವಾ ಇತರೆ) ತೆಗೆದುಕೊಳ್ಳುವ ಸಾಧ್ಯತೆ ಇದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




