ಸ್ವಂತ ಸೂರಿಗಾಗಿ ಕಾಯುತ್ತಿರುವ ಅಂಗನವಾಡಿಗಳು: ಇನ್ನೆಷ್ಟು ದಿನ ಬಾಡಿಗೆ ಕಟ್ಟಡದಲ್ಲಿರಬೇಕು?

Date:

ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕಾದ ಅಂಗನವಾಡಿ ಕೇಂದ್ರಗಳೇ ಸ್ವಂತ ಸೂರಿಲ್ಲದೆ ಪರದಾಡುತ್ತಿರುವುದು ಅಭಿವೃದ್ಧಿಯ ಮುಖವಾಡದ ಹಿಂದಿನ ವಾಸ್ತವವನ್ನು ಬಯಲು ಮಾಡುತ್ತಿದೆ. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೂರಾರು ಅಂಗನವಾಡಿ ಕೇಂದ್ರಗಳು ಬಾಡಿಗೆ ಮನೆಗಳು, ಸರ್ಕಾರಿ ಶಾಲಾ ಕಟ್ಟಡಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು, ಸಮುದಾಯ ಭವನಗಳು, ದೇವಸ್ಥಾನದ ಆವರಣ ಸೇರಿದಂತೆ ಲಭ್ಯವಿರುವ ಪರ್ಯಾಯ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

- Advertisement -

ಅಂಗನವಾಡಿ ಎಂದರೆ ಕೇವಲ ಮಕ್ಕಳನ್ನು ಕೂರಿಸಿ ಅಕ್ಷರ ಕಲಿಸುವ ಸ್ಥಳವಲ್ಲ. ಆರು ವರ್ಷದೊಳಗಿನ ಮಕ್ಕಳ ಪೌಷ್ಟಿಕತೆ, ಆರೋಗ್ಯ, ಪೂರ್ವಪ್ರಾಥಮಿಕ ಶಿಕ್ಷಣ, ಬೆಳವಣಿಗೆ ಮೇಲ್ವಿಚಾರಣೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಸಾರ್ವಜನಿಕ ಸೇವಾ ಕೇಂದ್ರ. ಇಂತಹ ಮಹತ್ವದ ಕೇಂದ್ರಗಳಿಗೆ ಸಮರ್ಪಕ ಕಟ್ಟಡ, ಗಾಳಿ-ಬೆಳಕು, ಕುಡಿಯುವ ನೀರು, ಶೌಚಾಲಯ, ಅಡುಗೆ ಕೋಣೆ ಮತ್ತು ಮಕ್ಕಳ ಆಟದ ಸ್ಥಳವಿಲ್ಲದಿರುವುದು ಗಂಭೀರ ಪ್ರಶ್ನೆ ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

2,935 ಕೇಂದ್ರಗಳು; ನೂರಾರು ಕೇಂದ್ರಗಳಿಗೆ ಸ್ವಂತ ಸೂರು ಇಲ್ಲ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಸುಮಾರು 2,935 ಅಂಗನವಾಡಿ ಕೇಂದ್ರಗಳಿವೆ. ಲಭ್ಯವಿರುವ ಜಿಲ್ಲಾ ಮಟ್ಟದ ಅಂಕಿ-ಅಂಶಗಳ ಪ್ರಕಾರ, ಇವುಗಳಲ್ಲಿ 2,204 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದು, ಉಳಿದ ಕೇಂದ್ರಗಳು ವಿವಿಧ ಪರ್ಯಾಯ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2025-26ರ ಅಂಕಿ-ಅಂಶಗಳ ಪ್ರಕಾರ, 264 ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಇನ್ನೂ 181 ಕೇಂದ್ರಗಳು ಸರ್ಕಾರಿ ಶಾಲಾ ಕಟ್ಟಡಗಳಲ್ಲಿ, 89 ಪಂಚಾಯಿತಿ ಕಟ್ಟಡಗಳಲ್ಲಿ, 77 ಸಮುದಾಯ ಭವನಗಳಲ್ಲಿ ಹಾಗೂ 120 ಕೇಂದ್ರಗಳು ಇತರ ಕಟ್ಟಡಗಳಲ್ಲಿ ನಡೆಯುತ್ತಿವೆ.

ಅಂದರೆ, ಸ್ವಂತ ಕಟ್ಟಡ ಹೊಂದಿರುವುದು ಮಾತ್ರ ಸಾಕಾಗುವುದಿಲ್ಲ; ಮಕ್ಕಳಿಗೆ ಅಗತ್ಯವಿರುವ ಕನಿಷ್ಠ ಮೂಲಸೌಕರ್ಯಗಳಿರುವ ಸುರಕ್ಷಿತ ಮತ್ತು ಮಕ್ಕಳ ಸ್ನೇಹಿ ವಾತಾವರಣವಿದೆಯೇ ಎಂಬುದೂ ಪರಿಶೀಲಿಸಬೇಕಾದ ಸಂಗತಿ. 2025ರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಮೈಸೂರು ಜಿಲ್ಲೆಯ ಅಂಗನವಾಡಿಗಳಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಕುರಿತಂತೆ ಅಧಿಕಾರಿಗಳು ವಿಶೇಷ ಗಮನಹರಿಸಿ ವರದಿ ಕೇಳಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ 2,933 ಅಂಗನವಾಡಿ ಕೇಂದ್ರಗಳಲ್ಲಿ 1.57 ಲಕ್ಷಕ್ಕೂ ಅಧಿಕ ಫಲಾನುಭವಿಗಳಿರುವ ಮಾಹಿತಿ ಹೊರಬಂದಿತ್ತು.

ಇಕ್ಕಟ್ಟಿನ ಕೊಠಡಿಯಲ್ಲೇ ಮಕ್ಕಳ ಬಾಲ್ಯ

ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳ ಬಹುಪಾಲು ಕೇಂದ್ರಗಳ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ಇರುವ ಚಿಕ್ಕ ಜಾಗದಲ್ಲೇ ಮಕ್ಕಳಿಗೆ ಪಾಠ ಹೇಳಬೇಕು. ಅದೇ ಸ್ಥಳದಲ್ಲಿ ಆಟ, ವಿಶ್ರಾಂತಿ, ಪೌಷ್ಟಿಕ ಆಹಾರ ವಿತರಣೆ ಮತ್ತು ಇತರ ಚಟುವಟಿಕೆಗಳನ್ನು ನಡೆಸಬೇಕಾಗಿದೆ. ಕೆಲವೆಡೆ ಮಕ್ಕಳು ಕುಳಿತುಕೊಳ್ಳಲು ಸಾಕಷ್ಟು ಜಾಗವಿಲ್ಲ. ಆಟವಾಡಲು ಪ್ರತ್ಯೇಕ ಸ್ಥಳವಿಲ್ಲ. ಸಮರ್ಪಕ ಗಾಳಿ-ಬೆಳಕು ಇಲ್ಲ. ಮಕ್ಕಳಿಗೆ ಸೂಕ್ತವಾದ ಶೌಚಾಲಯವಿಲ್ಲ. ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಅಡುಗೆಗಾಗಿ ಪ್ರತ್ಯೇಕ ಸ್ಥಳದ ಕೊರತೆಯೂ ಇದೆ.

ಮಕ್ಕಳ ಕಲಿಕೆಯ ವಾತಾವರಣವಾಗಬೇಕಾದ ಜಾಗವೇ ಇಕ್ಕಟ್ಟಾಗಿದ್ದರೆ, ಅವರ ದೈಹಿಕ ಚಟುವಟಿಕೆ, ಸಾಮಾಜಿಕ ಬೆಳವಣಿಗೆ ಮತ್ತು ಕಲಿಕೆಯ ಅನುಭವದ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ಇದೆ. ಚಿಣ್ಣರು ಕುಣಿದು ಕುಪ್ಪಳಿಸಬೇಕಾದ ಅಂಗನವಾಡಿ ಕೊಠಡಿಗಳೇ ಉಸಿರುಗಟ್ಟಿಸುವಂತಾಗಿರುವುದು ಮಕ್ಕಳ ಹಕ್ಕಿನ ಪ್ರಶ್ನೆಯೂ ಹೌದು.

ಬಾಡಿಗೆ ಕಟ್ಟಡದ ಸಂಕಷ್ಟ

ಸ್ವಂತ ಕಟ್ಟಡವಿಲ್ಲದ ಕೇಂದ್ರಗಳಿಗೆ ಬಾಡಿಗೆ ಕಟ್ಟಡ ಹುಡುಕುವುದು ಮತ್ತೊಂದು ಸವಾಲಾಗಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಬಾಡಿಗೆ ಮೊತ್ತಕ್ಕೆ ಮಕ್ಕಳಿಗೆ ಅಗತ್ಯವಿರುವಷ್ಟು ವಿಶಾಲವಾದ ಮತ್ತು ಮೂಲಸೌಕರ್ಯ ಹೊಂದಿರುವ ಕಟ್ಟಡ ಸಿಗುವುದು ಕಷ್ಟಕರವಾಗಿದೆ. ಬಾಡಿಗೆ ಹಣ ಸಕಾಲದಲ್ಲಿ ಬಿಡುಗಡೆಯಾಗದ ಸಂದರ್ಭಗಳಲ್ಲಿ ಕಟ್ಟಡ ಮಾಲೀಕರಿಂದ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ. ಕೆಲ ಸಂದರ್ಭಗಳಲ್ಲಿ ಕೇಂದ್ರ ಖಾಲಿ ಮಾಡುವಂತೆ ಒತ್ತಡ ಎದುರಾಗುತ್ತದೆ. ಬಾಡಿಗೆ ಕಟ್ಟಡದ ವ್ಯವಸ್ಥೆಯನ್ನು ಮುಂದುವರಿಸಲು ಅಂಗನವಾಡಿ ಕಾರ್ಯಕರ್ತೆಯರೇ ವೈಯಕ್ತಿಕವಾಗಿ ಹಣ ಹೊಂದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು. ಇದು ಕೇವಲ ಆಡಳಿತಾತ್ಮಕ ಸಮಸ್ಯೆಯಲ್ಲ. ಸಾರ್ವಜನಿಕ ಸೇವೆಯ ಜವಾಬ್ದಾರಿಯನ್ನು ನಿರ್ವಹಿಸುವ ಕಾರ್ಯಕರ್ತೆಯರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಪರಿಸ್ಥಿತಿ.

₹5 ಸಾವಿರ, ₹1 ಸಾವಿರ ಬಾಡಿಗೆಗೆ ಕಟ್ಟಡ ಸಿಗುವುದೇ ಕಷ್ಟ

ನಗರ ಪ್ರದೇಶದಲ್ಲಿ ಮಾಸಿಕ ₹5,000 ಹಾಗೂ ಗ್ರಾಮೀಣ ಪ್ರದೇಶದಲ್ಲಿ ₹1,000ರಷ್ಟು ಬಾಡಿಗೆ ನೀಡುವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಅಗತ್ಯವಿರುವಷ್ಟು ವಿಸ್ತೀರ್ಣ ಮತ್ತು ಸೌಲಭ್ಯ ಹೊಂದಿರುವ ಕಟ್ಟಡ ಸಿಗುವುದು ಕಷ್ಟಕರವಾಗಿದೆ. ವಿಶೇಷವಾಗಿ ಮೈಸೂರು ನಗರದಲ್ಲಿ ಜಾಗದ ಬೆಲೆ ಮತ್ತು ಬಾಡಿಗೆ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಮೊತ್ತಕ್ಕೆ ಸುರಕ್ಷಿತ, ಬೆಳಕು-ಗಾಳಿ ಇರುವ, ಮಕ್ಕಳ ಸ್ನೇಹಿ ಕಟ್ಟಡ ಹುಡುಕುವುದು ಸವಾಲಾಗಿದೆ. ಆದ್ದರಿಂದ, ಬಾಡಿಗೆ ದರವನ್ನು ವಾಸ್ತವಿಕ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸುವುದರ ಜೊತೆಗೆ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುವ ದೀರ್ಘಕಾಲಿಕ ಯೋಜನೆ ಅಗತ್ಯವಾಗಿದೆ.

1.34 ಲಕ್ಷಕ್ಕೂ ಅಧಿಕ ಮಕ್ಕಳ ಬದುಕಿನ ಪ್ರಶ್ನೆ

ಮೈಸೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿತ ಮಕ್ಕಳ ಸಂಖ್ಯೆಯೂ ಗಮನಾರ್ಹವಾಗಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 6 ತಿಂಗಳಿಂದ 3 ವರ್ಷದೊಳಗಿನ ಸುಮಾರು 75,536 ಮಕ್ಕಳು ಹಾಗೂ 3ರಿಂದ 6 ವರ್ಷದೊಳಗಿನ 47,796 ಮಕ್ಕಳು ಅಂಗನವಾಡಿ ಸೇವೆ ಪಡೆಯುತ್ತಿದ್ದಾರೆ. ಇದರ ಜೊತೆಗೆ 0-6 ತಿಂಗಳ ಶಿಶುಗಳ ಸಂಖ್ಯೆಯೂ ಗಮನಾರ್ಹವಾಗಿದೆ.

2025ರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ 14,880 ಗರ್ಭಿಣಿಯರು ಮತ್ತು 13,157 ಬಾಣಂತಿಯರೂ ಅಂಗನವಾಡಿ ವ್ಯವಸ್ಥೆಯ ಫಲಾನುಭವಿಗಳಾಗಿದ್ದಾರೆ ಎಂದು ವರದಿಯಾಗಿತ್ತು. ಮಕ್ಕಳನ್ನು ಮಾತ್ರವಲ್ಲದೆ ತಾಯಿ-ಮಗು ಆರೋಗ್ಯ ಮತ್ತು ಪೌಷ್ಟಿಕತೆಯನ್ನೂ ಅಂಗನವಾಡಿ ವ್ಯವಸ್ಥೆ ನೋಡಿಕೊಳ್ಳುತ್ತಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ. ಹೀಗಾಗಿ, ಅಂಗನವಾಡಿ ಕಟ್ಟಡದ ಪ್ರಶ್ನೆ ಸಾವಿರಾರು ಮಕ್ಕಳ ಕೊಠಡಿಯ ಪ್ರಶ್ನೆಯಲ್ಲ; ಲಕ್ಷಾಂತರ ಜನರ ಆರೋಗ್ಯ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸಾರ್ವಜನಿಕ ಮೂಲಸೌಕರ್ಯದ ಪ್ರಶ್ನೆ.

ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಭದ್ರ ನೆಲೆ ಬೇಕು

ಮೂರರಿಂದ ಆರು ವರ್ಷದ ವಯಸ್ಸು ಮಕ್ಕಳ ಮೆದುಳಿನ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹಂತ. ಈ ಅವಧಿಯಲ್ಲಿ ಮಕ್ಕಳಿಗೆ ಆಟದ ಮೂಲಕ ಕಲಿಕೆ, ಭಾಷಾ ಬೆಳವಣಿಗೆ, ಸಂಖ್ಯಾ ಅರಿವು, ಸಾಮಾಜಿಕ ಸಂವಹನ, ಸೃಜನಶೀಲ ಚಟುವಟಿಕೆ ಮತ್ತು ಶಾಲಾ ಪೂರ್ವ ಸಿದ್ಧತೆ ಅಗತ್ಯ. ಇದಕ್ಕಾಗಿ, ಅಂಗನವಾಡಿ ಕೇಂದ್ರಗಳು ಚಿಕ್ಕ ಕೊಠಡಿಗಳಾಗದೆ ಮಕ್ಕಳ ಸ್ನೇಹಿ ಕಲಿಕಾ ಕೇಂದ್ರಗಳಾಗಬೇಕು.

ಕರ್ನಾಟಕದಲ್ಲಿಯೇ ಸಮಗ್ರ ಮಕ್ಕಳ ಅಭಿವೃದ್ಧಿ ಸೇವಾ ಯೋಜನೆ (ICDS) 1975ರಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಕೇವಲ 100 ಅಂಗನವಾಡಿ ಕೇಂದ್ರಗಳೊಂದಿಗೆ ಆರಂಭವಾಗಿತ್ತು. ನಂತರ ರಾಜ್ಯದಾದ್ಯಂತ ವಿಸ್ತರಿಸಿರುವ ಈ ವ್ಯವಸ್ಥೆ ಇಂದು ಮಕ್ಕಳ ಕಲ್ಯಾಣದ ಪ್ರಮುಖ ಸಾರ್ವಜನಿಕ ವ್ಯವಸ್ಥೆಯಾಗಿದೆ. ಹೀಗಿರುವಾಗ, ಅದರ ತವರು ಜಿಲ್ಲೆಯಲ್ಲಿ ಸ್ವಂತ ಕಟ್ಟಡದ ಕೊರತೆ ಮುಂದುವರಿಯುತ್ತಿರುವುದು ಗಮನಾರ್ಹ ವೈರುಧ್ಯ.

ಪೌಷ್ಟಿಕ ಆಹಾರದಿಂದ ಆರೋಗ್ಯದವರೆಗೆ

ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವುದರ ಜೊತೆಗೆ, ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆ, ಆರೋಗ್ಯ ತಪಾಸಣೆ, ಲಸಿಕಾ ಕಾರ್ಯಕ್ರಮಗಳಿಗೆ ಸಹಕಾರ, ಪೋಷಕರಿಗೆ ಆರೋಗ್ಯ ಮತ್ತು ಪೌಷ್ಟಿಕತೆ ಕುರಿತು ಅರಿವು ಮೂಡಿಸುವುದು ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತವೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಸಂಬಂಧಿತ ಮಾಹಿತಿ ನೀಡುವಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ, ಅಡುಗೆ ಕೋಣೆ ಇಲ್ಲದ, ನೀರಿನ ವ್ಯವಸ್ಥೆ ಇಲ್ಲದ, ಶೌಚಾಲಯವಿಲ್ಲದ ಅಥವಾ ಸುರಕ್ಷಿತವಲ್ಲದ ಕಟ್ಟಡದಲ್ಲಿ ಈ ಎಲ್ಲ ಸೇವೆಗಳನ್ನು ಸಮರ್ಪಕವಾಗಿ ನಡೆಸುವುದು ಹೇಗೆ? ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.

ಕಟ್ಟಡದ ಕೊರತೆಯ ಜೊತೆಗೆ ಸಿಬ್ಬಂದಿ ಕೊರತೆಯೂ

ಅಂಗನವಾಡಿ ವ್ಯವಸ್ಥೆ ಕಟ್ಟಡದ ಕೊರತೆಯಿಂದ ಮಾತ್ರ ಸೊರಗುತ್ತಿಲ್ಲ. ಸಿಬ್ಬಂದಿ ಕೊರತೆಯೂ ಅದರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ. 2025-26ರ ಮಾಹಿತಿಯ ಪ್ರಕಾರ, ಜಿಲ್ಲೆಯಲ್ಲಿ 26 ಅಂಗನವಾಡಿ ಕಾರ್ಯಕರ್ತೆಯರು ಮತ್ತು 215 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಸಿಬ್ಬಂದಿಯ ಕೊರತೆ ಮುಂದುವರಿದರೆ, ಈಗಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲಿನ ಕೆಲಸದ ಹೊರೆ ಮತ್ತಷ್ಟು ಹೆಚ್ಚುತ್ತದೆ. 2025ರಲ್ಲಿ ಮೈಸೂರು ಜಿಲ್ಲೆಯಲ್ಲಿ 68 ಅಂಗನವಾಡಿ ಕಾರ್ಯಕರ್ತೆ ಹಾಗೂ 251 ಸಹಾಯಕಿಯರ ಒಟ್ಟು 319 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿತ್ತು ಎಂಬ ವರದಿಯೂ ಇದೆ. ಇದರಿಂದ ಒಂದು ಸಂಗತಿ ಸ್ಪಷ್ಟ: ಕಟ್ಟಡ ಮತ್ತು ಸಿಬ್ಬಂದಿ-ಎರಡೂ ಅಂಗನವಾಡಿ ವ್ಯವಸ್ಥೆಯ ಗುಣಮಟ್ಟಕ್ಕೆ ಸಮಾನವಾಗಿ ಮುಖ್ಯ.

ಮಾದರಿ ಅಂಗನವಾಡಿಗಳು ದಾರಿ ತೋರಿಸಿವೆ

ಮೈಸೂರು ಜಿಲ್ಲೆಯಲ್ಲಿ 2026ರಲ್ಲಿ ಕೆಲವು ಅಂಗನವಾಡಿ ಕೇಂದ್ರಗಳನ್ನು ಮಾದರಿ ಪೂರ್ವಪ್ರಾಥಮಿಕ ಶಾಲೆಗಳಾಗಿ ಅಭಿವೃದ್ಧಿಪಡಿಸುವ ಪ್ರಯತ್ನವೂ ನಡೆದಿದೆ. 2,935 ಕೇಂದ್ರಗಳ ಪೈಕಿ 109 ಕೇಂದ್ರಗಳನ್ನು ಮಾದರಿ ಪೂರ್ವಪ್ರಾಥಮಿಕ ಕೇಂದ್ರಗಳಾಗಿ ರೂಪಿಸುವ ಯೋಜನೆ ಕೈಗೊಳ್ಳಲಾಗಿದ್ದು, ಕೆಲವು ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರು, ಉದ್ಯಾನ, ಆಟದ ಸ್ಥಳ, ಮಕ್ಕಳ ಸ್ನೇಹಿ ಗೋಡೆ ಚಿತ್ರಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು ಉತ್ತಮ ಆರಂಭ. ಆದರೆ, ಕೆಲವೇ ಕೇಂದ್ರಗಳನ್ನು ಮಾದರಿಯಾಗಿಸುವುದಕ್ಕಿಂತ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೂ ಕನಿಷ್ಠ ಮೂಲಸೌಕರ್ಯದ ಗುಣಮಟ್ಟವನ್ನು ಖಚಿತಪಡಿಸುವುದು ಮುಖ್ಯ.

ಮಾದರಿ ಅಂಗನವಾಡಿಗಳ ಯಶಸ್ಸನ್ನು ಉಳಿದ ಕೇಂದ್ರಗಳಿಗೂ ವಿಸ್ತರಿಸಲು ಸ್ಥಳೀಯ ಸಂಸ್ಥೆಗಳು, ದಾನಿಗಳು, ಸಿಎಸ್‌ಆರ್ ಸಂಸ್ಥೆಗಳು ಮತ್ತು ಸಮುದಾಯದ ಸಹಭಾಗಿತ್ವವನ್ನು ಬಳಸಿಕೊಳ್ಳಬಹುದು. ಆದರೆ ಮೂಲಭೂತ ಜವಾಬ್ದಾರಿ ಸರ್ಕಾರದ್ದೇ ಆಗಿರಬೇಕು.

ನಿವೇಶನವೇ ಇಲ್ಲ ಎಂಬ ಕಾರಣ ಎಷ್ಟು ಕಾಲ?

ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನದ ಕೊರತೆ ಪ್ರಮುಖ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಾಗ ಲಭ್ಯವಿರುವ ಕಡೆ ಅದನ್ನು ಗುರುತಿಸಿ ಅಂಗನವಾಡಿಗಳಿಗೆ ಮೀಸಲಿಡಬಹುದು. ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ, ಕಂದಾಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯದಿಂದ ನಿವೇಶನ ಗುರುತಿಸುವ ಕಾರ್ಯ ನಡೆಯಬೇಕು. ಹೊಸ ಬಡಾವಣೆಗಳು, ಪುನರ್ವಸತಿ ಪ್ರದೇಶಗಳು, ನಗರ ವಿಸ್ತರಣಾ ಪ್ರದೇಶಗಳು ಮತ್ತು ದೊಡ್ಡ ವಸತಿ ಸಮುಚ್ಚಯಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳಿಗೆ ಜಾಗ ಮೀಸಲಿಡುವ ವ್ಯವಸ್ಥೆ ರೂಪಿಸಬೇಕು. ಅಂಗನವಾಡಿ ಮೊದಲು, ಜಾಗ ನಂತರ ಎಂಬ ವ್ಯವಸ್ಥೆಯ ಬದಲು-ಜಾಗ ಯೋಜನೆಯಲ್ಲೇ ಅಂಗನವಾಡಿ ಕಡ್ಡಾಯ ಎಂಬ ನೀತಿ ಬೇಕಾಗಿದೆ.

ಮಕ್ಕಳಿಗೆ ಕಟ್ಟಡವಲ್ಲ, ಬದುಕಿನ ಭದ್ರತೆ ಬೇಕು

ಅಂಗನವಾಡಿ ಕಟ್ಟಡ ನಿರ್ಮಾಣವನ್ನು ಕೇವಲ ಸಿಮೆಂಟ್, ಇಟ್ಟಿಗೆ ಮತ್ತು ಮೇಲ್ಛಾವಣಿಯ ಕಾಮಗಾರಿಯಾಗಿ ನೋಡಬಾರದು. ಅದು ಮಕ್ಕಳ ಆರೋಗ್ಯ, ಪೌಷ್ಟಿಕತೆ, ಕಲಿಕೆ ಮತ್ತು ಸುರಕ್ಷತೆಗೆ ಮಾಡುವ ಹೂಡಿಕೆ. ಪ್ರತಿ ಅಂಗನವಾಡಿಗೂ ಕನಿಷ್ಠವಾಗಿ-

  • ಮಕ್ಕಳಿಗೆ ಸಾಕಷ್ಟು ಒಳಾಂಗಣ ಸ್ಥಳ,
  • ಸುರಕ್ಷಿತ ಕುಡಿಯುವ ನೀರು,
  • ಮಕ್ಕಳ ಸ್ನೇಹಿ ಶೌಚಾಲಯ,
  • ಪ್ರತ್ಯೇಕ ಅಡುಗೆ ಕೋಣೆ,
  • ಆಹಾರ ಸಂಗ್ರಹಣೆಗೆ ಸುರಕ್ಷಿತ ಸ್ಥಳ,
  • ಉತ್ತಮ ಗಾಳಿ–ಬೆಳಕು,
  • ವಿದ್ಯುತ್ ವ್ಯವಸ್ಥೆ,
  • ಆಟದ ಸ್ಥಳ,
  • ಮಕ್ಕಳಿಗೆ ಸುರಕ್ಷಿತ ನೆಲಹಾಸು,
  • ಕೈತೊಳೆಯುವ ವ್ಯವಸ್ಥೆ,
  • ಮಳೆ ಮತ್ತು ಬಿಸಿಲಿನಿಂದ ರಕ್ಷಣೆ

ಇರಬೇಕು. ಅದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸುರಕ್ಷಿತ ಹಾಗೂ ಗೌರವಯುತ ಕೆಲಸದ ವಾತಾವರಣವೂ ಕಲ್ಪಿಸಬೇಕು.

ಲೆಕ್ಕದಲ್ಲಿ ಕೇಂದ್ರವಲ್ಲ, ನೆಲದ ಮೇಲೆ ಕೇಂದ್ರ ಬೇಕು

ಅಂಗನವಾಡಿ ಕೇಂದ್ರಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳುವುದಕ್ಕಿಂತ ಎಷ್ಟು ಕೇಂದ್ರಗಳು ಸ್ವಂತ ಕಟ್ಟಡದಲ್ಲಿವೆ, ಎಷ್ಟು ಕೇಂದ್ರಗಳಲ್ಲಿ ಶೌಚಾಲಯವಿದೆ, ಎಷ್ಟು ಕೇಂದ್ರಗಳಲ್ಲಿ ಕುಡಿಯುವ ನೀರಿದೆ, ಎಷ್ಟು ಕೇಂದ್ರಗಳಿಗೆ ಅಡುಗೆ ಕೋಣೆ ಇದೆ, ಎಷ್ಟು ಕೇಂದ್ರಗಳಲ್ಲಿ ಆಟದ ಸ್ಥಳವಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸುವ ವ್ಯವಸ್ಥೆ ಅಗತ್ಯ. ಪ್ರತಿ ಅಂಗನವಾಡಿಯ ಮೂಲಸೌಕರ್ಯ ಸ್ಥಿತಿಯನ್ನು ಒಳಗೊಂಡ ಜಿಲ್ಲಾ ಮಟ್ಟದ ‘ಅಂಗನವಾಡಿ ಮೂಲಸೌಕರ್ಯ ಡ್ಯಾಶ್‌ಬೋರ್ಡ್’ ರೂಪಿಸಿ, ಕಟ್ಟಡ, ನೀರು, ಶೌಚಾಲಯ, ವಿದ್ಯುತ್, ಅಡುಗೆ ಕೋಣೆ, ಆಟದ ಸ್ಥಳ, ಬಾಡಿಗೆ ಮತ್ತು ಸಿಬ್ಬಂದಿ ಸ್ಥಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬಹುದು. ಇದರಿಂದ ಸಮಸ್ಯೆ ಎಲ್ಲಿ ಹೆಚ್ಚು ಇದೆ ಎಂಬುದನ್ನು ಗುರುತಿಸಿ, ಆದ್ಯತೆಯ ಆಧಾರದ ಮೇಲೆ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ.

ಈ ವಿಶೇಷ ಸುದ್ದಿ ಓದಿದ್ದೀರಾ? ಹಳೇ ಮೈಸೂರು: ಆಡಳಿತ, ನೀರಾವರಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಎಚ್.ಎಂ. ಚನ್ನಬಸಪ್ಪ

ಸರ್ಕಾರದ ಆದ್ಯತೆಯಲ್ಲಿ ಅಂಗನವಾಡಿ ಇರಲಿ

ಮಕ್ಕಳಿಗೆ ಉಚಿತ ಮತ್ತು ಪೌಷ್ಟಿಕ ಆಹಾರ ನೀಡುತ್ತೇವೆ, ಪೂರ್ವಪ್ರಾಥಮಿಕ ಶಿಕ್ಷಣ ಕೊಡುತ್ತೇವೆ, ಆರೋಗ್ಯ ಸೇವೆ ಒದಗಿಸುತ್ತೇವೆ ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಆ ಸೇವೆಗಳನ್ನು ನೀಡುವ ಸ್ಥಳವೂ ಅದಕ್ಕೆ ತಕ್ಕಂತಿರಬೇಕು. ಮಕ್ಕಳಿಗೆ ಪಾಠ ಹೇಳುವ ಕೊಠಡಿಯೇ ಕಿರಿದಾಗಿದ್ದರೆ, ಆಟವಾಡಲು ಜಾಗವಿಲ್ಲದಿದ್ದರೆ, ಶೌಚಾಲಯವಿಲ್ಲದಿದ್ದರೆ, ಕುಡಿಯುವ ನೀರಿಲ್ಲದಿದ್ದರೆ, ಅಡುಗೆ ಮಾಡಲು ಸೂಕ್ತ ವ್ಯವಸ್ಥೆಯಿಲ್ಲದಿದ್ದರೆ-ಅಂಗನವಾಡಿಯ ಉದ್ದೇಶವೇ ಪ್ರಶ್ನಾರ್ಹವಾಗುತ್ತದೆ.

ಈ ವಿಶೇಷ ಸುದ್ದಿ ಓದಿದ್ದೀರಾ? ಮಾತೃಭಾಷೆಯೇ ಜ್ಞಾನಭಾಷೆ: ಶಿಕ್ಷಣ ಯಾರ ಹಕ್ಕು?

ಮಕ್ಕಳ ಭವಿಷ್ಯ ಕಟ್ಟುವ ಅಂಗನವಾಡಿಗಳಿಗೆ ಮೊದಲು ಭದ್ರ ಸೂರು ಕಲ್ಪಿಸಬೇಕು

ಮೈಸೂರು ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದ ಪ್ರತಿಯೊಂದು ಅಂಗನವಾಡಿಗೆ ಹಂತ ಹಂತವಾಗಿ ನಿವೇಶನ ಒದಗಿಸಿ, ಶಾಶ್ವತ ಕಟ್ಟಡ ನಿರ್ಮಿಸುವ ಗುರಿಯನ್ನು ನಿಗದಿಪಡಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳಿಗೆ ತಾತ್ಕಾಲಿಕವಾಗಿ ವಾಸ್ತವಿಕ ಬಾಡಿಗೆ ಒದಗಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಏಕೆಂದರೆ ‘ಅಂಗನವಾಡಿಯ ಮೇಲ್ಛಾವಣಿ ಕೇವಲ ಕಟ್ಟಡದ ಮೇಲಿರುವ ಸೂರು ಅಲ್ಲ; ಅದು ಸಾವಿರಾರು ಚಿಣ್ಣರ ಬಾಲ್ಯ, ಆರೋಗ್ಯ ಮತ್ತು ಭವಿಷ್ಯಕ್ಕೆ ಭದ್ರತೆಯ ಸೂರು’.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಣಿಪಾಲದಲ್ಲಿ ಮಾರಕಾಸ್ತ್ರಗಳೊಂದಿಗೆ ಯುವಕನ ಬಂಧನ

ಉಡುಪಿ ನಗರದ ಮಣಿಪಾಲದ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ...

ಉಡುಪಿ | ಕೋಟ ಜಂಕ್ಷನ್ ಅಪಘಾತ; ಗಾಯಗೊಂಡಿದ್ದ ಕಾರು ಚಾಲಕ ಸಾವು

ಕೋಟ ಜಂಕ್ಷನ್‌ನಲ್ಲಿ ಅ. 26ರಂದು ಸಂಭವಿಸಿದ ಸೈಕಲ್‌ ಮತ್ತು ಕಾರಿನ ನಡುವಿನ...

ಉಡುಪಿ | ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಿರಲಿ: ಅಶೋಕ್ ಕುಮಾರ್ ಕೊಡವೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು....

ಕುಮಟಾ | ತದಡಿ ಬಂದರಿನಲ್ಲಿ ದುರಂತ: ಮೀನು ಸಂಗ್ರಹಣಾ ಸ್ಥಳ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಸಾವು

ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ದಂಡೆಗೆ ಮರಳಿದ್ದ ಬೋಟ್‌ನ ಮೀನು ಸಂಗ್ರಹಣಾ...