ನ್ಯಾಯಾಲಯದ ಸಮನ್ಸ್ ಪಾಲಿಸಿ ವಿಚಾರಣೆಗೆ ಹಾಜರಾಗದ ಆರೋಪದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರ ನ್ಯಾಯಾಲಯ ಬುಧವಾರ (ಆ.19) ಬಂಧನ ವಾರಂಟ್ ಹೊರಡಿಸಿದೆ.
ಕೃಷ್ಣನಗರದ ಮೂರನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೊಯಿತ್ರಾ ವಿರುದ್ಧದ ಬಂಧನ ವಾರಂಟ್ ಅನ್ನು ತಕ್ಷಣ ಜಾರಿಗೊಳಿಸುವಂತೆ ಆದೇಶಿಸಿದ್ದು, ಅದರ ಅನುಷ್ಠಾನದ ವರದಿಯನ್ನು ಆಗಸ್ಟ್ 28ರಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ.
ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಹಾಗೂ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯವು ವಿಚಾರಣೆಗೆ ಮುನ್ನವೇ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಪದೇಪದೇ ಸಮನ್ಸ್ ನೀಡಿದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಮಂಗಳವಾರವೂ ನ್ಯಾಯಾಲಯವು ಮೊಯಿತ್ರಾ ಅವರಿಗೆ ಬುಧವಾರ ಹಾಜರಾಗುವಂತೆ ಸೂಚಿಸಿತ್ತು. ಆದರೆ ಬುಧವಾರ ಅವರು ಹಾಜರಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶಗಳನ್ನು ನಿರಂತರವಾಗಿ ಪಾಲಿಸದಿರುವುದು “ಆರೋಪಿಯ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತದೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಹೊರಡಿಸುವುದನ್ನು ಹೊರತುಪಡಿಸಿ ಬೇರೆ ದಾರಿ ಉಳಿದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
This video cannot be played in your browser. Open the video directly
ಮೊಯಿತ್ರಾ ಪರ ವಕೀಲರು, ಅವರು ಯಾವುದೇ ಹಂತದಲ್ಲೂ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾಗಿ ನ್ಯಾಯಾಧೀಶರು ಆದೇಶದಲ್ಲಿ ದಾಖಲಿಸಿದ್ದಾರೆ. ಇದನ್ನು ಉಲ್ಲೇಖಿಸಿದ ನ್ಯಾಯಾಲಯ, “ನ್ಯಾಯಾಲಯದ ಕಾನೂನಿಗೆ ಗೌರವವಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಅದಾನಿ ವಹಿವಾಟಿನ ವರದಿ ಬರೆಯುತ್ತಿದ್ದ ಪತ್ರಕರ್ತ ರವಿ ಮನೆ ಮೇಲೆ ಪೊಲೀಸ್ ದಾಳಿ; ಫೋನ್, ಲ್ಯಾಪ್‌ಟಾಪ್ ವಶ
ಇದೇ ವೇಳೆ, ಮೊಯಿತ್ರಾ ನ್ಯಾಯಾಲಯದ ಆವರಣಕ್ಕೆ ಹಾಜರಾದರೆ ಹೊರಗೆ ಅವರನ್ನು ಕೆಲವರು ತಡೆದು ಕಿರಿಕಿರಿ ಮಾಡುವ ಸಾಧ್ಯತೆಯಿದೆ ಎಂದು ಅವರ ಪರ ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.
ಮೊಯಿತ್ರಾ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುವುದು, ವಿವಿಧ ಗುಂಪುಗಳ ನಡುವೆ ದ್ವೇಷ ಬೆಳೆಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು, ಕ್ರಿಮಿನಲ್ ಬೆದರಿಕೆ ಹಾಗೂ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.





