ಸಾಂಪ್ರದಾಯಿಕ ಕೃಷಿ ಪದ್ಧತಿ, ದೇಸಿ ಬೀಜಗಳ ಸಂರಕ್ಷಣೆ ಹಾಗೂ ಜೈವಿಕ ವೈವಿಧ್ಯತೆಯ ಉಳಿವಿಗಾಗಿ ದಶಕಗಳಿಂದ ಶ್ರಮಿಸುತ್ತಿರುವ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗೊಳೂರು ದೊಡ್ಡಿ ಗ್ರಾಮದ ಪ್ರಗತಿಪರ ರೈತ ಸಿ.ಪಿ. ಕೃಷ್ಣ ಅವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯಾದ ‘ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ರಿವಾರ್ಡ್’ (Plant Genome Savior Farmer Reward) ಲಭಿಸಿದೆ.
ಸಾಂಪ್ರದಾಯಿಕ ಹಾಗೂ ಅಪರೂಪದ ಸಸ್ಯ ತಳಿಗಳ ಸಂರಕ್ಷಣೆ, ಜೈವಿಕ ವೈವಿಧ್ಯತೆ ಮತ್ತು ಸಾವಯವ ಕೃಷಿ ಕ್ಷೇತ್ರದಲ್ಲಿ ಅವರು ಮಾಡಿರುವ ಜೀವಮಾನದ ಸಾಧನೆಯನ್ನು ಗುರುತಿಸಿ, ಭಾರತ ಸರ್ಕಾರದ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ (Protection of Plant Varieties and Farmers’ Rights Authority-PPV&FRA) ಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆ ಮಾಡಿದೆ.
ಕಣ್ಮರೆಯಾಗುವ ಹಂತದಲ್ಲಿರುವ ನೂರಾರು ಸಾಂಪ್ರದಾಯಿಕ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ದೇಸಿ ಭತ್ತದ ತಳಿಗಳನ್ನು ಕಳೆದ ಹಲವು ದಶಕಗಳಿಂದ ತಮ್ಮ ಹೊಲದಲ್ಲಿ ಸಂರಕ್ಷಿಸಿ, ನಿರಂತರವಾಗಿ ಬೆಳೆಸುತ್ತಿರುವುದು ಕೃಷ್ಣ ಅವರ ಸಾಧನೆಯ ವಿಶೇಷತೆಯಾಗಿದೆ. ಕೇವಲ ಕೃಷಿ ಮಾಡುವುದಕ್ಕೆ ಸೀಮಿತವಾಗದೆ, ಮುಂದಿನ ತಲೆಮಾರುಗಳಿಗೂ ದೇಸಿ ಬೀಜ ಸಂಪತ್ತನ್ನು ಉಳಿಸಿ ಹಸ್ತಾಂತರಿಸುವ ಮಹತ್ವದ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಕೃಷಿ ಚಿಂತನೆಗಳಿಂದ ಪ್ರೇರಿತರಾದ ಕೃಷ್ಣ ಅವರು, ರಾಸಾಯನಿಕ ಮುಕ್ತ ಸಾವಯವ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದಾರೆ. ಮಣ್ಣಿನ ಫಲವತ್ತತೆ, ಪರಿಸರ ಸಂರಕ್ಷಣೆ ಮತ್ತು ರೈತರ ಸ್ವಾವಲಂಬನೆಗೆ ಆದ್ಯತೆ ನೀಡುತ್ತಾ ಸಾಂಪ್ರದಾಯಿಕ ಕೃಷಿ ಜ್ಞಾನವನ್ನು ಪ್ರಾಯೋಗಿಕವಾಗಿ ಉಳಿಸಿಕೊಂಡು ಬಂದಿದ್ದಾರೆ.
ದೇಸಿ ಭತ್ತದ ತಳಿಗಳನ್ನು ಬೆಳೆದರೂ ಅವುಗಳನ್ನು ಸಂಸ್ಕರಿಸಲು ಸೂಕ್ತವಾದ ವ್ಯವಸ್ಥೆಗಳ ಕೊರತೆಯಿಂದ ರೈತರು ಎದುರಿಸುತ್ತಿದ್ದ ಸಮಸ್ಯೆಯನ್ನು ಮನಗಂಡ ಅವರು, ಸ್ವತಃ ಮುಂದಾಗಿ ಸಾಂಪ್ರದಾಯಿಕ ಅಕ್ಕಿ ತಳಿಗಳಿಗೆ ಅನುಕೂಲವಾಗುವಂತಹ ‘ಒನ್-ಟಚ್ ಪಾಲಿಶ್’ ಹಾಗೂ ಪಾಲಿಶ್ ಮಾಡದ ಅಕ್ಕಿಯನ್ನು ಸಂಸ್ಕರಿಸುವ ವ್ಯವಸ್ಥೆಯುಳ್ಳ ಮಿನಿ ರೈಸ್ ಮಿಲ್ ಸ್ಥಾಪಿಸಿದ್ದಾರೆ. ಈ ಮೂಲಕ ತಮ್ಮ ಬೆಳೆಗೆ ಮೌಲ್ಯವರ್ಧನೆ ಮಾಡಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ಇತರ ರೈತರಿಗೂ ನೆರವಾಗುತ್ತಿದ್ದಾರೆ.
ಈ ವಿಶೇಷ ವರದಿ ಓದಿದ್ದೀರಾ? ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ, ರಾಜ್ಯದ ಕೃಷಿ-ಮಾರುಕಟ್ಟೆ ಚಿತ್ರಣವೇನು?
ಇದಲ್ಲದೆ, ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗದೊಂದಿಗೆ ದೀರ್ಘಕಾಲದಿಂದ ಗುರುತಿಸಿಕೊಂಡಿರುವ ಅವರು, ಬೀಜೋತ್ಸವ, ದೇಸಿ ಬೀಜಗಳ ವಿನಿಮಯ ಹಾಗೂ ಕೃಷಿ ಜಾಗೃತಿ ಅಭಿಯಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ರೈತರಲ್ಲಿ ಸಾಂಪ್ರದಾಯಿಕ ಬೀಜಗಳ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಕೃಷಿ ಪರಂಪರೆಯ ಸಂರಕ್ಷಣೆಗೆ ಕೊಡುಗೆ ನೀಡುತ್ತಿದ್ದಾರೆ.
ಈ ವಿಶೇಷ ಲೇಖನ ಓದಿದ್ದೀರಾ? ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ, ವಿವೇಕದ ಕಾವಲು ಕಳಚಿದಾಗ…
ಇಂದಿನ ವಾಣಿಜ್ಯಾಧಾರಿತ ಕೃಷಿ ವ್ಯವಸ್ಥೆಯಲ್ಲಿ ಹೆಚ್ಚಿನ ಇಳುವರಿ ನೀಡುವ ಕೆಲವೇ ತಳಿಗಳತ್ತ ರೈತರ ಒಲವು ಹೆಚ್ಚುತ್ತಿರುವ ಸಂದರ್ಭದಲ್ಲಿ, ಅಪರೂಪದ ದೇಸಿ ಭತ್ತದ ತಳಿಗಳನ್ನು ಉಳಿಸುವ ಕೃಷ್ಣ ಅವರ ಪ್ರಯತ್ನ ಮಹತ್ವದ್ದಾಗಿದೆ. ಅವರ ಸಾಧನೆ ಕೇವಲ ವೈಯಕ್ತಿಕ ಗೌರವವಲ್ಲ; ರೈತ ಸಮುದಾಯದ ಸಾಂಪ್ರದಾಯಿಕ ಜ್ಞಾನ, ಬೀಜ ಸ್ವಾತಂತ್ರ್ಯ ಮತ್ತು ಸುಸ್ಥಿರ ಕೃಷಿ ಪದ್ಧತಿಗೆ ಸಂದ ಮನ್ನಣೆಯಾಗಿದೆ.
ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್ ಮಾರುಕಟ್ಟೆಯ ಕರಾಮತ್ತು!
ನವೆಂಬರ್ 12ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ಸಿ.ಪಿ. ಕೃಷ್ಣ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಗೊಳೂರು ದೊಡ್ಡಿಯ ಕೃಷ್ಣ ಅವರಿಗೆ ದೊರೆತಿರುವ ಈ ರಾಷ್ಟ್ರೀಯ ಗೌರವ ಮಂಡ್ಯ ಜಿಲ್ಲೆ ಮಾತ್ರವಲ್ಲದೆ ಇಡೀ ಕರ್ನಾಟಕದ ಕೃಷಿ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.





