ಅಂತರ್ಜಾತಿ ವಿವಾಹದ ಕಾರಣಕ್ಕೆ ನಡೆದ ಮಾನ್ಯಾ ಪಾಟೀಲ್ ಅವರ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ 11 ತಿಂಗಳು ಕಳೆದರೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ. ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸರ್ಕಾರ ಕೂಡಲೇ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಹುಬ್ಬಳ್ಳಿ ತಾಲೂಕಿನ ಇನಾಮವೀರಾಪುರದಲ್ಲಿ ನಡೆದ ಈ ಘಟನೆ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮೇಲ್ಜಾತಿಯ ಯುವತಿ ಮಾನ್ಯಾ ಪಾಟೀಲ್ ಅವರು ದಲಿತ ಸಮುದಾಯದ ವಿವೇಕಾನಂದ ದೊಡ್ಡಮನಿ ಅವರನ್ನು ವಿವಾಹವಾದ ಕಾರಣಕ್ಕೆ ಯುವತಿಯ ಸಂಬಂಧಿಕರು ವಿವೇಕಾನಂದ ಅವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ದಾಳಿಯಲ್ಲಿ ಮಾನ್ಯಾ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಪ್ರಕರಣದ ಐವರು ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ” ಎಂದು ತಿಳಿಸಿದರು.
“ಒಂದೆಡೆ ಯುವತಿಯನ್ನು ಕಳೆದುಕೊಂಡ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ವಿವೇಕಾನಂದ ದೊಡ್ಡಮನಿ ಕುಟುಂಬ ಇಂದಿಗೂ ಜೀವಭಯದ ನಡುವೆ ಬದುಕುವಂತಾಗಿದೆ. ಕೊಲೆ ನಡೆದು ಇಷ್ಟು ತಿಂಗಳು ಕಳೆದರೂ ಸಂತ್ರಸ್ತರಿಗೆ ನ್ಯಾಯ ಮತ್ತು ಭದ್ರತೆ ಒದಗಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಜಾತಿ ಅಸಮಾನತೆ ವಿರುದ್ಧ ಸೈದ್ಧಾಂತಿಕ ರಾಜಕಾರಣದ ಅಗತ್ಯಸಮಾಜದಲ್ಲಿನ ಜಾತಿ ಅಸಮಾನತೆ, ಶೋಷಣೆ ಮತ್ತು ಅನ್ಯಾಯಗಳನ್ನು ಕೊನೆಗೊಳಿಸಿ ಸಮಾನತೆಯ ಸಮಾಜ ನಿರ್ಮಿಸಲು ಸೈದ್ಧಾಂತಿಕ ರಾಜಕೀಯ ಚಳವಳಿಯ ಅಗತ್ಯವಿದೆ. ಕೇವಲ ಅಧಿಕಾರ ರಾಜಕಾರಣದಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ರಾಜಕೀಯದ ಕೇಂದ್ರವಾಗಿಸಬೇಕಿದೆ” ಎಂದು ಚೇತನ್ ಅಭಿಪ್ರಾಯಪಟ್ಟರು.
ಈ ಉದ್ದೇಶದಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜನಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ನೂತನ ರಾಜಕೀಯ ಪಕ್ಷ ಸ್ಥಾಪಿಸಿ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ರಾಜಕೀಯ ಪ್ರಯತ್ನಕ್ಕೆ ಅಧಿಕಾರದ ಆಸೆಗಿಂತ ಸೇವಾ ಮನೋಭಾವ, ಸಾಮಾಜಿಕ ಬದ್ಧತೆ ಮತ್ತು ಸಮಾನತೆಯ ಆಶಯ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.



