ಬೇಸಿಗೆಯ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೀದರ ನಗರದ ಟ್ರಾಫಿಕ್ ಸಿಗ್ನಲ್ ಇರುವ ಪ್ರಮುಖ ವೃತ್ತದಲ್ಲಿ ಬೀದರ್ ಮಹಾನಗರ ಪಾಲಿಕೆಯೂ ಕೊನೆಗೂ ಹಸಿರು ಪರದೆ ಅಳವಡಿಲು ಮುಂದಾಗಿದ್ದು, ಪ್ರಮುಖ ವೃತ್ತದಲ್ಲಿ ನೆರಳಿನ ಪರದೆ ಅಳವಡಿಸಿ ವಾಹನ ಸವಾರರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿದೆ.
ಬೀದರ್ ಜಿಲ್ಲಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಬಿಸಿಲಿನ ಧಗೆಯಿಂದ ಜನ ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ. ನಗರದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ವಿಶೇಷವಾಗಿ ಟ್ರ್ಯಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲಬೇಕಾಗುವ ದ್ವಿಚಕ್ರ ವಾಹನ ಸವಾರರು ಉರಿ ಬಿಸಿಲಲ್ಲಿ ನಿಂತುಕೊಳ್ಳುವುದು ಬಹಳ ಕಷ್ಟಕರವಾಗಿತು. ಹೀಗಾಗಿ ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಸಿರು ಪರದೆಯ ನೆರಳಿನ ವ್ಯವಸ್ಥೆ ಕಲ್ಪಿಸಬೇಕೆಂಬ ಕೂಗು ಕೇಳಿಬಂದಿತು.
ಈ ಬಗ್ಗೆ ʼಈದಿನ.ಕಾಮ್ʼ ನಲ್ಲಿ ಏ.30ರಂದು “ಮೈಸುಡುವ ಕೆಂಡದಂತಹ ಬಿಸಿಲಿಗೆ ತತ್ತರಿಸಿದ ಜನ : ಪಾರಾಗುವುದು ಹೇಗೆ?” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆಯಿತು. ಅಂದು ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಈದಿನ ಜೊತೆ ಮಾತನಾಡಿ, “ಬೀದರ್ ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸವಾರರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಒಂದು ವಾರದೊಳಗೆ ನೆರಳಿನ ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದ್ದರು. ಇದೀಗ ಸಿಗ್ನಲ್‌ಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಪಾಲಿಕೆಯ ಕೆಲಸ ಶುರುವಾಗಿದೆ.
ಬೀದರ್ ನಗರದ ಡಾ.ಬಿ ಆರ್.ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ, ಸಾಂಸ್ಕೃತಿಕ ನಾಯಕ ಬಸವಣ್ಣನವರ ವೃತ್ತ, ಶಿವನಗರ ಬರೀದಿ ಶಾಹಿ ಉದ್ಯಾನ, ಗುಂಪಾ ರಿಂಗ್ ರಸ್ತೆ ಸಮೀಪ ಯಾವಾಗಲೂ ವಾಹನ ಸಂಚಾರ ದಟ್ಟಣೆ ಇರುತ್ತದೆ. ಸಿಗ್ನಲ್‌ಗಳಲ್ಲಿ ಬೈಕ್ ಸವಾರರು ಬಿಸಿಲಿನಲ್ಲಿ ಕಾಯಬೇಕಾದ ಸ್ಥಿತಿಯಿದೆ. ಹೀಗಾಗಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನೆರಳಿನ ಪರದೆ ಅಳವಡಿಸಬೇಕೆಂದು ಈಚೆಗೆ ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟ ಸುನೀಲ ಭಾವಿಕಟ್ಟಿ ನೇತ್ರತ್ವದ ತಂಡ ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮನವಿ ಮಾಡಿದ್ದರು.
ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರು ʼಈದಿನʼ ವರದಿಗೆ ಎಚ್ಚೆತು ಕೊಟ್ಟ ಮಾತಿನಂತೆ ಸಿಗ್ನಲ್‌ಗಳಲ್ಲಿ ನೆರಳಿನ ಪರದೆ ಅಳವಡಿಕೆಗೆ ಮುಂದಾಗಿದ್ದು, ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಬೀದರ್ | ಮೈಸುಡುವ ಕೆಂಡದಂತಹ ಬಿಸಿಲಿಗೆ ತತ್ತರಿಸಿದ ಜನ : ಪಾರಾಗುವುದು ಹೇಗೆ?
ಬೀದರ್ ಮಹಾನಗರದ ಪ್ರಮುಖ ವೃತ್ತದಲ್ಲಿ ಬೇಸಿಗೆಯ ಬಿಸಿಲಿನಲ್ಲಿ ನೆರಳಿನ ಪರದೆ ಅಳವಡಿಸಬೇಕೆಂದು ಈಚೆಗೆ ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟ ಸುನೀಲ ಭಾವಿಕಟ್ಟಿ ನೇತ್ರತ್ವದ ತಂಡ ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರಿಗೆ ಭೇಟಿಯಾಗಿ ಕಳಕಳಿಯ ಮನವಿ ಪತ್ರ ಸಲ್ಲಿಸಿದ್ದರು.

“ವಾಹನ ಸವಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಗರದ ಸಿಗ್ನಲ್‌ಗಳಲ್ಲಿ ನೆರಳಿನ ಪರದೆ ಅಳವಡಿಸಬೇಕೆಂಬ ನಮ್ಮ ಮನವಿಗೆ ಸ್ಪಂದಿಸಿ ನೆರಳಿನ ಪರದೆ ಅಳವಡಿಕೆಗೆ ಮುಂದಾಗಿರುವ ಮಹಾನಗರ ಪಾಲಿಕೆ ಕಾರ್ಯ ಅತ್ಯಂತ ಶ್ಲಾಘನೀಯ. ನಮ್ಮ ಒಕ್ಕೂಟದ ಮನವಿಗೆ ಸ್ಪಂದಿಸಿದ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುವೆ” ಎಂದು ಒಕ್ಕೂಟದ ಅಧ್ಯಕ್ಷ ಸುನೀಲ್ ಭಾವಿಕಟ್ಟಿ ತಿಳಿಸಿದ್ದಾರೆ.
ಬೇಸಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸವಾರರಿಗೆ ಸಿಗ್ನಲ್‌ಗಳಲ್ಲಿ ನೆರಳಿನ ಪರದೆ ಅಗತ್ಯವಾಗಿದೆ. ಈ ಬಗ್ಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರತಿವರ್ಷ ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಬೀದರ್ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಇದೇ ಮೊದಲ ಬಾರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಇದು ಸವಾರರಿಗೆ ಸಂತಸ ಮೂಡಿಸಿದೆ.

ಇದನ್ನೂ ಓದಿ : ಔರಾದ್‌ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಎಸ್‌ಐಟಿಗೆ ಒಪ್ಪಿಸಿ : ಅಂಕುಶ ಗೋಖಲೆ
ಬೇಸಿಗೆಯ ಬಿಸಿಲಿನ ತೀವ್ರತೆಯ ಸಂದರ್ಭದಲ್ಲಿ ರಸ್ತೆಯ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸವಾರರು ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ನೆರಳಿನ ವ್ಯವಸ್ಥೆ ಅಳವಡಿಕೆಯ ಕೂಗು ಕೇಳಿ ಬಂದ ಬಳಿಕ ಈ ಬಾರಿ ಬೇಸಿಗೆ ಅಂತ್ಯವಾಗುವ ಮೇ 15ರ ವೇಳೆಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಪ್ರತಿವರ್ಷ ಬೇಸಿಗೆ ಆರಂಭದಲ್ಲೇ ಈ ರೀತಿ ನೆರಳಿನ ವ್ಯವಸ್ಥೆ ಮಾಡಲು ಮಹಾನಗರ ಪಾಲಿಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



