ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗದ ಹಕ್ಕುಗಳನ್ನು ದಮನ ಮಾಡುತ್ತಿದ್ದು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾರ್ಮಿಕರ ಹಿತಾಸಕ್ತಿಗೆ ಅತಿದೊಡ್ಡ ಪೆಟ್ಟು ಬಿದ್ದಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರವು ಕಾರ್ಮಿಕರ ರಕ್ಷಣೆಗಾಗಿ ಈ ಹಿಂದೆ ಜಾರಿಯಲ್ಲಿದ್ದ 44 ಪ್ರಮುಖ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ, ಅವುಗಳನ್ನು ವಿಲೀನಗೊಳಿಸಿ 4 ಹೊಸ ಕಾರ್ಮಿಕ ಸಂಹಿತೆಗಳನ್ನು (ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ ಹಾಗೂ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ) ರೂಪಿಸಿದೆ. ಈ ಹೊಸ ಕಾನೂನುಗಳು ಸಂಪೂರ್ಣವಾಗಿ ಕಾರ್ಪೊರೇಟ್ ಮತ್ತು ಬಂಡವಾಳಶಾಹಿಗಳ ಪರವಾಗಿವೆ ವಿನಃ, ದುಡಿಯುವ ವರ್ಗದ ಪರವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಸಂಹಿತೆಗಳಲ್ಲಿರುವ ಅಪಾಯಕಾರಿ ಅಂಶಗಳನ್ನು ಮತ್ತು ಅಂಕಿಅಂಶಗಳನ್ನು ಉಲ್ಲೇಖಿಸಿರುವ ಅವರು, “ಹೊಸ ಕೈಗಾರಿಕಾ ಸಂಬಂಧಗಳ ಸಂಹಿತೆಯ ಪ್ರಕಾರ, 300 ಕಾರ್ಮಿಕರಿರುವ ಸಂಸ್ಥೆಗಳು ಸರ್ಕಾರದ ಯಾವುದೇ ಪೂರ್ವಾನುಮತಿ ಇಲ್ಲದೆ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಲು (Hire and Fire policy) ಅಥವಾ ಸಂಸ್ಥೆಯನ್ನು ಮುಚ್ಚಲು ಮುಕ್ತ ಅವಕಾಶ ನೀಡಲಾಗಿದೆ. ಈ ಹಿಂದೆ ಈ ಮಿತಿ 100 ಕಾರ್ಮಿಕರಿಗೆ ಮಾತ್ರ ಸೀಮಿತವಾಗಿತ್ತು. ಸರ್ಕಾರದ ಈ ನಡೆಯಿಂದ ಶೇ. 70ರಷ್ಟು ಕೈಗಾರಿಕಾ ಕಾರ್ಮಿಕರ ಉದ್ಯೋಗ ಭದ್ರತೆ ಸಂಪೂರ್ಣವಾಗಿ ನಾಶವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳ್ಳಿತೆರೆಯಿಂದ ವಿಧಾನಸಭೆಗೆ ಆಪ್ತ ಗೆಳೆಯರು: ಸಿಎಂ ವಿಜಯ್‌ಗೆ ವಿಪಕ್ಷ ನಾಯಕ ಉದಯನಿಧಿ ಮುಖಾಮುಖಿ
“ಜೊತೆಗೆ, ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆಗಳಿಂದ 12 ಗಂಟೆಗಳವರೆಗೆ ವಿಸ್ತರಿಸುವ ಅಂಶಗಳನ್ನು ಇದು ಒಳಗೊಂಡಿದೆ. ತಮ್ಮ ಹಕ್ಕುಗಳಿಗಾಗಿ ಮುಷ್ಕರ ಹೂಡುವ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿದ್ದು, ಮುಷ್ಕರಕ್ಕೆ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಇದು ಕಾರ್ಮಿಕ ಸಂಘಟನೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಹುನ್ನಾರವಾಗಿದೆ” ಎಂದು ಅವರು ವಿವರಿಸಿದ್ದಾರೆ.
“ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಬೆವರು ಮತ್ತು ರಕ್ತದ ಕೊಡುಗೆ ಅಪಾರವಾಗಿದೆ. ಹಿಂದಿನ ಸರ್ಕಾರಗಳು ಕಾರ್ಮಿಕರ ಶೋಷಣೆ ತಪ್ಪಿಸಲು ಕಾನೂನುಗಳನ್ನು ಜಾರಿಗೆ ತಂದಿದ್ದವು. ಆದರೆ, ಪ್ರಸ್ತುತ ಸರ್ಕಾರವು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ ಈ ಕಾಯ್ದೆಗಳನ್ನು ಅಂಗೀಕರಿಸಿ, ಶ್ರಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳುತ್ತಿದೆ. ಇದು ಕಾರ್ಮಿಕ ವಿರೋಧಿ ನೀತಿಯ ಪರಮಾವಧಿ” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.




