ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಾಯಕರ ನಡುವೆ ಒಳಜಗಳ ನಡೆಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಹತಾಶರಾಗಿರುವ ಪ್ರಧಾನಿಯವರು, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉಭಯ ನಾಯಕರು ಒಕ್ಕೊರಲಿನಿಂದ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿಹೆ ಆಗಮಿಸಿದ್ದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಆಡಳಿತ ಪಕ್ಷದ ನಾಯಕರು ಕೇವಲ ಅಧಿಕಾರಕ್ಕಾಗಿ ಹಾಗೂ ಕುರ್ಚಿ ಉಳಿಸಿಕೊಳ್ಳುವ ಜಗಳದಲ್ಲಿ ನಿರತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಇದಕ್ಕೆ ಇದೀಗ ರಾಜ್ಯದ ಇಬ್ಬರೂ ಅಗ್ರ ನಾಯಕರು ಸ್ಪಷ್ಟನೆಯೊಂದಿಗೆ ಜಂಟಿ ಪ್ರತ್ಯುತ್ತರ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಪ್ರಧಾನಿ ಟೀಕೆಗೆ ಮೊದಲಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನರೇಂದ್ರ ಮೋದಿಯವರಿಗೆ ಪ್ರಧಾನಿ ಸ್ಥಾನದ ಘನತೆಯೇ ಗೊತ್ತಿಲ್ಲ. ಅವರು ಒಬ್ಬ ಹೊಟ್ಟೆಕಿಚ್ಚಿನ ವ್ಯಕ್ತಿ” ಎಂದು ಕಟುವಾಗಿ ಟೀಕಿಸಿದರು. “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಮತ್ತು ಜನಪರ ಆಡಳಿತ ನೀಡುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ. ಇದನ್ನು ಸಹಿಸಲಾಗದೆ, ದ್ವೇಷದ ರಾಜಕಾರಣ ಮಾಡುತ್ತಿರುವ ಪ್ರಧಾನಿಯವರು, ತಮ್ಮ ಸ್ಥಾನದ ಗೌರವವನ್ನು ಮರೆತು ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿದ್ದಾರೆ” ಎಂದು ಹರಿಹಾಯ್ದರು.
“ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು, ಬರ ಪರಿಹಾರ ಹಾಗೂ ಅಭಿವೃದ್ಧಿ ಅನುದಾನಗಳನ್ನು ನೀಡುವಲ್ಲಿ ನಿರಂತರವಾಗಿ ತಾರತಮ್ಯ ಮಾಡುತ್ತಿದೆ. ನಮ್ಮ ನಡುವೆ ಯಾವುದೇ ಕುರ್ಚಿ ಜಗಳವಿಲ್ಲ, ಬದಲಾಗಿ ರಾಜ್ಯದ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದೇವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ನಾವು ಜಾರಿಗೊಳಿಸಿರುವ ಪಾರದರ್ಶಕ ಆಡಳಿತದ ಬಗ್ಗೆ ಬೆರಳು ಮಾಡುವ ನೈತಿಕತೆ ಕೇಂದ್ರದ ಬಿಜೆಪಿ ನಾಯಕರಿಗಿಲ್ಲ” ಎಂದು ಅಂಕಿ-ಅಂಶಗಳ ನೈಜ ಸಂಗತಿಗಳೊಂದಿಗೆ ಕೇಂದ್ರದ ಅಸಹಕಾರವನ್ನು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಬೆಳ್ಳಿತೆರೆಯಿಂದ ವಿಧಾನಸಭೆಗೆ ಆಪ್ತ ಗೆಳೆಯರು: ಸಿಎಂ ವಿಜಯ್‌ಗೆ ವಿಪಕ್ಷ ನಾಯಕ ಉದಯನಿಧಿ ಮುಖಾಮುಖಿ
ಮುಖ್ಯಮಂತ್ರಿಗಳ ಹೇಳಿಕೆಯ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಪ್ರಧಾನಿ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. “ನಮ್ಮಲ್ಲಿ ಯಾರು ಯಾವ ಕುರ್ಚಿಯಲ್ಲಿ ಕೂರಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬಿಜೆಪಿ ನಾಯಕರು ಹತಾಶೆಯಿಂದ ಇಲ್ಲಸಲ್ಲದ ಕಥೆಗಳನ್ನು ಕಟ್ಟುತ್ತಿದ್ದಾರೆ. ರಾಜ್ಯದಲ್ಲಿ ಪಾರದರ್ಶಕ ಆಡಳಿತ ನೀಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಅಕ್ರಮಗಳನ್ನು ಮುಚ್ಚಿಕೊಳ್ಳಲು ಮೋದಿಯವರು ಇಂತಹ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.
ಕರ್ನಾಟಕ ಕಾಂಗ್ರೆಸ್‌ನಲ್ಲಿನ ಆಂತರಿಕ ಬೆಳವಣಿಗೆಗಳನ್ನು ಬಂಡವಾಳವಾಗಿಸಿಕೊಂಡು ಟೀಕಾಸ್ತ್ರ ಪ್ರಯೋಗಿಸಿದ್ದ ಪ್ರಧಾನಿ ಮೋದಿಯವರ ತಂತ್ರಕ್ಕೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಒಂದಾಗಿ ಸಮರ್ಥ ಉತ್ತರ ನೀಡಿದ್ದಾರೆ. ಈ ಮೂಲಕ ವಿಪಕ್ಷಗಳ ಟೀಕೆಗಳನ್ನು ಒಟ್ಟಾಗಿ ಎದುರಿಸುವ ಹಾಗೂ ಮುಂಬರುವ ದಿನಗಳಲ್ಲಿ ಪಕ್ಷದೊಳಗಿನ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವ ಸ್ಪಷ್ಟ ಸಂದೇಶವನ್ನು ನಾಯಕರು ರವಾನಿಸಿದ್ದಾರೆ.




