ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರು ಐಪಿಎಲ್ 2026ರ ಆವೃತ್ತಿಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಸೇದುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನ್ ತಂಡದ ರನ್ ಬೆನ್ನಟ್ಟುವ 16ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಪರಾಗ್ ಅವರು ತಮ್ಮ ಸಹ-ಆಟಗಾರರಾದ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಜೊತೆ ಕುಳಿತು ನಿರಾಳವಾಗಿ ಇ- ಸಿಗರೇಟ್ ಸೇದುತ್ತಿರುವ ದೃಶ್ಯವನ್ನು ನೇರಪ್ರಸಾರದ (ಲೈವ್ ಬ್ರಾಡ್‌ಕಾಸ್ಟ್) ವೇಳೆ ಕ್ಯಾಮೆರಾ ಸೆರೆಹಿಡಿದಿದೆ. ಇದು ಕ್ರೀಡಾವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಡ್ರೆಸ್ಸಿಂಗ್ ರೂಮ್ ಮತ್ತು ಕ್ರೀಡಾಂಗಣದ ಆವರಣದಲ್ಲಿ ನಿರ್ದಿಷ್ಟ ಜಾಗಗಳನ್ನು ಹೊರತುಪಡಿಸಿ ಬೇರೆಯೆಡೆ ಧೂಮಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದರಲ್ಲಿ ಅತ್ಯಂತ ಮುಖ್ಯ ಅಂಶವೆಂದರೆ, ಭಾರತದಲ್ಲಿ ‘ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA), 2019’ ರ ಅನ್ವಯ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ನಿಷೇಧಿಸಲಾಗಿದೆ. ಇದರ ಉತ್ಪಾದನೆ, ಮಾರಾಟ, ಖರೀದಿ ಮತ್ತು ಬಳಕೆ ಸಂಪೂರ್ಣ ಕಾನೂನುಬಾಹಿರವಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಯೂ ಆಗುವ ಸಾಧ್ಯತೆಯಿದೆ.
ಈ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ವಿವಾದಕ್ಕೆ ಸಿಲುಕುತ್ತಿರುವುದು ಇದು ಮೊದಲನೆಯ ಬಾರಿಯಲ್ಲ. ಇತ್ತೀಚೆಗೆ, ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಪಿಎಂಒಎ (PMOA) ನಿಯಮಗಳನ್ನು ಉಲ್ಲಂಘಿಸಿ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ ಕಾರಣಕ್ಕಾಗಿ ಅವರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಲಾಗಿತ್ತು. ಪರಾಗ್ ಅವರ ಈ ಘಟನೆ, ಹಿಂದೆ ಇತರೆ ಕ್ರೀಡಾಪಟುಗಳು ಇದೇ ರೀತಿ ಸಿಕ್ಕಿಬಿದ್ದಿದ್ದ ಪಟ್ಟಿಗೆ ಸೇರ್ಪಡೆಯಾಗಿದೆ.
ಇದನ್ನು ಓದಿದ್ದೀರಾ? IPL | ದಿಗ್ಗಜರ ದಾಖಲೆ ಧೂಳೀಪಟ ಮಾಡಿದ 15ರ ಪೋರ ವೈಭವ್ ಸೂರ್ಯವಂಶಿ
2020ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಐಪಿಎಲ್ ಪಂದ್ಯದ ವೇಳೆ, ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್ ಅವರು ವೇಪ್ ಸೇದುತ್ತಿರುವ ಸಣ್ಣ ವಿಡಿಯೋ ಒಂದು ವೈರಲ್ ಆಗಿತ್ತು. ನೇರಪ್ರಸಾರದಲ್ಲಿ ಅವರಿಗೆ ಗೊತ್ತಿಲ್ಲದೆ ಇದು ಸೆರೆಯಾಗಿತ್ತು. ಹಾಗೆಯೇ, ಇತ್ತೀಚೆಗೆ ನಡೆದಿದ್ದ ಎಸ್‌ಎ20 (SA20) ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ತಾರೆ ಎಬಿ ಡಿವಿಲಿಯರ್ಸ್ ಅವರು ವಿಐಪಿ ಸ್ಟ್ಯಾಂಡ್‌ನಲ್ಲಿ ಕುಳಿತು ವೇಪ್ ಸೇದುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತಾವು ದೊಡ್ಡ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿ ಅವರು ಆಶ್ಚರ್ಯಚಕಿತರಾದ ದೃಶ್ಯವೂ ಆಗ ಚರ್ಚೆಗೆ ಗ್ರಾಸವಾಗಿತ್ತು.
ವೇಪಿಂಗ್ ಮಾತ್ರವಲ್ಲ, ಕೆಲವು ಆಟಗಾರರು ಧೂಮಪಾನ ಮಾಡಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡ ನಿದರ್ಶನಗಳಿವೆ. ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅವರು 2015ರ ವಿಶ್ವಕಪ್ ಸೆಮಿ-ಫೈನಲ್ (ದಕ್ಷಿಣ ಆಫ್ರಿಕಾ ವಿರುದ್ಧ) ಪಂದ್ಯದ ವೇಳೆ ಶೌಚಾಲಯದಲ್ಲಿ ಹಾಗೂ ಇಂಗ್ಲೆಂಡ್ ಆಲ್-ರೌಂಡರ್ ಬೆನ್ ಸ್ಟೋಕ್ಸ್ ಅವರು 2019ರ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಲಾರ್ಡ್ಸ್ ಮೈದಾನದ ವಾಶ್‌ರೂಮ್‌ನಲ್ಲಿ ಧೂಮಪಾನ ಮಾಡಿದ್ದೆವೆ ಎಂದು ಹೇಳಿಕೊಂಡಿದ್ದರು. ಈ ಐಪಿಎಲ್ ಆವೃತ್ತಿಯಲ್ಲಿಯೇ, ಗುಜರಾತ್ ಟೈಟನ್ಸ್ ತಂಡದ ವೇಗಿ ಕಗಿಸೊ ರಬಾಡಾ ಅವರು ಹೋಟೆಲ್ ಬಾಲ್ಕನಿಯಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೋ ಒಂದು ವಿವಾದ ಸೃಷ್ಟಿಸಿತ್ತು (ಆದರೆ ಇದು ಕ್ರೀಡಾಂಗಣದ ಆವರಣದಲ್ಲಿ ನಡೆದಿರಲಿಲ್ಲ).
ಹೆಸರಾಂತ ಆಟಗಾರರು ಇಂತಹ ಘಟನೆಗಳಲ್ಲಿ ಭಾಗಿಯಾಗುತ್ತಿರುವುದು, ಐಪಿಎಲ್‌ನಂತಹ ಜಾಗತಿಕ ಮಟ್ಟದ ದೊಡ್ಡ ಲೀಗ್‌ಗಳಲ್ಲಿ ಆಟಗಾರರ ನಡವಳಿಕೆ, ನಿಯಮಗಳು ಮತ್ತು ಅವುಗಳ ಕಟ್ಟುನಿಟ್ಟಾದ ಜಾರಿಯ ಬಗ್ಗೆ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಕ್ರೀಡಾ ಪ್ರಾಧಿಕಾರಗಳು ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಲಿವೆ ಎಂಬುದನ್ನು ಕಾದುನೋಡಬೇಕಿದೆ.




