ದೀರ್ಘಕಾಲದಿಂದ ಬಾಕಿಯಿದ್ದ ಸಾರಿಗೆ ನೌಕರರ 26 ತಿಂಗಳ ವೇತನ ಹಿಂಬಾಕಿಗೆ 450 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸಾರಿಗೆ ನೌಕರರ ವೇತನ ಹಿಂಬಾಕಿಗೆ ಪಾವತಿಗೆ ಒಟ್ಟು 1,271.92 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಆದರೆ ಸದ್ಯ ಮೊದಲ ಹಂತವಾಗಿ ₹450 ಕೋಟಿ ಬಿಡುಗಡೆ ಮಾಡಲಾಗಿದೆ.
ಸದ್ಯ ಬಿಡುಗಡೆ ಮಾಡಿರುವ ಮೊತ್ತವು KSRTC, BMTC, NWKRTC, ಮತ್ತು KKRTC ನಿಗಮಗಳಿಗೆ ಹಂಚಿಕೆಯಾಗಲಿದೆ. ಇನ್ನೂ 821.92 ಕೋಟಿ ರೂ. ಬಾಕಿಯಿದ್ದು, ಈ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಸಾರಿಗೆ ನೌಕರರ ಒಕ್ಕೂಟ ಒತ್ತಾಯಿಸುತ್ತಿದೆ.
ಇದನ್ನು ಓದಿದ್ದೀರಾ? ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ: ನಾಳೆ ಬೆಂಗಳೂರು ಚಲೋ
ಸದ್ಯ ಕೆಎಸ್‌ಆರ್‌ಟಿಸಿ 143.85 ಕೋಟಿ ರೂ., ಬಿಎಂಟಿಸಿ 137.24 ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆ 87.00 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆಗೆ 81.91 ಕೋಟಿ ರೂ. ಹಂಚಿಕೆಯಾಗಲಿದೆ.
ಇನ್ನು ಈ ಅನುದಾನ ಬಿಡುಗಡೆ ಮಾಡಿರುವ ಸರ್ಕಾರ ಮೊದಲೇ ಕೆಲವು ಷರತ್ತುಗಳನ್ನು ವಿಧಿಸಿದೆ. ಈ ಮೊತ್ತವನ್ನು ಕೇವಲ ನೌಕರರ ವೇತನ ಬಾಕಿ ಪಾವತಿಗೆ ಬಳಸಬೇಕು. ಯಾವುದೇ ವಿಳಂಬ ಮಾಡದೆ ಕೂಡಲೇ ನೌಕರರ ಖಾತೆಗೆ ಬಾಕಿ ವೇತನ ಪಾವತಿಸಬೇಕು ಎಂದು ತಿಳಿಸಿದೆ ಎಂದು ವರದಿಯಾಗಿದೆ.





