ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮೇ 18ರಂದು ಹಮ್ಮಿಕೊಂಡಿರುವ ʼಬಸವಾದಿ ಶರಣರ ಹಿಂದೂ ಸಮಾವೇಶʼ ಎಂಬ ಕೋಮುವಾದಿ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯವಾಗಿದೆ. ಇದು ಬಸವಾದಿ ಶರಣರ ದ್ರೋಹಿ ಕಾರ್ಯಕ್ರಮವಾಗಿದೆ ಎಂದು ಬಸವಾದಿ ಶರಣರ ಜಾಗೃತಿ ಸಮಾವೇಶದ ಪ್ರಮುಖರು ಹೇಳಿದ್ದಾರೆ.
ʼಶರಣರನ್ನು ಕೋಮುವಾದಿ ವೃತ್ತದೊಳಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ದುಷ್ಟ ಯೋಜನೆಯಾಗಿದೆ. 900 ವರ್ಷಗಳ ಹಿಂದೆಯೇ ವೈದಿಕ ಪ್ರಣಿತ ಮೂಲಗಳಾಗಿದ್ದ ವೇದ ಆಗಮ ಪುರಾಣ ಇತ್ಯಾದಿಗಳನ್ನು ಖಂಡಿಸಿ ಬಹುದೊಡ್ಡ ತಾತ್ವಿಕ ಆಂದೋಲನವನ್ನು ಕೈಗೊಂಡಿದ್ದ ಶರಣರಿಗೆ ಈಗ ಮತ್ತೆ ವೈದಿಕರ ಉರುಳನ್ನು ಅವರ ಕೊರಳಿಗೆ ಹಾಕಲು ಹೆಣಗುತ್ತಿರುವುದು ಅತ್ಯಂತ ಹೇಯ ಕಾರ್ಯವಾಗಿದೆʼ ಎಂದು ಆಕ್ರೋಶ ಹೊರಹಾಕಿದರು.
ʼಕರ್ನಾಟಕ ಸರ್ಕಾರವು ಈಗಾಗಲೇ ವಿಶ್ವಗುರು ಬಸವಣ್ಣನವರನ್ನು ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿಯೇ ಘೋಷಿಸಿ ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯನ್ನಾಗಿ ಮಾಡಲಾಗಿದೆ. ಇಂತಹ ಬಸವಣ್ಣ ಮತ್ತು ಬಸವಾದಿ ಶರಣರನ್ನು ಹಿಂದುತ್ವದ ಕುಟಿಲ ಆವರಣದೊಳಗೆ ಸೆಳೆದುಕೊಳ್ಳಲು ಮತ್ತು ಇಡೀ ನಾಡನ್ನು ಕೋಮುವಾದಿಕರಿಸಲು ಹೆಣಗುತ್ತಿರುವ ಈ ಯೋಜನೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆʼ ಎಂದು ಕಲಬುರಗಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ʼಯಾರಾದರೂ ಹಿಂದೂ ಸಮಾವೇಶ ಮಾಡಲು ಅವರಿಗೆ ಅವರದೇ ಆದ ಹಕ್ಕುಗಳಿವೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಬಸವಾದಿ ಶರಣರ ಆಶಯಗಳನ್ನು ಎತ್ತಿ ಹಿಡಿಯುತ್ತ ಯಾರಾದರೂ ಬಸವಾದಿ ಶರಣರ ಸಮಾವೇಶವೂ ಮಾಡಬಹುದು. ಆದರೆ, ವೈದಿಕ ವಿರೋಧಿ ಬಸವಾದಿ ಶರಣರ ಮುಖಕ್ಕೆ ಹಿಂದುತ್ವದ ಕೆಸರು, ಮಸಿ ಬಳಿಯುವ ಕಾರ್ಯಕ್ರಮ ಮಾಡುವುದು ಸಲ್ಲದು. ಹಿಂದೂತ್ವ ಅಂದರೆ ಮನುವಾದಿ ವಿಚಾರಧಾರೆ. ಈ ಕಕ್ಷೆಯೊಳಗೆ ಶರಣರನ್ನು ಸೇರಿಸುವುದು ಅವರಿಗೆ ಮಾಡುವ ಅಪಚಾರವಾಗುತ್ತದೆ. ಇಂಥ ಅಪದ್ಧ ಕೆಲಸವನ್ನು ಯಾರೂ ಮಾಡಬಾರದುʼ ಎಂದರು.

ʼಸಕಲ ಜೀವಾತ್ಮರಿಗೆ ಲೇಸು ಬಯಸಿದ ಶರಣರಿಗೂ ದಲಿತರನ್ನು, ಶೂದ್ರರನ್ನು, ಮಹಿಳೆಯರನ್ನು ಹೊರಗಿಟ್ಟು ಅವರಿಗೆ ದೇವರನ್ನು ಪೂಜಿಸುವ ಹಕ್ಕಿಲ್ಲ ಎಂದು ಹೇಳುವ ಚಾತುರ್ವರ್ಣ ವ್ಯವಸ್ಥೆಗೂ ಎತ್ತಣ ಸಂಬಂಧ. ಬಸವ ತತ್ವವನ್ನು ಅಪವ್ಯಾಖ್ಯಾನಕ್ಕೆ ಒಳಪಡಿಸಿ ದಿಕ್ಕು ತಪ್ಪಿಸಲು ಹೊರಟರೆ ನಾವು ಜೀವದ ಹಂಗು ತೊರೆದು ವಿರೋಧಿಸುತ್ತೇವೆ. ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ನಾಯಕನಾಗಿರುವ ಬಸವಣ್ಣನವರನ್ನು ಉಳಿಸಿಕೊಳ್ಳಲು ಬೃಹತ್ ಆಂದೋಲನ ಕಟ್ಟಲಿದ್ದೇವೆ. ಈವರೆಗೆ ತಪ್ಪಿಯೂ ಬಸವಾದಿ ಶರಣರ ಕುರಿತು ಚಕಾರವೆತ್ತದ ಸನಾತನಿಗಳಿಗೆ ಈಗ ಇದ್ದಕ್ಕಿದ್ದಂತೆ ಶರಣರ ಮೇಲೆ ಪ್ರೀತಿ ಉಕ್ಕುತ್ತಿರುವುದೇಕೆ ಎಂಬ ಕಪಟತೆಯನ್ನು ಅರಿಯದಷ್ಟು ಬಸವ ಚಿಂತಕರು ಅಮಾಯಕರಲ್ಲʼ ಎಂದು ತಿಳಿಸಿದ್ದಾರೆ.
ʼವೈದಿಕ ಕೋಮುವಾದಿಗಳ ಕಪಟ ಕುತಂತ್ರವನ್ನು ತಿಳಿಸಿ ಹೇಳಲು ಮೇ 15ರಂದು ಸಂಜೆ 3 ಗಂಟೆಯಿಂದ ಶಹಾಪೂರಿನ ಸಿಪಿಎಸ್ ಮೈದಾನದಿಂದ ವಚನ ಗಾಯನದೊಂದಿಗೆ ಮೆರವಣಿಗೆ ಹೊರಟು, 5 ಗಂಟೆಗೆ ಸಮಾವೇಶಗೊಳ್ಳಲಿದ್ದೇವೆ. ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳು ನೇತ್ರತ್ವದಲ್ಲಿ ಸಮಾವೇಶ ನಡೆಯಲಿದೆ. ಕಲ್ಯಾಣ ಕರ್ನಾಟಕದ ಬೀದರ, ಯಡ್ರಾಮಿ, ಶಾಬಾದ, ಜೇವರ್ಗಿ, ಭಾಲ್ಕಿ, ಕಮಲಾಪೂರ ಮುಂತಾದೆಡೆಯಿಂದ ಬಸವಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆʼ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ಈಜಲು ಹೋದ ಯುವಕ ನೀರುಪಾಲು : ಸಿಗದ ಸುಳಿವು, ಮುಂದುವರೆದ ಶೋಧಕಾರ್ಯ
ಸಮಾರಂಭವನ್ನು ಉದ್ದೇಶಿಸಿ ನಾಡಿನ ಬಸವಪರ ಮಠಾಧೀಶರು, ವಿಚಾರವಾದಿಗಳು ಮಾತನಾಡಲಿದ್ದಾರೆ. ಶರಣ ತತ್ವಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ವೈದಿಕರ ಮುಖವಾಡ ಕಳಚುವುದೇ ಸಮಾರಂಭದ ಉದ್ದೇಶವಾಗಿದೆ.
“ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯ್ಯುವೆ, ನೋಡಯ್ಯ ಮಹಾದಾನಿ ಕೂಡಲಸಂಗಮ ದೇವ ಮಾದಾರ ಚನ್ನಯ್ಯನ ಮನೆಯ ಮಗ ನಾನಯ್ಯ” ಎಂದು ವೈದಿಕರನ್ನು ಧಿಕ್ಕರಿಸಿದ ಬಸವಾದಿ ಶರಣರನ್ನು ವೈದಿಕ ಚಾತುರ್ವರ್ಣ ವ್ಯವಸ್ಥೆಯ ವಿಷ ವರ್ತುಲದಲ್ಲಿ ಸಿಲುಕಿಸುವ ಅವರ ಹುನ್ನಾರವನ್ನು ನಾವು ತಿಳುವಳಿಕೆ ಮೂಡಿಸುವ ಕಾರ್ಯಕ್ರಮದ ಮೂಲಕವೆ ಉಗ್ರವಾಗಿ ಖಂಡಿಸುತ್ತೇವೆʼ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಅಶೋಕ ಘೂಳಿ, ಕಾರ್ಯದರ್ಶಿ ಆರ್.ಜಿ.ಶಟಗಾರ ಸೇರಿದಂತೆ ಆರ್.ಕೆ.ಹುಡಗಿ, ರವೀಂದ್ರ ಶಾಬಾದಿ, ಬಸವರಾಜ ಕೋಣಿನ, ಶಾಂತಪ್ಪ ಪಾಟೀಲ, ಹಣಮಂತರಾಯ ಪಾಟೀಲ, ಭೀಮಣ್ಣ ಬೋನಾಳ, ಸುಧಾಮ ಧನ್ನಿ, ಡಾ.ಮೀನಾಕ್ಷಿ ಬಾಳಿ, ಲವಿತ್ರ, ಚಂದಮ್ಮ ಗೋಳಾ ಮತ್ತಿತರರಿದ್ದರು.





