ಕರ್ನಾಟಕದ ಕಡಲ ಮೂಲಸೌಕರ್ಯವನ್ನು ಬಲಪಡಿಸುವುದು, ಹೂಡಿಕೆ ಅವಕಾಶಗಳನ್ನು ವಿಸ್ತರಿಸುವುದು ಹಾಗೂ ಕರಾವಳಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸೋಮವಾರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ 7ನೇ ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಹೊಂದಿರುವ ಕಡಲ ಯೋಜನೆಗಳ ಅನುಷ್ಠಾನ ಕುರಿತು ಸಮಗ್ರ ಚರ್ಚೆ ನಡೆಯಿತು.
ಸಭೆಯಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದಿರುವ ಎಂಟು ಕಡಲ ಯೋಜನೆಗಳನ್ನು ಒಳಗೊಂಡ, ಅಂದಾಜು ₹8,295 ಕೋಟಿ ಹೂಡಿಕೆ ಸಾಮರ್ಥ್ಯದ ಮಾರುಕಟ್ಟೆ ಸಾಮಗ್ರಿಗಳು ಹಾಗೂ ಹೂಡಿಕೆದಾರರ ಕೈಪಿಡಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕರ್ನಾಟಕದ ಕಡಲ ಸಾಮರ್ಥ್ಯವನ್ನು ಆರ್ಥಿಕ ಅವಕಾಶಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಈ ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿ ಸಿದ್ಧತೆ ನಡೆಸಿದೆ. ಯೋಜನೆಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಆರಂಭಿಸಲು ನಿರ್ಧರಿಸಲಾಗಿದೆ.
ಬಿಡುಗಡೆಗೊಂಡ ಹೂಡಿಕೆದಾರರ ಕೈಪಿಡಿಯಲ್ಲಿ ರಾಜ್ಯದ ವಿವಿಧ ಕಡಲ ಯೋಜನೆಗಳು, ಹೂಡಿಕೆ ಅವಕಾಶಗಳು ಹಾಗೂ ಕರ್ನಾಟಕದ ಕಾರ್ಯತಂತ್ರದ ಅನುಕೂಲಗಳ ಕುರಿತು ಸಮಗ್ರ ಮಾಹಿತಿ ಒದಗಿಸಲಾಗಿದೆ. ಇದರ ಮೂಲಕ ದೇಶೀಯ ಮತ್ತು ಜಾಗತಿಕ ಹೂಡಿಕೆದಾರರನ್ನು ರಾಜ್ಯದ ಕಡಲ ಕ್ಷೇತ್ರದತ್ತ ಆಕರ್ಷಿಸುವ ಉದ್ದೇಶ ಹೊಂದಲಾಗಿದೆ.
ಈ ಯೋಜನೆಗಳ ಅನುಷ್ಠಾನದಿಂದ ಕಡಲ ಸಾರಿಗೆ ಮತ್ತು ಬಂದರು ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ದೊರೆಯುವುದರ ಜೊತೆಗೆ, ಉದ್ಯೋಗಾವಕಾಶಗಳ ಸೃಷ್ಟಿ, ಖಾಸಗಿ ಹೂಡಿಕೆ ಹೆಚ್ಚಳ ಹಾಗೂ ಕರಾವಳಿ ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆಯಿದೆ.
ಬಲಿಷ್ಠ ಯೋಜನಾ ಸರಣಿ, ಸರ್ಕಾರದ ನೀತಿ ಬೆಂಬಲ ಮತ್ತು ತ್ವರಿತ ಅನುಷ್ಠಾನದ ಮೂಲಕ ಕರ್ನಾಟಕವನ್ನು ಭಾರತದ ಪ್ರಮುಖ ಕಡಲ ಹೂಡಿಕೆ ತಾಣವನ್ನಾಗಿ ರೂಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಈ ಮೂಲಕ ದೇಶದ ನೀಲಿ ಆರ್ಥಿಕತೆಯ (ಬ್ಲೂ ಎಕಾನಮಿ) ಬೆಳವಣಿಗೆಗೆ ಕರ್ನಾಟಕ ಗಣನೀಯ ಕೊಡುಗೆ ನೀಡುವ ನಿರೀಕ್ಷೆಯಿದೆ.
ಸಭೆಯಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿ ಸದಸ್ಯ ಕ್ಯಾಪ್ಟನ್ ಸಂಜಯ್ ಟಿ. ಉಗಲ್ಮುಗಲೆ, ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್ ಆರ್., ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಸಿ. ಬಾಲಚಂದ್ರ ಉಪಸ್ಥಿತರಿದ್ದರು.






