ಸೂರ್ಯನ ಉರಿಬಿಸಿಲಿಗೆ ಕೆಂಡದಂತಾಗಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ಸಿಂಚನವಾಗಿದೆ. ವಿಜಯನಗರ ಜಿಲ್ಲಾದ್ಯಂತ ರಾತ್ರಿಯಿಂದ ಬೆಳಿಗ್ಗೆಯವರೆಗೂ ತುಂತುರು ಮಳೆಯಾಗಿದೆ. ಹೊಸಪೇಟೆ, ಕೊಟ್ಟೂರು, ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಮಳೆ ಸುರಿದಿದೆ.
ಇತ್ತ ಬಳ್ಳಾರಿ ಜಿಲ್ಲೆಯಲ್ಲೂ ವರ್ಷಧಾರೆಯಾಗಿದೆ. ಸಂಡೂರು, ಕುಡಿತಿನಿ ಭಾಗದಲ್ಲಿ ಮಳೆ ಸುರಿದಿದೆ. ಉರಿಯುವ ಬಿಸಿಲಿಗೆ ಕಂಗಾಲಾಗಿದ್ದ ಜನರು ಮಳೆಯ ಆಗಮನದಿಂದ ಸಂತಸಗೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲೂ ಮಳೆಯಾಗಿದ್ದು, ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ. ಮೇಯಲು ಬಿಟ್ಟಾಗ ಸಿಡಿಲು ಬಡಿದು ಹಸುಗಳು ಮೃತಪಟ್ಟಿದ್ದು, ಸೂಕ್ತ ಪರಿಹಾರ ನೀಡುವಂತ ರೈತ ಬಾಲಪ್ಪ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗುಡುಗು, ಗಾಳಿ ಸಹಿತ ಆಲಿಕಲ್ಲು ಮಳೆ: ಮೂರು ಗಂಟೆ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಬೆಳಿಗ್ಗೆಯವರೆಗೂ ತಂಪಾಗಿದ್ದ ವಾತಾವರಣ ಈಗ ಮತ್ತೆ ಬಿಸಿಲಿನಿಂದ ಧಗಿಸುತ್ತಿದೆ. ನಿನ್ನೆ 40 ಡಿಗ್ರಿ ದಾಖಲಾಗಿದ್ದ ತಾಪಮಾನದಲ್ಲಿ ಇಂದು ಅದಕ್ಕಿಂತ ಹೆಚ್ಚಾದಂತೆ ಭಾಸವಾಗಿದ್ದು, ಕೊಂಚ ನಿರಾಳರಾಗಿದ್ದ ಜನರು ಮತ್ತೆ ಆತಂಕಕ್ಕೀಡಾಗಿದ್ದಾರೆ.





