ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಶಶಾಂಕ್ ಬಿನ್ ಮಹೇಶ್ ಕುಮಾರ್ (17) ಎಂಬ ಯುವಕ ಮಡಹಳ್ಳಿ ಗುಡ್ಡದ ಬಳಿಯ ಸ್ಥಗಿತಗೊಂಡ ಕ್ವಾರೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಲ್ಲಿ ಮುಳುಗಿ ಸಾವಿಗೀಡಾದ ದುರ್ಘಟನೆ ನಡೆದಿದೆ.
ಮೃತ ಯುವಕ ಗುಂಡ್ಲುಪೇಟೆ ಪಟ್ಟಣದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ. ಬೇಸಿಗೆಯ ಬಿಸಿಲಿನ ತಾಪ ತಣಿಸಿಕೊಳ್ಳಲು ಸ್ನೇಹಿತರೊಂದಿಗೆ ಕ್ವಾರೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪ್ರತಿ ವರ್ಷವೂ ಬೇಸಿಗೆ ಸಮಯದಲ್ಲಿ ಮಕ್ಕಳು ಹಾಗೂ ಯುವಕರು ನೀರಿನ ತಾಣಗಳಿಗೆ ತೆರಳಿ ಈಜಲು ಪ್ರಯತ್ನಿಸಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ಮರುಕಳಿಸುತ್ತಿದ್ದರೂ, ಸಂಬಂಧಿತ ಆಡಳಿತ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗುಂಡ್ಲುಪೇಟೆಯ ಪೂರ್ವ ಭಾಗದಲ್ಲಿರುವ ಗುಂಕಲ್ಲು ಗುಡ್ಡವನ್ನು ಅಗೆದು ತೋಡಿರುವ ಆಳವಾದ ಗಣಿಯಲ್ಲಿ ನೀರು ತುಂಬಿಕೊಂಡಿದ್ದು, ಇದೇ ಸ್ಥಳದಲ್ಲಿ ಯುವಕ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಈ ಹಿಂದೆ ಇದೇ ಗಣಿಯಲ್ಲಿ ಕುಸಿತ ಸಂಭವಿಸಿ ಹತ್ತಾರು ಜನರು ಸಾವನ್ನಪ್ಪಿದ್ದ ಘಟನೆ ಜನರ ನೆನಪಿನಲ್ಲಿ ಇನ್ನೂ ಹಸಿರಾಗಿಯೇ ಇದೆ. ಆದರೂ ಈ ಪ್ರದೇಶದಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದೇ, ನಿರ್ಬಂಧಗಳಿಲ್ಲದೇ ಜನರು ತೆರಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಶೈಲಕುಮಾರ್ ಪ್ರತಿಕ್ರಿಯಿಸಿ, ಇಂತಹ ಅಪಾಯಕಾರಿ ಸ್ಥಳಗಳಿಗೆ ಬೇಲಿ ಹಾಕಿ ಸಾರ್ವಜನಿಕರ ಪ್ರವೇಶಕ್ಕೆ ತಡೆಹಿಡಿಯಬೇಕು. ಇನ್ನಾದರೂ ಸಂಬಂಧಿತ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಉರಿಬಿಸಿಲಿಗೆ ತತ್ತರ: 39° ತಾಪಮಾನ ದಾಖಲು, ಜನಜೀವನ ಅಸ್ತವ್ಯಸ್ತ
ಯುವ ಮುಖಂಡ ಎಚ್.ಎಂ. ನಂದೀಶ್ ಮಾತನಾಡಿ, ಸ್ಥಗಿತಗೊಂಡ ಕ್ವಾರೆಯಲ್ಲಿ ನೀರು ಸಂಗ್ರಹವಾಗಿರುವುದು ದೊಡ್ಡ ಅಪಾಯವಾಗಿದೆ. ಬೇಸಿಗೆಯಲ್ಲಿ ಬಾಲಕರು ಮತ್ತು ಯುವಕರು ಈಜಲು ಹೋಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪ್ರದೇಶಗಳಲ್ಲಿ ಯಾರೂ ಪ್ರವೇಶಿಸದಂತೆ ಬೇಲಿ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಘಟನೆಗಳಿಗೆ ತಾಲ್ಲೂಕು ಆಡಳಿತ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಹೊಣೆಗಾರರಾಗಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ತಂಬಾಕು ದರ ಕುಸಿತ, ಬೆಳೆ ಮಿತಿ ಹೇರಿಕೆ: ಮೈಸೂರು ಜಿಲ್ಲೆಯ ರೈತರು ಸಂಕಷ್ಟದಲ್ಲಿ
ಈ ಘಟನೆ ಸ್ಥಳೀಯರಲ್ಲಿ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.




