ಬಲ್ಡೋಟ ಕಂಪನಿ ವಿರುದ್ಧ ಕೊಪ್ಪಳದಲ್ಲಿ ರೈತರು ನಡೆಸುತ್ತಿರುವ ನಿರ್ದಿಷ್ಟಾವಧಿ ಧರಣಿ 175 ದಿನ ಪೂರೈಸಿದ್ದು, ಹೋರಾಟಕ್ಕೆ ಹಿರಿಯ ಸಾಹಿತಿ, ಕವಿ ಕುಂ. ವೀರಭದ್ರಪ್ಪ ಹಾಗೂ ಆಳಂದ ವಿರಕ್ತ ಮಠದ ಕೋರಣೇಶ್ವರ ಸ್ವಾಮೀಜಿ ಬೆಂಬಲ ನೀಡಿದ್ದಾರೆ.
ಕಾರ್ಖಾನೆಗಳ ತ್ಯಾಜ್ಯ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಕುಂವೀ, “ಈ ಹಿಂದೆ ತುಂಗಾ ಪಾನಂ, ಗಂಗಾ ಸ್ನಾನಂ ಅಂತಾ ಹೇಳ್ತಿದ್ದರು. ಈಗ ಪರಿಸರ ವಿಜ್ಞಾನಿಗಳು, ಯಾವ ಕಾರಣಕ್ಕೂ ನದಿ ನೀರನ್ನ ಕುಡಿಯಬೇಡಿ ಅಂತಿದಾರೆ. ಕಾರ್ಖಾನೆಗಳು ಸೂಸುವ ತ್ಯಾಜ್ಯದಿಂದ ತುಂಗಭದ್ರಾ ನದಿ ವಿಷಪೂರಿತವಾಗಿದೆ. 157 ನಮೂನೆಯ ಜಲಚರಗಳು ನಾಶವಾಗಿವೆ. ಅದಕ್ಕೆ ಕಾರಣ ಕಾರ್ಖಾನೆಗಳು ನದಿಗೆ ಬಿಡುವ ವಿಷಕಾರಕ ತ್ಯಾಜ್ಯಗಳು. ಕಾರ್ಖಾನೆಗಳ ಸುತ್ತಲಿನ ಗ್ರಾಮಗಳ ಜನರು ಹೊಗೆಯನ್ನೇ ಉಸಿರಾಡಿ ಜೀವಿಸುವಂತಾವಿದೆ ಅಂತಾ ಆಕ್ರೋಶ ಹೊರಹಾಕಿದರು.
“ಮೊಬೈಲ್ ಫೋನುಗಳಲ್ಲಿ ಮುಳುಗುವ ಯುವಕರು ಎಚ್ಚೆತ್ತುಕೊಳ್ಳುವುದು ಯಾವಾಗ? ನಾಗರಿಕರಾಗಿ ನಮ್ಮ ಕರ್ತವ್ಯ ತುಂಬಾ ಮುಖ್ಯವಾದುದು.. 1974ರಲ್ಲಿ ಈ ದೇಶದ ರಾಜಕೀಯದ ಚಹರೆ ಬದಲಿಸಿದ್ದು ಜಯಪ್ರಕಾಶ್ ನಾರಾಯಣ್ ರ ನವನಿರ್ಮಾಣ ಚಳವಳಿ. ಇಂದು ಅದು ಅಸಾಧ್ಯ ಕಾರಣ, ಈಗಿನ ಯುವಕರೆಲ್ಲಾ 4g, 5g ಮೊಬೈಲಿನಲ್ಲಿ ಮುಳುಗಿರುವುದು. ಅವರಿಗೆ ವಾಸ್ತವದ ಜನ ಜೀವನ, ಪರಿಸರ ಪ್ರಜ್ಞೆ ಬೇಕಾಗಿಲ್ಲ. ಹಳ್ಳಿಗಳು ನಾಶ ಆದರೂ ಅವರಿಗೆ ಬೇಕಿಲ್ಲ. ಅವರಿಗೆ ಬೇಕಿರೋದು ಕ್ಯಾಲಿಫೋರ್ನಿಯಾ, ಷಿಕ್ಯಾಗೋ, ಆಸ್ಟ್ರೇಲಿಯಾ.. ಅಲ್ಲಿರೋಕೆ ಟ್ರೈ ಮಾಡ್ತಿದ್ದಾರೆ. ಅಂತಹ ಕನಸನ್ನು ಬಿತ್ತುವ ಶಿಕ್ಷಣ ವ್ಯವಸ್ಥೆ ಇರುವಲ್ಲಿ ಮನುಷ್ಯ ನಿಷ್ಕ್ರಿಯಗೊಳ್ಳುತ್ತಾನೆ. ಯುವಕರು ಹೋರಾಟಗಳಿಗೆ ಇಳಿಯುವುದಿಲ್ಲ” ಎಂದು ಅಭಿಪ್ರಾಯಿಸಿದರು.
ಧರ್ಮದ ಹೆಸರಿನಲ್ಲಿ ಮಾನವನ ಪ್ರಜ್ಞೆ ಕಳೆಯುವ ಕೆಲಸವಾಗುತ್ತಿದೆ
“ಅತ್ಯಂತ ಆಕರ್ಷಕ ದೇವಸ್ಥಾನಗಳು ಹೆಚ್ಚಾಗಿ ನಿರ್ಮಾಣ ಆಗಿರೋದು ಕಳೆದ 10 ವರ್ಷಗಳಲ್ಲಿ. ಧರ್ಮದ ಹೆಸರಿನಲ್ಲಿ ಮನುಷ್ಯನ ಪ್ರಜ್ಞೆ ಕಳೆಯುವ ಹಾಗೂ ಆಲೋಚನೆಗಳನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಲು ನಾವು ವಿಫಲರಾದಾಗ, ಯುವ ಪೀಳಿಗೆ ಹೋರಾಟಕ್ಕೆ ಇಳಿಯದಿದ್ದಾಗ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ” ಎಂದು ಎಚ್ಚರಿಸಿದರು.
ದೇಶದ ರಾಜಕೀಯದ ಸ್ಥಿತಿ ಬಗ್ಗೆ ಮಾತನಾಡಿದ ಕುಂವೀ, ʼಸೇಮ್ ಪಾಯಿಸನ್ ಇನ್ ಡಿಫರೆಂಟ್ ಬಾಟಲ್ಸ್ʼ ಎನ್ನುವ ಹಾಗೆ “ನಮ್ಮ ರಾಜಕೀಯ ವ್ಯವಸ್ಥೆ ಇದೆ. ಕೆಲವು ಪಕ್ಷಗಳು ಬೇಗ ಸಾಯಿಸುತ್ತವೆ. ಕೆಲವು ಪಕ್ಷಗಳು ನಿಧಾನಕ್ಕೆ ಸಾಯಿಸುತ್ತವೆ. ಆರ್ ವಿ ದೇಶಪಾಂಡೆ ಇರೋದು ಎಲ್ಲಿ? ಅವರು ಬಂದು ಇಲ್ಲಿ ಫ್ಯಾಕ್ಟರಿ ಹಾಕ್ತಾರೆ ಅಂದರೆ ಏನ್ರಿ?” ಎಂದು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ >ಕೊಪ್ಪಳ | ಕುಡುಕರ ಅಡ್ಡೆಯಾದ ಕೋಟಿ ವೆಚ್ಚದ ಜಲ ಘಟಕಗಳು; ಜನತೆಗೆ ಕೆರೆ ನೀರೇ ಗತಿಯೇ?
“ನಮ್ಮ ಜಿಡಿಪಿ 12% ಇದೆ, ಎಲ್ಲರೂ ಸರಿಯಾಗಿ ತೆರಿಗೆ ಪಾವತಿ ಮಾಡ್ತಿದ್ದಾರೆ ಅಂತಾ ಕೇಂದ್ರ ಸರ್ಕಾರ ಹಲವು ಬಾರಿ ಹೇಳಿದೆ. ಹಾಗಾದರೆ ತೆರಿಗೆ ಪಾವತಿ ಮಾಡ್ತಾ ಇರುವವರು ಯಾರು? ಜನ ಸಾಮಾನ್ಯರು ಅಂತಾ ಕುಂ ವೀರಭದ್ರಪ್ಪ ಅವರು ಹೇಳಿದರು. ದೊಡ್ಡ ದೊಡ್ಡ ಕಾರ್ಖಾನೆಗಳ ಮಾಲೀಕರು ಟ್ಯಾಕ್ಸ್ ಪೇ ಮಾಡ್ತಿರೋದು ಕೇವಲ 2 ಪರ್ಸೆಂಟ್ ಅಂತಾ ಹೇಳಿದರು. ಅಲ್ಲದೇ ʼಉಪವಾಸ ಸತ್ಯಾಗ್ರಹ ಮಾಡಿದ್ರೆ ಯಾರೂ ನೋಡಲ್ಲ, ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ಗೆಲುವು ಸಾಧ್ಯʼ ನರಕ ಸೃಷ್ಟಿ ಮಾಡುವ ಕಾರ್ಖಾನೆಗಳು ಇರಬಾರದು” ಎಂದು ಅವರು ಕರೆ ನೀಡಿದರು.
ಕಲಬುರಗಿಯ ಆಳಂದ ವಿರಕ್ತ ಮಠದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, “ನಕಲಿ ಗೋರಕ್ಷಕರು ಎಲ್ಲಿ ಅಡಗು ಕೂತಿದ್ದೀರಿ? ಕಾರ್ಖಾನೆಗಳ ಮಾಲಿನ್ಯದಿಂದ ಪ್ರಾಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಲುಷಿತ ನೀರು, ವಿಷಯುಕ್ತ ಗಾಳಿ ಸೇವಿಸಿ ಹಸುಗಳ ಗರ್ಭಪಾತ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಗೋರಕ್ಷಕರು ಕಾರ್ಖಾನೆಗಳ ವಿರುದ್ಧ ಹೋರಾಡಬೇಕಲ್ಲವೇ? ಎಂದು ಪ್ರಶ್ನಿಸಿದರು. ನಾಡು ನುಡಿ ಹೆಸರಿನ ಮೇಲೆ ವಸೂಲಿ ಮಾಡುವ ಸಂಘಟನೆಗಳು ಹೆಚ್ಚಾಗಿವೆ. ನೀವು ನಿಜವಾದ ಹೋರಾಟಗಾಗಿದ್ದಲ್ಲಿ ಪರಿಸರದ ಪರ ಹೋರಾಟ ಮಾಡಿ” ಎಂದು ಹೇಳಿಕೆ ನೀಡಿದರು.
ಈ ಹೋರಾಟದಲ್ಲಿ ಚಿಂತಕರಾದ ಶಾರದಾ ಗೋಪಾಲ್, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕರಾದ ಅಲ್ಲಮ ಪ್ರಭು ಬೆಟ್ಟದೂರು ಹಾಗೂ ಸಂಚಾಲಕರಾದ ಮಲ್ಲಿಕಾರ್ಜನ ಗೋನಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.





