ರಾಜ್ಯದಲ್ಲಿ ಆಹಾರ ಸುರಕ್ಷತೆ, ಹೋಟೆಲ್‌ಗಳ ಸ್ವಚ್ಛತೆ ಹಾಗೂ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕೈಗೊಂಡಿರುವ ಪ್ರಯತ್ನಗಳನ್ನು ಕಲಬುರಗಿ ಜಿಲ್ಲಾ ಹೋಟೆಲ್, ವಸತಿ ಮತ್ತು ಬೇಕರಿ ಮಾಲೀಕರ ಸಂಘ ಶ್ಲಾಘಿಸಿದೆ.
‘ಮಂಗಳವಾರ ಕಲಬುರಗಿಗೆ ಆಗಮಿಸಿದ್ದ ಸಚಿವರನ್ನು ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ನೇತೃತ್ವದ ನಿಯೋಗ ಭೇಟಿ ಮಾಡಿ ಸನ್ಮಾನಿಸಿತು. ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ, ಸ್ವಚ್ಛತೆ ಕಾಪಾಡುವುದು ಹಾಗೂ ಕಲಬೆರಕೆ ತಡೆಗಟ್ಟಲು ಕೈಗೊಂಡ ಕ್ರಮಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿವೆ’ ಎಂದು ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.
‘ಆಹಾರ ಸುರಕ್ಷತೆ ಪರಿಶೀಲನೆಯ ನೆಪದಲ್ಲಿ ಹೋಟೆಲ್ ಮತ್ತು ಬೇಕರಿ ಮಾಲೀಕರಿಗೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡಬಾರದು. ನಿಯಮಾನುಸಾರ ಪರಿಶೀಲನೆ ನಡೆಸುವ ಜೊತೆಗೆ ವ್ಯಾಪಾರಸ್ಥರನ್ನು ಬೆದರಿಸುವುದು ಮತ್ತು ಅನಗತ್ಯ ತೊಂದರೆ ನೀಡುವುದನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು’ ಎಂದು ಸಚಿವರಲ್ಲಿ ಮನವಿ ಮಾಡಲಾಯಿತು.
‘ಕ್ಯಾನ್ಸರ್ ಔಷಧಗಳ ಬೆಲೆ ಕಡಿತಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದ್ದು, ಇದಕ್ಕೆ ಸ್ಪಂದನೆ ದೊರೆತು ಔಷಧಗಳ ಬೆಲೆ ಇಳಿಕೆಯಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸಂಘದ ಪ್ರತಿನಿಧಿಗಳು ಅಭಿಪ್ರಾಯಪಟ್ಟರು. ಇದರಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ’ ಎಂದು ಹೇಳಿದರು.
‘ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಮಾತನಾಡಿ, ಜನಪರ ಯೋಜನೆಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಹಾಗೂ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಚಿವರು ಕೈಗೊಳ್ಳುತ್ತಿರುವ ಪ್ರಯತ್ನಗಳು ಸ್ವಾಗತಾರ್ಹ’ ಎಂದರು.
‘ಕರ್ನಾಟಕ ಪ್ರದೇಶ ಹೋಟೆಲ್ ಸಂಘದ ರಾಜ್ಯ ಪದಾಧಿಕಾರಿಗಳ ಸಮಾವೇಶವನ್ನು ಶೀಘ್ರದಲ್ಲೇ ಕಲಬುರಗಿಯಲ್ಲಿ ಆಯೋಜಿಸುವ ಉದ್ದೇಶವಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕು ಎಂದು ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಸಚಿವರನ್ನು ಆಹ್ವಾನಿಸಿದರು. ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಮಾನ್ಯತೆ ನೀಡಿ, ಉದ್ಯಮ ಸ್ನೇಹಿ ನೀತಿಗಳ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು’ ಎಂದು ಮನವಿ ಮಾಡಿದರು.
ಕಲಬುರಗಿಯಿಂದ ಮಂಗಳೂರಿಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸಲು ಸುಮಾರು 16 ಗಂಟೆಗಳ ಕಾಲಾವಕಾಶ ಬೇಕಾಗುವುದರಿಂದ, ಬೆಂಗಳೂರು ಮಾರ್ಗವಾಗಿ ವಿಮಾನ ಸಂಪರ್ಕ ಕಲ್ಪಿಸುವ ಅಥವಾ ವಿಸ್ತರಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ನಿಯೋಗ ಒತ್ತಾಯಿಸಿತು. ಈ ಬೇಡಿಕೆಯನ್ನು ಮೂಲಸೌಕರ್ಯ ಮತ್ತು ಭಾರಿ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರ ಗಮನಕ್ಕೂ ತರುವಂತೆ ಮನವಿ ಮಾಡಲಾಯಿತು.
ನಿಯೋಗದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಯು.ಟಿ. ಖಾದರ್, ಈ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಚರ್ಚಿಸುವುದಾಗಿ ಭರವಸೆ ನೀಡಿದರು. ಹೋಟೆಲ್ ಸಂಘದ ರಾಜ್ಯ ಪದಾಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಳ್ಳುವುದಾಗಿಯೂ ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮನೆಯ ಛಾವಣಿಯಲ್ಲಿ ಬೆಂಕಿ ಅವಘಡ
ನಿಯೋಗದಲ್ಲಿ ಸುನಿಲ್ ಶೆಟ್ಟಿ, ಶರಣು ಪಾಟೀಲ್ ಸಪ್ತಗಿರಿ, ಸಂತೋಷ್ ಪೂಜಾರಿ ಪಂಚಮಿ ಹಾಗೂ ಮಹಾಕೀರ್ತಿ ಶೆಟ್ಟಿ ಉಪಸ್ಥಿತರಿದ್ದರು.





