‘ರಾಮಾಯಣ’ ಚಿತ್ರದ ಯಶಸ್ಸಿನ ಬೆನ್ನಲ್ಲೇ, ನಟಿ ಸಾಯಿ ಪಲ್ಲವಿ ಅವರು ಧನುಷ್ ಮತ್ತು ಮಮ್ಮುಟ್ಟಿ ಅವರೊಂದಿಗೆ ನಟಿಸಿರುವ ‘ಓಂ: ಚಾಪ್ಟರ್ ಒನ್’ ಸಿನಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಕಳೆದ ವಾರ ನಡೆದ ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಪಲ್ಲವಿ, “ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ಅವರಂತೆ ರಾಜಕೀಯ ಸೇರುವ ಸಲುವಾಗಿ ಸಿನಿಮಾಗಳನ್ನು ಬಿಡಬೇಡಿ, ನಟನೆಯನ್ನು ಮುಂದುವರಿಸಿ” ಎಂದು ನಟ ಧನುಷ್ ಅವರಿಗೆ ಮನವಿ ಮಾಡಿದ್ದಾರೆ.
ಚೆನ್ನೈನ ತಾಂಬರಂನಲ್ಲಿನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಮಾರಂಭದ ಸ್ಥಳಕ್ಕೆ ಬರುವ ದಾರಿಯಲ್ಲಿ ಸಾಕಷ್ಟು ರಾಜಕೀಯ ಧ್ವಜಗಳನ್ನು ನೋಡಿದೆ. ಇದು ಯಾವುದೋ ರಾಜಕೀಯ ಸಮಾವೇಶದಂತೆ ಭಾಸವಾಯಿತು” ಎಂದು ತಮಾಷೆಯಾಗಿ ಹೇಳಿದರು.
ಧನುಷ್ ಅವರನ್ನು ಉದ್ದೇಶಿಸಿ ಮಾತನಾಡಿದ ಸಾಯಿ ಪಲ್ಲವಿ, “ನೀವು ಏನೇ ಮಾಡಿದರೂ ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಆದರೆ, ನನ್ನೊಳಗಿನ ಕಲಾವಿದೆ ವಿಜಯ್ ಸರ್ ನಟನೆ ನಿಲ್ಲಿಸಿ ರಾಜಕೀಯಕ್ಕೆ ಹೋಗಿರುವುದರ ಬಗ್ಗೆ ಯಾವಾಗಲೂ ಯೋಚಿಸುತ್ತಿರುತ್ತಾಳೆ. ಹೀಗಾಗಿ, ಧನುಷ್ ಅವರು ಕೂಡ ಅದೇ ದಾರಿ ಹಿಡಿಯಬಾರದು. ಅವರು ನಟನೆಯನ್ನು ಮುಂದುವರಿಸಲಿ ಎಂದು ನಾನು ಆಶಿಸುತ್ತೇನೆ ಮತ್ತು ವಿನಂತಿಸುತ್ತೇನೆ” ಎಂದರು.
ಪ್ರೇಕ್ಷಕರಿಗೆ ಧನುಷ್ ಅವರ ಸಿನಿಮಾಗಳು ಏಕೆ ಮುಖ್ಯ ಎಂಬುದನ್ನು ವಿವರಿಸಿದ ಸಾಯಿ ಪಲ್ಲವಿ, “ಧನುಷ್ ಅವರ ನಟನೆ ಮತ್ತು ಅವರು ನೀಡುವ ನೈಜ ಕಥೆಗಳು ಪ್ರೇಕ್ಷಕರ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತವೆ. ‘ಪೊಲ್ಲಾಧವನ್’ ಚಿತ್ರದ ನಂತರ ಎಷ್ಟೋ ಜನರು ಆ ಬೈಕ್ ಖರೀದಿಸಿ, ಅವರ ಶೈಲಿಯನ್ನು ಅನುಕರಿಸಿದ್ದರು. ಅಂತಹ ಪ್ರಭಾವ ಬೀರಲು ನಿಜವಾದ ಕಲಾವಿದನಿಂದ ಮಾತ್ರ ಸಾಧ್ಯ. ಆದ್ದರಿಂದ, ಧನುಷ್ ಯಾವುದೇ ದಾರಿಯನ್ನು ಆರಿಸಿಕೊಂಡರೂ ದಯವಿಟ್ಟು ನಟನೆಯನ್ನು ಮಾತ್ರ ನಿಲ್ಲಿಸಬಾರದು. ಇಲ್ಲವಾದರೆ ನಾವೆಲ್ಲರೂ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಳ್ಳುತ್ತೇವೆ” ಎಂದು ಮನವಿ ಮಾಡಿದರು.
ಈ ಲೇಖನ ಓದಿದ್ದೀರಾ?: ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ ಸಿಲುಕಿದ ಸತ್ಯಾನ್ವೇಷಣೆ!
ಕಳೆದ ಕೆಲವು ತಿಂಗಳುಗಳಿಂದ ಧನುಷ್ ಅವರ ರಾಜಕೀಯ ಪ್ರವೇಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಧನುಷ್ ಅವರ ತಂದೆ, ನಿರ್ಮಾಪಕ ಕಸ್ತೂರಿ ರಾಜಾ ಅವರು, “ಧನುಷ್ ಪಕ್ಷ ಕಟ್ಟಿದರೆ ಕಟ್ಟುತ್ತಾರೆ, ಇಲ್ಲದಿದ್ದರೆ ಇಲ್ಲ; ನನ್ನ ಮಗನಿಗೆ ಮಾತ್ರವಲ್ಲದೆ ಮೊಮ್ಮಕ್ಕಳಿಗೂ ಅವರು ಇಚ್ಚಿಸಿದರೆ ರಾಜಕೀಯಕ್ಕೆ ಬರುವ ಹಕ್ಕಿದೆ” ಎಂದು ಹೇಳಿದ್ದರು. ನಂತರ ರಕ್ತದಾನ ಶಿಬಿರವೊಂದರಲ್ಲಿ ಮಾತನಾಡಿದ್ದ ಧನುಷ್, ಸಿನಿಮಾಗಿಂತ ದೊಡ್ಡದಾದ ಉದ್ದೇಶವನ್ನು ಕಂಡುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದರು. ಇದು ಅವರ ರಾಜಕೀಯ ಪ್ರವೇಶದ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಧನುಷ್ ಈ ವದಂತಿಗಳ ಬಗ್ಗೆ ಇದುವರೆಗೂ ನೇರವಾಗಿ ಪ್ರತಿಕ್ರಿಯಿಸಿಲ್ಲ.
ಇನ್ನು ‘ಓಂ: ಚಾಪ್ಟರ್ ಒನ್’ ಸಿನಿಮಾವನ್ನು ರಾಜ್‌ಕುಮಾರ್ ಪೆರಿಯಸಾಮಿ ಬರೆದು ನಿರ್ದೇಶಿಸಿದ್ದಾರೆ. ಇದೊಂದು ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರವೆಂದು ಹೇಳಲಾಗಿದ್ದು, ಸಿನಿಮಾದಲ್ಲಿ ಧನುಷ್ ನಾಯಕನಾಗಿ ನಟಿಸಿದ್ದು, ಮಮ್ಮುಟ್ಟಿ, ನಾಸಿರುದ್ದೀನ್ ಶಾ, ಸಾಯಿ ಪಲ್ಲವಿ, ಶ್ರೀಲೀಲಾ ಹಾಗು ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.


