ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿಗೆ ಸಂಬಂಧಿಸಿದ ಪಾಸ್ಪೋರ್ಟ್ ವಿವಾದದ ಪ್ರಕರಣದಲ್ಲಿ” ಬಂಧನದ ಮೂಲಕ ನನ್ನನ್ನು ಅವಮಾನಿಸುವ ಅಗತ್ಯವಿಲ್ಲ” ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಪವನ್ ಖೇರಾ ಅವರ ನಿರೀಕ್ಷಿತ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಮತ್ತು ಎ ಎಸ್ ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಅರ್ಜಿಯ ಕಾಯ್ದಿರಿಸಿದೆ.
ವಿಚಾರಣೆಯ ಸಮಯದಲ್ಲಿ ಖೇರಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ” ಈ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಯಾಗಬೇಕಿದೆಯೇ ಹೊರತು, ಪೊಲೀಸ್ ವಶಕ್ಕೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಖೇರಾ ಅವರ ವಿರುದ್ಧ ಹೊರಿಸಲಾಗಿರುವ ಕೆಲವು ಕಲಂಗಳು ಜಾಮೀನು ಪಡೆಯಬಹುದಾದ ಸ್ವರೂಪದವು, ಇನ್ನು ಕೆಲವು ಬಂಧನದ ಅಗತ್ಯವಿಲ್ಲದವುಗಳಾಗಿವೆ. ಒಂದು ವೇಳೆ ಅಸ್ಸಾಂನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಿತ ಜಾಮೀನು ಸಿಗದಿದ್ದರೆ, ಬಂಧನಪೂರ್ವ ಜಾಮೀನು ಕಾನೂನಿನ ಉದ್ದೇಶವೇ ವಿಫಲವಾದಂತೆ” ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟರು.
ಇದನ್ನು ಓದಿದ್ದೀರಾ? ತಮಿಳುನಾಡಿನ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ
ಇನ್ನೊಂದೆಡೆ, ಅಸ್ಸಾಂ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಖೇರಾ ಅವರ ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದರು. “ಪವನ್ ಖೇರಾ ಅವರು ಮುಖ್ಯಮಂತ್ರಿಯವರ ಪತ್ನಿಯ ‘ನಕಲಿ’ ಮತ್ತು ‘ತಿದ್ದಲ್ಪಟ್ಟ’ ಪಾಸ್ಪೋರ್ಟ್ ಪ್ರತಿಗಳನ್ನು ಪ್ರದರ್ಶಿಸಿದ್ದಾರೆ. ಅವರು ತಲೆಮರೆಸಿಕೊಂಡು ವಿಡಿಯೋಗಳ ಮೂಲಕ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ದ್ವಿಪೌರತ್ವದ ಕುರಿತಾದ ಅವರ ಆರೋಪಗಳು ಸಂಪೂರ್ಣ ಸುಳ್ಳು” ಎಂದು ಮೆಹ್ತಾ ವಾದ ಮಂಡಿಸಿದರು.
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರ ಕುರಿತು ಪವನ್ ಖೇರಾ ಮಾಡಿದ ಆರೋಪಗಳ ನಂತರ, ಗುವಾಹಟಿ ಕ್ರೈಂ ಬ್ರಾಂಚ್ನಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಗುವಾಹಟಿ ಹೈಕೋರ್ಟ್ ಅವರ ನಿರೀಕ್ಷಿತ ಜಾಮೀನನ್ನು ತಿರಸ್ಕರಿಸಿತ್ತು.
ಇದಕ್ಕೂ ಮುನ್ನ, ತೆಲಂಗಾಣ ಹೈಕೋರ್ಟ್ ಅವರಿಗೆ 7 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಅಸ್ಸಾಂ ಪೊಲೀಸರು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ, ಸುಪ್ರೀಂ ಕೋರ್ಟ್ ಆ ಜಾಮೀನಿಗೆ ತಡೆ ನೀಡಿ, ಗುವಾಹಟಿ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಖೇರಾ ಅವರಿಗೆ ಸೂಚಿಸಿತ್ತು. ಈಗ ಸುಪ್ರೀಂ ಕೋರ್ಟ್ ಈ ಪ್ರಕರಣದ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.




