ರಿಯಾದ್ : ಮಕ್ಕಾ ಒಪ್ಪಂದದಡಿ ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು , ಇದೀಗ ಯೆಮೆನ್‌ನ ಹೌತಿಗಳ ದಾಳಿಗಳನ್ನು ಎದುರಿಸಲು ಗಲ್ಫ್ ರಾಷ್ಟ್ರವಾದ ಸೌದಿ ಅರೇಬಿಯಾಗೆ ತ್ವರಿತವಾಗಿ ಸೇನಾ ಪಡೆಗಳನ್ನು ನಿಯೋಜಿಸಲು ಒಪ್ಪಿಕೊಂಡಿವೆ.
ಆಗಸ್ಟ್ 7ರಂದು ಸಹಿ ಮಾಡಲಾದ “ಮಕ್ಕಾ ರಕ್ಷಣಾ ಮೈತ್ರಿ” ಒಪ್ಪಂದವನ್ನು ಇದೇ ಮೊದಲ ಬಳಸಿಕೊಳ್ಳಲಾಗುತ್ತಿದೆ.
ಈ ಒಪ್ಪಂದದ ಪ್ರಕಾರ, ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ನಡೆಯುವ ದಾಳಿಯನ್ನು ಮೂರು ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇದು ನ್ಯಾಟೋ ಸ್ಥಾಪನಾ ಒಪ್ಪಂದದಲ್ಲಿರುವ ಪ್ರಮುಖ ನಿಯಮವನ್ನು ಹೋಲುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌದಿ ಅರೇಬಿಯಾದ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್,
“ಮೈತ್ರಿಯ ಚೌಕಟ್ಟಿನೊಳಗೆ ಸಾಮೂಹಿಕ ತಡೆ ಕ್ರಮಗಳನ್ನು ಸಕ್ರಿಯಗೊಳಿಸಲು ಸಮಿತಿ ಒಪ್ಪಿಕೊಂಡಿದೆ. ಈ ಕ್ರಮಗಳು ದಾಳಿಗಳಿಗೆ ಮತ್ತು ಅವುಗಳಿಗೆ ಹೊಣೆಗಾರರಾಗಿರುವ ಎಲ್ಲರ ವಿರುದ್ಧ ಕೈಗೊಳ್ಳಲಾಗುವುದು” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಹೇಳಿದ್ದಾರೆ.:
ಮೂರು ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರು ರಿಯಾದ್‌ನಲ್ಲಿ ತುರ್ತು ಸಭೆ ನಡೆಸಿದ ನಂತರ ಸೋಮವಾರ ಈ ನಿರ್ಧಾರವನ್ನು ಪ್ರಕಟಿಸಲಾಯಿತು.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಪ್ರಕಟಿಸಿದ ಪ್ರತ್ಯೇಕ ಜಂಟಿ ಹೇಳಿಕೆಯಲ್ಲಿ, ಮೂರು ದೇಶಗಳು ಒಪ್ಪಿಕೊಂಡಿರುವ ಸೇನಾ ಪಡೆಗಳು ಮತ್ತು ಅಗತ್ಯ ಸಾಮರ್ಥ್ಯಗಳನ್ನು ಒದಗಿಸಿ, ಅವುಗಳನ್ನು ಸೌದಿ ಅರೇಬಿಯಾಗೆ ತ್ವರಿತವಾಗಿ ನಿಯೋಜಿಸುವುದಾಗಿ ತಿಳಿಸಲಾಗಿದೆ.
ಹೌತಿಗಳು ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಮರಳಿ ಪಡೆಯಲು ಪ್ರತಿದಾಳಿ ಆರಂಭಿಸಿದ ಬೆನ್ನಲ್ಲೇ ಈ ಘೋಷಣೆಗಳು ಹೊರಬಿದ್ದಿವೆ.
ಏನಿದು ಮಕ್ಕಾ ರಕ್ಷಣಾ ಮೈತ್ರಿ ಒಪ್ಪಂದ ?
ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಸಂಘರ್ಷಗಳಿಗೆ ಪ್ರತಿಕ್ರಿಯೆಯಾಗಿ ಮಕ್ಕಾ ರಕ್ಷಣಾ ಮೈತ್ರಿ ರೂಪುಗೊಂಡಿದೆ. ಈ ಸಂಘರ್ಷಗಳ ತೀವ್ರತೆಗೆ ಅಮೆರಿಕ ಮತ್ತು ಇಸ್ರೇಲ್ ನಡುವಿನ ಇರಾನ್ ಯುದ್ಧವೂ ಕಾರಣವಾಗಿದೆ. ಈ ರಕ್ಷಣಾ ಒಪ್ಪಂದಕ್ಕೆ ಆಗಸ್ಟ್‌ನಲ್ಲಿ ಸಹಿ ಹಾಕಲಾಗಿತ್ತು.
2026ರ Global Firepower Index ಪ್ರಕಾರ, ಮೂರು ದೇಶಗಳ ಸೇನಾ ಸಾಮರ್ಥ್ಯಗಳನ್ನು ಒಟ್ಟಾಗಿ ಪರಿಗಣಿಸಿದರೆ , 14 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ , 6,000 ಟ್ಯಾಂಕ್‌ಗಳು ಮತ್ತು 340ಕ್ಕೂ ಹೆಚ್ಚು ನೌಕಾ ಸೇನಾ ಸಂಪನ್ಮೂಲಗಳು ಇವೆ.




