ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 13ರಲ್ಲಿ ನೈಜ ಹಾಗೂ ಸಕ್ರಿಯ ಮತದಾರರ ವಿರುದ್ಧವೇ ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿರುವ ಆರೋಪ ಕೇಳಿಬಂದಿದೆ. ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಆಧಾರರಹಿತ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 13ರಲ್ಲಿ ಸುಮಾರು 50 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳಲ್ಲಿ ಆಕ್ಷೇಪಿಸಲಾದ ಹಲವರು ನೈಜವಾಗಿ ಅದೇ ಪ್ರದೇಶದಲ್ಲಿ ವಾಸವಾಗಿರುವ ಸಕ್ರಿಯ ಮತದಾರರು. ಈ ಪೈಕಿ ಕೆಲ ಅರ್ಜಿಗಳಲ್ಲಿ ನೀಡಿರುವ ಕಾರಣಗಳು ಹಾಗೂ ಅರ್ಜಿ ಸಲ್ಲಿಸಿದವರ ವಿವರಗಳ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಅಮಿತಕುಮಾರ್ ಎಂಬ ವ್ಯಕ್ತಿ ಸ್ಥಳೀಯವಾಗಿ ವಾಸವಿರುವ ಅನ್ವಾರ್ ಎಂಬ ನೈಜ ಮತದಾರರ ವಿರುದ್ಧ ಫಾರಂ-7 ಸಲ್ಲಿಸಿ ‘ಶಾಶ್ವತ ಸ್ಥಳಾಂತ/ ಗೈರು’ ಎಂದು ಕ್ಲಿಕ್ ಮಾಡಿದ್ದು, ಆಕ್ಷೇಪಣೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ಹೆಸರು, ಮೊಬೈಲ್ ನಂಬರ್ ಬಿಟ್ಟರೆ ಉಳಿದ ಎಲ್ಲವೂ ಪೂರ್ವ ಮುದ್ರಿತ ಆರ್ಜಿಯಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಅರ್ಜಿ ಸಲ್ಲಿಕೆಯಾದ ಬಳಿಕ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಅನ್ವಾರ್ ಎಂಬುವವರು ನೈಜ ಮತದಾರರು, ಹಲವು ವರ್ಷಗಳಿಂದ ಅದೇ ಪ್ರದೇಶದಲ್ಲಿ ವಾಸವಾಗಿದ್ದು, ಸಕ್ರಿಯ ಮತದಾರರಾಗಿರುವುದು ದೃಢಪಟ್ಟಿದೆ. ಹಲವು ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಾಗಿದ್ದು, ಪ್ರತಿಯೊಂದು ಚುನಾವಣೆಯಲ್ಲೂ ಮತದಾನ ಮಾಡಿರುವುದಾಗಿ ಅನ್ವಾರ್ ತಿಳಿಸಿದ್ದಾರೆ.
“ನಾನು ಹಲವು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇನೆ. ಇದೇ ಮತಗಟ್ಟೆಯ ಮತದಾರ. ಪ್ರತಿಯೊಂದು ಚುನಾವಣೆಯಲ್ಲೂ ಮತದಾನ ಮಾಡುತ್ತಾ ಬಂದಿದ್ದೇನೆ. ಆದರೆ ಅನಧೀಕೃತ ವ್ಯಕ್ತಿಯೊಬ್ಬರು ನನ್ನ ಮತ ಡಿಲೀಟ್ ಮಾಡುವಂತೆ ಫಾರಂ-7 ಸಲ್ಲಿಸಿರುವುದು ಗೊತ್ತಾಗಿದೆ. ಬಳಿಕ ಬಿಎಲ್‌ಒ ಅರ್ಜಿ ಪರಿಶೀಲನೆ ನಡೆಸಿದ್ದು, ದೂರು ಆಧಾರ ರಹಿತವಾಗಿರುವುದರಿಂದ ಅರ್ಜಿಯನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ” ಎಂದು ಅನ್ವಾರ್ ಹೇಳಿದ್ದಾರೆ.
ಎಸ್‌ಡಿಪಿಐ ಮುಖಂಡ ಅತೀಕ್ ಅವರ ಆರೋಪದ ಪ್ರಕಾರ, ಭಾಗ ಸಂಖ್ಯೆ 13ರಲ್ಲಿ ಸುಮಾರು 50 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಕೆಲವು ಅರ್ಜಿಗಳ ಹಿಂದೆ ನಿಜವಾದ ಆಕ್ಷೇಪದಾರರೇ ಇದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಅನ್ವಾರ್ ವಿರುದ್ಧ ಫಾರಂ-7 ಸಲ್ಲಿಸಿದ ಅಮಿತಕುಮಾರ್ ಅವರನ್ನು ಸಂಪರ್ಕಿಸಿದಾಗ, ʼನಾವು ಹೊಲ-ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುವವರು. ಫಾರಂ-7 ಅರ್ಜಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೆಸರಿನಲ್ಲಿ ಅಥವಾ ತಮ್ಮ ಮೂಲಕ ಅರ್ಜಿ ಸಲ್ಲಿಕೆಯಾಗಿರುವುದೇ ಗೊತ್ತಿಲ್ಲ ಎಂದು ಕೆಲವರು ಹೇಳಿರುವುದು ಪ್ರಕರಣದ ಕುರಿತು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನೈಜ ಮತದಾರರನ್ನು ಮತಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳು ಯಾರು ಸಲ್ಲಿಸಿದರು, ಇವು ಪೂರ್ವ ಮುದ್ರಿತ ಅರ್ಜಿಗಳೇ ಎಂಬುದನ್ನು ಪರಿಶೀಲಿಸಬೇಕೆಂಬ ಒತ್ತಾಯ ಬಲವಾಗಿ ಕೇಳಿಬಂದಿದೆ.
ರಾಯಚೂರು ನಗರ ಕ್ಷೇತ್ರದ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮತದಾರರ ಹೆಸರುಗಳನ್ನು ಗುರಿಯಾಗಿಸಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರವಾಗಿ ದೃಢೀಕರಿಸಲಾದ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಅರ್ಜಿಗಳ ಮಾದರಿ, ಅರ್ಜಿದಾರರ ವಿವರ ಹಾಗೂ ಪರಿಶೀಲನಾ ಪ್ರಕ್ರಿಯೆಯನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಭಾಗ ಸಂಖ್ಯೆ 13ರ ಬಿಎಲ್‌ಒ ಅಧಿಕಾರಿಯನ್ನು ಸಂಪರ್ಕಿಸಿದಾಗ, “ಫಾರ್ಮ್-7 ಅರ್ಜಿಯಲ್ಲಿ ಉಲ್ಲೇಖಿಸಿರುವ ಸುಮಾರು 50 ಮಂದಿಯೂ ನೈಜ ಮತದಾರರಾಗಿದ್ದಾರೆ. ಮತದಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಿ, ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮಾನುಸಾರ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಕಾನೂನುಬದ್ಧ ಅವಕಾಶವಿದ್ದರೂ, ತಪ್ಪು ಮಾಹಿತಿ ಅಥವಾ ಆಧಾರರಹಿತ ಕಾರಣಗಳನ್ನು ನೀಡಿ ಅರ್ಜಿ ಸಲ್ಲಿಸಲಾಗಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಅರ್ಜಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆ, ವಿಳಾಸ, ಗುರುತಿನ ವಿವರಗಳು, ದಾಖಲೆಗಳು ಹಾಗೂ ಅರ್ಜಿ ಸಲ್ಲಿಸಿದ ವಿಧಾನವನ್ನು ಪರಿಶೀಲಿಸಿದರೆ ನೈಜ ಅರ್ಜಿದಾರರು ಯಾರು ಎಂಬುದು ಪತ್ತೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಎಸ್‌ಐಟಿ ತನಿಖೆಗೆ ಆಗ್ರಹ
ನೈಜ ಮತದಾರರ ವಿರುದ್ಧ ಆಧಾರರಹಿತವಾಗಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿರುವುದು ಸಾಬೀತಾದರೆ, ಅಂತಹ ಅರ್ಜಿಗಳನ್ನು ತಿರಸ್ಕರಿಸುವುದರ ಜೊತೆಗೆ, ತಪ್ಪು ಮಾಹಿತಿ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಭಾಗ ಸಂಖ್ಯೆ 13ರಲ್ಲಿ ಸಲ್ಲಿಕೆಯಾಗಿರುವ ಎಲ್ಲ ಫಾರ್ಮ್-7 ಅರ್ಜಿಗಳನ್ನೂ ಸಮಗ್ರವಾಗಿ ಪರಿಶೀಲಿಸಿ, ಅವುಗಳ ಹಿಂದೆ ಸಂಘಟಿತ ಪ್ರಯತ್ನವಿದೆಯೇ, ಅರ್ಜಿದಾರರ ವಿವರಗಳು ನಿಜವೇ, ದಾಖಲೆಗಳನ್ನು ಯಾರು ಒದಗಿಸಿದ್ದಾರೆ ಮತ್ತು ಅರ್ಜಿಗಳನ್ನು ಯಾವ ರೀತಿಯಲ್ಲಿ ಸಲ್ಲಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಎಸ್‌ಐಟಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಇದನ್ನೂ ಓದಿ : ಪಂಚಾಯತ್ ಚುನಾವಣೆಗೆ ಕರಡು ಮೀಸಲು ಸಿದ್ಧ: ಈಶ್ವರ ಖಂಡ್ರೆ
ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರನ್ನು ಕೈಬಿಡುವುದಲ್ಲ; ಪಟ್ಟಿಯನ್ನು ನಿಖರಗೊಳಿಸುವುದಾಗಿದೆ. ಹೀಗಾಗಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಯಾವುದೇ ನೈಜ ಮತದಾರರ ಹೆಸರು ತಪ್ಪಾಗಿ ಅಳಿಸಲ್ಪಡದಂತೆ ಪಾರದರ್ಶಕತೆ ಮತ್ತು ಎಚ್ಚರಿಕೆ ಅಗತ್ಯ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



