ಭಾವನಾತ್ಮಕ, ಧಾರ್ಮಿಕ ವಿಷಯಗಳನ್ನು ಮುಂದಿಟ್ಟು, ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಈ ದೇಶವನ್ನು ಬರ್ಬಾದ್ ಮಾಡಲು ಹೊರಟಿರುವ ಆರ್‌ಎಸ್‌ಎಸ್ ಪಿಡುಗು ಈ ದೇಶಕ್ಕೆ ಅಂಟಿರುವ ಕ್ಯಾನ್ಸರ್, ಏಡ್ಸ್ ಆಗಿದೆ ಎಂದು ಕಲಬುರಗಿಯ ಚಿಂತಕಿ ಮೀನಾಕ್ಷಿ ಬಾಳಿ ಹೇಳಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಸೌಹಾರ್ದ ಕರ್ನಾಟಕ ಸಂಘಟನೆ ಜಂಟಿಯಾಗಿ ಗುರುವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಜೂ. 28ರಂದು ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
“ಹಿಂದೂ ಸಮಾವೇಶ ಆಯೋಜಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ನಿರ್ನಾಮಗೊಳಿಸಿ, ಶರಣರನ್ನು ಕೊಲೆಗೈದ ಸನಾತನವಾದಿಗಳು ಇಂದು ಬಸವಾದಿ ಶರಣರ ಶೋಗು ಹಾಕಿಕೊಂಡು ಬರುತ್ತಿದ್ದಾರೆ. ಬಸವಾದಿ ಶರಣರ ಪದವನ್ನು ಹಿಂದೂ ಸಮಾವೇಶಕ್ಕೆ ಬಳಸುವುದಕ್ಕೆ ನಮ್ಮ ಆಕ್ಷೇಪವಿದೆ” ಎಂದು ಹೇಳಿದರು.
“ಲಿಂಗಾಯತ ಮಠಾಧೀಶರನ್ನು ಬಳಸಿಕೊಂಡು ಶರಣತತ್ವ ತಿರುಚಿ ಹಾಳಗೆಡುವ ವ್ಯವಸ್ಥಿತ ಹುನ್ನಾರ ರಾಜ್ಯದಲ್ಲಿ ಕೆಲ ವರ್ಷಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಈಗಾಗಲೇ ರಾಜ್ಯದ ವಿವಿಧೆಡೆ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿದ್ದೇವೆ. ಜೂ.28ರಂದು ಬಸವಕಲ್ಯಾಣದಲ್ಲಿ ನಡೆಸಲು ಉದ್ದೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶ ಖಂಡಿಸಿ ಶಾಂತಿಯುತ ಪ್ರತಿಭಟನೆ ಮಾಡೇ ಮಾಡುತ್ತೇವೆ. ರಾಜ್ಯದ ಎಲ್ಲ ಕಡೆಯಿಂದ ಬಸವಣ್ಣನವರ ಅನುಯಾಯಿಗಳು, ಸ್ವಾಮೀಜಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಹೋರಾಟ ನಿಂತಿಲ್ಲ, ನಮ್ಮದು ತಾತ್ವಿಕ, ಸೈದ್ಧಾಂತಿಕ ಸಂಘರ್ಷ ಹೊರತು ವೈಯಕ್ತಿಕವಾದುದಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಶರಣ-ಜಂಗಮ ತತ್ವ ಬಹಳ ವಿಶಾಲವಾಗಿದೆ. ಲಿಂಗಾಯತ ಎಂಬುದು ಒಂದು ಜಾತಿಯಲ್ಲ. ಯಾರು ಬಸವತತ್ವವನ್ನು ನಂಬಿ ಆಚರಿಸಿ, ಶರಣತತ್ವ ತಮ್ಮ ಬದುಕಿನಲ್ಲಿ ಅನುಸರಿಸುತ್ತಾರೊ ಅವರೆಲ್ಲರೂ ಲಿಂಗಾಯತರು. ಆರ್‌ಎಸ್‌ಎಸ್‌ಗೆ ಮುಖವಿಲ್ಲ. ಅವರು ಲಿಂಗಾಯತ ಸ್ವತಂತ್ರ ಧರ್ಮ ಒಪ್ಪುವುದಿಲ್ಲ. ಅದು ಬೇರೆ ಬೇರೆ ಹೆಸರುಗಳನ್ನಿಟ್ಟುಕೊಂಡು ಬರುತ್ತದೆ. ಅದೊಂದು ನಾಟಕ ಕಂಪನಿ. ಅದರ ಕುತಂತ್ರ ಅರ್ಥವಾಗದಷ್ಟು ಕಲ್ಯಾಣ ನಾಡಿನ ಜನ ದಡ್ಡರಿಲ್ಲ, ಮೂರ್ಖರಲ್ಲ. ಜನರನ್ನು ದಿಕ್ಕು ತಪ್ಪಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಮಾವೇಶದ ವಿರುದ್ಧ ಪ್ರತಿಭಟನೆ ನಡೆಸಿ, ಇವರ ಹುನ್ನಾರ ಬಹಿರಂಗಗೊಳಿಸುತ್ತೇವೆ” ಎಂದರು.
ಚಿಂತಕಿ ಕೆ.ನೀಲಾ ಮಾತನಾಡಿ, “ಲಿಂಗಾಯತ ಎಂಬ ತತ್ವ ಇಂದು ಆರ್‌ಎಸ್‌ಎಸ್‌ನ ಮನುಸ್ಮೃತಿಗೆ ದೊಡ್ಡ ಸವಾಲಾಗಿ, ನುಂಗಲಾರದ ತುತ್ತಾಗಿದೆ. ಶರಣರು ಮನುಸ್ಮೃತಿ ಧಿಕ್ಕರಿಸಿ ಸಮಾನತೆ ಮುನ್ನೆಲೆಗೆ ತಂದಿದ್ದರು. ಈಗ ಬಸವಾದಿ ಶರಣರ ಹಿಂದೂ ಸಮಾವೇಶದ ಛದ್ಮವೇಷದಲ್ಲಿ ವಚನ ಚಳವಳಿಯನ್ನು ನಾಶ ಮಾಡಲು ಹೊರಟಿದ್ದಾರೆ. ವಚನಗಳನ್ನು ಬೇಕಾದ ರೀತಿಯಲ್ಲಿ ಅರ್ಥೈಸಿ ಹೇಳುತ್ತಿದ್ದು, ಬಸವತತ್ವ ಪ್ರಚಾರಕನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಕೂಡಲೇ ನಿಲ್ಲಿಸಬೇಕು. ಲಿಂಗಾಯತ ಪ್ರತ್ಯೇಕ ಸ್ವತಂತ್ರ ಧರ್ಮ ಮಾನ್ಯತೆ ಕೊಡುವುದಿಲ್ಲ ಎಂದು ಬಿಜೆಪಿಯ ವಕ್ತಾರ ಸಂತೋಷ ಜೀ ಅವರೇ ಹೇಳಿದ್ದಾರೆ. ವಚನ ಸಾಹಿತ್ಯ ಎಂದೂ ಮನುವಾದ ಒಪ್ಪಲ್ಲ. ಅವರ ಸಮಾವೇಶದಲ್ಲಿ ವಚನ ಸಾಹಿತ್ಯ ಅಪ್ಪಿಕೊಳ್ಳುತ್ತೇವೆ, ಮನುಸ್ಮೃತಿ ದಿಕ್ಕರಿಸುತ್ತೇವೆ, ಲಿಂಗಾಯತ ಸ್ವತಂತ್ರ ಧರ್ಮ ಆಗಲೆಂದು ಹೇಳುತ್ತಾರೆಯೇ ಎಂದು ಪ್ರಶ್ನಿಸಿದರು.
“ನ್ಯಾಯಾಲಯವು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಬಸವಕಲ್ಯಾಣ ಸಮಾವೇಶದಲ್ಲಿ ಭಾಗವಹಿಸಲು ಅನುಮತಿ ನೀಡಿದ್ದು, ಅಲ್ಲಿ ಅವರು ಮಾತನಾಡದಂತೆ ನಿರ್ಬಂಧ ಹೇರಿದ್ದು ಸಾಕು ಎನ್ನಬಹುದು. ಆದರೆ, ನಮಗೆ ವ್ಯಕ್ತಿಗಿಂತ. ತತ್ವ ಮುಖ್ಯ. ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸಿ ನಾಡಿನ ವಚನ ಚಳವಳಿಯನ್ನು ನಾಶಪಡಿಸುವುದು ಇವರ ಷಡ್ಯಂತ್ರ ಅಡಗಿದೆ” ಎಂದರು.
ಹಿರಿಯ ಚಿಂತಕ ಆರ್.ಕೆ.ಹುಡಗಿ ಮಾತನಾಡಿ, “ಈ ದೇಶದಲ್ಲಿ ಆರ್‌ಎಸ್‌ಎಸ್ ತತ್ವವನ್ನು ತಾತ್ವಿಕವಾಗಿ ವಿರೋಧಿಸಿ ಹಿಮ್ಮೆಟ್ಟಿ ನಿಲ್ಲುವ ಶಕ್ತಿ ಬಸವಾದಿ ಶರಣರ ಲಿಂಗಾಯತ ಧರ್ಮಕ್ಕೆ ಮಾತ್ರ ಇದೆ. ದೇಶದ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮಾತ್ರ ಸಂಘ ಪರಿವಾರದ ವಿಚಾರಧಾರೆಯನ್ನು ವಿರೋಧಿಸಿ ಪ್ರತಿರೋಧ ಒಡ್ಡುವ ಸಾಮರ್ಥ್ಯ ಶರಣತತ್ವಕ್ಕೆ ಇದೆ. ಹಾಗಾಗಿ ಲಿಂಗಾಯತ ಧರ್ಮ ನುಂಗಿ ನೀರು ಕುಡಿದರೆ ಈ ದೇಶದಲ್ಲಿ ಯಾರೂ ನಮ್ಮನ್ನು ವಿರೋಧಿಸುವುದಿಲ್ಲ ಎಂಬುದು ಸಂಘ ಪರಿವಾರ ಅನೇಕ ವರ್ಷಗಳಿಂದ ಅಧ್ಯಯನ ನಡೆಸಿ ಈ ನಿರ್ಣಯಕ್ಕೆ ಬಂದಿದೆ” ಎಂದರು.
“ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ಕೋರಿ ಆಯೋಜಕರು ಕೋರ್ಟ್‌ಗೆ ತೆರಳಿದ್ದರು. ಕನೇರಿ ಸ್ವಾಮೀಜಿ ಸಮಾವೇಶಕ್ಕೆ ಬರಬಹುದು, ಆದರೆ ಮೂಕಪ್ರೇಕ್ಷಕರಂತೆ ಕೂರಬೇಕು ಎಂದು ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ. ಆದರೆ, ಸಮಾವೇಶದಲ್ಲಿ ಕನೇರಿ ಸ್ವಾಮಿ ಮಾತಾಡಬಾರದು ಎಂದಾದರೆ, ಅವರ ಜಾಗದಲ್ಲಿ ಬೇರೆ ಯಾರಾದರೂ ಮಾತನಾಡಿ ಅವರ ವಿಚಾರಧಾರೆ ಮಂಡಿಸುತ್ತಾರೆ. ಸಂಘ ಪರಿವಾರದವರು ಕನೇರಿ ಸ್ವಾಮೀಜಿ ಅವರಂತಹ ಅನೇಕ ಜನರನ್ನು ಅವರು ಸಾಕಿದ್ದಾರೆ. ಹೀಗಾಗಿ ನಮಗೆ ಕನೇರಿ ಸ್ವಾಮೀಜಿ ವಿರುದ್ಧ ಏನೂ ತಕರಾರು ಇಲ್ಲ. ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ನಮಗೆ ವಿರೋಧವಿದೆ. ಹಿಂದೂ ವಿರುದ್ಧ 900 ವರ್ಷಗಳ ಹಿಂದೆ ಸಂಘರ್ಷ ನಡೆಸಿ ಜೀವಕೊಟ್ಟ ಬಸವಣ್ಣನಿಗೆ ಹಾಗೂ ಹಿಂದೂಗೆ ಏನು ಸಂಬಂಧವಿದೆ” ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರವೇ ಸಮಾವೇಶ ನಿಷೇಧಿಸಲಿ
“ರಾಜ್ಯ ಸರ್ಕಾರವು ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಹೀಗಾಗಿ ಬಸವಣ್ಣನವರು ಹಾಗೂ ಅವರ ತತ್ವಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. 12ನೇ ಶತಮಾನದಲ್ಲಿ ಬಸವಣ್ಣನವರನ್ನು ದೈಹಿಕವಾಗಿ ಕೊಲೆಗೈದವರು ಇಂದು ಬಸವಕಲ್ಯಾಣದಲ್ಲಿ ತಾತ್ವಿಕವಾಗಿ ಕೊಲೆ ಮಾಡುತ್ತಿದ್ದಾರೆ. ಬಸವಣ್ಣನವರಿಗೆ ಮಸಿ ಬಳಿದು, ಜನಿವಾರ ಹಾಕಿ, ವೈದಿಕತೆ ದೀಕ್ಷೆ ಕೊಡುವ ಪ್ರಯತ್ನ ನಡೆಸಲಾಗುತ್ತಿದೆ. ಆದಕಾರಣ ರಾಜ್ಯದ ಮುಖ್ಯಮಂತ್ರಿ, ಗೃಹಸಚಿವರು ರಾಜ್ಯದ ಯಾವುದೇ ಭಾಗದಲ್ಲಿ ಈ ಬಸವಾದಿ ಶರಣರ ಹಿಂದೂ ಸಮಾವೇಶ ನಡೆಸಲು ಅನುಮತಿ ಕೊಡಬಾರದು. ಬಸವಕಲ್ಯಾಣದಲ್ಲಿ ನಡೆಯುವ ಸಮಾವೇಶ ಸರ್ಕಾರ ನಿಷೇಧಿಸಬೇಕು” ಎಂದು ಆರ್.ಕೆ. ಹುಡಗಿ ಒತ್ತಾಯಿಸಿದರು.
ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವುದು ಅಷ್ಟಕ್ಕೇ ನಿಲ್ಲಲ್ಲ. ಮುಂದಿನ ವರ್ಷ ಬಸವಕಲ್ಯಾಣದಲ್ಲಿ ಬಸವ ಭಾರತ ಉತ್ಸವ ಮಾಡಲಿದ್ದಾರೆ. ಇದೆಲ್ಲರ ಮೂಲ ಬೇರು ಸಂಘ ಪರಿವಾರದ ಬಸವರಾಜ ಪಾಟೀಲ ಸೇಡಂ ಇದ್ದಾರೆ. ಅವರನ್ನು ನಾವು ತಾತ್ವಿಕವಾಗಿ ವಿರೋಧಿಸುತ್ತೇವೆ. ಇದಕ್ಕೆ ಭಾಲ್ಕಿ ಶ್ರೀ ಸೇರಿದಂತೆ ಬಸವಪರ ಸಂಘಟನೆಗಳ ಪ್ರಮುಖರನ್ನು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆಯುತ್ತೇವೆ” ಎಂದು ಹೇಳಿದರು.
ಈಶ್ವರ ಖಂಡ್ರೆ ತಮ್ಮ ನಿಲುವು ಸ್ಪಷ್ಟಪಡಿಸಲಿ :
ಈ ಹಿಂದೆ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಾ ಅಧಿವೇಶನದಲ್ಲಿ ವೀರಶೈವ–ಲಿಂಗಾಯತರು ಹಿಂದೂಗಳಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಈಗ ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಆಯೋಜಿಸಲಾಗುತ್ತಿದ್ದು , ಇದರ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರೂ ಆದ, ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬಂದೋ ಬಸ್ತ್ ಕೋರಿ ಮನವಿ
ಬಸವ ಭಕ್ತರನ್ನು ದಿಕ್ಕು ತಪ್ಪಿಸಲು ಬಸವಾದಿ ಶರಣರ ಹಿಂದೂ ಸಮಾವೇಶ ನಡೆಸಲು ಮುಂದಾಗಿರುವುದನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಜೂ.28ರಂದು ಬಸವ ಸಂಸ್ಕೃತಿ, ಬಸವ ಧರ್ಮ, ಬಸವ ದರ್ಶನ ಸಂರಕ್ಷಣೆಗಾಗಿ ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಶಾಂತಿಯುತ ಹೋರಾಟದಲ್ಲಿ ನಾಡಿನ ಹತ್ತಾರು ಬಸವ ಭಕ್ತರು ಕಲ್ಯಾಣಕ್ಕೆ ಆಗಮಿಸಲಿದ್ದಾರೆ. ಇದಕ್ಕೆ ಬೀದರ್ ಜಿಲ್ಲಾಡಳಿತ ಸೂಕ್ತ ಬಂದೋ ಬಸ್ತ್ ಒದಗಿಸಬೇಕೆಂದು ಬಸವ ಧರ್ಮ ಸಂರಕ್ಷಣಾ ಸಮಿತಿ ಪ್ರಮುಖರಾದ ಆರ್.ಕೆ.ಹುಡಗಿ, ಕೆ.ನೀಲಾ, ಮೀನಾಕ್ಷಿ ಬಾಳಿ, ಆರ.ಜಿ.ಶೆಟಗಾರ, ಮಾರುತಿ ಗೋಖಲೆ, ಶಾಂತಪ್ಪ ಪಾಟೀಲ್ ಮತ್ತಿತರರು ಗುರುವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರ ವಹಿಸಿ : ಈಶ್ವರ ಖಂಡ್ರೆ
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಾರುತಿ ಗೋಖಲೆ, ಶಶಿಕಾಂತ ಡಾಂಗೆ, ಗೌಸೊದ್ದೀನ್, ಶಿವಶರಣಪ್ಪ ದೇಗಾಂವ, ಧನರಾಜ ತಾಂಬೋಳೆ, ಸಾವಿತ್ರಿ ಚಿಕ್ಕಮಠ ಸೇರಿದಂತೆ ಮತ್ತಿತರರು ಹಾಜರಿದ್ದರು.




