ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಹೊರಬಂದು ಆಡಳಿತರೂಢ ಡಿಎಂಕೆ ಪಕ್ಷವನ್ನು ಸೇರಿಕೊಂಡಿರುವ ನಟಿ ರಂಜನಾ ನಾಚಿಯಾರ್, ಟಿವಿಕೆ ಬೆಂಬಲಿಗರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ನನ್ನನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಟಿವಿಕೆ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಮತ್ತು ಅಸಹ್ಯವಾಗಿ ನಿಂದಿಸಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಪಕ್ಷದ ಮುಖ್ಯಸ್ಥ ವಿಜಯ್ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಕಾರ್ಯಕರ್ತರ ಈ ರೀತಿಯ ವರ್ತನೆಯನ್ನು ವಿಜಯ್ ಸಮರ್ಥಿಸಿಕೊಳ್ಳುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಟಿವಿಕೆ ಪಕ್ಷದಲ್ಲಿದ್ದಾಗ ನನ್ನನ್ನು ಇದೇ ಕಾರ್ಯಕರ್ತರು ಅಕ್ಕ ಎಂದು ಕರೆಯುತ್ತಿದ್ದರು. ಆದರೆ, ಡಿಎಂಕೆ ಪಕ್ಷವನ್ನು ಸೇರ್ಪಡೆಯಾದ ಬಳಿಕ ನನ್ನ ಬಗ್ಗೆ ಈ ರೀತಿಯಲ್ಲಿ ಅಸಹ್ಯವಾಗಿ ನಿಂದಿಸುತ್ತಿದ್ದಾರೆ. ವಿಜಯ್ ಈ ಬಗ್ಗೆ ನೈತಿಕ ಹೊಣೆಗಾರಿಕೆಯುಳ್ಳವರಾಗಿ ಕಾರ್ಯಕರ್ತರ ಈ ನಡೆಯನ್ನು ಖಂಡಿಸಬೇಕು ಎಂದು ಹೇಳಿದ್ದಾರೆ.
ಇನು, ಸೈಬರ್ ಬುಲ್ಲಿಂಗ್ ಮಾಡುತ್ತಿರುವ ಬಗ್ಗೆ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಕೇರಳ ಚುನಾವಣೆ | ಪ್ರಗತಿಪರ ರಾಜ್ಯದಲ್ಲಿ ಮಹಿಳೆಯರಿಗಿಲ್ಲ ಟಿಕೆಟ್: ಪರಂಪರಾಗತ ಅನ್ಯಾಯ ಮುಂದುವರಿಕೆ
ಎಂಟು ವರ್ಷಗಳ ಕಾಲ ಬಿಜೆಪಿಯ ನಾಯಕಿಯಾಗಿದ್ದ ನಟಿ ರಂಜನಾ ನಾಚಿಯಾರ್, ತ್ರಿಭಾಷಾ ಹೇರಿಕೆ ತಪ್ಪು ಎಂದು ನೆಪ ಹೇಳಿ, 2025ರಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸೇರಿದ್ದರು. ಈಗ ಚುನಾವಣಾ ಪೂರ್ವದಲ್ಲಿ ಟಿವಿಕೆ ತೊರೆದು ಆಡಳಿತರೂಢ ಡಿಎಂಕೆ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಟಿವಿಕೆ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಯಿದೆ.




