ಎಎಪಿಯಿಂದ ರಾಘವ್ ಚಡ್ಡಾ ಹಾಗೂ ಇತರ ಆರು ರಾಜ್ಯಸಭಾ ಸದಸ್ಯರು ಹೊರಬಂದು ಬಿಜೆಪಿ ಸೇರಿರುವ ಘಟನೆಯ ಕುರಿತು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಪಕ್ಷ ಸರಿಯಾದ ದಾರಿಯಲ್ಲಿ ನಡೆದಿದ್ದರೆ ಅವರು ಪಕ್ಷ ಬಿಡುತ್ತಿರಲಿಲ್ಲ,” ಎಂದು ಹೇಳುವ ಮೂಲಕ ಈ ಬೆಳವಣಿಗೆಗೆ ಅವರು ಎಎಪಿ ಪಕ್ಷವನ್ನೇ ಹೊಣೆ ಮಾಡಿದ್ದಾರೆ.
ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ ” ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಹಕ್ಕಿದೆ. ಚಡ್ಡಾ ಮತ್ತು ಇತರ ನಾಯಕರಿಗೆ ಸಂಘಟನೆಯೊಳಗೆ ಕೆಲವು ತೊಂದರೆಗಳು ಅದಕ್ಕಾಗಿಯೇ ಅವರು ಪಕ್ಷ ತೊರೆದಿದ್ದಾರೆ. ಇದು ಅವರ ತಪ್ಪಲ್ಲ, ಪಕ್ಷದ ತಪ್ಪು” ಎಂದು ವಿವರಿಸಿದ್ದಾರೆ. 2011-12ರ ಭ್ರಷ್ಟಾಚಾರದ ವಿರೋಧಿ ಹೋರಾಟದ ಸಮಯದಲ್ಲಿ ಹಜಾರೆ ಅವರ ನೇತೃತ್ವದಲ್ಲಿಯೇ ರಾಘವ್ ಚಡ್ಡಾ ಎಎಪಿ ಪಕ್ಷಕ್ಕೆ ಸೇರಿಸಿದ್ದರು.
ಶುಕ್ರವಾರ ಎಎಪಿ ಪಕ್ಷವನ್ನು ತೊರೆದ ರಾಘವ್ ಚಡ್ಡಾ ಹಾಗೂ ಇತರ ರಾಜ್ಯಸಭಾ ಸಂಸದರು ಬಿಜೆಪಿ ಜೊತೆ ವಿಲೀನವಾಗಲು ನಿರ್ಧರಿಸಿದ್ದಾರೆ. ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಡ್ಡಾ, “ಎಎಪಿಯ ರಾಜ್ಯಸಭೆಯ 3 ರಲ್ಲಿ 2 ರಷ್ಟು ಸದಸ್ಯರಾಗಿರುವ ನಾವು ಭಾರತದ ಸಂವಿಧಾನದ ನಿಯಮಗಳನ್ನು ಬಳಸಿ ಬಿಜೆಪಿಯೊಂದಿಗೆ ವಿಲೀನವಾಗಲು ನಿರ್ಧರಿಸಿದ್ದೇವೆ,” ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದೇ ವೇಳೆಯಲ್ಲಿ ತಮ್ಮ ಈ ನಿರ್ಧಾರವನ್ನು ಪ್ರಕಟಿಸುವಾಗ ತಮ್ಮನ್ನು ತಾವು “ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ” ಎಂದು ಹೇಳಿಕೊಂಡಿದ್ದಾರೆ.
ಎಎಪಿ ಪಕ್ಷ ತೊರೆದು ಬಿಜೆಪಿ ಸೇರಿದ ಪ್ರಮುಖರ ಪಟ್ಟಿಯಲ್ಲಿ ರಾಘವ್ ಚಡ್ಡಾ ಅವರ ಜೊತೆಗೆ ಸ್ವಾತಿ ಮಲಿವಾಲ್, ಮಾಜಿ ಕ್ರಿಕೆಟರ್ ಹಾಗೂ ರಾಜ್ಯಸಭಾ ಸದಸ್ಯ ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್‌ಜಿತ್ ಸಿಂಗ್ ಸಾಹ್ನಿ ಅವರ ಕೂಡ ಸೇರಿದ್ದಾರೆ.
ಬಿಜೆಪಿ ವಿರುದ್ಧ ಮಾತನಾಡದ ಅಣ್ಣಾ ಹಜಾರೆ
ಎಎಪಿ ವಿರುದ್ಧ ತೀಕ್ಷ್ಣವಾಗಿ ಮಾತನಾಡುವ ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ನೋಟು ಅಮಾನ್ಯೀಕರಣ (Demonetization), ಎಸ್‌ಐಆರ್, ಸೇರಿದಂತೆ ದೇಶದಲ್ಲಿ ಸಂಭವಿಸಿದ ಹಲವು ಆರ್ಥಿಕ ದುರ್ಘಟನೆಗಳು ಮತ್ತು ವಿವಾದಾತ್ಮಕ ನಿರ್ಧಾರಗಳ ಬಗ್ಗೆ ನಿರಂತರವಾಗಿ ಮೌನ ವಹಿಸಿರುವುದು ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ರೂಪಿಸಿದ್ದ ಅವರು, ಪ್ರಸ್ತುತ ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಧ್ವನಿಯೆತ್ತದಿರುವುದು ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸಿದೆ. ಕೇವಲ ವಿರೋಧ ಪಕ್ಷಗಳ ತಪ್ಪುಗಳನ್ನಷ್ಟೇ ಎತ್ತಿತೋರಿಸುತ್ತಾ ಆಡಳಿತ ಯಂತ್ರದ ಬಹುದೊಡ್ಡ ಲೋಪಗಳ ಕುರಿತು ಚಕಾರವೆತ್ತದಿರುವುದು ಅವರ ಇತ್ತೀಚಿನ ಸೈದ್ಧಾಂತಿಕ ನಿಲುವುಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿಜೆಪಿಯ ಶೇಷ ಮಹಲ್ ಬಂಗಲೆ ಆರೋಪಕ್ಕೆ ಎಎಪಿ ತಿರುಗೇಟು
ದೆಹಲಿಯ ಲೋಕೋಪಯೋಗಿ ಸಚಿವ ಹಾಗೂ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ. ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಕೇಜ್ರಿವಾಲ್ ಅವರಿಗೆ ನೀಡಲಾಗಿರುವ ಹೊಸ ಬಂಗಲೆಯನ್ನು ‘ಶೀಶ್ ಮಹಲ್ 2’ ಎಂದು ಕರೆದಿರುವ ವರ್ಮಾ, ಅದರಲ್ಲಿ ಐಷಾರಾಮಿ ಸೌಲಭ್ಯಗಳನ್ನು ನಿರ್ಮಿಸಲು ಖಾಸಗಿ ಹಣವನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಐದು ಮಲಗುವ ಕೋಣೆಗಳು ಹಾಗೂ ನಾಲ್ಕು ಡ್ರಾಯಿಂಗ್ ರೂಮ್‌ಗಳನ್ನು ಹೊಂದಿರುವ ಈ ಬಂಗಲೆಗೆ ಯಾರು ಹಣ ನೀಡಿದ್ದಾರೆ ಮತ್ತು ಆ ಹಣದ ಮೂಲ ಯಾವುದು ಎಂಬುದನ್ನು ಎಎಪಿ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಆರೋಪಗಳನ್ನು ಎಎಪಿ ನಾಯಕಿ ಅತಿಶಿ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಪರ್ವೇಶ್ ವರ್ಮಾ ಬಿಡುಗಡೆ ಮಾಡಿರುವ ಚಿತ್ರಗಳು ನಕಲಿಯಾಗಿದ್ದು, ಅವು ಕೇಜ್ರಿವಾಲ್ ಅವರ ಮನೆಯ ಚಿತ್ರಗಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯಾರು ಎಷ್ಟು ಐಷಾರಾಮಿ ಮನೆಯಲ್ಲಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಲಿ, ಇದಕ್ಕಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಮನೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯೋಣ, ಆಗ ಕೇಜ್ರಿವಾಲ್ ಅವರ ಮನೆಯನ್ನೂ ತೆರೆಯಲಾಗುವುದು ಎಂದು ಅತಿಶಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.




