ಭಾರತ ಮತ್ತು ಅಮೆರಿಕದ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಬಹಳ ಚರ್ಚೆಯಲ್ಲಿದೆ. ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ “ಗೆಳೆತನ” ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’ ಎಂಬ ಕಾರ್ಯಕ್ರಮಗಳನ್ನ ನಡೆಸಿದ್ದರು. ಆದರೆ, ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ, ಈ ಗೆಳೆತನ ಕೇವಲ ಒಂದು ಬದಿಯದ್ದೇ? ಅಥವಾ ಭಾರತದ ಸ್ವಾಭಿಮಾನವನ್ನು ಅಮೆರಿಕದ ಅಡಿಗಿಡಲಾಗಿದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ.
ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಭಾರತವನ್ನು “ನರಕಕೂಪ ” (Filthy/Hellhole) ಎಂದು ವಿಮರ್ಶಿಸಿದ್ದಾರೆ. ಈ ವಿವಾದಕ್ಕೆ ಕಾರಣವಾದದ್ದು ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡ ಅಮೆರಿಕದ ಪ್ರಮುಖ ಸಂಪ್ರದಾಯವಾದಿ ಲೇಖಕ ಮತ್ತು ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್.
ಅದರಲ್ಲಿ ಭಾರತ ಸೇರಿದಂತೆ ಕೆಲವು ದೇಶಗಳನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ತೀವ್ರ ಟೀಕೆಗಳನ್ನು ಮಾಡಲಾಗಿತ್ತು. ಅಷ್ಟೇ ಅಲ್ಲ “ಅಮೆರಿಕನ್ನರ ಉದ್ಯೋಗಗಳನ್ನು ಭಾರತೀಯರು ಮತ್ತು ಚೀನಿಯರು ಕಬಳಿಸುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರನ್ನು “Gangsters with Laptops” ಎಂದು ಕರೆಯುವ ಮೂಲಕ, ಅವರು ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಯನ್ನು ಲೂಟಿ ಮಾಡುತ್ತಿದ್ದಾರೆ” ಎಂದು ಟ್ರಂಪ್ ದೂರಿದ್ದಾರೆ. “ಭಾರತ ಮತ್ತು ಚೀನಾದಂತಹ ದೇಶಗಳಿಂದ ಜನರು ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಬಂದು, ಇಲ್ಲಿ ಮಗುವಿಗೆ ಜನ್ಮ ನೀಡಿ, ಮಗುವಿಗೆ ಜನ್ಮಸಿದ್ಧವಾಗಿ ಸಿಗುವ ಅಮೆರಿಕದ ಪೌರತ್ವವನ್ನು ಪಡೆಯುತ್ತಿದ್ದಾರೆ. ಇದು ಅಮೆರಿಕದ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ” ಎಂದು ಅವರು ಟೀಕಿಸಿದ್ದಾರೆ.
ಒಂದು ದೇಶದ ಬಗ್ಗೆ, ವಿಶೇಷವಾಗಿ ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ಬಗ್ಗೆ ಈ ರೀತಿಯ ಪದಗಳನ್ನು ಬಳಸುವುದು ಕೇವಲ ರಾಜಕೀಯ ಟೀಕೆ ಮಾತ್ರವಲ್ಲ, ಅದು ಆ ದೇಶದ ಗೌರವಕ್ಕೂ, ಜನರ ಆತ್ಮಗೌರವಕ್ಕೂ ಧಕ್ಕೆಯೇ. ಇನ್ನೂ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು “ಈ ಕುರಿತು ಕೆಲ ವರದಿಗಳನ್ನ ಗಮನಿಸಿದ್ದೇವೆ. ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ” ಎಂದಷ್ಟೇ ಹೇಳಿದ್ದಾರೆ.

ಒಬ್ಬ ದೇಶದ ನಾಯಕ ತನ್ನ ದೇಶವನ್ನು ‘ವಿಶ್ವಗುರು’ ಎಂದು ಕರೆದುಕೊಳ್ಳುವಾಗ, ಇನ್ನೊಂದು ದೇಶದ ನಾಯಕ ಅದೇ ದೇಶವನ್ನು ಹೀಯಾಳಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡಬೇಕಾದುದು ರಾಜತಾಂತ್ರಿಕ ಧರ್ಮ. ಆದರೆ, ಇಲ್ಲಿ ಪ್ರಧಾನಿ ಮೋದಿ ಅವರಾಗಲಿ ಅಥವಾ ಅವರ ಸಂಪುಟದ ಪ್ರಭಾವಿ ಮಂತ್ರಿಗಳಾಗಲಿ ಟ್ರಂಪ್ ಹೇಳಿಕೆಯನ್ನು ಖಂಡಿಸುವ ಧೈರ್ಯ ತೋರಲಿಲ್ಲ. “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂದು ಅಮೆರಿಕದ ಮಣ್ಣಿನಲ್ಲೇ ಘೋಷಣೆ ಕೂಗಿದ್ದ ಮೋದಿಯವರು, ಈಗ ಟ್ರಂಪ್ ಭಾರತದ ಗೌರವಕ್ಕೆ ಧಕ್ಕೆ ತಂದಾಗ ಏಕೆ ಮೌನವಾಗಿದ್ದಾರೆ?
ಇದೊಂದೇ ವಿಚಾರ ಅಂತಲ್ಲ, ಟ್ರಂಪ್ ಪದೇ ಪದೇ ಭಾರತವನ್ನು “ಟ್ಯಾರಿಫ್ ಕಿಂಗ್” (ಸುಂಕದ ರಾಜ) ಎಂದು ಕರೆಯುತ್ತಾ ಬಂದಿದ್ದಾರೆ. ಭಾರತವು ಅಮೆರಿಕದ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿದೆ ಎಂದು ಆರೋಪಿಸಿ, ಅದಕ್ಕೆ ಪ್ರತಿಫಲವಾಗಿ ಭಾರತದ ರಫ್ತುಗಳ ಮೇಲೆ ಟ್ರಂಪ್ ಸರ್ಕಾರ ಭಾರಿ ಸುಂಕ ಹೇರಿತು. ಇದರಿಂದ ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿತು. ಈ ಮೂಲಕ ಟ್ರಂಪ್ ಭಾರತದ ಬೆನ್ನಿಗೆ ಚೂರಿ ಹಾಕಿದರೇ ಎಂಬ ಸಂಶಯವೂ ಭಾರತೀಯರಲ್ಲಿ ಮೂಡಿತ್ತು.

ಇಷ್ಟೆಲ್ಲಾ ಆದರೂ ಭಾರತ ಸರ್ಕಾರ ‘ವ್ಯಾಪಾರ ಸಂಬಂಧ’ ಎಂಬ ನೆಪವೊಡ್ಡಿ ಸುಮ್ಮನಾಯಿತು. ಅಪ್ಪಿ ಮುದ್ದಾಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು ಆದರೆ ಭಾರತದ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಮೋದಿ ಸರ್ಕಾರ ಗಟ್ಟಿಯಾದ ನಿಲುವು ತಳೆಯಲಿಲ್ಲ.
ಅಷ್ಟೇ ಏಕೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗ, ಅಂದರೆ ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನ ಮೇಲೆ ದಾಳಿ ಮಾಡಿದಾಗ, ಟ್ರಂಪ್ ಹಲವು ಬಾರಿ “ನಾನೇ ಮಧ್ಯಪ್ರವೇಶಿಸಿ ಯುದ್ಧ ನಿಲ್ಲಿಸಿದೆ” ಎಂಬ ಹೇಳಿಕೆ ನೀಡಿದ್ದರು. ಟ್ರಂಪ್ ತನ್ನನ್ನು ಮಧ್ಯಸ್ಥನಂತೆ ಪ್ರದರ್ಶಿಸಿಕೊಂಡಿದ್ದರು.
ಭಾರತದ ಸೈನಿಕರ ಶೌರ್ಯ ಮತ್ತು ಭಾರತದ ಸ್ವತಂತ್ರ ನಿರ್ಧಾರದಿಂದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲಾಯಿತು ಎಂಬುದು ಭಾರತೀಯರ ನಂಬಿಕೆಯಾಗಿತ್ತು. ಆದರೆ, ಟ್ರಂಪ್ ಈ ಕ್ರೆಡಿಟ್ ಅನ್ನು ತಾವೇ ತೆಗೆದುಕೊಳ್ಳುವಾಗ ಮೋದಿ ಸರ್ಕಾರ ಅಥವಾ ಅವರ ಭಕ್ತಗಣ ಇದನ್ನು ವಿರೋಧಿಸಲಿಲ್ಲ. ಪಾಕಿಸ್ತಾನದ ವಿಷಯದಲ್ಲಿ ಭಾರತಕ್ಕೆ ಬೇರೆಯವರ ಹಸ್ತಕ್ಷೇಪ ಇಷ್ಟವಿಲ್ಲ ಎಂಬುದು ಹಳೆಯ ನೀತಿ. ಆದರೆ ಟ್ರಂಪ್ ವಿಷಯದಲ್ಲಿ ಈ ನೀತಿಯನ್ನು ಗಾಳಿಗೆ ತೂರಲಾಗಿದೆಯೇ?
ಭಾರತದಲ್ಲಿ ಮೋದಿ ಬೆಂಬಲಿಗರು ಟ್ರಂಪ್ ಗೆಲ್ಲಬೇಕು ಎಂದು ಹರಕೆ ಹೊತ್ತಿದ್ದು, ಹೋಮಗಳನ್ನು ಮಾಡಿದ್ದು ಜಗತ್ತಿಗೇ ತಿಳಿದಿದೆ. ಒಬ್ಬ ವಿದೇಶಿ ನಾಯಕನಿಗಾಗಿ ಭಾರತದ ನಾಗರಿಕರು ಇಷ್ಟೊಂದು ಭಕ್ತಿ ತೋರಿಸಿದ್ದು ಮಾತ್ರ ಆಶ್ಚರ್ಯಕರ. ಆದರೆ ಅದೇ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಎಚ್-1ಬಿ (H-1B) ವೀಸಾ ನಿಯಮಗಳನ್ನು ಕಠಿಣಗೊಳಿಸಿ ಸಾವಿರಾರು ಭಾರತೀಯ ಉದ್ಯೋಗಿಗಳ ಕನಸನ್ನು ನುಚ್ಚುನೂರು ಮಾಡಿದರು.

ಅಮೆರಿಕದ ಹಿತಾಸಕ್ತಿಯೇ ಮುಖ್ಯ ಎಂದು ಟ್ರಂಪ್ ‘ಅಮೆರಿಕ ಫಸ್ಟ್’ ಎನ್ನುವಾಗ, ನಮ್ಮ ನಾಯಕರು ‘ಭಾರತ್ ಫಸ್ಟ್’ ಎನ್ನಲು ಯಾಕೆ ಹಿಂಜರಿಯುತ್ತಿದ್ದಾರೆ? ಗೆಳೆತನದ ಹೆಸರಿನಲ್ಲಿ ಭಾರತದ ಗೌರವವನ್ನು ಅಡ ಇಡುವುದು ಎಷ್ಟು ಸರಿ? “ವಿಶ್ವಗುರು ಭಾರತ” ಎಂದು ಘೋಷಿಸುವ ಸರ್ಕಾರ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಹಕ್ಕುಗಳನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅಮೆರಿಕ ಮತ್ತು ಅಹಮದಾಬಾದ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಲಕ್ಷಾಂತರ ಜನರು ಸೇರಿ ಜೈಕಾರ ಹಾಕಿದರು. ಆದರೆ ರಾಜತಾಂತ್ರಿಕವಾಗಿ ಭಾರತಕ್ಕೆ ಸಿಕ್ಕಿದ್ದೇನು? ಕಾಶ್ಮೀರ ವಿಷಯದಲ್ಲಿ ಟ್ರಂಪ್ ನೀಡಿದ ವಿವಾದಾತ್ಮಕ ಹೇಳಿಕೆಗಳು. ಪರಿಸರ ಒಪ್ಪಂದದಿಂದ ಹಿಂದೆ ಸರಿದು ಭಾರತದ ಮೇಲೆ ಗೂಬೆ ಕೂರಿಸಿದ್ದು. ಭಾರತದ ರಫ್ತುಗಳ ಮೇಲೆ ನಿರ್ಬಂಧ ಹೇರಿದ್ದು. ಇವಿಷ್ಟೂ ಟ್ರಂಪ್ ಭಾರತಕ್ಕೆ ನೀಡಿದ ‘ಉಡುಗೊರೆಗಳು’. ಇಷ್ಟೆಲ್ಲಾ ಅವಮಾನಗಳಾದರೂ ಮೋದಿ ಮತ್ತು ಅವರ ಗ್ಯಾಂಗ್ ಟ್ರಂಪ್ ವಿರುದ್ಧ ಒಂದೇ ಒಂದು ಪ್ರಶ್ನೆಯನ್ನೂ ಮಾಡದಿರುವುದು ಅವರ “ರಾಷ್ಟ್ರಭಕ್ತಿ”ಯ ಬಗ್ಗೆಯೇ ಪ್ರಶ್ನೆಗಳನ್ನು ಎತ್ತುತ್ತದೆ.
ಇಲ್ಲಿ ಒಂದು ಪ್ರಮುಖ ಪ್ರಶ್ನೆ ಮೋದಿ ಮತ್ತು ಅವರ ಗ್ಯಾಂಗ್ ಟ್ರಂಪ್ ವಿರುದ್ಧ ಮಾತನಾಡಲು ಹಿಂಜರಿಯುತ್ತಿರುವುದೇಕೆ? ಟ್ರಂಪ್ ಅವರ ಈ ಹಿಂದಿನ ಹೇಳಿಕೆಗಳ ಮರ್ಮವನ್ನು ಕೆದಕಿದಾಗ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ‘ನಾನು ನರೇಂದ್ರ ಮೋದಿಯವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಬಯಸುವುದಿಲ್ಲ’ ಎಂದು ಟ್ರಂಪ್ ಹೇಳಿದ್ದರ ಹಿಂದೆ ಗುಪ್ತ ಬೆದರಿಕೆಯೋ ಅಥವಾ ಬ್ಲಾಕ್‌ಮೇಲ್ ತಂತ್ರವೋ ಅಡಗಿದೆಯೇ ಎಂಬ ಪ್ರಶ್ನೆ ಇಂದು ಬಲವಾಗಿ ಕೇಳಿಬರುತ್ತಿದೆ. ಯಾಕೆಂದರೆ, ಟ್ರಂಪ್ ಭಾರತವನ್ನು ಪದೇ ಪದೇ ಅವಮಾನಿಸಿದರೂ ಮೋದಿ ಸರ್ಕಾರ ಮೌನವಾಗಿರುವುದು ಸಾಮಾನ್ಯ ರಾಜತಾಂತ್ರಿಕ ನಡೆಯಲ್ಲ. ಇದರ ಜೊತೆಗೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ‘ಎಪ್‌ಸ್ಟೀನ್ ಫೈಲ್ಸ್’ನಲ್ಲಿ ಮೋದಿಯವರ ಹೆಸರಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಹಾಗಾದರೆ, ಈ ಕರಾಳ ಕಡತಗಳಲ್ಲಿರುವ ಮಾಹಿತಿಗಳನ್ನು ಇಟ್ಟುಕೊಂಡು ಟ್ರಂಪ್ ಭಾರತದ ಪ್ರಧಾನಿಯನ್ನು ನಿಯಂತ್ರಿಸುತ್ತಿದ್ದಾರೆಯೇ? ಮೋದಿಯವರ ಈ ನಿಗೂಢ ಮೌನಕ್ಕೆ ಟ್ರಂಪ್ ಬಳಿ ಇರಬಹುದಾದ ಯಾವುದಾದರೂ ‘ರಹಸ್ಯ ದಾಖಲೆ’ಗಳ ಭಯವೇ ಕಾರಣವೇ? ವೈಯಕ್ತಿಕ ಇಮೇಜ್ ಉಳಿಸಿಕೊಳ್ಳುವ ಆತುರದಲ್ಲಿ ದೇಶದ ಸ್ವಾಭಿಮಾನವನ್ನು ಬಲಿ ಕೊಡಲಾಗುತ್ತಿದೆಯೇ ಎಂಬ ಅನುಮಾನ ಈಗ ಭಾರತೀಯರಲ್ಲಿ ಕಾಡತೊಡಗಿದೆ.

ದೇಶದ ನಾಯಕರಿಗೆ ದೇಶದ ಗೌರವಕ್ಕಿಂತ ವೈಯಕ್ತಿಕ ಗೆಳೆತನ ಅಂತ ಕರೆಯುವುದು ಸೂಕ್ತವೋ ಅಥವಾ ಭಯ ಅಂತ ಹೇಳುವುದು ಸೂಕ್ತವೋ ಗೊತ್ತಿಲ್ಲ. ಆದರೆ ಆ ಗೆಳತನ ಅಥವಾ ಭಯ ಅತೀಯಾದಾಗಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ‘ವಿಶ್ವಗುರು’ ಎಂದು ಜಗತ್ತಿಗೆ ಸಾರುವ ಮೊದಲು, ನಮ್ಮನ್ನು ಹೀಯಾಳಿಸುವವರಿಗೆ “ನಮ್ಮ ದೇಶದ ಬಗ್ಗೆ ಹೀಗೆ ಮಾತನಾಡಬೇಡಿ” ಎಂದು ಹೇಳುವ ಎದೆಗಾರಿಕೆ ಬೇಕು. ಟ್ರಂಪ್ ಭಾರತವನ್ನು ಅವಮಾನಿಸಿದಾಗ ಗಪ್-ಚುಪ್ ಆಗಿರುವ ಮೋದಿ ಸರ್ಕಾರ, ಭಾರತೀಯರ ಆತ್ಮಗೌರವವನ್ನು ಎಲ್ಲಿ ಅಡವಿಟ್ಟಿದೆ ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಅಮೆರಿಕದ ಅಧ್ಯಕ್ಷರು ಯಾರೇ ಆಗಿರಲಿ, ಅವರು ತಮ್ಮ ದೇಶದ ಹಿತವನ್ನೇ ನೋಡುತ್ತಾರೆ. ಆದರೆ ನಮ್ಮವರು ಮಾತ್ರ “ಗೆಳೆಯ ಬಂದ, ಗೆಳೆಯ ಹೋದ” ಎಂದು ಸಂಭ್ರಮಿಸುವುದರಲ್ಲೇ ಮಗ್ನರಾಗಿದ್ದಾರೆ. ಇನ್ನಾದರೂ ಭಾರತದ ವಿದೇಶಾಂಗ ನೀತಿ ‘ಬಾಯಿ ಮುಚ್ಚಿ ಕೂರುವುದಕ್ಕಿಂತ’ ಹೆಚ್ಚಾಗಿ ‘ದೇಶದ ಗೌರವ ಎತ್ತಿ ಹಿಡಿಯುವುದರ’ ಕಡೆಗೆ ಗಮನ ಹರಿಸಲಿ.




