ಕರ್ನಾಟಕದಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಗೃಹ ಕಾರ್ಮಿಕರ ಹಕ್ಕುಗಳ ಕಾಯ್ದೆಯನ್ನು ಶೀಘ್ರ ಜಾರಿಗೆ ತರಬೇಕು ಮತ್ತು ಹೊಸ ಮಸೂದೆಯಲ್ಲಿ ಗೃಹ ಕಾರ್ಮಿಕರ ಸಂಘಟನೆಗಳ ಶಿಫಾರಸುಗಳನ್ನು ಸೇರಿಸಬೇಕು ಎಂದು ವಿಜಯಪುರ ಕರ್ನಾಟಕ ರಾಜ್ಯ ಮನೆಕೆಲಸ ಕಾರ್ಮಿಕರ ಒಕ್ಕೂಟ ಆಗ್ರಹಿಸಿದೆ.
ವಿಜಯಪುರದ ಕಾರ್ಮಿಕ ಅಧಿಕಾರಿ ಮುಖಾಂತರ ಮುಖ್ಯಮಂತ್ರಿ ಮನವಿ ಸಲ್ಲಿಸಿ ಮಾತಾಡಿದ ಫಾದರ್ ಕೇವಿನ್ ಸಿಕ್ವೆರಾ, “ರಾಜ್ಯದಲ್ಲಿ ಸುಮಾರು 22 ಲಕ್ಷ ಗೃಹ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ವಾರದ ರಜೆ, ವೇತನ ಸಹಿತ ರಜೆ, ಪಿಎಫ್, ಇಎಸ್‌ಐ ಹಾಗೂ ಪಿಂಚಣಿ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಲಾಗಿದೆ. ಗ್ರಾಮೀಣ ಹಾಗೂ ಅರೆ ನಗರ ಪ್ರದೇಶದ ಗೃಹ ಕಾರ್ಮಿಕರನ್ನೂ ಕಾಯ್ದೆಯ ವ್ಯಾಪ್ತಿಗೆ ತರಬೇಕು” ಎಂದು ಒತ್ತಾಯಿಸಿದರು.
“ಆನ್‌ಲೈನ್ ಜೊತೆಗೆ ಆಫ್‌ಲೈನ್ ನೋಂದಣಿಗೆ ಅವಕಾಶ, ದಾಖಲಾತಿ ಶುಲ್ಕ ರದ್ದು, ಉದ್ಯೋಗದಾತರು ಮತ್ತು ಅಪಾರ್ಟ್‌ಮೆಂಟ್ ಸಂಘಗಳ ಜವಾಬ್ದಾರಿ ನಿಗದಿ, ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸುವ ಕ್ರಮ, ವಾಸ್ತವ್ಯ ಹೊಂದಿರುವ ಗೃಹ ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಸೇವಾ ಪೂರೈಕೆ ಸಂಸ್ಥೆಗಳ ಹೊಣೆಗಾರಿಕೆಯನ್ನು ಸ್ಪಷ್ಟಪಡಿಸುವಂತೆ ಮನವಿ ಮಾಡಲಾಗಿದೆ” ಎಂದರು.
“ಗೃಹ ಕಾರ್ಮಿಕರ ಪ್ರತಿನಿಧಿಗಳಿಗೆ ಕಲ್ಯಾಣ ಮಂಡಳಿಯಲ್ಲಿ ಸ್ಥಾನ ನೀಡುವುದು, ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಗೆ ಉದ್ಯೋಗದಾತರು ಮತ್ತು ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೀನಾಕ್ಷಿ,ಮೌಲನಾ ಮುಜವರ, ಸುಮಿತ್ರಾ ಪಡತರೆ, ಆಶಾಬಿ ನಾಟೆಕರ, ಹಲ್ಮಾ ಮಾಶ್ಯಾಳ, ಜಯಶ್ರೀ ಶಿವಪುರ, ಜುಬೆದಾ ಹವಾಲ್ದಾರ್, ಮದಿನಾ ಹಂಜಿಗಿ ಹಾಗೂ ಆಶಾಬಿ ಇದ್ದರು.




