ತೀವ್ರ ಬಡತನದಲ್ಲಿ ಜೀವಿಸುತ್ತಿರುವ ಅಂಧ ವ್ಯಕ್ತಿ ಹಾಗೂ ಅವರ 80 ವರ್ಷದ ವೃದ್ಧ ತಾಯಿಗೆ ಅಗತ್ಯವಿರುವ ಎಲ್ಲ ಸಾಮಾಜಿಕ ಭದ್ರತಾ ಸೌಲಭ್ಯಗಳು ಹಾಗೂ ಮೂಲಸೌಕರ್ಯಗಳನ್ನು ವಿಳಂಬವಿಲ್ಲದೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಒಡಿಶಾ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮಾಧ್ಯಮ ವರದಿಗಳ ಆಧಾರದ ಮೇಲೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ (ಸುಮೊಟೊ) ದಾಖಲಿಸಿಕೊಂಡು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಒಡಿಶಾದ ಸುಬರ್ಣಪುರ ಜಿಲ್ಲೆಯ ನಿವಾಸಿಗಳಾದ ರಾಧಿಕಾ ಭುಯೆ (80) ಮತ್ತು ಹುಟ್ಟಿನಿಂದಲೇ ಅಂಧತ್ವ ಹೊಂದಿರುವ ಅವರ ಮಗ ಜಪಾ ಭುಯೆ ಅವರಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಲು ಪೀಠವು ಸರ್ಕಾರಕ್ಕೆ ಸೂಚಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಕುಟುಂಬದ ಆಧಾರಸ್ತಂಭವಾಗಿದ್ದ ತಂದೆಯ ಮರಣದ ನಂತರ ಈ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಜಪಾ ಭುಯೆ ಅವರು ತಮ್ಮ ದಿನನಿತ್ಯದ ಅಗತ್ಯಗಳಿಗಾಗಿ ಸಂಪೂರ್ಣವಾಗಿ ವೃದ್ಧ ತಾಯಿಯನ್ನೇ ಅವಲಂಬಿಸಿದ್ದಾರೆ. ಇವರಿಬ್ಬರೂ ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಒಂದೇ ಕೊಠಡಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಅದೇ ಜಾಗವನ್ನು ಅಡುಗೆ ಕೋಣೆ ಮತ್ತು ಮಲಗುವ ಕೋಣೆಯಾಗಿ ಬಳಸುತ್ತಿರುವ ದಯನೀಯ ಸ್ಥಿತಿಯನ್ನು ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿದೆ.
ಇದನ್ನು ಓದಿದ್ದೀರಾ? ಫಿಫಾ 2026: ಆಕರ್ಷಕ ಗೋಲು ಬಾರಿಸಿದರೂ ರೆಫರಿಗಳು ಅದನ್ನು ತಿರಸ್ಕರಿಸುವುದೇಕೆ?
“ಹುಟ್ಟಿನಿಂದಲೇ ಅಂಧರಾಗಿರುವ ಜಪಾ ಭುಯೆ ಮತ್ತು ಅವರ ತಾಯಿ ರಾಧಿಕಾ ಭುಯೆ ಅವರ ಘನತೆಯುತ ಜೀವನ ಮತ್ತು ಉಳಿವಿನ ಬಗ್ಗೆ ನಮಗೆ ತೀವ್ರ ಕಳವಳವಿದೆ. ಹಾಗಾಗಿ ಮುಂದಿನ ಆದೇಶದವರೆಗೆ ಅವರಿಗೆ ಎಲ್ಲ ಮೂಲಭೂತ ಸೌಕರ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು,” ಎಂದು ಸುಪ್ರೀಂ ಕೋರ್ಟ್ ಒಡಿಶಾ ಸರ್ಕಾರಕ್ಕೆ ಆದೇಶಿಸಿದೆ. ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳು ನಿಜವಾದ ಅಗತ್ಯವಿರುವ ಜನರಿಗೆ ಘನತೆಯ ಜೀವನವನ್ನು ಕಟ್ಟಿಕೊಡಲು ಬಳಕೆಯಾಗುತ್ತಿವೆಯೇ ಎಂಬುದೇ ನ್ಯಾಯಾಲಯದ ಪ್ರಮುಖ ಕಾಳಜಿಯಾಗಿದೆ ಎಂದು ಪೀಠವು ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಒಡಿಶಾ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ‘ಈಗಾಗಲೇ ಆ ಕುಟುಂಬಕ್ಕೆ ವಸತಿ ಘಟಕವೊಂದನ್ನು ಹಂಚಿಕೆ ಮಾಡಲಾಗಿದೆ. ಇದರ ಜೊತೆಗೆ ತಾಯಿಗೆ ವೃದ್ಧಾಪ್ಯ ವೇತನ ಮತ್ತು ಮಗನಿಗೆ ಅಂಗವಿಕಲ ವೇತನವನ್ನು ಮಂಜೂರು ಮಾಡಲಾಗಿದೆ’ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಈ ಹೇಳಿಕೆಯನ್ನು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್, ಆ ಕುಟುಂಬಕ್ಕೆ ಒದಗಿಸಿರುವ ಕಲ್ಯಾಣ ಕ್ರಮಗಳು ಮತ್ತು ಸೌಲಭ್ಯಗಳ ಕುರಿತು ಜುಲೈ ತಿಂಗಳೊಳಗೆ ‘ಅನುಪಾಲನಾ ವರದಿ’ ಸಲ್ಲಿಸುವಂತೆ ಒಡಿಶಾ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.




