ಪ್ರೀಮಿಯಂ ಲೇಖನ | ಜೆನ್-ಝಿಗಳಿಂದ ಕಲಿಯಬೇಕಾದ ಪಾಠಗಳೇನು?

Date:

ಭ್ರಷ್ಟಗೊಂಡ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ರೋಸಿ‌ ಹೋದ ಮತ್ತು ಭವಿಷ್ಯದ ಭರವಸೆಯನ್ನೇ ಕಳೆದುಕೊಂಡ ಯುವ ಸಮುದಾಯ ಆಡಳಿತ ವರ್ಗದ ದಬ್ಬಾಳಿಕೆ, ಪೊಲೀಸ್ ದೌರ್ಜನ್ಯ ಹಾಗೂ ಬ್ಲ್ಯಾಕ್ ಮೇಲ್ ಗಳ ಹೊರತಾಗಿಯೂ ಆಶ್ಚರ್ಯಕರವಾದ ಸಂಯಮದಿಂದ ಗಾಂಧೀಜಿ ಭಾರತೀಯರಿಗೆ ತೋರಿಸಿದ ಅಹಿಂಸಾ ಮಾರ್ಗದಲ್ಲಿ ತಮ್ಮ ಪ್ರಜಾತಾಂತ್ರಿಕ ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿರಿಸಿತು.

- Advertisement -


ಮೊದಲಿಗೆ 19ನೇ ಶತಮಾನದ ದಾರ್ಶನಿಕ Karl Marx ನ ಒಂದು ಮಹತ್ವದ ಹೇಳಿಕೆಯಿಂದ ನನ್ನ ಮಾತನ್ನು ಪ್ರಾರಂಭಿಸುತ್ತೇನೆ.

ಆತ ಹೀಗೆ ಹೇಳುತ್ತಾನೆ: ʼನಮ್ಮ ಹಿಂದಿನ ತಲೆಮಾರು ಮಾಡಿದ ತಪ್ಪುಗಳನ್ನು ನಾವು ತಿದ್ದಬೇಕು. ಅಂತೆಯೇ, ನಾವು ಮಾಡಿದ ತಪ್ಪುಗಳನ್ನು ನಮ್ಮ ಮುಂದಿನ ತಲೆಮಾರು ತಿದ್ದುತ್ತದೆ’. ಮಾರ್ಕ್ಸ್ ಹೇಳಿದ ಈ ಮಾತು ಹಿರಿಯರು ತೋರಿಸಿದ ದಾರಿಯಲ್ಲಿ ನಾವು ನಡೆಯಬೇಕು ಎನ್ನುವ ಈ ಸಾಂಪ್ರದಾಯಿಕ ತಿಳುವಳಿಕೆಗಿಂತ ಭಿನ್ನವಾದದ್ದು ಮತ್ತು ವೈಚಾರಿಕವಾಗಿ ಪ್ರಖರವಾದದ್ದು. ಹಾಗೆಂದ ಮಾತ್ರಕ್ಕೆ ಹಿರಿಯರ ನಡೆ- ನುಡಿಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಬೇಕೆನ್ನುವ ಧೋರಣೆ ಮಾರ್ಕ್ಸ್ ನದ್ದಲ್ಲ. ಎಲ್ಲವನ್ನು ನಮ್ಮ ವಿವೇಕದ ಬೆಳಕಿನಲ್ಲಿ ವಿಮರ್ಶೆಗೆ ಒಡ್ಡಿ ಸಮಂಜಸವಾದದ್ದನ್ನು ಸ್ವೀಕರಿಸಬೇಕು ಮತ್ತು ಅಸಮಂಜಸವಾದದ್ದನ್ನು ನಿರಾಕರಿಸಬೇಕು ಎನ್ನುವ ಆಧುನಿಕ, ವೈಚಾರಿಕ ಮನೋಭಾವ ಮಾರ್ಕ್ಸ್‌ನದು.

ಜೆನ್ ಝಿ ಎನ್ನುವ ಹೆಸರಿನಲ್ಲಿ ಕರೆಯಲ್ಪಡುವ ಹದಿಹರೆಯದ ಹುಡುಗ ಹುಡುಗಿಯರು ಭಾರತದಲ್ಲಿ ನಡೆಸಿದ ಅಭೂತಪೂರ್ವವಾದ ಪ್ರತಿರೋಧದ ರಾಜಕಾರಣ ಅರ್ಥ ಮಾಡಿಕೊಳ್ಳಲು ಮತ್ತು ಅದರಿಂದ ನಾವು ಕಲಿಯಬೇಕಾದ ಪಾಠಗಳೇನು? ಎನ್ನುವುದನ್ನು ಅರಿಯಲು ಮೇಲೆ ನೀಡಲಾದ ಮಾರ್ಕ್ಸ್ ನ ಹೇಳಿಕೆ ಸೂಕ್ತವಾದದ್ದು. ಹಿರಿಯರು ತೋರಿಸಿದ ದಾರಿಯಲ್ಲಿ ಮುನ್ನಡೆಯಬೇಕು ಎನ್ನುವ ಸಾಂಪ್ರದಾಯಿಕ ನೋಟದಾಚೆ ನಾವು ಭಾರತದಲ್ಲಿ ಇತ್ತೀಚೆಗೆ ಸಂಭವಿಸಿದ ಹೊಚ್ಚ ಹೊಸದಾದ ಜೆನ್ ಝಿ ರಾಜಕಾರಣವನ್ನು ಪರಿಶೀಲಿಸಬೇಕು ಮತ್ತು ಅದು ಈಗಾಗಲೇ ಜಡ್ಡು ಕಟ್ಟಿದ ನಮ್ಮ ರಾಜಕಾರಣಕ್ಕೆ ಹೇಗೆ ಹೊಸ ಸಂಚಲನವನ್ನು ನೀಡಿದೆ ಹಾಗೂ ಮುಂದೆಯೂ ನೀಡುವ ಭರವಸೆಯನ್ನು ತೋರಿದೆ ಎನ್ನುವುದನ್ನು ಅರಿಯಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ಭ್ರಷ್ಟಗೊಂಡ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ರೋಸಿ‌ ಹೋದ ಮತ್ತು ಭವಿಷ್ಯದ ಭರವಸೆಯನ್ನೇ ಕಳೆದುಕೊಂಡ ಯುವ ಸಮುದಾಯ ಆಡಳಿತ ವರ್ಗದ ದಬ್ಬಾಳಿಕೆ, ಪೊಲೀಸ್ ದೌರ್ಜನ್ಯ ಹಾಗೂ ಬ್ಲ್ಯಾಕ್ ಮೇಲ್ ಗಳ ಹೊರತಾಗಿಯೂ ಆಶ್ಚರ್ಯಕರವಾದ ಸಂಯಮದಿಂದ ಗಾಂಧೀಜಿ ಭಾರತೀಯರಿಗೆ ತೋರಿಸಿದ ಅಹಿಂಸಾ ಮಾರ್ಗದಲ್ಲಿ ತಮ್ಮ ಪ್ರಜಾತಾಂತ್ರಿಕ ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿರಿಸಿತು. ಹಾಗೂ ನಿರಶನ ಮತ್ತು ಪ್ರತಿಭಟನೆಗಳ ಮೂಲಕ ಭಯಮುಕ್ತವಾದ ರಾಜಕಾರಣವನ್ನು ನಡೆಸಿತು ಎನ್ನುವುದು ಸಮಕಾಲೀನ ಭಾರತದ ಪ್ರಜಾತಾಂತ್ರಿಕ ರಾಜಕಾರಣದ ಚರಿತ್ರೆಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಅಂತೆಯೇ, ಎಲ್ಲಾ ಬಗೆಯ ಒತ್ತಡಗಳ ನಡುವೆ ತನ್ನ ಬೇಡಿಕೆಗಳಿಗೆ ಸರಕಾರ ಕೊನೆಗೂ ಮಣಿಯುವಂತೆ ಮಾಡಿತು ಎನ್ನುವುದು ಅತ್ಯಂತ ಆಶ್ಚರ್ಯಕರವಾದ ಸಂಗತಿ.

ವಿಶಾಲವಾದ ಮತ್ತು ವೈವಿಧ್ಯಮಯವಾದ ಭಾರತೀಯ ಸಮಾಜವನ್ನು ನಿರಂತರವಾದ ದಬ್ಬಾಳಿಕೆಯಲ್ಲಿ ಹಾಗೂ ಭ್ರಮಾತ್ಮಕವಾದ ಭರವಸೆಯ ಗುಂಗಿನಲ್ಲಿ‌ ʼಯಾವತ್ತೂ ನಾನು ನನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೇನೆʼ ಎನ್ನುವ ಸಂಘ ಪರಿವಾರದ ಅಹಂಕಾರವನ್ನು ತನ್ನ ನಿರ್ಭೀತತೆಯಲ್ಲಿ ಹಾಗೂ ಏಕಾಗ್ರತೆಯಲ್ಲಿ ಬಗ್ಗು ಬಡಿದ ಭಾರತೀಯ ಯುವ ಸಮುದಾಯದಿಂದ ಈ ದೇಶದ ಇತರ ಹಿರಿಯ ಕಿರಿಯ ನಾಗರಿಕರು ಅನೇಕ ಮಹತ್ವದ ಪಾಠಗಳನ್ನು ಕಲಿಯಬೇಕಾಗಿದೆ. ಈ ಹಿರಿಯರು ನಾವೇ ಎಲ್ಲವನ್ನು ಬಲ್ಲವರು ಎನ್ನುವ ಭ್ರಮೆಯನ್ನು ಬಿಟ್ಟು ಕಿರಿಯರು ಕಲಿಸುವ ಪಾಠಗಳನ್ನು ನಿಯತ್ತಿನಿಂದ ಮತ್ತು ವಿವೇಕದಿಂದ ಕಲಿತರೆ ಅದು ಭಾರತದ ಪ್ರಜಾತಂತ್ರಕ್ಕೆ ಒಂದು ಹೊಸ ಚೈತನ್ಯವನ್ನು ನೀಡಬಹುದು. ಈ ಪಾಠಗಳನ್ನು ಈ ಕೆಳಗಿನಂತೆ ನಮೂದಿಸಬಹುದು.

ಪಾಠ 1 : ಚುನಾವಣೆಗಳು, ರಾಜಕೀಯ ಪಕ್ಷಗಳ ಹಣಾಹಣಿ, ರಾಜಕಾರಣಿಗಳ ದರ್ಬಾರು, ಸಂಸತ್ತಿನ ಕಲಾಪ ಹಾಗೂ ಅಧಿಕಾರಶಾಹಿಯ ಅಟ್ಟಹಾಸಗಳನ್ನಷ್ಟೇ ರಾಜಕಾರಣವೆಂದು ತಿಳಿಯುವ ನಮಗೆ ಅದು ಪರಿವರ್ತನೆಯ ಸಾಧನವು ಹೌದು ಮತ್ತು ನ್ಯಾಯ ಸಮ್ಮತ ಬೇಡಿಕೆಗಳನ್ನು ಮುಂದಿಡುವ ವೇದಿಕೆಯೂ ಹೌದು ಎನ್ನುವ ಪ್ರಜಾತಾಂತ್ರಿಕ ಸತ್ಯವನ್ನು ಈ ಹದಿ ಹರೆಯದ ಭಾರತೀಯರು ನಮಗೆ ಮನದಟ್ಟು ಮಾಡುತ್ತಿದ್ದಾರೆ. ಅಂತೆಯೇ ಅಹಿಂಸಾತ್ಮಕವಾದ ಪ್ರತಿರೋಧವೇ ಪ್ರಜಾತಂತ್ರದ ಜೀವ ದ್ರವ್ಯ ಎನ್ನುವ ಮಹತ್ವದ ಅಂಶವನ್ನು ಅವರು ನಮಗೆ ತೋರಿಸಿ ಕೊಡುತ್ತಿದ್ದಾರೆ. ಹಾಗೆ ಮಾಡುವ ಮೂಲಕ ಗಾಂಧೀಜಿ ನಾಯಕತ್ವದಲ್ಲಿ ಭಾರತೀಯರು ನಡೆಸಿದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟವನ್ನು, ಅಂಬೇಡ್ಕರ್ ನಾಯಕತ್ವದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಜನ ಸಂಘರ್ಷವನ್ನು, ಲೋಹಿಯಾ ನೇತತ್ವದಲ್ಲಿ ಸಮಾನತೆಗಾಗಿ ನಡೆದ ಸಮಾಜವಾದೀ ಆಂದೋಲನವನ್ನು ಹಾಗೂ ಜಯಪ್ರಕಾಶ್ ನಾರಾಯಣ್ ಮುಂದಾಳತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆದ ವಿದ್ಯಾರ್ಥಿ ಚಳುವಳಿಗಳನ್ನು ಅವರು ನಮಗೆ ನೆನಪಿಸುತ್ತಿದ್ದಾರೆ. ನಮ್ಮ ಚರಿತ್ರೆಯಲ್ಲಿ ಸಂಭವಿಸಿದ ಈ ಪ್ರಖರ ಹೋರಾಟಗಳ ನೆನಪನ್ನು ಮತ್ತೆ ಹಸಿರಾಗಿಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರ ಈ ಜಂತರ್ ಮಂತರ್ ಪ್ರತಿರೋಧ ಪ್ರಜಾತಂತ್ರ ನಾವು ಶ್ರಮವಹಿಸಿ ದಕ್ಕಿಸಿಕೊಳ್ಳಬೇಕಾದ ಅಮೂಲ್ಯ ಅಧಿಕಾರವೆನ್ನುವ ಪಾಠವನ್ನು ನಮಗೆ ಭೋಧಿಸುತ್ತದೆ.

ದೆಹಲಿ ಪ್ರತಿಭಟನೆ

ಪಾಠ 2: ಕಳೆದ ಅನೇಕ ದಶಕಗಳಲ್ಲಿ ನಮ್ಮ ಸಾರ್ವಜನಿಕ ವಲಯ ಗಾಂಧೀಜಿ ಮೇಲೋ ಅಥವಾ ಅಂಬೇಡ್ಕರ್ ಮೇಲೋ ಎನ್ನುವ ವ್ಯರ್ಥ ಜಿಜ್ಞಾಸೆಯಲ್ಲಿ ತನ್ನ ಸಮಯವನ್ನು ವ್ಯಯಿಸಿದೆ. ಶೈಕ್ಷಣಿಕ ಅಧ್ಯಯನದ ಸಂದರ್ಭದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ತಾತ್ವಿಕ ಭಿನ್ನಮತವನ್ನು ಅರಿಯುವುದು ಮುಖ್ಯವಿರಬಹುದು. ಆದರೆ ಇದನ್ನೇ ಬೀದಿ ಜಗಳವಾಗಿ ಪರಿವರ್ತಿಸಿ ಒಡಕುಗಳನ್ನು ಸೃಷ್ಟಿಸುವುದು ಸೂಕ್ತವಾದುದಲ್ಲ. ಮಾನವಾಭ್ಯುದಯವನ್ನು ಬಯಸುವ ಈ ಈರ್ವರು ಚಿಂತಕರು ತಮ್ಮೆಲ್ಲ ತಾತ್ವಿಕ ಮತಭೇದಗಳ ಹೊರತಾಗಿಯೂ ಅನೇಕ ಪ್ರಮುಖ ವಿಷಯಗಳಲ್ಲಿ ಒಂದಾಗುತ್ತಾರೆ ಎನ್ನುವ ಸತ್ಯವನ್ನು ಜಂತರ್ ಮಂತರ್ ಹೋರಾಟ ನಮಗೆ ತೋರಿಸಿಕೊಟ್ಟಿದೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ವಿಚಾರಗಳ ಪ್ರೇರಣೆಯಲ್ಲಿ ಘೋಷಣೆ ಕೂಗುವ ಹದಿಹರೆಯದ ಭಾರತೀಯರು ಅರ್ಥಪೂರ್ಣವಾದ ಗಾಂಧಿ ಅಂಬೇಡ್ಕರ್ ಸಮನ್ವಯದ ರಾಜಕಾರಣವನ್ನು ಜಂತರ್ ಮಂತರ ನಲ್ಲಿ ಮೆರೆದಿದ್ದಾರೆ.

ಪಾಠ 3: ಗೋವನ್ನು ಮಾತೆ ಎಂದು ಪೂಜಿಸುವ ಈ ದೇಶದಲ್ಲಿ ಜಿರಳೆಯನ್ನು ತಮ್ಮ ಹೋರಾಟದ ಸಂಕೇತವನ್ನಾಗಿಸುವುದನ್ನು ಒಂದು ಕ್ರಾಂತಿಕಾರಿ ಹೆಜ್ಜೆ ಎಂದೇ ಹೇಳಬೇಕು. ನೀವು ಯಾವುದನ್ನು ತುಚ್ಚೀಕರಿಸುತ್ತೀರೋ ಅದನ್ನು ನಾವು ನಮ್ಮ ಶಕ್ತಿಯಾಗಿ ಪರಿವರ್ತಿಸುತ್ತೇವೆ ಎನ್ನುವ ಕಾಕ್ರೋಚ್ ರಾಜಕಾರಣ ನಿಜವಾಗಿಯೂ ಒಂದು ರೋಮಾಂಚನಗೊಳಿಸುವ ದೃಶ್ಯ. ರಾಜಕೀಯ ಪಕ್ಷಗಳೆಲ್ಲವೂ ತಮ್ಮನ್ನು ಜನಪ್ರಿಯಗೊಳಿಸುವ ಮತ್ತು ಚುನಾವಣೆಯಲ್ಲಿ ತಮಗೆ ಲಾಭ ತರುವ ಸಂಕೇತ ಹಾಗೂ ಸಂಕಥನಗಳಿಗಾಗಿ ಪರದಾಡಿದರೆ ಈ ಯುವ ಭಾರತೀಯ ಸಮುದಾಯ ನಿಕೃಷ್ಟವೆಂದು ಭಾವಿಸಿದ್ದನ್ನು ತನ್ನ ಹೋರಾಟದ ಸಂಕೇತವನ್ನಾಗಿಸಿದೆ. ಇದು ನಿಜವಾಗಿಯೂ ರಾಜಕಾರಣದ ಕುರಿತು ನಾವು ಕಲಿಯಬೇಕಾದ ಹೊಸ ಪಾಠ.

ಪಾಠ 4: ಅಪಾರ್ಟ್ಮೆಂಟುಗಳ ಬೆಚ್ಚಗಿನ ಕೋಣೆಗಳಲ್ಲಿ ಕುಳಿತು ಮೋದಿಯವರು ತೋರಿಸಿದ ಭ್ರಮಾಲೋಕದ ಗುಣಗಾನವನ್ನು ಮಾಡುವ ನಮ್ಮ ದೇಶದ ಅಂಕಲ್ ಆಂಟಿಯರ ವಾಟ್ಸ್ಯಾಪ್ ರಾಜಕಾರಣಕ್ಕೆ ಎದುರಾಗಿ ಜೆನ್ ಝಿ ನಡೆಸಿದ ಇನ್‌ಸ್ಟಾಗ್ರಾಮ್ ರಾಜಕಾರಣ ನಿಜಕ್ಕೂ ಅದ್ಭುತವಾದದ್ದು. ಇದು ಜಗತ್ತಿನಾದ್ಯಂತ ಅವರಿಗೆ ಒದಗಿಸಿದ ಜನಪ್ರಿಯತೆಗೆ ಕಂಗಾಲಾಗಿ ಮೋದಿ ಕೂಡ ಅವರಂತೆ ರೀಲು ಬಿಡಲು ಶುರು ಮಾಡಿದ್ದಾರೆ. ಇದು ನವ ಜನಾಂಗದ ಚೈತನ್ಯವನ್ನು ಮತ್ತು ಅಧಿಕಾರಶಾಹಿಯ ಹತಾಶೆಯನ್ನು ಏಕ ಕಾಲದಲ್ಲಿ ತೋರಿಸಿ ಕೊಡುತ್ತಿದೆ. ಇದು ಎಲ್ಲರನ್ನೂ ಎಲ್ಲಾ ಕಾಲದಲ್ಲಿಯೂ ಮಂಗ ಮಾಡಲು ಸಾಧ್ಯವಿಲ್ಲ ಎನ್ನುವ ಅಬ್ರಾಹಂ ಲಿಂಕನ್ ಅವರ ಉಕ್ತಿಯನ್ನು ಸತ್ಯಗೊಳಿಸಿದೆ.

Abhijeet Dipke 1 1

ಪಾಠ 5: ಏಕಚಕ್ರಾಧಿಪತ್ಯದ, ಸರ್ವಾಧಿಕಾರಿ ಪ್ರವೃತ್ತಿಯ ಮತ್ತು ಲಂಗುಲಗಾಮಿ ಇಲ್ಲದ ವ್ಯಕ್ತಿ ಪೂಜೆ ನಡೆಯುವ ಈ ನಮ್ಮ ದೇಶದಲ್ಲಿ ವ್ಯಕ್ತಿ ಮುಖ್ಯವಲ್ಲ ನಮ್ಮ ಆದರ್ಶಗಳು ಮತ್ತು ಅದಕ್ಕಾಗಿ ನಾವು ಹಾಕಿಕೊಳ್ಳುವ ಕಾರ್ಯಕ್ರಮಗಳು ಮುಖ್ಯ. ನಾವು ಬಹು ದೊಡ್ಡ ಕ್ರಾಂತಿಕಾರಿ ಬೇಡಿಕೆಯನ್ನೇನು ನೀಡಿಲ್ಲ. ನಮ್ಮದು ಅತ್ಯಂತ ಸರಳವಾದ ಹೊಣೆಗಾರಿಕೆಗೆ ಸಂಬಂಧಿಸಿದ ಬೇಡಿಕೆಯಷ್ಟೇ. ಯಾವುದೇ ಸಮಾಜ ಮುನ್ನಡೆಯ ಬೇಕಾದರೆ ಶಿಕ್ಷಣ ವ್ಯವಸ್ಥೆ ಪಾರದರ್ಶಕವಾಗಬೇಕು ಎನ್ನುವ ಅಭಿಜಿತ್ ದೀಪ್ಕೆ ಮಾತು ಕಾಕ್ರೋಚ್ ಜನತಾ ಪಕ್ಷದ ಮತ್ತು ಜಂತರ್ ಮಂತರ್ ಹೋರಾಟದ ಅತಿ ಮುಖ್ಯ ಪಾಠ ಮತ್ತು ಸಂದೇಶ.

***

ಕನ್ನಡದ ಚಿಂತಕ ಮತ್ತು ಲೇಖಕ ಡಾ ಯು ಆರ್‌ ಅನಂತಮೂರ್ತಿಯವರ ಪುಟ್ಟ ಕವನವೊಂದರ ನೆನಪಿನಿಂದ‌ ಈ ಬರಹವನ್ನು ಕೊನೆಗೊಳಿಸಬಹುದು. ಸಾರಾಂಶ ರೂಪದಲ್ಲಿ ಅದು ಹೀಗಿದೆ. ನಡು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಈಗ ನಾವು ಜೆನ್ ಝೀ ಎಂದು ಕರೆಯುವ ಪುಟಾಣಿ ಹುಡುಗಿಯೊಬ್ಬಳು ಹೆಚ್ಚು ಕಮ್ಮಿ ತನ್ನಷ್ಟೇ ದೊಡ್ಡವನಾದ ಹುಡುಗನೊಬ್ಬನನ್ನು ಎತ್ತಿಕೊಂಡು ಏದುಸಿರು ಬಿಡುತ್ತಾ ಬರುತ್ತಿದ್ದಳು. ಮರದ ನೆರಳಿನಲ್ಲಿ ನಿಂತಿದ್ದ ಗಾಂಧೀಜಿ ಆಕೆಯನ್ನು ಕೇಳುತ್ತಾರೆ. ಬಹಳ ಭಾರವೇ ಏನಮ್ಮ ಎಂದು. ಅದಕ್ಕೆ ಅವಳು ಉತ್ತರಿಸುತ್ತಾಳೆ- “ಇವನು ನನ್ನ ತಮ್ಮ” ಎಂದು. ತಮ್ಮ ಈ ಪುಟ್ಟ ಕವನಕ್ಕೆ ಅನಂತಮೂರ್ತಿ ‘ಪ್ರೀತಿ ಮತ್ತು ಕರ್ತವ್ಯ’ ಎನ್ನುವ ಶೀರ್ಷಿಕೆ ನೀಡಿದ್ದಾರೆ. ಅದನ್ನು ಇಂದು ನಾವು ಗಾಂಧೀಜಿ ಕಲಿತ ಪಾಠ ಎನ್ನುವ ಶೀರ್ಷಿಕೆಯಲ್ಲೂ ಅರಿಯಬಹುದು. ತನಗಿಂತ ಕಿರಿಯರಾದವರ ಜೊತೆಗೆ ಸಂವಾದಿಸುವ, ಅವರಿಂದ ಹೊಸ ಪಾಠಗಳನ್ನು ಕಲಿಯುವ ಮನೋಭಾವ ಗಾಂಧೀಜಿಯವರದ್ದು. ಅದನ್ನು ನಾವು ಬೆಳೆಸಿಕೊಂಡಲ್ಲಿ ಹೆಚ್ಚು ಅರ್ಥಪೂರ್ಣವಾದ ಬದುಕು ಹಾಗೂ ಪ್ರಜಾತಾಂತ್ರಿಕವಾದ ಸಮಾಜ ರೂಪುಗೊಳ್ಳುತ್ತದೆ.

ರಾಜಾರಾಮ ತೋಳ್ಪಾಡಿ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಡಿಗರಿಗೆ ಉದ್ಯೋಗ ತಾರತಮ್ಯ: ಖಾಸಗಿ ಸಂಸ್ಥೆಗಳಿಗೆ ಸಿಎಂ ಎಚ್ಚರಿಕೆ, ಕನ್ನಡಪರ ಸಂಘಟನೆಗಳಿಗೆ ಶಾಂತಿ ಕಾಪಾಡಲು ಮನವಿ

ಐಟಿ-ಬಿಟಿ ಕಂಪನಿಗಳಲ್ಲಿ ನೇಮಕಾತಿ ವೇಳೆ ಸ್ಥಳೀಯ ಕನ್ನಡಿಗರಿಗೆ ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡಲಾಗುತ್ತಿದೆ...

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು ಮುಂದಾಗಿದ್ದೇಕೆ ಬಿಜೆಪಿ?

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್...

ರಾಮ್‌ ಗೋಪಾಲ ವರ್ಮಾಗೆ ₹29.67 ಕೋಟಿ ರಿಕವರಿ ನೋಟಿಸ್!

ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ‘ಎಕ್ಲಟಾಂಟ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್’...

ಗಾಯಕ ದಿಲ್ಜಿತ್ ಬಳಿ ಕ್ಷಮೆಯಾಚಿಸಿದ ಅಭಿಜೀತ್ ದೀಪ್ಕೆ!

NEET ಪ್ರಶ್ನೆಪತ್ರಿಕೆ ಸೋರಿಕೆ ಕುರಿತಾದ ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ಗಾಯಕ ದಿಲ್ಜಿತ್...