ಬೆಂಗಳೂರು ಕೇಂದ್ರ | ಎಂಟು ಕ್ಷೇತ್ರಗಳಲ್ಲೂ ಬಲಿಷ್ಠವಾಗಿರುವ ಕಾಂಗ್ರೆಸ್, ಕಷ್ಟಪಡುತ್ತಿರುವ ಕಮಲ

Date:

ಬೆಂಗಳೂರು ಕೇಂದ್ರ ಲೋಕಸಭೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಬಹುತೇಕ ಕಾಂಗ್ರೆಸ್‌ನ ಭದ್ರಕೋಟೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ‘ಕೈ’ ಸತತವಾಗಿ ಪಾರಮ್ಯ ಮೆರೆಯುತ್ತಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದರೂ ಕಾಂಗ್ರೆಸ್ ಪೈಪೋಟಿ ಕೂಡ ಪ್ರಬಲವಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಸಾಧನೆ ಇಲ್ಲಿ ನಗಣ್ಯ. ತೆನೆ ಪಕ್ಷ ಏನಿದ್ದರೂ ಮೂರನೇ ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಿದೆ. ಹಲವು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುವ ಸಾಧ್ಯತೆಯು ಉಂಟು.      

ಸರ್ವಜ್ಞ ನಗರ: ಕೆ ಜೆ ಜಾರ್ಜ್‌- ಏಕಮೇವ ನಾಯಕ

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಕ್ಷೇತ್ರ ಪುನರ್‌ವಿಂಗಡನೆಯಾದ 2008ರಿಂದ ಸತತ ಮೂರು ಬಾರಿ ಕಾಂಗ್ರಸ್ಸಿನ ಪ್ರಭಾವಿ ನಾಯಕ ಕೆ ಜೆ ಜಾರ್ಜ್ ಗೆಲ್ಲುತ್ತಾ ಬಂದಿದ್ದಾರೆ. ಆಧುನಿಕತೆಯ ಜೊತೆಗೆ ಬಡತನವನ್ನು ಹಾಸುಹೊದ್ದಿರುವ ಕ್ಷೇತ್ರ ಸರ್ವಜ್ಞ ನಗರ. ಬಿಬಿಎಂಪಿಯ ನಾಗವಾರ, ಎಚ್‌ಬಿಆರ್‌ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಹಾಗೂ ಮಾರುತಿ ಸೇವಾನಗರ ಸೇರಿ ಎಂಟು ವಾರ್ಡ್‌ಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಈ ಕ್ಷೇತ್ರದಲ್ಲಿ ಎಸ್‌ಸಿ/ಎಸ್‌ಟಿ ಹಾಗೂ ಅಲ್ಪಸಂಖ್ಯಾತರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕೆ ಜೆ ಜಾರ್ಜ್‌ ನಾಲ್ಕನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ರಸ್ತೆ ಅವ್ಯವಸ್ಥೆ, ಚರಂಡಿ ದುರವಸ್ಥೆ, ಬೀದಿದೀಪ ಸೇರಿದಂತೆ ಕ್ಷೇತ್ರದಲ್ಲಿ ಹಲವು ರೀತಿಯ ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಸರ್ಕಾರಿ ಅನುದಾನವಲ್ಲದೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಉಪಯೋಗಿಸಿಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ ಎನ್ನುತ್ತಾರೆ ಜಾರ್ಜ್‌.

ಕ್ಷೇತ್ರದ ಎಲ್ಲ 28 ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಹೈಟೆಕ್‌ ಸ್ಪರ್ಶ ಹೊಂದಿರುವುದು, ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಲವು ಕಾಮಗಾರಿಗಳು ಇವರ ಅವಧಿಯಲ್ಲಿಯೇ ನಡೆದಿರುವುದರಿಂದ ಜನರಲ್ಲಿ ಇವರ ಬಗ್ಗೆ ಹೆಚ್ಚು ಒಲವು. ಇವೆಲ್ಲವೂ ಜಾರ್ಜ್‌ ಅವರನ್ನು ನಾಲ್ಕನೇ ಬಾರಿ ಆಯ್ಕೆ ಮಾಡಿದರೆ ಯಾವುದೇ ಸಂದೇಹವಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.

ಬಿಜೆಪಿಯಿಂದ ಸ್ಥಳೀಯ ಮುಖಂಡ ಪದ್ಮನಾಭ ರೆಡ್ಡಿ ಸ್ಪರ್ಧಿಸಿದ್ದು, ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಶಾಸಕರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರದೇನಿದ್ದರೂ ಬಾಯಿ ಮಾತಿನ ಅಭಿವೃದ್ಧಿ. ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ. ಆದ ಕಾರಣ ತಾವು ಈ ಬಾರಿ ಗೆಲ್ಲುವುದಾಗಿ ಪದ್ಮನಾಭ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತರು ಹೆಚ್ಚಿರುವ ಕಾರಣ ಕೋಲಾರದ ಮೂಲದ ಮೊಹಮ್ಮದ್‌ ಮುಸ್ತಾಫ ಎಂಬುವವರಿಗೆ ಜೆಡಿಎಸ್‌ ಟಿಕೆಟ್ ನೀಡಿದೆ. ಸ್ಥಳೀಯರಲ್ಲದ ಇವರು ಕ್ಷೇತ್ರದ ಸಮಸ್ಯೆಗಳನ್ನು ಹೇಗೆ ಅರಿಯಲು ಸಾಧ್ಯ ಎಂಬುದು ಇಲ್ಲಿನ ಮತದಾರರ ಪ್ರಶ್ನೆ. ಕ್ಷೇತ್ರವನ್ನು ಒಂದು ಬಾರಿ ಸುತ್ತಾಡಿದರೆ ಕಾಂಗ್ರೆಸ್ ಈ ಬಾರಿಯು ಹೆಚ್ಚು ಅಂತರದಿಂದ ಜಯಗಳಿಸುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ? ಶಿವಾಜಿನಗರ ಕ್ಷೇತ್ರ | ಕಾಂಗ್ರೆಸ್‌ ಭದ್ರಕೋಟೆ ಭೇದಿಸುವುದೇ ಬಿಜೆಪಿ

ಸಿ ವಿ ರಾಮನ್ನಗರ: ಬಿಜೆಪಿಯ ಓಟಕ್ಕೆ ಬಾರಿ ತಡೆ ಬೀಳುವುದೇ?

ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಈ ಕ್ಷೇತ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, 2008ರಲ್ಲಿ ರಚನೆಯಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಖ್ಯಾತ ವಿಜ್ಞಾನಿ, ಭಾರತ ರತ್ನ ಸರ್ ಸಿ.ವಿ. ರಾಮನ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ. ಬೆನ್ನಿಗಾನಹಳ್ಳಿ, ಸಿವಿ ರಾಮನ್ ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞ ನಗರ, ಹೊಯ್ಸಳ ನಗರ, ಜೀವನ್ ಭೀಮಾನಗರ, ಕೋನೇನ ಅಗ್ರಹಾರ ಸೇರಿದಂತೆ 7 ವಾರ್ಡ್‌ಗಳನ್ನು ಈ ಕ್ಷೇತ್ರ ಹೊಂದಿದೆ. ಎಸ್‌ಸಿ, ಎಸ್‌ಟಿ ಹಾಗೂ ಅನ್ಯ ಭಾಷಿಕ ಮತದಾರರೆ ಹೆಚ್ಚಿರುವುದರಿಂದ ಅವರೇ ಇಲ್ಲಿನ ನಿರ್ಣಾಯಕರು.

ಕಾರ್ಪೋರೇಟರ್‌ ಆಗಿ ಜೀವನ ಪ್ರಾರಂಭಿಸಿ, ಶಾಂತಿನಗರ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದ ಬಿಜೆಪಿಯ ಎಸ್‌ ರಘು, 2008ರಿಂದ ಕ್ಷೇತ್ರ ಪುನರ್‌ವಿಂಗಡಣೆಯಾದ ನಂತರದಂದಲೂ ಸಿ ವಿ ರಾಮನ್‌ ನಗರವನ್ನು ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ಮೂರು ಬಾರಿಯಿಂದಲೂ ಬಿಜೆಪಿಗೆ ಪೈಪೋಟಿ ನೀಡುತ್ತಿದೆ.   

ಹ್ಯಾಟ್ರಿಕ್ ಬಾರಿಸಿರುವ ರಘು ಅವರಿಗೆ ಕಮಲ ಪಕ್ಷ ಈ ಬಾರಿಯೂ ಟಿಕೆಟ್ ನೀಡಿದೆ. ಕಾಂಗ್ರೆಸಿನಿಂದ ಪಾಲಿಕೆಯ ಮಾಜಿ ಸದಸ್ಯ ಎಸ್‌ ಆನಂದ್‌ ಕುಮಾರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಜೆಡಿಎಸ್‌ ಈ ಕ್ಷೇತ್ರದಲ್ಲಿ ಸ್ಪರ್ಧಿಸದೆ ಆರ್‌ಪಿಐ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದೆ. ಇದು ಕಾಂಗ್ರೆಸಿಗೆ ಒಂದಷ್ಟು ಅನುಕೂಲವಾಗುವ ಸಾಧ್ಯತೆಯಿದೆ.

ಆಸ್ಪತ್ರೆಗಳು, ಶಾಲೆ ಕಾಲೇಜು ನಿರ್ಮಾಣ, ಕೆರೆ ಹಾಗೂ ಉದ್ಯಾನಗಳ ಅಭಿವೃದ್ಧಿ ಮಾಡಿರುವುದಾಗಿ ಹೇಳುತ್ತಿರುವ ಸ್ಥಳೀಯ ಶಾಸಕರು ಮತದಾರರು ತಮ್ಮನ್ನು ಈ ಬಾರಿಯೂ ಚುನಾಯಿಸುತ್ತಾರೆ ಎನ್ನುವ ಭರವಸೆಯಲ್ಲಿದ್ದಾರೆ.

ಆದರೆ ಈ ಕ್ಷೇತ್ರದಲ್ಲಿ ಆಧುನಿಕ ನಗರಗಳ ಜೊತೆ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಪಡಿತರ ಚೀಟಿ ಕೊಡಿಸಿಲ್ಲ. ಒಳಚರಂಡಿ ಕಾರ್ಯ ಪೂರ್ಣಗೊಂಡಿಲ್ಲ. ಬಯ್ಯಪ್ಪನಹಳ್ಳಿ ಕೊಳೆಗೇರಿ ಸಮಸ್ಯೆ ಬೃಹದಾಕಾರವಾಗಿದೆ. ಇದಕ್ಕೆಲ್ಲ ಪರಿಹಾರ ದೊರೆಯಬೇಕಾದರೆ ಕಾಂಗ್ರೆಸಿನಿಂದ ಮಾತ್ರ ಸಾಧ್ಯವೆಂದು ‘ಕೈ’ ಅಭ್ಯರ್ಥಿ ಆನಂದ್‌ಕುಮಾರ್‌ ಪ್ರಚಾರ ಸಭೆಗಳಲ್ಲಿ ಜನರಿಗೆ ಮನವರಿಕೆ ಮಾಡುತ್ತಿದ್ದು, ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಶಾಂತಿ ನಗರ: ಹ್ಯಾರಿಸ್‌ ಓಟಕ್ಕೆ ಜೈ ಎನ್ನುತ್ತಿರುವ ಮತದಾರ

ಶಾಂತಿನಗರ ವಿಧಾನಸಭಾ ಕ್ಷೇತ್ರವು ಜೋಗುಪಾಳ್ಯ, ಶಾಂತಲಾ ನಗರ, ದೊಮ್ಮಲೂರು, ಅಗರ, ವಣ್ಣಾರ್ ಪೇಟೆ, ನೀಲಸಂದ್ರ ಮತ್ತು ಶಾಂತಿನಗರ ಎಂಬ 7 ಬಿಬಿಎಂಪಿ ವಾರ್ಡ್‌ಗಳನ್ನು ಹೊಂದಿದೆ. ಹಲವು ಕೊಳಗೇರಿಗಳ ಜೊತೆ ಎಂ ಜಿ ರೋಡ್‌, ಬ್ರಿಗೇಡ್‌ ರಸ್ತೆ  ಪ್ರತಿಷ್ಠಿತ ಪ್ರದೇಶಗಳು ಇವೆ. 1967ರಲ್ಲಿ ರಚನೆಯಾದ ಶಾಂತಿನಗರದಲ್ಲಿ ಇಲ್ಲಿಯವರೆಗೆ ನಡೆದಿರುವ 12 ವಿಧಾನಸಭೆ ಚುನಾವಣೆಗಳ ಪೈಕಿ ಕಾಂಗ್ರೆಸ್ ಒಂಬತ್ತು ಬಾರಿ ಗೆಲುವು ಸಾಧಿಸಿದೆ. ಜನತಾ ಪರಿವಾರ ಎರಡು ಬಾರಿ ಹಾಗೂ ಒಮ್ಮೆ ಬಿಜೆಪಿ ಜಯ ಕಂಡಿದೆ.

ಕ್ಷೇತ್ರ ಪುನರ್‌ವಿಂಗಡನೆಯಾದ ನಂತರ ಕಾಂಗ್ರೆಸ್‌ನ ಎನ್‌ ಎ ಹ್ಯಾರಿಸ್ ಸತತವಾಗಿ ಮೂರು ಬಾರಿ ಗೆಲುವು ದಾಖಲಿಸುತ್ತ ಬರುತ್ತಿದ್ದು, ಇವರ ಓಟವನ್ನು ತಡೆಯಲು ಯಾವುದೇ ಪಕ್ಷಕ್ಕೆ ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ವ್ಯಾಯಾಮ ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿರುವ ಕಾರಣ ಈ ಬಾರಿಯು ಗೆಲುವು ಹ್ಯಾರಿಸ್‌ ಅವರದೆ ಎನ್ನುತ್ತಿದ್ದಾರೆ ಮತದಾರರು.

ಬಿಜೆಪಿಯಿಂದ ಸ್ಪರ್ಧಿಸಿರುವ ಪಾಲಿಕೆಯ ಮಾಜಿ ಸದಸ್ಯ ಕೆ ಶಿವಕುಮಾರ್, ಕ್ಷೇತ್ರದಲ್ಲಿ ಅಭಿವೃದ್ಧಿಯು ಕುಂಟುತ್ತ ಸಾಗಿದ್ದು ಬಹುತೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಜನರು ತಮಗೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿತ್ತಿದ್ದಾರೆ. ಜೆಡಿಎಸ್‌ನಿಂದ ಸ್ಥಳೀಯರಾದ ಹೆಚ್‌ ಮಂಜುನಾಥ್ ಸ್ಪರ್ಧಿಸಿದ್ದು, ಅಂತಹ ಹೇಳಿಕೊಳ್ಳುವಂತ ಬೆಂಬಲ ಆ ಪಕ್ಷಕ್ಕಿಲ್ಲ. ಸಿ ವಿ ರಾಮನ್‌ ನಗರದಂತೆ ಇಲ್ಲಿಯೂ ಕೂಡ ಅಲ್ಪಸಂಖ್ಯಾತರು ಹಾಗೂ ಅನ್ಯ ಭಾಷಿಕ ಮತದಾರರು ಹೆಚ್ಚಿದ್ದು, ಅವರೆ ಗೆಲುವಿನ ನಿರ್ಣಾಯಕರೆನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಹದೇವಪುರ ಕ್ಷೇತ್ರ | ಲಿಂಬಾವಳಿ ದಂಪತಿಗೆ ಆಡಳಿತ ವಿರೋಧಿ ಅಲೆ; ಕಾಂಗ್ರೆಸ್‌ಗೆ ಅವಕಾಶ?

ಗಾಂಧಿ ನಗರ: ದಿನೇಶ್ ಗುಂಡೂರಾವ್‌ ಬಿಟ್ಟು ಉಳಿದವರಿಗೆ ಸರಿಸಾಟಿಯಾಗದ ಕ್ಷೇತ್ರ

ಅತಿ ಹೆಚ್ಚು ವಾಣಿಜ್ಯ ಕೇಂದ್ರಗಳು, ಬೆಂಗಳೂರಿನ ಹೃದಯ ಭಾಗವೆನಿಸಿರುವ ಮೆಜೆಸ್ಟಿಕ್ ನಗರವನ್ನು ಹೊಂದಿರುವ ಕ್ಷೇತ್ರ ಗಾಂಧಿನಗರ. ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್ ನಗರ, ಓಕಳೀಪುರಂ, ಚಿಕ್ಕಪೇಟೆ, ಕಾಟನ್ ಪೇಟೆ, ಬಿನ್ನಿಪೇಟೆಯ ವಾರ್ಡ್‌ಗಳನ್ನು ಈ ಕ್ಷೇತ್ರ ಒಳಗೊಂಡಿದೆ. 

ಗಾಂಧಿ ನಗರ ಕ್ಷೇತ್ರದಲ್ಲಿ ಇಲ್ಲಿಯವರೆಗೂ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಒಮ್ಮೆಯೂ ಜಯಗಳಿಸಿಲ್ಲ. ಜನತಾ ಪಕ್ಷ 2 ಬಾರಿ, ಒಮ್ಮೆ ಎಐಎಡಿಎಂಕೆ ಗೆಲುವು ಸಾಧಿಸಿದೆ.

ಆದರೆ 1999 ರಿಂದ ಕಳೆದ 24 ವರ್ಷಗಳಿಂದ ಕಾಂಗ್ರೆಸ್ ಹಿಡಿತದಲ್ಲಿರುವ ಗಾಂಧಿನಗರ ಕ್ಷೇತ್ರಕ್ಕೆ ದಿನೇಶ್ ಗುಂಡೂರಾವ್ ಶಾಸಕರು. ತಂದೆ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರಂತೆ ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ದಿನೇಶ್ ಅವರು, 1999ರಿಂದ ಈವರೆಗೂ ಸತತವಾಗಿ ಗೆಲುವು ಸಾಧಿಸುತ್ತ ಬಂದಿದ್ದಾರೆ. ಶಾಸಕರಾಗಿ, ಸಚಿವರಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ದಿನೇಶ್ ಅವರ ಗೆಲುವಿನಲ್ಲಿ ಕ್ಷೇತ್ರದ ಅಭಿವೃದ್ಧಿಯ ಜೊತೆ ಯಾವುದೇ ವಿವಾದವಿಲ್ಲದ ವೈಯಕ್ತಿಕ ವರ್ಚಸ್ಸು ಹೆಚ್ಚು ಪಾತ್ರ ವಹಿಸಿದೆ. ಬಿಜೆಪಿಯು ದಿನೇಶ್ ಅವರನ್ನು ಕಳೆದ ಮೂರು ಬಾರಿಯಿಂದಲೂ ಸೋಲಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ.

ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ರಾಮಚಂದ್ರಗೌಡ ಅವರ ಪುತ್ರ ಎ ಆರ್ ಸಪ್ತಗಿರಿ ಗೌಡರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತಾದರೂ, ದಿನೇಶ್ ಪ್ರಾಬಲ್ಯದ ಮುಂದೆ ಅವರ ಆಟ ನಡೆಯಲಿಲ್ಲ. ಈ ಬಾರಿಯು ಸಪ್ತಗಿರಿ ಗೌಡರಿಗೆ ಟಿಕೆಟ್ ನೀಡಲಾಗಿದೆ. ಹಳೆಯ ಮಾದರಿಯಲ್ಲಿರುವ ಕ್ಷೇತ್ರವನ್ನು ತಾವು ಆಧುನಿಕ ಸ್ವರೂಪ ನೀಡುವುದಾಗಿ ಪ್ರಚಾರ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿಗೆ ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಎನ್ನುವುದನ್ನು ಮತದಾರರು ನಿರ್ಧರಿಸಬೇಕಿದೆ.

ಕಳೆದ ಬಾರಿ ಸ್ಪರ್ಧಿಸಿದ್ದ ವಿ ನಾರಾಯಣಸ್ವಾಮಿ ಅವರಿಗೆ ಜೆಡಿಎಸ್‌ ಟಿಕೆಟ್ ನೀಡಿದೆ. ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಕೃಷ್ಣಯ್ಯ ಶೆಟ್ಟಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕೃಷ್ಣಯ್ಯ ಶೆಟ್ಟಿ ಸ್ಪರ್ಧೆ ಬಿಜೆಪಿಯ ಮತಗಳನ್ನು ಭಾಗ ಮಾಡುವುದರಿಂದ ಕಾಂಗ್ರೆಸಿಗೆ ಲಾಭವಾಗುವ ಸಾಧ್ಯತೆಯಿದೆ.  

ಮತದಾರರ ಬಗ್ಗೆ ಹೇಳುವುದಾದರೆ, ಉತ್ತರ ಭಾರತ ಮೂಲದ ವ್ಯಾಪಾರಿಗಳು ಸೇರಿದಂತೆ ಹಲವು ಭಾಷಿಕರು ಇಲ್ಲಿ ನೆಲೆಸಿದ್ದಾರೆ. ಕನ್ನಡಿಗರೇ ಇಲ್ಲಿ ಅಲ್ಪಸಂಖ್ಯಾತರಾಗಿದ್ದು, ಅನ್ಯ ಭಾಷಿಕರೇ ಕ್ಷೇತ್ರದ ಗೆಲುವಿನ ಮುಖ್ಯ ತೀರ್ಪುಗಾರರು.

ರಾಜಾಜಿ ನಗರ: ಸುರೇಶ್‌ ಕುಮಾರ್‌ಗೆ ಈ ಬಾರಿ ಕಾಂಗ್ರೆಸ್ ಮುಳುವು!

1978ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ರಾಜಾಜಿನಗರ ಕ್ಷೇತ್ರ. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರೆ ಹೆಚ್ಚಿನ ಸಂಖ್ಯೆಯಲ್ಲಿರುವ ನಗರ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ದಯಾನಂದ ನಗರ, ಪ್ರಕಾಶ್ ನಗರ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಶಿವನಗರ ಹಾಗೂ ಶ್ರೀರಾಂಪುರಂ ವಾರ್ಡ್‌ಗಳನ್ನು ಈ ಕ್ಷೇತ್ರ ಒಳಗೊಂಡಿದೆ.

ಹತ್ತು ಸಾರ್ವತ್ರಿಕ ವಿಧಾನಸಭಾ ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಐದು ಬಾರಿ ಗೆಲವು ಸಾಧಿಸಿದೆ. ರಾಜಾಜಿನಗರ ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ ಕಾಂಗ್ರೆಸ್, ಬಿಜೆಪಿ ಹಾಗೂ ಸಿಪಿಐ ತಲಾ ಎರಡು ಬಾರಿ ಗೆದ್ದಿದ್ದರೆ ಒಂದು ಬಾರಿ ಜನತಾ ಪಕ್ಷ ಇಲ್ಲಿ ಅಧಿಕಾರ ಅನುಭವಿಸಿದೆ.

ಕ್ಷೇತ್ರ ಪುನರ್‌ವಿಂಗಡನೆಯಾದ 2008ರಿಂದ ಮೂರು ಅವಧಿಯಿಂದಲೂ ಬಿಜೆಪಿಯ ಆರ್‌ ಸುರೇಶ್ ಕುಮಾರ್ ಶಾಸಕರಾಗಿದ್ದಾರೆ. ಈ ಬಾರಿಯೂ ಸುರೇಶ್‌ ಅವರು ಕಮಲ ಪಕ್ಷದ ಅಭ್ಯರ್ಥಿ. ಆದರೆ ಕೆಲಸಕ್ಕಿಂತಲೂ ಹೆಚ್ಚು ಮಾತನಾಡುತ್ತಾರೆ ಎಂಬುದು ಸ್ಥಳೀಯರ ಅಭಿಪ್ರಾಯ. ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಲಿಸಿದರೆ ರಾಜಾಜಿನಗರದಲ್ಲಿ ಮೂಲಭೂತ ಸಮಸ್ಯೆಗಳು ಹೆಚ್ಚಾಗಿವೆ. ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಮೇಲ್ಸೇತುವೆಗಳು ಪೂರ್ಣಗೊಂಡಿಲ್ಲ. ಹಲವು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಗುಂಡಿಗಳಂತೂ ಕ್ಷೇತ್ರವನ್ನು ಅತಿಯಾಗಿ ಕಾಡುತ್ತಿವೆ. ಇವೆಲ್ಲ ಸಮಸ್ಯೆಗಳು ಕಾಂಗ್ರೆಸ್‌ಗೆ ಮತಗಳಾಗಿ ಪರಿವರ್ತನೆಯಾದರೆ ಅಚ್ಚರಿ ಪಡಬೇಕಿಲ್ಲ.

ಕಾಂಗ್ರೆಸಿನಿಂದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಪುಟ್ಟಣ ಸ್ಪರ್ಧಿಸಿದ್ದಾರೆ. ಕಳೆದ ಮೂರು ಅವಧಿಗಳಿಂದಲೂ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಸದಸ್ಯರಾಗಿದ್ದರು. ರಾಜಾಜಿನಗರದಲ್ಲಿ ಒಕ್ಕಲಿಗರ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಕಾರಣ ಅದೇ ಸಮುದಾಯದವರಾದ ಪುಟ್ಟಣಗೆ ಜಾತಿ ಸಮೀಕರಣ ವರದಾನವಾದರೆ ಕೈ ಗೆಲುವಿಗೆ ಯಾವುದೇ ಅನುಮಾನಗಳಿಲ್ಲ.

ಜೆಡಿಎಸ್‌ನಿಂದ ವೈದ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಸದಸ್ಯರಾದ ಆಂಜನಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಆಂಜನಪ್ಪ ಅವರು ಯಾವುದೇ ವಿವಾದ ರಹಿತ ವ್ಯಕ್ತಿಯಾದರೂ ಕ್ಷೇತ್ರದಲ್ಲಿ ತೆನೆ ಪಕ್ಷಕ್ಕೆ ಅಂತಹ ಬಲವಿಲ್ಲ. ಪೈಪೋಟಿ ಏನಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯೆ ನಡೆಯಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ದಕ್ಷಿಣ | ಕಾಂಗ್ರೆಸ್, ಬಿಜೆಪಿ ಸೆಣಸಾಟದಲ್ಲಿ ಜೆಡಿಎಸ್‌ ನಗಣ್ಯ

ಚಾಮರಾಜಪೇಟೆ: ಜಮೀರ್‌ ಕೋಟೆ ಭೇದಿಸಲು ಸಾಧ್ಯವಿಲ್ಲ ಎನ್ನುತ್ತಿರುವ ಮತದಾರರು!

ಕೋಟೆ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಫೋರ್ಟ್ ಹೈಸ್ಕೂಲ್, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಮಿಂಟೋ ಆಸ್ಪತ್ರೆ, ಕೆ ಆರ್ ಮಾರುಕಟ್ಟೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನಂತಹ ಅನೇಕ ಐತಿಹಾಸಿಕ ಕಟ್ಟಡಗಳಿರುವ ಕ್ಷೇತ್ರ ಚಾಮರಾಜಪೇಟೆ. ಬಿಬಿಎಂಪಿಯ ಪಾದರಾಯನಪುರ, ಕೆ ಆರ್ ಮಾರುಕಟ್ಟೆ, ಜಗಜೀವನ್ ರಾಮನಗರ, ಚಾಮರಾಜಪೇಟೆ, ಆಜಾದ್ ನಗರ, ರಾಯಪುರ, ಛಲವಾದಿಪಾಳ್ಯ ಸೇರಿ ಏಳು ವಾರ್ಡ್‌ಗಳು ಈ ಕ್ಷೇತ್ರದಲ್ಲಿವೆ.

2005ರಿಂದಲೂ ಸತತ ನಾಲ್ಕು ಬಾರಿ ಗೆಲ್ಲುತ್ತ ಬಂದಿರುವ ಕಾಂಗ್ರೆಸ್‌ನ ಜಮೀರ್‌ ಅಹ್ಮದ್‌ ಖಾನ್‌ ಚಾಮರಾಜಪೇಟೆಯ ಜಾತ್ಯತೀತ ನಾಯಕರು. ನಿರಂತರವಾಗಿ ಜಯಸಾಧಿಸುತ್ತಿರುವ ಜಮೀರ್‌ ಅವರನ್ನು ಸೋಲಿಸಲು ಜೆಡಿಎಸ್‌ ಹಾಗೂ ಬಿಜೆಪಿ ಅನೇಕ ತಂತ್ರ ಹೆಣೆಯುತ್ತಿದ್ದರೂ ಯಾವುದೇ ಯೋಜನೆಗಳು ಫಲಪ್ರದವಾಗಿಲ್ಲ. ಎಲ್ಲ ಸಮುದಾಯದವರೊಂದಿಗೆ ಅವರು ಇಟ್ಟುಕೊಂಡಿರುವ ಒಡನಾಟ ಹಾಗೂ ಅಭಿವೃದ್ಧಿ ಕಾರ್ಯಗಳು ಗೆಲುವಿನ ಗುಟ್ಟಾಗಿದೆ ಎನ್ನುತ್ತಾರೆ ಕ್ಷೇತ್ರದ ಮತದಾರರು.

ಚಾಮರಾಜಪೇಟೆ ಕ್ಷೇತ್ರದಲ್ಲಿ 80 ಸಾವಿರ ಮುಸ್ಲಿಂ ಸಮುದಾಯ ಮಾತ್ರವಲ್ಲದೆ, ಎಸ್‌ಸಿ, ಎಸ್‌ಟಿ 65 ಸಾವಿರ, ಒಕ್ಕಲಿಗ 10 ಸಾವಿರ, ಇತರೆ 35,000, ಕ್ರೈಸ್ತರು 12,000, ಕುರುಬರು 9,500 ಮತದಾರರಿದ್ದಾರೆ. 26 ಸಾವಿರ ತಮಿಳು ಭಾಷಿಕರಲ್ಲದೆ ಬ್ರಾಹ್ಮಣರು 5 ರಿಂದ 8 ಸಾವಿರರಷ್ಟಿದ್ದಾರೆ. ಎಲ್ಲ ಸಮುದಾಯದವರ ಆಶೀರ್ವಾದದಿಂದಲೇ ಗೆಲ್ಲುತ್ತಿದ್ದೇನೆ. ಈ ಬಾರಿಯು ನನಗೆ ಬೆಂಬಲಿಸಲಿದ್ದಾರೆ ಎನ್ನುತ್ತಿದ್ದಾರೆ ಜಮೀರ್.

ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರಿಗೆ ತಾವು ಮಾಡಿರುವ ಪ್ರಾಮಾಣಿಕತೆ ಕಾರ್ಯಗಳೆ ಶ್ರೀರಕ್ಷೆಯಾಗಲಿವೆ ಎಂದು ಹೇಳುತ್ತಿದ್ದಾರೆ. ಆದರೆ ತಾವೇನು ಮಾಡಿದ್ದೀರಿ ಎನ್ನುವುದನ್ನು ಕ್ಷೇತ್ರದ ಜನರು ಅಲ್ಲಲ್ಲಿ ಕೇಳುವುದುಂಟು. ಅಧಿಕಾರ ಬಯಸಿ ಬರುವವರಿಗಿಂತ ತಮ್ಮ ಕಷ್ಟಸುಖ ಅರಿಯುವ ಜಮೀರ್‌ ಪರ ಇರುವುದೇ ಕ್ಷೇಮ ಎಂದು ಸ್ಥಳೀಯರ ಅಭಿಪ್ರಾಯ.

ಅಷ್ಟೇನು ಜನಪ್ರಿಯರಲ್ಲದ ಗೋವಿಂದರಾಜು ಅವರನ್ನು ಜೆಡಿಎಸ್‌ ಕಣಕ್ಕಿಳಿಸಿದೆ. ಆದರೆ ಜಮೀರ್‌ ವೇಗದ ಮುಂದೆ ಪ್ರತಿಸ್ಪರ್ಧಿಗಳು ಯಾರು ಲೆಕ್ಕಕ್ಕಿಲ್ಲ ಎನ್ನುತ್ತಿದೆ ಕ್ಷೇತ್ರದ ರಾಜಕೀಯ ಪರಿಸ್ಥಿತಿ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಉತ್ತರ | ಕಾಂಗ್ರೆಸ್ – ಬಿಜೆಪಿ ನೇರ ಹಣಾಹಣಿ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪೈಪೋಟಿ

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಕ್ಷೇತ್ರದ ರಕ್ಷಣೆಗೆ, ಅಭಿವೃದ್ಧಿಗೆ ಆದ್ಯತೆ: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕಾರವು ರಾಜಕಾರಣಿಗಳ ಬಳಿಯಿದೆ. ಸಮಸ್ಯೆಗಳು ಸಾಕಷ್ಟಿವೆ. ಆದರೂ, ಕೆಲವು...

ಚಿಕ್ಕಮಗಳೂರು | ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ; ಜೆ.ಪಿ ಹೆಗ್ಡೆಗೆ ಜನ ಬೆಂಬಲ

ಚಿಕ್ಕಮಗಳೂರು ಹಾಗೂ ಉಡುಪಿ ಲೋಕಾಸಭಾ ಕ್ಷೇತ್ರವಾಗಿದೆ. ಎಂಟು ವಿಧಾನಸಭಾ ಕ್ಷೇತ್ರ ಒಳಗೊಂಡ...

ಅನ್ಯ ರಾಜ್ಯಗಳ 9 ನಾಯಕರನ್ನು ಲೋಕಸಭೆಗೆ ಚುನಾಯಿಸಿದ ಕರ್ನಾಟಕದ ಮತದಾರರು

ರಾಜ್ಯಸಭೆಗೆ ಯಾವುದೇ ರಾಜ್ಯದ ನಾಯಕರು, ಉದ್ಯಮಿಗಳು ಸ್ಥಳೀಯ ರಾಜಕೀಯ ಪಕ್ಷದ ಬೆಂಬಲದಿಂದ...

ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26ರಂದು ಮತದಾನ...