ಚಿತ್ತಾಪುರ ಕ್ಷೇತ್ರ | ರೌಡಿ ರಾಠೋಡ್‌ನಿಂದ ಬಿಜೆಪಿ ಮಾನ ಬೀದಿಗೆ, ಸಂಭಾವಿತ ಖರ್ಗೆ ವಿಧಾನಸೌಧಕ್ಕೆ

Date:

ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಹೇಗಾದರೂ ಮಾಡಿ ಕಟ್ಟಿಹಾಕುವ ಹಠಕ್ಕೆ ಬಿದ್ದಿರುವ ಬಿಜೆಪಿ, ರೌಡಿಶೀಟರ್ ಮಣಿಕಂಠ ರಾಠೋಡಗೆ ಮಣೆ ಹಾಕಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. 

ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಎಸ್ಸಿ ಮೀಸಲು ಕ್ಷೇತ್ರ ಚಿತ್ತಾಪುರದಲ್ಲಿ ಈಗಾಗಲೇ ಕಾಂಗ್ರೆಸ್‌ನಿಂದ ಎರಡು ಬಾರಿ ಗೆದ್ದಿರುವ ಪ್ರಿಯಾಂಕ್ ಖರ್ಗೆ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನೊಂದೆಡೆ ಪ್ರಿಯಾಂಕ್ ಖರ್ಗೆ ಅವರನ್ನು ಹೇಗಾದರೂ ಮಾಡಿ ಕಟ್ಟಿಹಾಕುವ ಹಠಕ್ಕೆ ಬಿದ್ದಿರುವ ಬಿಜೆಪಿ, ರೌಡಿಶೀಟರ್ ಮಣಿಕಂಠ ರಾಠೋಡಗೆ ಮಣೆ ಹಾಕಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಬಿಜೆಪಿ ನಾಯಕರು ಮಾಡಿದಂತೆ ಕಾಣುತ್ತಿದೆ.

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸುವ ಧ್ವನಿ ಏನಾದರೂ ಕಾಂಗ್ರೆಸ್‌ನಲ್ಲಿದ್ದರೆ ಅದು ಮಲ್ಲಿಕಾರ್ಜುನ ಖರ್ಗೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮಗ್ಗಲು ಮುಳ್ಳಾಗಿ ಕಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ನಾಯಕರು ಹೇಳಿ ಕೇಳಿ ತಾವು ಅಂದುಕೊಂಡಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರು.

ಆದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ರಾಜ್ಯಸಭೆಗೆ ಆಯ್ಕೆ ಮಾಡಿ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿತು. ನಂತರ ಎಐಸಿಸಿ ಅಧ್ಯಕ್ಷರನ್ನಾಗಿ ಮುನ್ನೆಲೆಗೆ ತಂದಿತು. ಕಾಂಗ್ರೆಸ್‌ನ ಈ ಎರಡು ನಡೆ ಮೋದಿ ಟೀಮ್‌ಗೆ ಅರಗಿಸಿಕೊಳ್ಳಲು ಸಾಧ್ಯವಾದಂತೆ ಕಾಣುತ್ತಿಲ್ಲ. ಈಗಲೂ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹರಿತ ಮಾತುಗಳಿಂದ ಮೋದಿಯನ್ನು ರಾಜಕೀಯವಾಗಿ ಬೆತ್ತಲು ಮಾಡುತ್ತಲೇ ಇದ್ದಾರೆ.

ಇತ್ತ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಕೂಡ ಬೊಮ್ಮಾಯಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ದಾಖಲೆ ಸಮೇತ ರಾಜ್ಯ ಬಿಜೆಪಿ ಸರ್ಕಾರದ ಪಿಎಸ್ಐ ಹಗರಣ, ಕೊಳವೆ ಬಾವಿ ಹಗರಣ ಹಾಗೂ ಶಿಕ್ಷಕರ ನೇಮಕಾತಿ ಹಗರಣದಂತ ಪ್ರಮುಖ ಅಕ್ರಮಗಳನ್ನು ಒಂದೊಂದಾಗಿ ಬಯಲಿಗೆಳೆದಿರುವ ಪ್ರಿಯಾಂಕ್ ಖರ್ಗೆ, ರಾಜ್ಯ ಬಿಜೆಪಿಗೆ ಒಂದು ರೀತಿಯಲ್ಲಿ ಸಿಂಹಸಪ್ನವಾಗಿದ್ದಾರೆ.

ಹೀಗಾಗಿ ಬಿಜೆಪಿ ಸರ್ಕಾರವನ್ನು ಸದಾ ಕಾಡಿರುವ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವ ಮೂಲಕ, ರಾಷ್ಟ್ರಮಟ್ಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇಮೇಜ್ ಡ್ಯಾಮೇಜ್ ಮಾಡಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಚಿತ್ತಾಪುರ ಕ್ಷೇತ್ರ

ಈ ಕಾರಣಕ್ಕೆ ಚಿತ್ತಾಪುರ ಕ್ಷೇತ್ರದಲ್ಲಿ ಗೆಲ್ಲಲು ಅನೇಕ ತಂತ್ರಗಳನ್ನು ಬಿಜೆಪಿ ಮಾಡುತ್ತಿದೆ. ಖರ್ಗೆ ಕುಟುಂಬವನ್ನು ಸದಾ ಟೀಕಿಸುವ ರೌಡಿಶೀಟರ್ ಮಣಿಕಂಠ ರಾಠೋಡ ಎಂಬ ಕೂಗುಮಾರಿ ಹುಡುಗನನ್ನು ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿಯ ಈ ನಡೆ ಚಿತ್ತಾಪುರ ಕ್ಷೇತ್ರದಲ್ಲಿ ನೈತಿಕ ರಾಜಕಾರಣವನ್ನು ಸಮಾದಿ ಮಾಡಿದೆ ಎಂಬ ಮಾತುಗಳು ಸ್ವಪಕ್ಷದ ನಾಯಕರಿಂದಲೇ ಕೇಳಿಬಂದಿವೆ.

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಮಣಿಕಂಠ ರಾಠೋಡ ತಮ್ಮ ನಾಮಪತ್ರದ ಜೊತೆಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ. ಅದರಲ್ಲಿ ತಮ್ಮ ಮೇಲೆ 40 ಪ್ರಕರಣಗಳು ಇರುವುದನ್ನು ರಾಠೋಡ ಉಲ್ಲೇಖಿಸಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ನೆರೆಯ ತೆಲಂಗಾಣದ ಅನೇಕ ಪೊಲೀಸ್ ಠಾಣೆಗಳಲ್ಲಿ ಮಣಿಕಂಠ ರಾಠೋಡ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಬಹುತೇಕ ಪ್ರಕರಣಗಳು ಅಕ್ಕಿ, ಹಾಲಿನ ಪುಡಿ ಅಕ್ರಮ ಸಾಗಾಟದ ಪ್ರಕರಣಗಳಾಗಿವೆ. ಜೊತೆಗೆ ಜೀವ ಬೆದರಿಕೆ ನೀಡಿದ ಪ್ರಕರಣಗಳು ಕೂಡ ಇವೆ. ಯಾದಗಿರಿ ಜಿಲ್ಲಾ ಕೋರ್ಟ್‌ನಿಂದ ಎರಡು ವರ್ಷ ಶಿಕ್ಷೆ ಕೂಡ ವಿಧಿಸಲಾಗಿದ್ದು, ಅದಕ್ಕೆ ತಡೆಯಾಜ್ಞೆಯನ್ನು ಮಣಿಕಂಠ ರಾಠೋಡ್ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಚಿತ್ತಾಪುರದಲ್ಲಿ ರೌಡಿಶೀಟರ್ ಮಣಿಕಂಠ ರಾಠೋಡಗೆ ಯಾವಾಗ ಬಿಜೆಪಿ ಮಣೆ ಹಾಕಿತೋ ಕ್ಷೇತ್ರದ ಬಿಜೆಪಿ ನಾಯಕರ ಅಸಮಾಧಾನ ಭುಗಿಲೆದ್ದಿದೆ. ಚಿತ್ತಾಪುರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ಯುವ ಘಟಕದ ಅಧ್ಯಕ್ಷನಾಗಿದ್ದ ಅರವಿಂದ್ ಚೌಹಾಣ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಮತ್ತೊಂದಡೆ ಮಾಜಿ ಶಾಸಕ ಮತ್ತು ಲಿಂಗಾಯತ ಮುಖಂಡ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಕೂಡಾ ಟಿಕೆಟ್ ವಿಚಾರಕ್ಕೆ ನಾಯಕರ ವಿರುದ್ಧ ಮುನಿಸಿಕೊಂಡು ಪಕ್ಷದಿಂದ ಹೊರನಡೆದಿದ್ದಾರೆ. ಬಿಜೆಪಿ ಸ್ಥಳೀಯ ಪ್ರಮುಖ ನಾಯಕ ಲಿಂಗಾರೆಡ್ಡಿ ಕೂಡ ಕ್ಷೇತ್ರದಲ್ಲಿ ಸಜ್ಜನರನ್ನು ಬಿಟ್ಟು ರೌಡಿ ಶೀಟರ್ ಆಗಿರುವ, ಅನೇಕ ಪ್ರಕರಣಗಳಿರುವ ಮಣಿಕಂಠ ರಾಠೋಡಗೆ ಟಿಕೆಟ್ ನೀಡಿದ್ದಕ್ಕೆ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಅರವಿಂದ್ ಚೌಹಾಣ್ ಮತ್ತು ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಸ್ಥಳೀಯವಾಗಿ ವಿರೋಧ ಎದುರಿಸುತ್ತಿರುವ ಮಣಿಕಂಠ ರಾಠೋಡ ಕೇವಲ ಪ್ರಭಾವಳಿ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆಯೇ ಹೊರತು ಗೆಲುವು ಕಷ್ಟ ಎಂಬ ಮಾತುಗಳು ಹೆಚ್ಚು ಕೇಳಿಬಂದಿವೆ.

mn

ಹಾಗೆ ನೋಡಿದರೆ ಚಿತ್ತಾಪುರ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆ. 15 ಸಾರ್ವತ್ರಿಕ ಚುನಾವಣೆ ಮತ್ತು ಒಂದು ಬಾರಿ ಉಪ ಚುನಾವಣೆ ಕಂಡಿರುವ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ 12 ಬಾರಿ ಗೆದ್ದಿದೆ. ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಅವರು 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಗೆಲುವು ಕಂಡಿದ್ದರು. ನಂತರ ಅವರು 2004ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಅದು ವಾಲ್ಮಿಕಿ ನಾಯಕನ ಕಾರಣಕ್ಕೆ. 2021ರಲ್ಲಿ ವಾಲ್ಮಿಕಿ ನಾಯಕ ಕೂಡ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.

ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತಾಗಿದೆ ಈಗ ಬಿಜೆಪಿಯ ಪರಿಸ್ಥಿತಿ. ಹೇಳಿಕೊಳ್ಳುವಂತಹ ಯಾವುದೇ ಸ್ಥಳೀಯ ಬಿಜೆಪಿಯ ನಾಯಕರು ಬಿಜೆಪಿ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ. ಸೋಲುತ್ತೇವೆ ಅಂತ ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ರೌಡಿಶೀಟರ್ ಮಣಿಕಂಠ ರಾಠೋಡನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಬಿಜೆಪಿ ಒಂದು ರೀತಿಯಲ್ಲಿ ಈಗ ಇಕ್ಕಟ್ಟಿಗೆ ಸಿಲುಕಿದೆ.

ರಾಠೋಡನಿಂದಾಗಿ ರಾಜ್ಯದಲ್ಲಿ ಬಿಜೆಪಿ ಈಗಾಗಲೇ ಸಾಕಷ್ಟು ಮುಜುಗರ ಅನುಭವಿಸುವಂತಾಗಿದೆ. ರಾಠೋಡ ಪರವಾಗಿ ಚುನಾವಣೆ ಪ್ರಚಾರಕ್ಕೆಂದು ಶುಕ್ರವಾರ (ಏ.28) ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಮೇಲೂ ಪ್ರಕರಣಗಳಿದ್ದು, ಜಾಮೀನಿನ ಮೇಲಿದ್ದಾರೆ. ಮಣಿಕಂಠ ಸಹ ಜಾಮೀನು ಪಡೆದಿದ್ದಾರೆ” ಎಂದು ಸಮರ್ಥಿಸಿಕೊಂಡಿದ್ದರು. ಬೊಮ್ಮಾಯಿ ಬಂದು ಹೋದ ದಿನವೇ ಮಣಿಕಂಠ ರಾಟೋಡ ಪಿಸ್ತೂಲು ಪ್ರದರ್ಶಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಾಜಕೀಯ ವಲಯದಲ್ಲೂ ಇದು ಚರ್ಚೆಗೆ ಗ್ರಾಸವಾಗಿದೆ.

ಇನ್ನು, ಮಣಿಕಂಠ ರಾಠೋಡ ಪರವಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಮೇ.6ರಂದು ಬರಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಈಗಾಗಲೇ ಹೇಳಿದ್ದರು. ಚಿತ್ತಾಪುರ ಕ್ಷೇತ್ರದ ರಾವೂರ ಗ್ರಾಮ ಬಳಿಯ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ150ರ ಬದಿಯ ಖಾಸಗಿ ಜಮೀನಿನಲ್ಲಿ ಬೃಹತ್ ಸಮಾವೇಶ ನಡೆಸಿ ಮಣಿಕಂಠ ರಾಠೋಡ ಪರವಾಗಿ ಅಲೆ ಸೃಷ್ಟಿಸುವ ಯೋಜನೆಯಲ್ಲಿ ಬಿಜೆಪಿ ಇತ್ತು.

ಆದರೆ, ಮಣಿಕಂಠ ರಾಠೋಡನ ಭಾನಗೇಡಿ ಕೆಲಸಗಳು ದಿನಕ್ಕೊಂದು ಹೊರಬೀಳುತ್ತಿದ್ದು, ಮುಜುಗರದಿಂದ ದೂರವಾಗಲು ಮೋದಿ ಚಿತ್ತಾಪುರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ. ಆದರೆ, ಕೊನೆ ಕ್ಷಣದಲ್ಲಿ ಎಲ್ಲ ಬಿಟ್ಟು ಭಂಡತನದ ಪ್ರದರ್ಶನಕ್ಕೆ ಮೋದಿ ಮುಂದಾದರೆ ಅಂತಹ ಆಶ್ಚರ್ಯ ಏನೂ ಇಲ್ಲ!

ಪುಢಾರಿಗಳನ್ನು ಮುಂದೆ ಬಿಟ್ಟು, ಹಣದ ಹೊಳೆಯನ್ನೇ ಹರಿಸುವ ಮೂಲಕ ನೆಲೆ ಕಾಣಲು ಪ್ರಯತ್ನಿಸುತ್ತಿರುವ ಮಣಿಕಂಠ ರಾಠೋಡ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ನೇರ ಸ್ಪರ್ಧೆ ಇರಲಿದೆ. ಆದರೆ, ಚಿತ್ತಾಪುರ ಮತದಾರರು ಮಾತ್ರ ರೌಡಿಶೀಟರ್ ಮಣಿಕಂಠನನ್ನು ಆದಷ್ಟು ಕ್ಷೇತ್ರದಿಂದ ದೂರವಿಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದು ಆ ಕ್ಷೇತ್ರದ ರಾಜಕೀಯ ನಾಡಿಮಿಡಿತ ಬಲ್ಲ ಸ್ಥಳೀಯ ಪತ್ರಕರ್ತರ ಮಾತು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

1 COMMENT

  1. ಚುನಾವಣಾ ವಿಶೇಷವಾಗಿ ಪ್ರಕಟವಾಗುತ್ತಿರುವ ಪ್ರತಿ ಲೇಖನಗಳು ಹೊಸತನದಿಂದ ಕೂಡಿವೆ ಪ್ರಮುಖವಾಗಿ‌ ಶೀರ್ಷಿಕೆ ಮತ್ತು ಅದರ ದಾರಿಯಲ್ಲಿಯೇ ಸ್ವಲ್ಪವೂ ಜಾರದಂತಹ ಭಾಷಾ ಹಿಡಿತ ಮತ್ತು ವಿವರಣೆ ಮೆಚ್ಚುವತದ್ದು. ವಿಷಯದ ಸೈದ್ದಾಂತಿಕ ನಿರೂಪಣೆ ಉತ್ತಮ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಪೌರಕಾರ್ಮಿಕನ ಮೇಲೆ ಹಲ್ಲೆ: ಮುನ್ಸಿಪಲ್ ಕಾರ್ಮಿಕರ ಸಂಘ ಪ್ರತಿಭಟನೆ

ಹಾವೇರಿ ನಗರಸಭೆಯ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ...

11 ವರ್ಷಗಳ ಆಡಳಿತದಲ್ಲಿ 33 ತಪ್ಪುಗಳನ್ನು ಮಾಡಿದ ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಕಳೆದ 11 ವರ್ಷಗಳ ಆಡಳಿತದಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ...

ರಾಜಕಾರಣಿಗಳ ಕಣ್ಣೀರು: ಮತದಾರರ ಮೆಚ್ಚಿಸುವ ತಂತ್ರವೇ?

ರಾಜ್ಯದ ಉಪಮುಖ್ಯಮುಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿ ನಡೆದ ಐಪಿಎಲ್ ದುರಂತದ...

ವಿಜಯ ಮಲ್ಯ- ಕಳ್ಳನೋ, ಸುಳ್ಳನೋ, ವಂಚಕನೋ ಅಥವಾ ಸಂತನೋ?

ವಿಜಯ ಮಲ್ಯ ಮೇಲಿರುವುದು ಸಾಲ ತೀರಿಸದ ಆರೋಪವೊಂದೇ ಅಲ್ಲ. ಅವರ ಮೇಲೆ...

Download Eedina App Android / iOS

X